ಪೂರ್ಣಚಂದ್ರ ತೇಜಸ್ವಿಯವರ ಪ್ರಭಾವಕ್ಕೆ ಒಳಗಾಗಿ ತಮ್ಮ ಬದುಕನ್ನು, ಆಲೋಚನಾ ಲಹರಿಗಳನ್ನು ರೂಪಿಸಿಕೊಂಡವರಲ್ಲಿ ಧನಂಜಯ ಜೀವಾಳ ಅವರೂ ಒಬ್ಬರು. ಒಂದು ತಲೆಮಾರಿನ ಯುವ ಸಮುದಾಯದ ಆಲೋಚನೆಯ ದಿಕ್ಕನ್ನು ಪ್ರಭಾವಿಸಿ ಬದಲಾಯಿಸಿದ ತೇಜಸ್ವಿ ತಮ್ಮ ನಿಧನದ ನಂತರವೂ ತೀವ್ರವಾಗಿ ತಟ್ಟುತ್ತಿದ್ದಾರೆ. ಬ್ಯಾಂಕ್ ಉದ್ಯೋಗಿಯಾಗಿರುವ ಧನಂಜಯ ಅವರು ತೇಜಸ್ವಿಯವರನ್ನು ತಮ್ಮ ಜೀವದ ಜೀವಾಳ ಎನ್ನುವಂತೆ ಪ್ರೀತಿಸಿದವರು, ಗೌರವಿಸಿದವರು. ಅವರು 'ಕಾಡಿನ ಸಂತ ತೇಜಸ್ವಿ' ಎಂಬ ಕೃತಿಯನ್ನು ಬರೆದಿದ್ದರು. ಅದರ ಪರಿಷ್ಕೃತ ಆವೃತ್ತಿ 'ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ...'
ತೇಜಸ್ವಿಯವರ ನಿಧನದ ನಂತರ ಅವರ ಸಾಹಿತ್ಯ ಕೃತಿಗಳನ್ನು ಕುರಿತು ಹಲವರು ಬರೆದಿದ್ದಾರೆ. ಇನ್ನು ಕೆಲವರು ತಮ್ಮೊಂದಿಗೆ ತೇಜಸ್ವಿಯವರು ಸಂಪರ್ಕಕ್ಕೆ ಬಂದುದು, ಅವರ ಒಡನಾಟ ಇತ್ಯಾದಿಗಳನ್ನೆಲ್ಲ ಬರೆದಿದ್ದಾರೆ. ತೇಜಸ್ವಿಯವರ ಪತ್ನಿ ರಾಜೇಶ್ವರಿಯವರೂ 'ನನ್ನ ತೇಜಸ್ವಿ' ಎಂಬ ಕೃತಿ ರಚಿಸಿರುವರು. ಆ ಸಾಲಿನಲ್ಲಿಯೇ ಈ ಕೃತಿಯೂ ಬರುವುದು.
ತೇಜಸ್ವಿಯವರ ಸಾಹಿತ್ಯದ ಕೃತಿಗಳನ್ನು ಓದಿದವರಿಗೆ ಅವರ ಬಗ್ಗೆ ಒಂದು ಕಲ್ಪನೆ ಮೂಡಿರುತ್ತದೆ. ಅವರ ಕೃತಿಯಲ್ಲಿಯ ಯಾವುದಾದರೂ ಒಂದು ಪಾತ್ರಕ್ಕೆ ತೇಜಸ್ವಿಯವರನ್ನು ಹೋಲಿಸಿ ನೋಡಿದವರೂ ಇರಬಹುದು. ತೇಜಸ್ವಿಯವರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು, ಅವರಿಂದ 'ಮೂರ್ಖ' 'ಹೋಪ್ಲೆಸ್ಫೆಲೊ' ಎಂದು ಬೈಸಿಕೊಳ್ಳಬೇಕು ಎಂದು ತುಡಿತ ಹೊಂದಿದ ಒಂದು ತಲೆಮಾರಿನ ಯುವಕರಿದ್ದರು. ಇದನ್ನು ತೇಜಸ್ವಿ ಸನ್ನಿ ಎಂದು ಹೇಳಬಹುದು.
ಧನಂಜಯ ಅವರೂ ಇಂಥ ಸನ್ನಿಗೆ ಒಳಗಾದವರೇ. ತೇಜಸ್ವಿಯವರ ಬಗ್ಗೆ ಆರಾಧನೆಯ ಶೈಲಿಯಲ್ಲಿ ಇಲ್ಲಿಯ ಬರವಣಿಗೆ ಇದೆ. ಸಮಕಾಲೀನ ಎಲ್ಲ ಸಮಸ್ಯೆಗಳ ಬಗ್ಗೆಯೂ ತೇಜಸ್ವಿ ಪ್ರತಿಕ್ರಿಯಿಸುತ್ತಿದ್ದರು. ಕೃತಿಗಳ ಮೂಲಕ ಮಾತ್ರ ತೇಜಸ್ವಿಯವರನ್ನು ಕಂಡವರಿಗೆ ಅವರ ವೈಯಕ್ತಿಕ ಮತ್ತು ವೈಚಾರಿಕ ನೆಲೆಯ ಇನ್ನೊಂದು ಮುಖವನ್ನು ತೋರಿಸುವ ಪ್ರಯತ್ನ ಇಲ್ಲಿಯದು.
ಇದು ಒಂದು ರೀತಿಯಲ್ಲಿ ಧನಂಜಯ ಅವರ ಆತ್ಮಕಥನದ ಜೊತೆಜೊತೆಗೆ ತೇಜಸ್ವಿಯವರ ಜೀವನ ಚರಿತ್ರೆಯ ಭಾಗವಾಗಿಯೂ ಮತ್ತು ಅದೇ ಕಾಲಕ್ಕೆ ಆ ಸಮಯದ ಸಾಮಾಜಿಕ ಬದುಕಿನ ವಸ್ತುನಿಷ್ಠ ದಾಖಲೆಯಾಗಿಯೂ ಕಾಣಿಸಿಕೊಳ್ಳುತ್ತದೆ. ತೇಜಸ್ವಿ ಎಷ್ಟೊಂದು ವಾಸ್ತವವಾದಿಯಾಗಿದ್ದರು, ಸಮಾಜದ ಅಜ್ಞಾನದ ಬಗ್ಗೆ ಎಷ್ಟೊಂದು ಸಿಡಿಮಿಡಿಗೊಳ್ಳುತ್ತಿದ್ದರು, ಹೀಗೆ ಮಾಡಿದರೆ ಆಗುತ್ತಿರಲಿಲ್ಲವೆ ಎಂದು ಸಲಹೆ ಕೇಳುವವರ ರೀತಿಯಲ್ಲಿ ಪ್ರಶ್ನಿಸುತ್ತಿದ್ದರು ಎಂಬುದನ್ನೆಲ್ಲ ಅವರ ಮಾತಿನಲ್ಲಿಯೇ ಇಲ್ಲಿ ಕೊಟ್ಟಿರುವುದು ವಿಶೇಷ.
ತೇಜಸ್ವಿ ಹೇಗೆ ಇದೆಲ್ಲ ಹೇಳುವುದಕ್ಕೆ ತಮಗೆ ನಿಮಿತ್ತವಾದರು ಎಂಬುದನ್ನು ಜೀವಾಳ ಇಲ್ಲಿ ಸೊಗಸಾಗಿ ಹೇಳಿದ್ದಾರೆ: 'ಇವತ್ತಿಗೂ ತೇಜಸ್ವಿಯವರನ್ನು ಅವರು ಹಾಗಿದ್ದರು, ಹೀಗಿರಬೇಕಿತ್ತು. ಹಾಗೆ ಬದುಕಿದ್ದರು, ಹೀಗೆ ಯಾಕೆ ಬದುಕಲಿಲ್ಲ ಎಂದು ವಿಮರ್ಶೆ ಮಾಡುವವರು ನಾಡಿನ ಮೂಲೆಮೂಲೆಯಲ್ಲೂ ಸಿಗುತ್ತಾರೆ. ಒಂದಂತೂ ಸ್ಪಷ್ಟ, ಈ ದಿನ ಈ ಕ್ಷಣ ನಾವು ತೇಜಸ್ವಿಯವರನ್ನು ಪ್ರಸ್ತಾಪಿಸುತ್ತಿರುವುದು, ನಾಡಿಗೆ ನಾಡೇ ಚರ್ಚೆ ನಡೆಸುತ್ತಿರುವುದಕ್ಕೆ ಮೂಲ ಕಾರಣ ಬದುಕಿನೊಡನೆ ಅವರಿಗಿದ್ದ ವಿಶಿಷ್ಟ ಧೋರಣೆ. ಸಮಾಜದೊಡನೆ ಅವರಿಟ್ಟುಕೊಂಡಿದ್ದ ಸೂಕ್ಷ್ಮ ಸಂವೇದನೆ, ಪ್ರಕೃತಿಯೊಂದಿಗಿನ ಅವರ ಅವಿನಾಭಾವ ಒಡನಾಟ, ಸಾಮಾಜಿಕ ಸ್ಥಿತ್ಯಂತರಗಳೆಡೆಗೆ ಅವರ ವಸ್ತುನಿಷ್ಠ- ತೀಕ್ಷ್ಣ ಪ್ರತಿಕ್ರಿಯೆ. ವಿಸ್ಮಯಗೊಳಿಸುವ ಚಿಕಿತ್ಸಕ ದೃಷ್ಟಿಕೋನ. ಅವರು ತೇಜಸ್ವಿಯಾಗಿ ನಮ್ಮೆಲ್ಲರಲ್ಲೂ ನೆಲೆನಿಂತಿರುವುದು ಅವರು ಹಾಗೆ ಬದುಕಿದ್ದರಿಂದಲೇ ಹೊರತು ಬೇರಾವುದರಿಂದಲೂ ಅಲ್ಲ.' ತೇಜಸ್ವಿಯವರ ಚಿಂತನೆ ಹೇಗೆ ಹರಿಯುತ್ತಿತ್ತು ಎಂಬು ದರ ಬಗ್ಗೆ ಒಂದನ್ನು ಇಲ್ಲಿ ಉಲ್ಲೇಖಿಸಬಹುದು. ಅದು ಸಬ್ಸಿಡಿಯ ಕುರಿತ ಅವರ ವಿಷಾದ. 'ಕುಡಿಯಲು ವಿಷ ಕೂಡಾ ಸಬ್ಸಿಡಿಗೆ ದೊರೆಯುತ್ತೆ ಅಂದರೆ ಎರಡು ಬಾಟಲ್ ಜಾಸ್ತಿಯೇ ಇರಲಿ ಎಂಬ ಮನಸ್ಥಿತಿಯಲ್ಲಿದ್ದಾನೆ ಅಮಾಯಕ ರೈತ. ದುರ್ಬಲರಿಗೆ ಸಬಲರು ಮಾಡಬಹುದಾದ ದೊಡ್ಡ ಸಹಾಯವೆಂದರೆ ಅನಗತ್ಯ ನೆರವನ್ನು ನಿಲ್ಲಿಸುವುದು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದವರಿಗೆ ಸ್ವಾವಲಂಬನೆಯ ಬದುಕನ್ನು ನಡೆಸಲು ಅಗತ್ಯವಾಗಿರುವ ಆತ್ಮವಿಶ್ವಾಸವನ್ನು ತುಂಬುವುದು. ಚೀನಾದ ರೇಷ್ಮೆಯನ್ನು ಅವರು ಕಡಿಮೆ ಖರ್ಚಿನಲ್ಲಿ ಬೆಳೆದು ಇಲ್ಲಿಗೆ ತಂದು ಇಲ್ಲಿಯೂ ಕಡಿಮೆ ಬೆಲೆಗೆ ಮಾರುತ್ತಾರೆಂದರೆ ನಮಗೇಕೆ ಹಾಗೆ ಮಾಡಲು ಸಾಧ್ಯವಿಲ್ಲ? ಸಬ್ಸಿಡಿ ಪಡೆದು ಆರಾಮ ಜೀವನ ನಡೆಸಿದರೆ ಬುದ್ಧಿ ಮಂದವಾಗುತ್ತದೆ. ಸವಾಲುಗಳೊಡನೆ ಬದುಕುವುದನ್ನು ಅಭ್ಯಾಸಮಾಡಿಕೊಳ್ಳಬೇಕು.' ವಿವಿಧ ಭಾಗ್ಯಗಳನ್ನು ಸಮಾಜದ ಬಡವರಿಗೆಂದು ಘೋಷಿಸುವ ಸರ್ಕಾರವನ್ನು ನಡೆಸುವವರು ಇದನ್ನು ಓದಬೇಕು. ಇಂಥ ಹಲು ಖಚಿತ ವಿಚಾರಗಳಿಗಾಗಿಯೇ ಈ ಕೃತಿಯನ್ನು ಓದಬೇಕು ಎನ್ನಿಸುತ್ತದೆ. ತೀರಾ ಸಾಮಾನ್ಯರ ಜೊತೆಗೂ ಸಹಜವಾಗಿ ಬೆರೆಯುವ ತೇಜಸ್ವಿಯವರ ಸ್ವಭಾವ ಉಳಿದವರಿಗೆ ಅಲಭ್ಯವಾದ ಅನೇಕ ಅಕ್ಷತ ಅನುವಭವಗಳು ಅವರಿಗೆ ದಕ್ಕುವಂತೆ ಮಾಡಿದೆ. ಆ ಅನುಭವಗಳನ್ನು ಇತರರೊಂದಿಗೆ ಹಂಚಿಕೊಂಡು ತಮ್ಮ ಟೀಕೆ ಟಿಪ್ಪಣಿಗಳನ್ನು ದಾಖಲಿಸುವ ತೇಜಸ್ವಿಯನ್ನು ಒಬ್ಬ ಋಷಿ ಎಂಬಂತೆ ಜೀವಾಳ ಇಲ್ಲಿ ಚಿತ್ರಿಸಿದ್ದಾರೆ.
ಈ ಪುಸ್ತಕದ ಅರ್ಪಣೆಯ ಮಾತು ಹೀಗಿದೆ; 'ನಾವೆಲ್ಲರೂ ಇರುವ ಈ ಸಮಾಜವನ್ನು ತಿದ್ದುತ್ತಿರುವವರಿಗೆ, ಅನ್ಯಾಯವನ್ನು ತೆರೆದಿಟ್ಟು ಪ್ರತಿಭಟಿಸಲು ಪಣತೊಟ್ಟಿರುವವರಿಗೆ ಹಾಗೂ ಪ್ರಕೃತಿಯನ್ನು ಮೂಲ ಸ್ವರೂಪದಲ್ಲಿ ಉಳಿಸಲು ಶ್ರಮಿಸುತ್ತಿರುವ ಎಲ್ಲರಿಗೂ...' ಈ ಎಲ್ಲರ ಮೂಲಕ ಕೃತಿ ತೇಜಸ್ವಿಯವರಿಗೇ ಅರ್ಪಣೆಯಾಗಿದೆ. ಇದು ಪರಿಷ್ಕೃತ ಆವೃತ್ತಿ ಎಂದು ಹೇಳಿದ್ದರೂ ಕಾಗುಣಿತದ ತಪ್ಪುಗಳು ಹೇರಳವಾಗಿವೆ. ಮುಂದಿನ ಆವೃತ್ತಿಯ ಸಮಯದಲ್ಲಿ ಸರಿಪಡಿಸಲೇಬೇಕು.
ಕೃತಿ: ಇದನ್ನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ...
ಪ್ರಕಾರ: ಸಂಕೀರ್ಣ
ಏಕೆ ಓದಬೇಕು?: ತೇಜಸ್ವಿಯವರನ್ನು ಅರಿಯಲು
ಪ್ರ: ಟೋಟಲ್ ಕನ್ನಡ, ಬೆಂಗಳೂರು, ಪುಟಗಳು 187, ಬೆಲೆ ರು. 170
ಷಟ್ಚಕ್ರ ಮತ್ತು ಕುಂಡಲಿನೀ ಶಕ್ತಿ
ಷಟ್ಚಕ್ರಗಳ ಲಕ್ಷಣ ಮತ್ತು ಕುಂಡಲಿನೀ ಶಕ್ತಿಯ ಬಗ್ಗೆ ಬಿ.ಎನ್. ಶ್ರೀಕಂಠಯ್ಯನವರು 'ಷಟ್ಚಕ್ರ ಮತ್ತು ಕುಂಡಲಿನೀ ಶಕ್ತಿ' ಎಂಬ ಕೃತಿಯನ್ನು ರಚಿಸಿದ್ದಾರೆ. ಸಾಂಪ್ರದಾಯಿಕ ವೈದಿಕ ನಂಬಿಕೆಯೊಂದಿಗೆ ರಚಿಸಲಾಗಿರುವ ಈ ಕೃತಿಯು ಯೋಗಾಭ್ಯಾಸದಿಂದ ಮುಕ್ತಿಯನ್ನು ಪಡೆಯಬಹುದು ಎಂದು ಹೇಳುತ್ತದೆ. ಕುಂಡಲಿನೀ ಶಕ್ತಿಯ ಯೋಗಾಭ್ಯಾಸ ಕ್ರಮವನ್ನು ಇದರಲ್ಲಿ ಹೇಳಲಾಗಿದೆ. ಕೃತಿಯ ಮೊದಲ ಭಾಗದಲ್ಲಿ ಷಟ್ಚಕ್ರ ವಿವರ ಇದ್ದರೆ ಇನ್ನೊಂದು ಭಾಗದಲ್ಲಿ ಪಾದುಕಾ ಪಂಚಕಗಳ ವಿವರಣೆಗಳಿವೆ. ಮೂಲಾಧಾರ ಚಕ್ರ, ಸ್ವಾಧಿಷ್ಠಾನ ಚಕ್ರ, ಮಣಿಪೂರ ಚಕ್ರ, ಅನಾಹತ ಚಕ್ರ, ವಿಶುದ್ಧ ಚಕ್ರ, ಆಜ್ಞಾ ಚಕ್ರ ಎಂಬ ಚಕ್ರಗಳ ವಿವರಣೆ, ಮಂತ್ರ, ಶರೀರ ರಹಿತ ಪ್ರಜ್ಞೆ, ಸಶರೀರ ಪ್ರಜ್ಞೆ, ಲಯ ಕ್ರಮ ಮೊದಲಾದವುಗಳ ವಿವರಗಳಿವೆ. ಯೋಗ ಶಿಕ್ಷಣ ಎಂಬುದು ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಯೋಗವೆಂಬುದು ದೇಹ ಸೌಷ್ಟವ ಕಾಪಾಡಿಕೊಳ್ಳುವುದಕ್ಕೆ ಎಂಬ ಭಾವನೆ ಇದೆ. ಆದರೆ ಕುಂಡಲಿನೀ ಯೋಗವನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡುವುದರಿಂದ ಯಾವಯಾವ ಪ್ರಯೋಜನಗಳಿವೆ ಎಂಬುದನ್ನು ವೈಜ್ಞಾನಿಕವಾಗಿ ಇದರಲ್ಲಿ ಶ್ರೀಕಂಠಯ್ಯ ವಿವರಿಸಿದ್ದಾರೆ.
ಕೃತಿ: ಷಟ್ಚಕ್ರ ಮತ್ತು ಕುಂಡಲಿನೀ ಶಕ್ತಿ
ಪ್ರಕಾರ: ಯೋಗ
ಏಕೆ ಓದಬೇಕು?: ಯೋಗ ಅರಿಯಲು
ಪ್ರ: ಶ್ರೀರಾಮಾಪ್ರಮೇಯ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 182, ಬೆಲೆ ರು. 150
ಸತ್ಯದ ಹುಡುಕಾಟ
ಕನ್ನಡದಲ್ಲಿ ವಿಶಿಷ್ಟವಾಗಿ ಸಾಹಿತ್ಯದ ರಚನೆ ಮಾಡಿ, ತಮ್ಮ ವಿಶೇಷವಾದ ಬದುಕಿನಿಂದ ಗುರುತಿಸಿಕೊಂಡಿದ್ದ ಸತ್ಯಕಾಮ ಅವರ ಕುರಿತಾದ ಬರಹಗಳನ್ನು ಅವರ ಪ್ರಿಯ ಶಿಷ್ಯರಲ್ಲಿ ಒಬ್ಬರಾದ ವೀಣಾ ಬನ್ನಂಜೆಯರು ಸಂಕಲಿಸಿದ ಕೃತಿ 'ಸುಮ್ಮನೆ- ಸತ್ಯಕಾಮರ ಒಡನಾಟ'. ಸುಮ್ಮನೆ ಎಂಬುದು ಸತ್ಯಕಾಮ ಅವರ ಮನೆಯ ಹೆಸರು. ಸತ್ಯಕಾಮರು ಯೋಗಿ, ದಾರ್ಶನಿಕ ಇತ್ಯಾದಿಯಾಗಿ ಅವರ ಒಡನಾಟದಲ್ಲಿ ಬಂದವರಿಗೆ ಪರಿಚಯವಾದವರು. ಅನಂತಾಚಾರ್ಯ ಶಹಾಪೂರ್ ಎಂಬುದು ಸತ್ಯಕಾಮರ ನಿಜನಾಮ. ಅನಂತಮೂರ್ತಿ, ಕೀರ್ತಿನಾಥ ಕುರ್ತಕೋಟಿ, ಪಿ. ಲಂಕೇಶ್, ಗಿರಡ್ಡಿ ಗೋವಿಂದರಾಜ್, ಬನ್ನಂಜೆ ಗೋವಿಂದಾಚಾರ್ಯ, ವೀಣಾ ಬನ್ನಂಜೆ ಮೊದಲಾದವರು ಪ್ರೀತಿಯಿಂದ ಬರೆದ ಬರಹಗಳು ಇಲ್ಲಿವೆ. ಸತ್ಯಕಾಮರೇ ಬರೆದ ಸಾಹಿತ್ಯ ಸಮಾಜರಹಿತ ಚಿಂತನೆ ಮಾಡಿದ್ದೇ ಇಲ್ಲ, ಪ್ರೀತಿಯಿಂದ ನೀಡಿದ ಶಿಕ್ಷೆಯೂ ಅನುಗ್ರಹ ಎಂಬ ಲೇಖನಗಳು ಇದರಲ್ಲಿವೆ. ಇವರೆಲ್ಲರ ಬರೆಹಗಳಿಂದ ಸತ್ಯಕಾಮರ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ವೀಣಾ ಬನ್ನಂಜೆ ಯಶಸ್ವಿಯಾಗಿದ್ದಾರೆ.
ಕೃತಿ: ಸುಮ್ಮನೆ, ಸತ್ಯಕಾಮರ ಒಡನಾಟ
ಪ್ರಕಾರ: ಲೇಖನಗಳು
ಏಕೆ ಓದಬೇಕು?: ಸತ್ಯಕಾಮರನ್ನು ಅರಿಯಲು
ಪ್ರ: ಅಭಿನವ, ಬೆಂಗಳೂರು, ಪುಟಗಳು 444, ಬೆಲೆ ರು. 350
ಜಾತಕ ಪರೀಕ್ಷೆ
ಜಾತಕ ಫಲಗಳನ್ನು ನಂಬುವ ಒಂದು ದೊಡ್ಡ ವರ್ಗವೇ ಇದೆ. ಭಾರತದಲ್ಲಿ ಇದನ್ನು ಒಂದು ಶಾಸ್ತ್ರದಂತೆ ಅಧ್ಯಯನ ಮಾಡುತ್ತಿದ್ದಾರೆ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಬದುಕಿದ್ದ ಮಹದೇವ ರೇವಾಶಂಕರ ಅವರು ಸಂಸ್ಕೃತದಲ್ಲಿ ರಚಿಸಿದ 'ಜಾತಕ ತತ್ವ' ಕೃತಿಯನ್ನು ಎಸ್. ಸೂರ್ಯನಾರಾಯಣರಾವ್ ಕನ್ನಡಕ್ಕೆ ತಂದಿದ್ದಾರೆ. ದ್ವಾದಶಿ ರಾಶಿಯ ಫಲಗಳು, ಅವು ಜಾತಕನ ಬದುಕಿನಲ್ಲಿ ಮಾಡುವ ಪರಿಣಾಮಗಳು, ಜಾತಕನ ಕೌಟುಂಬಿಕ ಸ್ಥಿತಿಗತಿಗಳು, ಸಂಪತ್ತಿನ ವಿಚಾರ, ಸಂತಾನಫಲ, ಲಾಭನಷ್ಟದ ವಿಚಾರ, ಗ್ರಹಗಳು ಜಾತಕದ ಯಾವ ಮನೆಯಲ್ಲಿ ಇದ್ದರೆ ಯಾವ ಫಲಗಳನ್ನು ನೀಡುತ್ತವೆ ಇತ್ಯಾದಿ ವಿವರಗಳು ಇದರಲ್ಲಿವೆ. ಜಾತಕದಲ್ಲಿಯ ಗ್ರಹ ನಕ್ಷತ್ರಗಳ ಮೇಲಿನಿಂದಲೇ ಆತನ ಗುಣಸ್ವಭಾವ, ಆತನ ಸಾಂಪತ್ತಿಕ ಸ್ಥಿತಿಗತಿ ಇತ್ಯಾದಿಗಳನ್ನು ಹೇಳಬಹುದು. ಜೋತಿಷ್ಯದಲ್ಲಿ ನಂಬಿಕೆ ಇದ್ದವರಿಗೆ ಇದೊಂದು ಉಪಯುಕ್ತವಾದ ಕೃತಿ.
ಕೃತಿ: ಜಾತಕ ಪರೀಕ್ಷಾ ಸೂತ್ರಗಳು
ಪ್ರಕಾರ: ಸಂಕೀರ್ಣ
ಏಕೆ ಓದಬೇಕು?: ಜಾತಕ ಅರಿಯಲು
ಪ್ರ: ಪ್ರಚೇತ ಬುಕ್ ಹೌಸ್, ಬೆಂಗಳೂರು, ಪುಟಗಳು 232, ಬೆಲೆ ರು. 165