

ಅದೇನು ತಲ್ಲೀನತೆ ಆ ಹುಡುಗನದ್ದು? ಅಬ್ಬಾ, ಅದೇನು ರೊಮ್ಯಾಂಟಿಕತನ! ಆದರೆ ಆತ ಒಂದಿನಿತೂ ವಿಚಲಿತನಾಗದೇ ಆ ಕಾರ್ಯವನ್ನು ಮಾಡುತ್ತಿದ್ದ. ಅಷ್ಟಕ್ಕೂ ಅವನೇನು ಪುಟ್ಟ ಬಾಲಕನಲ್ಲ. ಅಥವಾ ವೈರಾಗಿಯೂ ಅಲ್ಲ. ವಯಸ್ಸಾಗಿ ಹೋಗಿದೆ ಎಂದುಕೊಳ್ಳುವಂತೆಯೂ ಇಲ್ಲ. ಪಕ್ಕಾ ಟೀನೇಜು. ಅಂಥದ್ದಕ್ಕೆಲ್ಲಾ ಪುಟಿಯುವ ಮನಸ್ಸೇ. ದುಂಡದುಂಡನೆಯ ಹುಡುಗಿಯರನ್ನು, ಅವರ ಸಿಡಿಯುವ ಎದೆಯನ್ನು, ಬಳುಕುವ ಸೊಂಟವನ್ನು, ಇಣುಕುವ ಯವ್ವನವನ್ನು, ಕೆಣಕುವ ತುಂಟತನವನ್ನು ಕಂಡು ಕನಸು ಕಟ್ಟುವ, ಎಲ್ಲೆಲ್ಲೋ ವಿಹರಿಸುವ ವಯಸ್ಸೇ ಆತನದ್ದೂ. ಆದರೂ ಆತ ಸ್ಥಿತಪ್ರಜ್ಞನಂತೆ ಆ ಕೆಲಸವನ್ನು ಮಾಡುತ್ತಿದ್ದಾನೆ; ಅತ್ಯಂತ ನಿರ್ಭಾವುಕವಾಗಿ. ಅಬ್ಬಾ, ಆತನ ಸಂಯಮವೇ!
ಇದು ಒಂದು ದಿನದ ಮಾತಲ್ಲ. ಪ್ರತಿದಿನವೂ ಬೆಳಗ್ಗೆ ನಾನು ಕಾಲೇಜಿಗೆ ಸೈಕಲ್ ತುಳಿದುಕೊಂಡು ಹೋಗುವಾಗಲೆಲ್ಲಾ ಆತ ಆಕೆಯ ಸೊಂಟ ಬಳಸಿಯೋ, ಆಕೆಯ ಎದೆಯ ಮೇಲಿನ ಸೆರಗನ್ನು ಸರಿಪಡಿಸುತ್ತಲೋ, ಸೀರೆಯ ನೆರಿಗೆಯನ್ನು ಹಿಡಿದು ಒಪ್ಪ ಮಾಡುತ್ತಲೋ ಇರುತ್ತಾನೆ. ಹೊರಗಿನ ಯಾವುದೇ ಬೆಳವಣಿಗೆಗಳೂ ಆತನ ಈ ಕಾರ್ಯಕ್ಕೆ ಭಂಗ ತರುವುದಿಲ್ಲ. ಕೊನೇಪಕ್ಷ ಯಾರಾದರೂ ತನ್ನನ್ನು ಗಮನಿಸುತ್ತಿರಬಹುದು ಎಂಬ ಆತಂಕವೂ ಆತನಲ್ಲಿರುವುದಿಲ್ಲ. ಹೋಗಲಿ ಎಂದುಕೊಂಡರೆ ಅದೇನು ನಿರ್ಜನ ರಸ್ತೆಯೂ ಅಲ್ಲ. ಬೆಳಗಾದರೆ ಎಲ್ಲರಿಗಿಂತ ಮೊದಲು ಎಚ್ಚೆತ್ತುಕೊಳ್ಳುವುದು ಆ ರಸ್ತೆಯೇ. ಮತ್ತೆ ಅಲ್ಲಿ ಜನಜಂಗುಳಿ ಕರಗುವುದು ಮಧ್ಯರಾತ್ರಿಯ ಹೊಸ್ತಿಲಿಗೇ. ಹಾಗಿದ್ದರೂ ಆ ಚುಮು ಚುಮು ಮುಂಜಾವಿಗೇ ಎದ್ದುಬರುವ ಆ ಹುಡುಗ, ಒಂದಿನಿತೂ ಮುಜುಗರಪಟ್ಟುಕೊಳ್ಳದೇ ತನ್ನ ಕಾರ್ಯದಲ್ಲಿ ತಾನು ಮಗ್ನನಾಗಿರುತ್ತಾನೆ. ನನಗೆ ಬಹಳಷ್ಟು ಬಾರಿ ಕೌತುಕಕ್ಕೆ ಇಟ್ಟುಕೊಳ್ಳುವುದು ಅದೇ. ಒಮ್ಮೊಮ್ಮೆ ಆತನ ಬಗ್ಗೆ ಸಣ್ಣದೊಂದು ಹೊಟ್ಟೆಕಿಚ್ಚು ಹುಟ್ಟಿಕೊಳ್ಳುವುದೂ ನಿಜ. ಅಂಥ ಸುಂದರಿಯ ಆ ಸಾಮೀಪ್ಯ ಆತನಿಗೆ ಮಾತ್ರ ಅದು ಹೇಗೆ ದಕ್ಕಿಬಿಟ್ಟಿತೋ ಎಂಬ ಅಸೂಯೆ ನನಗೇ ಗೊತ್ತಿಲ್ಲದಂತೆಯೇ ನನ್ನನ್ನು ಕಾಡಿದ್ದಿದೆ.
ಆಕೆಯಾದರೂ ಎಷ್ಟು ಸುಂದರಿ ಅಂತೀರಾ? ಅಕ್ಷರಶಃ ಆಕೆ 'ದಂತದ ಬೊಂಬೆ'. ಹಾಲು ಮೈಯ್ಯ ಆಕೆಯ ದೇಹದ ಆ ಏರಿಳಿತಗಳು ಎಂಥವನನ್ನೂ ಒಂದು ಕ್ಷಣ ಹಿಡಿದಿಟ್ಟುಕೊಳ್ಳದೇ ಬಿಡುವುದಿಲ್ಲ. ಎಲ್ಲೆಲ್ಲಿ ಎಷ್ಟೆಷ್ಟು ಅಗತ್ಯವೋ ಅದನ್ನು ಪ್ರಮಾಣಬದ್ಧವಾಗಿ ಕಂಡುಕೊಂಡು ಆಕೆಯನ್ನು ನಿಖರವಾಗಿಯೇ ರೂಪಿಸಿದ್ದಾನೆ ಶಿಲ್ಪಿ. ಹೆಣ್ಣೆಂದರೆ ಹೀಗೆಯೇ ಇರಬೇಕು ಎಂಬಷ್ಟರ ಮಟ್ಟಿಗೆ, ಪ್ರತಿಯೊಬ್ಬರ ಮನದಲ್ಲೂ ಕನಸಿನ ಮೂಟೆಗಳನ್ನು ಚೆಲ್ಲಿಯೇ ತೀರುವ ಚೆಲುವು ಆಕೆಯದ್ದು. ಬಣ್ಣ, ಮೈಮಾಟ, ಕುಡಿ ನೋಟ, ವೈಯ್ಯಾರ ಎಲ್ಲವೆಂದರೆ ಎಲ್ಲವೂ ಚೆಂದ. ಅದಕ್ಕೊಪ್ಪುವಂತೆ ಪ್ರತಿದಿನವೂ ಸೀರೆಯನ್ನು ಆಯ್ಕೆ ಮಾಡುವ ಈ ತುಂಟ ಅದನ್ನು ತಾನೇ ಸ್ವತಃ ಉಡಿಸಿ, ಕಚಗುಳಿ ಇಡುವ ದೃಶ್ಯ ಮಾತ್ರ ನಿಜಕ್ಕೂ ಜವ್ವನಿಗರ ಎದೆಯಲ್ಲಿ ಹತ್ತಾರು ಬಾಂಬ್ಗಳ ದಾಳಿಯನ್ನು ನಡೆಸಿಯೇ ತೀರುತ್ತದೆ. ನನಗಾಗುತ್ತಿದ್ದುದೂ ಅದೇ.
ಇಷ್ಟೊಂದು ಕಲಾತ್ಮಕವಾಗಿ ಸೀರೆಯನ್ನು ಉಡಿಸಲು ಆತ ಕಲಿತದ್ದಾದರೂ ಹೇಗೆ? ಯಾರು ಅದನ್ನವನಿಗೆ ಹೇಳಿಕೊಟ್ಟದ್ದು? ಹುಡುಗಿಯರೂ ನಾಚುವಂತೆ ದಿನಕ್ಕೊಂದು ಫ್ಯಾಷನ್ ಮಾಡಿ, ಒಮ್ಮೆ ಸೆರಗನ್ನು ಎಡಕ್ಕೆ ಹಾಕಿ, ಇನ್ನೊಮ್ಮೆ ಬಲಕ್ಕೆ ತಂದು, ಮಗದೊಮ್ಮೆ ಗುಜರಾತೀ ಶೈಲಿ, ಪಂಜಾಬಿ , ಕೊಡಗು...
ಒಟ್ಟಾರೆ ಒಂದು ದಿನ ಇದ್ದುದು ಇನ್ನೊಂದು ದಿನವಿಲ್ಲ. ಅಂಥ ನೈಪುಣ್ಯವನ್ನು ಕಂಡೇ ಎಷ್ಟೋ ದಿನ ಬೆರಗಾಗಿದ್ದೆ. ಬಹುಶಃ ಆಕೆಯ ಆ ಚೆಲುವೇ ಈ ಹುಡುಗನ ಕ್ರಿಯಾಶೀಲತೆಗೆ ಪ್ರೇರಣೆಯಿರಬೇಕೆಂದುಕೊಂಡು ಮತ್ತೆ ಕರುಬಿದ್ದೂ ಇದೆ. ಇಷ್ಟೆಲ್ಲದರ ಕೊನೆಗೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಏನು ಗೊತ್ತೆ?
ಆ ಅಂಗಡಿಯ ಮುಂದೆ ನಿಲ್ಲಿಸುವ ಆ ಸುಂದರ ಹುಡುಗಿಯ ಗೊಂಬೆಗೇ ಇಷ್ಟು ಚೆನ್ನಾಗಿ ಸೀರೆ ಉಡಿಸುವ ಈ ರಸಿಕನಿಗೆ ನಿಜ ಜೀವನದಲ್ಲಿ ಸಿಗಬಹುದಾದ ಹುಡುಗಿ ಇನ್ನೆಷ್ಟು ಪುಣ್ಯವಂತೆಯಿರಬಹುದು. ಆಕೆಗೆ ಸೀರೆಯ ನೆರಿಗೆ ಹಾಕಿ, ಹೊಕ್ಕುಳಿಗೆ ಕೈತಾಗಿಯೂ ತಾಗದಂತೆ ಒಳಮಡಿಕೆ ಮಾಡಿ ನಿರಿಗೆ ಸಿಕ್ಕಿಸುವಾಗ ಆಕೆ ಅನುಭವಿಸುವ... ಕಲ್ಪನೆಯಲ್ಲೇ ಆಬ್ಬಾ, ಆಕೆ ಅದೃಷ್ಟವಂತೆ ಅಂದುಕೊಳ್ಳುತ್ತಿದ್ದೆ.
ಮೊನ್ನೆ ಊರಿಗೆ ಹೋದಾಗ ಪೇಟೆ ಸುತ್ತಿಕೊಂಡು ಬರೋಣವೆಂದು ಯಾಕೋ ಆ ಅಂಗಡಿ, ಆ ಹುಡುಗ, ಅದರ ಮುಂದಿನ ಸೀರೆಯುಟ್ಟ ಚೆಂದದ ಬೊಂಬೆ... ಎಲ್ಲವೂ ನೆನಪಾಗಿ ಕಾಲು ಅತ್ತಲೇ ಚಲಿಸಿತು. ಅಂದುಕೊಂಡಂತೆ ಅವತ್ತಿನ ಆ ಹುಡುಗ ಇಂದು ಗಂಡಸಾಗಿ ಬಟ್ಟೆ ಅಂಗಡಿಯ ಗಲ್ಲಾದ ಮುಂದೆ ಕುಳಿತಿದ್ದ. ಆತನ ಹೆಂಡತಿ ಜೀನ್ಸ್ ಹಾಗೂ ಟೈಟ್ಸ್ನಲ್ಲಿ ದರ್ಪ ತೋರುತ್ತ ಅಂಗಡಿ ಹುಡುಗರಿಗೆ ಏನೇನೋ ಸೂಚನೆ ಕೊಡುತ್ತಿದ್ದಳು. ಆ ಗೊಂಬೆ ಅದೇ ರೀತಿ, ಅದಕ್ಕಿಂಥ ಸುಂದರವಾದ ಸೀರೆಯಲ್ಲಿ, ಸ್ವಲ್ಪವೂ ಮಾಸದ ಚೆಲುವಿನೊಂದಿಗೆ ಕಂಗೊಳಿಸುತ್ತಿತ್ತು. ನಿಟ್ಟುಸಿರು ಬಿಟ್ಟು ಹೊರಬಂದೆ.ಟಿ
-ರಾಧಾ ಸೋಚನಿ
abhyagatha@yahoo.co.in