ಸಮಾನ ಹಿಸ್ಸೆ ಬರುತ್ತದೆ
ರೇಖಾ, ಚಳ್ಳಕೆರೆ
ನನ್ನ ತಂದೆ 1929ರಲ್ಲಿ ಜಮೀನು ಕೊಂಡುಕೊಂಡಿದ್ದರು. ನನ್ನ ತಮ್ಮ ನನ್ನ ಮದುವೆಯ ನಂತರ ಒಂದು ಜಮೀನು ಖರೀದಿಸಿರುತ್ತಾನೆ. ನನಗೆ ಒಂದು ಎಕರೆ ಜಮೀನು ಹಾಗೂ ಒಂದು ಮನೆ ಜಮೀನು ಕೊಟ್ಟಿರುತ್ತಾರೆ. ತಂದೆಯ ಉಳಿದ ಜಮೀನಿನಲ್ಲಿ ನನಗೆ ಭಾಗವಿದೆಯೇ ತಿಳಿಸಿ.
- ತಮ್ಮ ಖರೀದಿಸಿದ ಜಮೀನು ತಂದೆಯ ಆಸ್ತಿಯ ಗಳಿಕೆಯಿಂದ ಆಗಿದ್ದರೆ ಅದೂ ಪಿತ್ರಾರ್ಜಿತವೆಂದೇ ಲೆಕ್ಕ. ನಿಮ್ಮ ತಂದೆಯ ಒಟ್ಟು ಆಸ್ತಿ-ಜಮೀನು, ಮನೆ ಇತ್ಯಾದಿ ಎಲ್ಲವನ್ನೂ ಕೂಡಿಸಿ ಅದರಲ್ಲಿ ಎಲ್ಲ ಹೆಣ್ಣುಮಕ್ಕಳಿಗೆ ಹಾಗೂ ಗಂಡುಮಕ್ಕಳಿಗೆ ನಿಮ್ಮ ತಾಯಿ, ತಂದೆ ಎಲ್ಲರಿಗೂ ಸಮಾನ ಹಿಸ್ಸೆ ಬರುತ್ತದೆ.
ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ
ವೆಂಕಟೇಶ, ಕಂದಿಕೆರೆ
ನಮ್ಮೂರ ಪಂಚಾಯಿತಿಯವರು ಸರ್ಕಾರಿ ಖಾಲಿ ನಿವೇಶನವನ್ನು ನಮಗೆ ಖಾತೆ ಮಾಡಿಕೊಟ್ಟು ನಂತರ ಅದನ್ನು ಇತರರ ಹೆಸರಿಗೆ ಖಾತೆ ಮಾಡಿ ಠರಾವು ಮಾಡಿರುತ್ತಾರೆ. ಅದನ್ನು ನಮ್ಮ ಹೆಸರಿಗೆ ಮಾಡಿಕೊಡಲು ಒಪ್ಪುತ್ತಿಲ್ಲ. ಪರಿಹಾರವೇನು?
- ಮಾಹಿತಿ ಹಕ್ಕು ನಿಯಮದಂತೆ ನಿಮಗೆ ಮಂಜೂರಾತಿ ಆಗಿ ಖಾತೆ ಆಗಿರುವ ವಿವರ ಪಡೆದುಕೊಳ್ಳಿ. ನೀವು ಹೇಳಿದ್ದು ಸರಿಯಾಗಿದ್ದರೆ ಪಂಚಾಯಿತಿಯ ಎರಡನೇ ಆದೇಶದ ವಿರುದ್ಧ ಜಿಲ್ಲಾ ಪಂಚಾಯಿತಿಗೆ ದೂರು ನೀಡಿ. ಅಗತ್ಯವಾದರೆ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಿ. ಪರಿಹಾರ ಸಿಗಬಹುದು.
ಜಿಲ್ಲಾ ರಿಜಿಸ್ಟ್ರಾರ್ರಿಗೆ ಅರ್ಜಿ ಸಲ್ಲಿಸಿ
ಊರು, ಹೆಸರಿಲ್ಲ
ನಾನು ರೆವಿನ್ಯೂ ಸೈಟ್ ಖರೀದಿಸಬಹುದೇ? ಅದನ್ನು ನೋಂದಣಿ ಮಾಡಿಸಿಕೊಳ್ಳಬಹುದೇ? ನೋಂದಣಿ ಪತ್ರ ಬರೆಯುವವರಿಗೆ ಭದ್ರತೆ ಇದೆಯೇ? ಅವರ ಸಂಭಾವನೆ ಪರಿಷ್ಕರಣೆಗೆ ಅವಕಾಶವಿದೆಯೇ?
- ಸದ್ಯಕ್ಕೆ ಅಕ್ರಮ-ಸಕ್ರಮ ಕಾನೂನು ಜಾರಿಯಲ್ಲಿಲ್ಲ. ಆದ್ದರಿಂದ ನೋಂದಣಿ ಸಾಧ್ಯವಿಲ್ಲ. ದಸ್ತಾವೇಜು ಪತ್ರ ಬರೆಯುವವರು ಲೈಸನ್ಸ್ ಪಡೆದ ಖಾಸಗಿ ವ್ಯಕ್ತಿ. ಹಾಗಿರುವಾಗ ಅವರಿಗೆಂತಹ ಭದ್ರತೆ? ಅವರ ಫೀ ಪರಿಷ್ಕರಣೆಗೆ ಕರ್ನಾಟಕ ಡೀಡ್ ರೈಟರ್ಸ್ ಲೈಸೆನ್ಸ್ ಕಾಯ್ದೆಯಡಿ ಅರ್ಜಿಯನ್ನು ಜಿಲ್ಲಾ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಬಹುದು.
ಲಾಭವಿಲ್ಲದಿದ್ದರೆ ತೊಂದರೆಯಿಲ್ಲ
ಕೊಂಡ ವೆಂಕಟೇಶ್, ರಾಯಚೂರು
ಶ್ರೀ ವಾಸವಿ ಕ್ರಿಯೇಟಿವ್ ಟ್ರಸ್ಟನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಒಳ್ಳೆಯ ಪೈಸ್ಕೂಲಿನಲ್ಲಿ ವಿದ್ಯಾಭ್ಯಾಸಕ್ಕೆ ಬೇಕಾಗುವ ಖರ್ಚನ್ನು ಕೊಡಬೇಕೆಂದು ಉದ್ದೇಶಿಸಿದ್ದು, ಇದಕ್ಕೆ ಸಾರ್ವಜನಿಕರಿಂದ ದಾನ, ದೇಣಿಗೆ ಮುಂತಾದುವನ್ನು ಪಡೆಯಲು ನಿರ್ಧರಿಸಿದ್ದೇವೆ. ಈಗ ಟ್ರಸ್ಟಿಗಳಷ್ಟೇ ಹಣ ನೀಡಿದರೆ ಅಂತಹವರನ್ನು ಪೋಷಕರೆಂದು ಘೋಷಿಸಬೇಕೆಂದು ಉದ್ದೇಶಿಸಿದ್ದೇವೆ. ಆದರೆ ಈ ಬಗ್ಗೆ ಟ್ರಸ್ಟ್ ಡೀಡ್ನಲ್ಲಿ ಉಲ್ಲೇಖವಿಲ್ಲ. ಇದರಿಂದ ಕಾನೂನಿನಡಿಯಲ್ಲಿ ತೊಡಕಾಗುತ್ತದೆಯೇ?
- ದಾನಿಗಳು, ದೇಣಿಗೆದಾರರು, ಪೋಷಕರಿಗೆ ನಿಮ್ಮ ಟ್ರಸ್ಟ್ನಲ್ಲಿ ಯಾವುದೇ ಹುದ್ದೆ, ಜವಾಬ್ದಾರಿ ಅಥವಾ ಲಾಭವಿಲ್ಲದಿದ್ದರೆ ಯಾವುದೇ ತೊಂದರೆ ಇಲ್ಲ. ದಾನಿಗಳಿಗೂ, ಪೋಷಕರಿಗೂ ಹಣದ ಮೊತ್ತದಲ್ಲಷ್ಟೇ ವ್ಯತ್ಯಾಸವಾದರೆ ಅದರಿಂದೇನೂ ಬಾಧಕವಿಲ್ಲ.
- ಎಚ್.ಆರ್. ಕಸ್ತೂರಿರಂಗನ್