ಕನ್ನಡ ಕಾವ್ಯಗಳ ಗೆಜ್ಜೆನಾದ

Updated on: 

ಈಗೊಂದು ನಾಲ್ಕಾರು ತಿಂಗಳ ಹಿಂದೆ ಮೈಸೂರಿನಲ್ಲಿ ಮಗನ ಜೊತೆ ಇದ್ದಾಗ 'ಕನ್ನಡ ಕಾವ್ಯಗಳ ಗೆಜ್ಜೆನಾದ' ಎಂಬ ಎರಡು ಸಂಪುಟಗಳನ್ನು (ಪ್ರಕಟಣೆ 2010) ನನ್ನ ಕೈಗೆ ತಲುಪಿಸಿದವರು ಸಂಗ್ರಹಿಸಿದವರಲ್ಲಿ ಒಬ್ಬರಾದ  ಪ್ರೊ.ಎ.ವಿ. ಸೂರ್ಯನಾರಾಯಣ ಸ್ವಾಮಿ. ಇನ್ನೊಬ್ಬರು ಪ್ರಕಾಶಕ ಸಂಪಾದಕರು ಎಚ್.ಎಸ್. ಗೋವಿಂದೇಗೌಡ. (ಪ್ರಕಾಶಕರು: ಹನ್ಯಾಳು ಪ್ರಕಾಶನ, ನಂ.749, 11ನೇ ಮುಖ್ಯರಸ್ತೆ, ವಿಜಯನಗರ 1ನೇ ಹಂತ, ಮೈಸೂರು-17. ಮೊ. 98458 61887). ನಾನು ಮೈಸೂರಿನಲ್ಲಿ ಪರೀಕ್ಷೆಯ ಮೌಲ್ಯಮಾಪನಕ್ಕೆಂದು ಹೋಗುತ್ತಿದ್ದಾಗ ಗೆಳೆಯರಾದವರು ಸೂರ್ಯನಾರಾಯಣಸ್ವಾಮಿ. ನಮ್ಮ ಅನುಭವ, ವೈಚಾರಿಕ ಚಿಂತನೆಗಳ  ವಿನಿಮಯ ಮಾಡಿಕೊಳ್ಳುತ್ತಿದ್ದ ಗೆಳೆಯರು.
ಈ ಸಂಗ್ರಹ ಸಂಪುಟಕ್ಕೆ ಮುನ್ನುಡಿರೂಪದ ನಲ್ನುಡಿಯನ್ನು ಬರೆದಿರುವವರು ಹಿರಿಯರೂ ನಿವೃತ್ತ ಪ್ರಾಧ್ಯಾಪಕರೂ ಆದ ಡಾ.ಎ.ಎಸ್. ವೇಣುಗೋಪಾಲರಾವ್. ಎರಡು ಸಂಪುಟಗಳಿಂದ 1420 ಪುಟ ಗಳಿರುವ ಸಂಗ್ರಹ ಕೃತಿಯ ವೈಶಿಷ್ಟ್ಯ ಏನಿರಬಹುದು ಎಂದು  ಪುಟಗಳನ್ನು ತಿರುಗಿಸುತ್ತಾ ಹೋದಂತೆ ನಾನಂತೂ ನಿಬ್ಬೆರಗಾದೆ. ನನ್ನ ಮಡದಿ ಸಂಪುಟಗಳಲ್ಲಿ ಗುರುತಿಟ್ಟಿರುವವು ನೂರಾರು.
ಹತ್ತು ವಿಭಾಗಗಳಲ್ಲಿ ಸಂಗ್ರಹಿಸಿದ್ದಾರೆ; 1- ಕನ್ನಡ ಶಾಸನ ಮತ್ತು ನಾಡುನುಡಿ ವರ್ಣನೆಗಳ ತೋರಣ. 2- ಕನ್ನಡ ಕಾವ್ಯಕಥಾ ಸಂಗತಿಗಳ ಮತ್ತು ಕವಿ ಶೈಲಿಯ ಸಿಹಿಹೂರಣ. 3- ಕನ್ನಡ ಶರಣ ಶರಣೆಯರ ವಚನ, ದಾಸರ ಕೀರ್ತನೆ, ಉಗಾಭೋಗ, ಸುಳಾದಿ ದಂಡಕ, ವೃತ್ತನಾಮ, ಗುಂಡಕ್ರಿಯ, ತತ್ವಪದ, ಅನುಭಾವ ನುಡಿ ಮತ್ತು ನೀತಿಪದ್ಯಗಳ ಬೋಧನ. 4- ಕನ್ನಡ ಕಥನ ಕವನಗಳ ರಸಾಯನ. 5- ಕನ್ನಡ ಚಿತ್ರಕವಿತ್ವ, ಸಮಸ್ಯೆ, ಬೆಡಗಿನವಚನಗಳು, ಕೀರ್ತನೆಗಳು, ಪದ್ಯಗಳು ಮತ್ತು ಒಗಟುಗಳ ರಂಜನ. 6- ಕನ್ನಡ ಜನಪದಗೀತೆಗಳ ಉಲ್ಲಾಸ. 7- ಕನ್ನಡ ಯಕ್ಷಗಾನ ರಂಗಗೀತೆ ಮತ್ತು ಚಿತ್ರಗೀತೆಗಳ ಆಲಾಪನ 8- ಕನ್ನಡ ಭಾವಗೀತೆಗಳ ಸುಗಂಧ ಸಿಂಚನ. 9- ಕನ್ನಡ ಗಂಭೀರ ಹಾಸ್ಯ ಗೀತಾಂಜಲಿಯ ನಗು ನಂದನ. 10- ಕನ್ನಡ ಕವಿ ಸೂಕ್ತಿ ಮತ್ತು ಗಾದೆಗಳ ಸಮಾಲೋಕನ.
ಪ್ರತಿ ವಿಭಾಗದಲ್ಲೂ ಉಪ ವಿಭಾಗಗಳು. ಆದರೆ ವಿಭಜನೆಯ ಕ್ರಮದಲ್ಲಿ ಕಾಲ- ಭಾಷೆ- ವಿಷಯ- ರೂಪ - ಸಂವೇದನೆಗಳು ಪ್ರಾಚೀನರಿಂದ ಹಿಡಿದು ಆಧುನಿಕತೆವರೆಗೂ ಒಂದರೊಳಗೊಂದು ಬೆರೆತು ಸಂಕೀರ್ಣವಾಗಿದೆ.  ಒಂದೊಂದು ವಿಭಾಗದಲ್ಲೂ ಓದುಗ ಗೆಜ್ಜೆನಾದದ ಭಿನ್ನ ಭಿನ್ನ ಶೃತಿಯ ಕಿಂಕಿಣಿಗೆ ಜಿಗಿ ಜಿಗಿದು ಶ್ರಮಿಸಬೇಕಾಗಿದೆ. ಮಿಗಿಲಾಗಿ ಸಾಹಿತ್ಯದ ಚರಿತ್ರೆಯ ಅಧ್ಯಯನಶೀಲರಿಗೆ ಸಂಶೋಧಕರಿಗೂ ಸ್ವಲ್ಪಮಟ್ಟಿಗೆ ಗೊಂದಲ ಉಂಟಾಗುವುದು ಸಹಜ. ಆದ್ದರಿಂದ ಕಾಲ- ಭಾಷೆ- ರೂಪ- ಸಂವೇದನೆಯ ಅನುಕ್ರಮದಲ್ಲಿ (ಕಾಲಾನುಗುಣವಾಗಿ ಪ್ರಾಚೀನ- ಮಧ್ಯಕಾಲೀನ, ಅನುಭಾವ- ಜನಪದ- ಆಧುನಿಕ- ನುಡಿಜಾಣ್ಮೆ ಗದ್ಯ- ಪದ್ಯ ಹೀಗೆ) ವಿಭಜಿಸಿದ್ದರೆ (ಮುಂದಿನ ಆವೃತ್ತಿಯಲ್ಲಾದರೂ) ಅನುಕೂಲವಾಗುತ್ತಿತ್ತೆಂಬುದು ನನ್ನ ಅಭಿಪ್ರಾಯ.
ಮೊದಲನೇ ಸಂಪುಟದ ಎರಡನೆಯ ಗೆಜ್ಜೆ ಭಾಗದಲ್ಲಿ; ಕನ್ನಡ ಕಾವ್ಯ ಕಥಾ ಸಂಗತಿಗಳ ಮತ್ತು ಕವಿ ಶೈಲಿಯ ಸಿಹಿ ಹೂರಣ ಎಂಬ ಭಾಗ 320 ಪುಟಗಳಷ್ಟು ದೀರ್ಘ ಭಾಗದಲ್ಲಿ ಪಂಪನ ಶೈಲಿಯ ಭವ್ಯತೆಯಿಂದ ಹಿಡಿದು ಜ್ಞಾತ ಅಜ್ಞಾತ ಕವಿಗಳು ಆಧುನಿಕ ಕಾಲಜ್ಞಾನ ವಚನಕಾರರವರಗೆ ಇಡಿಕಿರಿದಿದೆ. ಸಂಗ್ರಹಕಾರರ ವಿದ್ವತ್ತು, ಓದಿನ ಹರವು ಪರಿಶ್ರಮಕ್ಕೆ ಗೌರವಾದರದ ಪ್ರಣಾಮಗಳನ್ನು ಅರ್ಪಿಸಲೇಬೇಕು.
ಅಯ್.ಸಿ. ಮಠರ ವೀರೇಶನ ವಚನಗಳ ಎರಡು ಮಾದರಿಗಳು: 'ಬಿದ್ದ ಕೂಡಲೆ ನಿದ್ದೆ ಎದ್ದ ಕೂಡಲೆ ಲದ್ದಿ/ ಮದ್ದಿಲದೆರಡನೂ ಸಾಧಿಸಿದ ಮನುಜನು/ ಕಾಲನಿಂ ದೂರ ವೀರೇಶ', 'ಅನ್ನವನು ತಿನಬೇಕು ತಣ್ಣೀರ ಕುಡಿಯಬೇಕು/ ಇನ್ನು ಬೇಕೆನಿಸುವಾಗಲೇ ಬಿಡಬೇಕು/ ಇನ್ನೂರು ಆಯುಷ್ಯ ವೀರೇಶ'. ವಿಶ್ವೇಶ್ವರ ಭಟ್ಟರ  ವಿಶ್ವೇಶನ ವಚನವೊಂದು, 'ತರತರದ ತರಕಾರಿ ತಿನಲದುವೆ ಹಿತಕಾರಿ/ ಸರಿತೂಕದಾಹಾರವದು ನಮಗೆ/  ಹೀಗೆ ನೀತಿ ನಿಯಮ, ಆಯುಷ್ಯ ಆರೋಗ್ಯ; ವಿವೇಕ ಸಾಧನೆ ಸಿದ್ಧಿ; ಲೌಕಿಕ- ಭಕ್ತಿ - ಭಾವ- ಅನುಭಾವ; ಇಹ ಪರ;ರಂಜನೆ ಅಭಿವ್ಯಂಜನೆ; ಭಿನ್ನ ಭಿನ್ನ ಅಭಿರುಚಿಗೆ ಬೇಕಾದ ಓದು ಸಮೃದ್ಧವಾಗಿದೆ.
ಎರಡೂ ಸಂಪುಟಗಳಲ್ಲು ಕ್ರಿ.ಪೂ. 256 ಮಸ್ಕಿಯ ಅಶೋಕನ ಶಾಸನದಿಂದ ಹಿಡಿದು ಜಾನಪದ ಸಂಪತ್ತು- ಪಂಪನಿಂದ ಅತ್ಯಾಧುನಿಕರವರೆಗಿನ ಕಾವ್ಯ ಭಾಗಗಳು, ಕವಿತೆಗಳು ಹಾಡುಗಳು ಮತ್ತು ನಾಣ್ನುಡಿಗಳು. ಹೆಚ್ಚಿನವು ಇದುವರೆಗಿನ ಯಾವ ಸಂಗ್ರಹಗಳಲ್ಲೂ ದೊರೆಯದಂಥವು. ಕಾವ್ಯರೂಪ, ಭಾಷೆ, ಛಂದೋರೂಪ, ಸಾಮಾಜಿಕತೆ, ದರ್ಶನ, ನೀತಿ ಬೋಧೆ... ಹೀಗೆ ಹತ್ತು ಹಲವು ವಿಷಯಗಳು ಓದುಗರಿಗೆ ರಸದೌತಣ.  ಭಾಷಾಭಿಮಾನಿಗಳಿಗೆ, ಕಾವ್ಯಪ್ರಿಯರಿಗೆ, ಹಾಡುಗಾರರಿಗೆ, ಹಿತ ನುಡಿಗಳನ್ನು ಬಯಸುವವರಿಗೆ, ಒಟ್ಟಾರೆ ಕನ್ನಡ ನಾಡು ನುಡಿ, ಬದುಕು ಭಾವ, ವಿಚಾರಗಳ ವೈವಿಧ್ಯಮಯ ವಿಶೇಷತೆಯಿಂದ ಓದುಗರಿಗೆಲ್ಲಾ ರಸದೌತಣವನ್ನು ಉಣಬಡಿಸುವ ಸಂಪುಟಗಳಾಗಿವೆ. ಕನ್ನಡ ನಾಡು ನುಡಿಯ ಶೀಲ ಸಂವೇದನೆಗಳು ಜೀವನಾನುಭವದ ಅಭಿವ್ಯಕ್ತಿಯ ಮಾದರಿಗಳು ಈ ಸಂಪುಟಗಳಲ್ಲಿ ದೊರೆಯುತ್ತವೆ. ಯಕ್ಷಗಾನ, ರಂಗ ಮತ್ತು ಸಿನಿಮಾ ಗೀತೆಗಳೂ ಸ್ಥಾನ ಪಡೆದಿರುವುದು ಒಂದು ವಿಶೇಷ. ಒಟ್ಟಿನಲ್ಲಿ ಕನ್ನಡದ ಸಾಂಸ್ಕೃತಿಕ ಚರಿತ್ರೆಯ ಸಮಗ್ರ ಕೈಪಿಡಿಯಾಗಿದೆ.
ಮೊದಲ ಸಂಪುಟದಲ್ಲಿ ಪ್ರಾಚೀನ ಆಧುನಿಕರ ಅನುಭಾವದ ನುಡಿಗಳು ನೀತಿಪದ್ಯಗಳು 19 ಮತ್ತು 20ನೇ ಭಾಗದಲ್ಲಿ (ಪು. 622-679 ರ ವರೆಗೆ) ತುಂಬಿ ತುಳುಕುತ್ತಿವೆ. ವಚನಕಾರರು, ದಾಸರು, ತತ್ವಪದಕಾರರು, ಹಿರಿ ಕಿರಿಯ ಕವಿಗಳು, ಆಧುನಿಕರು, ಸಮಾಜ ಸುಧಾರಕರು ಎಲ್ಲರ ನೀತಿ, ಜಾಣ್ಮೆಯ ನುಡಿಗಳ ಸಾಲಿನಲ್ಲಿ ಕರಪತ್ರದ, ದೇವಸ್ಥಾನದಲ್ಲಿ, ಗುಡಿಸಿಲೊಂದರ ಫಲಕದ ಮೇಲಿನ, ಆಟೋರಿಕ್ಷಾ ಹಿಂಬದಿಯಲ್ಲಿ, ಅಕ್ಕಸಾಲಿಗರ ಅಂಗಡಿಯ ಹಲಗೆಯ ಮೇಲೆ, ಹಳ್ಳಿಯ ಓಣಿಯೊಂದರ ಚಾಪೆಯ ಮೇಲೆ, ಆಯಷ್ಕರ್ಮ ಶಾಲೆಯಲ್ಲಿ, ಔಷಧ ಮಾರಾಟ ಅಂಗಡಿಯಲ್ಲಿ, ಉದ್ಯಾನ ವನದಲ್ಲಿ, ಬಸ್ ನಿಲ್ದಾಣ, ಕೆರೆಯ ದಂಡೆ, ರುದ್ರಭೂಮಿ, ಲಾರಿಯ ಹಿಂದುಗಡೆ, ವೃತ್ತ (ಸರ್ಕಲ್) ಇತ್ಯಾದಿ  ಸ್ಥಳಗಳಲ್ಲಿ ಪ್ರದರ್ಶನಗೊಂಡಿರುವ, ಜಾಣ್ಮೆಯ ನೀತಿ ನುಡಿಗಳನ್ನೂ ಸಂಗ್ರಹಿಸಿರುವವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಉದಾಹರಣೆಗೆ; 'ನಾನು ನನ್ನದು ನಶ್ವರ, ಒಲವೊಂದೇ ಈಶ್ವರ' (ಆಟೋರಿಕ್ಷಾ ಹಿಂಬದಿ); 'ಆಡಬೇಡಿ ವ್ಯಾಜ್ಯ, ಬಡವಾದೀತು ರಾಜ್ಯ/ ಕೂಡಿಬಾಳಿದರೆ ಸಂತೋಷ ಸಾಮ್ರಾಜ್ಯ' (ಚಿಲ್ಲರೆ ಅಂಗಡಿ); 'ಕಳೆದರೆ ಒಳಗಿನ ಮಾಲಿನ್ಯದ ಅಂಗಾರ/ ಆಗುವೆ ನೀ ಅಪ್ಪಟ ಬಂಗಾರ' (ಅಕ್ಕಸಾಲಿಗರ ಅಂಗಡಿ); 'ಸ್ವಾರ್ಥವಿಲ್ಲದ ಬದುಕು ಸರ್ವಕಾಲಕೂ ಶ್ರೇಷ್ಠ' (ವ್ಯಾಯಾಮಶಾಲೆ); 'ಒಮ್ಮೆ ಜಾರಿ ಬೀಳುವುದು ಸ್ವಾಭಾವಿಕ, ಮತ್ತೆ ಮತ್ತೆ ಜಾರಿಬೀಳದಂತೆ ನಡೆಯುವುದು ವಿವೇಕ' (ಕೆರೆಯದಂಡೆಯಮೇಲೆ);  'ಲಾರಿಯ ಹಿಂದೋಡಿದರೆ ಬರಿ ಧೂಳು/ ನಾರಿಯ ಹಿಂದೋಡಿದರೆ ಬಾಳೆಲ್ಲಾ ಗೋಳು' (ಒಂದು ಲಾರಿಯ ಹಿಂದುಗಡೆ)... ಹೀಗೆ ಸಾಮಾಜಿಕರಿಗೆ ನೀತಿಬೋಧೆಮಾಡುವ ಪೂರ್ವಸೂರಿಗಳ ಮತ್ತು ಆಧುನಿಕರ ಮಾತುಗಳು ಮತ್ತೆ ಭಾಗ 2ರ ಹತ್ತನೆಯ ಗೆಜ್ಜೆ- ಕನ್ನಡದ ಕವಿ ಸೂಕ್ತಿ ಮತ್ತು ನವೀನ ಗಾದೆಗಳ ಸಮಾಲೋಕ (ಪು: 1381-1413)ವಿಭಾಗದಲ್ಲೂ ಸಂಗ್ರಹಗೊಂಡಿವೆ.
ಇದಿಷ್ಟನ್ನು ಹೇಳಿದರೆ ಸಂಪುಟಗಳ ಬಗ್ಗೆ ಹೇಳಿದ್ದೆಲ್ಲಾ ಕಮ್ಮಿಯೇ ಎನಿಸುತ್ತದೆ. ಯಾಕೆಂದರೆ ಅಷ್ಟು ಸಮೃದ್ಧವಾದ ಕಾಲ- ಭಾಷೆ- ವೈವಿಧ್ಯದಿಂದ ತುಂಬಿ ತುಳುಕುತ್ತಿರುವ ಜ್ಞಾನಾಮೃತ ಕುಂಭಗಳು. ನಿಧಾನಕ್ಕೆ ಗುಟುಕರಿಸಬೇಕಾದ ಬಿಂದುಗಳು. ಒಂದೊಂದು ಸಂಪುಟಕ್ಕೂ ಇಟ್ಟಿರುವ ಬೆಲೆ ನಾಲ್ಕು ನೂರು ರೂಪಾಯಿಗಳು ಮಾತ್ರ.  ಪ್ರಕಾಶಕ, ಸಂಪಾದಕರಾದ ಎಚ್.ಎಸ್. ಗೋವಿಂದೇಗೌಡರು ನನ್ನೊಡನೆ ಮಾತನಾಡಿದಾಗ ಹೇಳಿದರು, ಓದುಗರಿಗೆ ಅರ್ಧ ಕ್ರಯಕ್ಕೆ ಮಾರಲು ಸಿದ್ಧವೆಂದು. ಕನ್ನಡಿಗರಾದ ನಮ್ಮೆಲ್ಲರ ಮನೆಯಲ್ಲೂ ಮತ್ತು ಗ್ರಂಥಾಲಯಗಳಲ್ಲೂ ಇರಬೇಕಾದ ಸಂಪುಟಗಳು. ಇಂಥ ಜೀವನಾವಧಿಯ ಕೃತಿಯನ್ನು ಸಂಗ್ರಹಿಸಿರುವ ಪ್ರೊ.ಎ.ವಿ. ಸೂರ್ಯನಾರಾಯಣಸ್ವಾಮಿಯವರನ್ನು ಮತ್ತು ಪ್ರಕಾಶಕ, ಸಂಪಾದಕ ಗೋವಿಂದೇಗೌಡರನ್ನು ಕನ್ನಡಿಗರೆಲ್ಲಾ ಕೂಡಿ ಅಭಿನಂದಿಸೋಣ. ಕೊಂಡು ಓದಿ ಅವರ ಪರಿಶ್ರಮವನ್ನು ಪುರಸ್ಕರಿಸೋಣ.

 -ಸತ್ಯನಾರಾಯಣರಾವ್ ಅಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com