ಚಂದ್ರಸರಸಿಗೆ ವಿದಾಯ

ಚಂದ್ರಸರಸಿಗೆ ವಿದಾಯ
Updated on: 

ನಾವು ಓಡುತ್ತ ಓಡುತ್ತಲೇ ಸರೋವರವನ್ನು ಸಮೀಪಿಸಿದೆವು. ಏದುಸಿರು ತಹಬಂದಿಗೆ ಬಂದ ಮೇಲೆ ಎದುರಿಗಿದ್ದ ದೃಶ್ಯ ನಿಧಾನವಾಗಿ ಅರಿವಿಗೆ ಬರತೊಡಗಿತು.
ಸುತ್ತುವರಿದ ಬೆಟ್ಟಗಳ ಕೋಟೆಯ ನಡುವೆ, ಕತ್ತಲೆಯಲ್ಲಿ ಮುದುಡಿ ಮಲಗಿದ ಮಹೋರಗವೊಂದರಂತೆ ಕಾಣುತ್ತಿತ್ತು ಅದು. ಕಪ್ಪಗಿದ್ದ ನೀರಿನ ಅಲೆಗಳು, ಅದರ ಏರಿಳಿಯುತ್ತಿರುವ ಎದೆಯಂತೆ ಮೆಲ್ಲಗೆ ಹೊರಳುತ್ತಿದ್ದವು. ಬೆಟ್ಟಗಳ ಆಚೆಯಿಂದ ಬೆಳಕಿನ ಪ್ರಭಾವಳಿಯೊಂದು ನಿಧಾನವಾಗಿ ವಿಸ್ತರಿಸತೊಡಗಿತ್ತು. ಒಂದು ಬೆಟ್ಟದ ಹಿಂದಿನಿಂದ ಸೂರ್ಯ ಮೇಲೆ ಏಳತೊಡಗಿದಂತೆ, ಅದರ ಎದುರಿದ್ದ ಬೆಟ್ಟದ ಮೇಲೆ ಬಿದ್ದಿದ್ದ ನೆರಳು ಶಿಖರದಿಂದ ಬುಡದತ್ತ ಸರಿಯತೊಡಗಿತು. ಕಡುಗಪ್ಪು ವರ್ಣದ ಸರೋವರ ಕಂದು ಬಣ್ಣಕ್ಕೆ ತಿರುಗಿತು.
ನಿಧಾನವಾಗಿ ಕಂದು ಬಣ್ಣದ ಜಾಗವನ್ನು ಕಡುಹಸಿರು ಆಕ್ರಮಿಸಿತು. ತೆಳುವಾಗುತ್ತಾ ಬಂದ ಹಸಿರು, ಕ್ರಮೇಣ ಕಡುನೀಲಿಗೆ ಎಡೆಮಾಡಿಕೊಟ್ಟಿತು. ಆಗಸದ ತುಣುಕೊಂದು ಬೆಟ್ಟಗಳ ನಡುವೆ ಚೆಲ್ಲಿದಂತೆ ಕಾಣಿಸತೊಡಗಿತು. ಮಿಲಿಮೀಟರ್ ಅಳತೆಯಲ್ಲಿ ಮೇಲೇರುತ್ತಿದ್ದ ಸೂರ್ಯ ಇದ್ದಕ್ಕಿದ್ದಂತೆ ಒಂದು ಕ್ಷಣದಲ್ಲಿ ಬೆಟ್ಟದ ತುದಿಮೆಟ್ಟಿ ಗಗನಕ್ಕೆ ನೆಗೆದುಬಿಟ್ಟ. ಫಳ್ಳನೆ ಬೆಳಗಾಯಿತು. ಸರೋವರ ಬೆಳ್ಳಗೆ ಹಾಲಿನಂತೆ ಹೊಳೆಯತೊಡಗಿತು. ಅಕ್ಕಪಕ್ಕದ ಬೆಟ್ಟಗಳು ಕೊಳಕ್ಕಿಳಿದು ಮೀಯತೊಡಗಿದವು.
ನೋಡುತ್ತಿದ್ದ ನಾವು ನಾಲ್ವರಿಗೂ ಮೈಮೇಲೆ ಪರಿವೆಯೇ ಇರಲಿಲ್ಲ. ಇದು ಪ್ರತಿನಿತ್ಯವೂ ಹೀಗೆಯೇ ನಡೆಯುತ್ತದೆಯೊ? ಅಥವಾ ಬೇರೆಬೇರೆ ದೃಶ್ಯಗಳೂ ಇವೆಯೊ? ಪ್ರವಾಸಿಗರು ಬರುವ ಈ ಸ್ಥಳದಲ್ಲೇ ಇಂಥ ಚೆಲುವಿನ ಖನಿ ರಾಶಿ ಬಿದ್ದಿದೆ. ಇನ್ನೂ ನಮ್ಮಂಥವರು ಕಾಲಿಡಲಾಗದ, ಮಹಾಯೋಗಿಗಳು ಏಕಾಂಗಿಗಳಾಗಿ ತಪಶ್ಚರ್ಯೆ ಮಾಡುತ್ತಿರಬಹುದಾದ ಗಹ್ವರಗಳಲ್ಲಿ ಎಂಥ ಸೊಬಗಿನ ಸಗ್ಗ ಸುರಿದಿರಬಹುದು? ಮನುಷ್ಯನಿಗೆ ಅದು ದಕ್ಕೀತೆ ಎಂದಾದರೂ? ಎಂಬಂಥ ಯೋಚನೆಗಳಲ್ಲಿ ನಾನು ಕಳೆದುಹೋಗಿದ್ದೆ. 'ಇದೇ ಆ್ಯಂಗಲ್‌ನಲ್ಲಿ ತೆಗೆದ ಫೋಟೋ ಇಂಟರ್‌ನೆಟ್‌ನಲ್ಲಿ ನೋಡಿದ್ದೆ' ಅನ್ನುತ್ತ ರಾಧಿಕಾ ಮತ್ತು ಪ್ರಿಯಾ ಅದೇ ಥರ ಫೋಟೋ ಹೊಡೆಯಲು ತಿಣುಕತೊಡಗಿದರು.
ನಾಲ್ವರೂ ಸರೋವರದ ಪಕ್ಕಗಳಲ್ಲಿ ಬೆಳೆದಿದ್ದ ಹುಲ್ಲುಹಾಸಿನ ನಡುವೆ ಕಾಲು ಹಾಕತೊಡಗಿದೆವು. ಅದು ಹತ್ತಾರು ಕಿಲೋಮೀಟರಿನುದ್ದಕ್ಕೆ ಹರಿದಿತ್ತು. ನಡೆದು ಸುಸ್ತಾಗಿ ಕಲ್ಲುಗುಪ್ಪೆಗಳ ಪಕ್ಕ ಕುಳಿತೆವು. ಸರೋವರ ಕ್ಷಣಕ್ಕೊಂದು ಬಣ್ಣ ತೋರಿ ಬೆರಗುಗೊಳಿಸುತ್ತಿತ್ತು. 'ಬನ್ನಿ, ಇಲ್ಲೇ ಇನ್ನೊಂದು ಸಣ್ಣ ಕೊಳ ಇದೆ' ಎಂದ ತಶಿ ನಮ್ಮನ್ನು ಮತ್ತೊಂದು ಗುಡ್ಡದಾಚೆಗೆ ಕರೆದೊಯ್ದ.
ಅದೊಂದು ಪುಟ್ಟ ಕೊಳ. ಅಲ್ಲಿಗೂ ನೀರಿನ ಮೂಲ ಎಲ್ಲಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಚಂದ್ರತಾಲ್‌ಗಾದರೂ ಬೆಟ್ಟಗಳ ತುದಿಯಲ್ಲಿರುವ ಹಿಮ ಕರಗಿ ಬರುತ್ತಿದೆ ಎನ್ನಬಹುದೇನೊ. ಚಳಿಗಾಲದಲ್ಲಿ ಲೇಕ್ ಸಂಪೂರ್ಣ ಮರಗಟ್ಟಿಹೋಗುತ್ತದೆ. ಪ್ರವಾಸಿಗರು ಇದರ ಮೇಲೇ ಓಡಾಡಬಹುದು. ಆದರೆ ಚಳಿಗಾಲದಲ್ಲಿ ಇಲ್ಲಿಗೆ ಬರುವಂತೆಯೇ ಇಲ್ಲ. ದಾರಿ ಸಂಪೂರ್ಣ ಮುಚ್ಚಿಹೋಗುತ್ತದೆ.
ಮನಸ್ಸಿಲ್ಲದ ಮನಸ್ಸಿನಿಂದ ಮರಳಿದೆವು. ಸರೋವರದ ಪಕ್ಕದಲ್ಲೇ ಜಮೈಕ ಎಂಬವವನೊಬ್ಬ ನಾಲ್ಕೈದು ಬಿಡಾರ ಹಾಕಿದ್ದ. ಆತ ಇಲ್ಲಿ ಬಿಡಾರ ಹೂಡುವ ಏಜೆಂಟ್. ಮಹೇಶ ಮೊದಲು ಕ್ಯಾಂಪ್‌ಗಾಗಿ ಆತನನ್ನು ಸಂಪರ್ಕಿಸಿ, ಸಿಗದೆ ಹೋದುದರಿಂದ, ಬೇರೊಬ್ಬ ಏಜೆಂಟ್‌ನ ಕ್ಯಾಂಪ್ ಪಡೆಯಬೇಕಾಗಿತ್ತು. ಈ ಪರಿಚಯದಿಂದಾಗಿ ಆತ ನಮ್ಮನ್ನು ಟೀ ಕುಡಿಯಲು ಆಹ್ವಾನಿಸಿದ. ಟೀ ಕುಡಿಯುತ್ತ ನಾವು ಕೇಳಿದೆವು 'ಇಷ್ಟು ವರ್ಷ ಇಲ್ಲಿ ಓಡಾಡಿದ್ದೀರಲ್ಲ. ಯಾವತ್ತಾದರೂ ಹಿಮಚಿರತೆ ನೋಡಿದ್ದೀರ?'
ಆತ ಹೇಳಿದ್ದು ಕೇಳಿ ನಾನು ಅದುರಿಹೋದೆ: 'ನೀರು ಕುಡಿಯೋಕೆ ಬಂದಾಗ ಒಮ್ಮೆ ದೂರದಿಂದ ನೋಡಿದ್ದೇನೆ. ಇಂದು ಬೆಳಗ್ಗೆ ಎದ್ದು ಟೀ ಕುಡಿಯೋಣ ಅಂತ ಈ ಕ್ಯಾಂಪ್‌ನಿಂದ ಆ ಕ್ಯಾಂಪ್‌ಗೆ ದಾಟುತ್ತಿದ್ದಾಗ ಆದೋ, ಆ ಗುಡ್ಡದ ಪಕ್ಕದಲ್ಲಿ ಚಲನೆ ಕಂಡಿತು. ಥಟ್ಟನೆ ಕಾಣಿಸಿದ್ದು ಅದರ ಎರಡು ಹಿಂಗಾಲುಗಳು ಮತ್ತು ಬಾಲ ಮಾತ್ರ...'
ನಮ್ಮ ಕ್ಯಾಂಪ್ ತಲುಪಿ, ಮತ್ತೊಮ್ಮೆ ಟೀ ಕುಡಿದು, ಜೀಪು ಹತ್ತಿ ಬತಾಲ್‌ನತ್ತ ಬರುತ್ತಿದ್ದಾಗಲೂ ನನ್ನ ತಲೆಯಲ್ಲಿ ಕೊರೆಯುತ್ತಿದ್ದ ಪ್ರಶ್ನೆ ಒಂದೇ: ನಾನು ಚಿರತೆ ನೋಡಿದ್ದು ಹೇಳಿಬಿಡಲೆ? ಅದು ನಿನ್ನ ಭ್ರಮೆ ಎಂದು ನಕ್ಕರೆ?
(ಮುಂದಿನ ವಾರ: ಛೋಟಾಧಾರದಲ್ಲಿ ಮೃತ್ಯುದರ್ಶನ)

= ಹರೀಶ್ ಕೇರ
harishkera@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com