ಎದೆಯಿಂದ ಎದೆಗೊಂದು ಅಮೃತ ವಾಹಿನಿ

ಎದೆಯಿಂದ ಎದೆಗೊಂದು ಅಮೃತ ವಾಹಿನಿ
Updated on

ಜೀವನವೇ ಮುಗಿದು ಹೋಯಿತು ಎನಿಸುವುದು ಈ ಹಂತದಲ್ಲಿಯೇ. ಸಮಸ್ಯೆಗಿಂತ ಹೆಚ್ಚಾಗಿ ಕಾಡುವುದು ಅಧೈರ್ಯ, ಕೀಳರಿಮೆ. ಆತ್ಮವಿಶ್ವಾಸವನ್ನೇ ಕಳೆದುಕೊಂಡಾದ ಮೇಲೆ ಬದುಕಿನಲ್ಲಿ ಇನ್ನೇನಿದೆ? ಅದೇನು ಅಸಹಜ ಎನ್ನಲಿಕ್ಕೂ ಆಗದು. ಹೆಣ್ಣಾಗಿ ಆಕೆ ಹಾಗೆ ಯೋಚಿಸುವುದೂ ತೀರಾ ಸಾಮಾನ್ಯವೇ.
ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕು. ಅದಕ್ಕೆ ಒಗ್ಗಿಕೊಳ್ಳಲೇಬೇಕು. ಹೌದು, ಆರಂಭದಲ್ಲಿ ಕಷ್ಟವಾಗುತ್ತದೆ. ಯಾವುದೇ ಬದಲಾವಣೆಯನ್ನು ಸ್ವೀಕರಿಸುವುದು ಅಷ್ಟು ಸುಲಭವೇನೂ ಅಲ್ಲ. ದಿನಾ ಮಲಗುವ ಹಾಸಿಗೆಯನ್ನು ಬಿಟ್ಟು ಬೇರೊಂದು ಹಾಸಿಗೆಯಲ್ಲಿ ಮಲಗಿದರೆ ನಮಗೆ ನಿದ್ದೆಬರುವುದಿಲ್ಲ. ನಿತ್ಯ ಊಟ ಮಾಡುವ ತಟ್ಟೆಯ ಬದಲು ಬೇರೊಂದು ತಟ್ಟೆಯಲ್ಲಿ ಊಟಕ್ಕೆ ಕುಳಿತರೆ ಏನೋ ಕಸಿವಿಸಿ. ಮಧ್ಯದಲ್ಲಿ ಬೈತಲೆ ತೆಗೆದು ಎತ್ತರಿಸಿ ಕೂದಲು ಬಾಚುವವರು ಅನಂತ್‌ನಾಗ್‌ರ ಕ್ರಾಪ್ ಸ್ಟೈಲ್ ಮಾಡಿಬಿಟ್ಟರೆ ಮನೆಯವರು, ಸ್ನೇಹಿತರೇ ವಿಚಿತ್ರವಾಗಿ ನೋಡಲಾರಂಭಿಸುತ್ತಾರೆ. ಇವೆಲ್ಲ ಸಂದರ್ಭದಲ್ಲಿ ಮಹತ್ವದ ಬದಲಾವಣೆಗಳೇನೂ ಆಗಿರುವುದಿಲ್ಲ. ಅಥವಾ ಅದು ಬೀರುವ ಪರಿಣಾಮವೂ ಮಹತ್ವದ್ದೇನಲ್ಲ. ಆದರೂ ಅದನ್ನೇ ಒಪ್ಪಿಕೊಳ್ಳಲು ನಮ್ಮ ಮನಸ್ಸು ಹಿಂಜರಿಯುತ್ತದೆ. ಹೀಗಿದ್ದಾಗ ಬದುಕಿನ ಮೇಲೆ ತೀವ್ರತರ ಪರಿಣಾಮವನ್ನುಂಟು ಮಾಡಬಲ್ಲ, ಬದುಕಿನ ದಿಕ್ಕನ್ನೇ ಬದಲಿಸಿಬಿಡಬಹುದಾದ ಸಂಗತಿಗಳನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳಲು ಆಕೆಯಿಂದ ಹೇಗೆ ಸಾಧ್ಯವಾದೀತು?
ಹಾಗೆಂದು ಆಕೆ ಬದಲಾವಣೆಯ ವಿರೋಧಿ ಎಂದೇನೂ ಅಲ್ಲ. ಹಾಗೊಮ್ಮೆ ಯೋಚಿಸುವುದಿದ್ದರೆ ಅವಳು ಹುಟ್ಟಿದ ದಿನ ಹೇಗಿದ್ದಳೋ ಹಾಗೆಯೇ ಇರಬೇಕಾಗಿತ್ತು. ಹಾಗಿಲ್ಲ ಬದಲಾಗಿದ್ದಾಳೆ. ಆ ಎಲ್ಲ ಬದಲಾವಣೆಯನ್ನು ಒಪ್ಪಿಕೊಂಡಿದ್ದಾಳೆ. ವಿಕಾಸ ಎಂಬ ಪದವನ್ನು ಅರಗಿಸಿಕೊಳ್ಳುತ್ತಲೇ ಬಂದಿದ್ದಾಳೆ. ಆದರಿದು ವಿಕಾಸ ಹೇಗಾದೀತು?
ತನ್ನ ಸೌಂದರ್ಯದ ಮೂಲಕ್ಕೇ ಕುತ್ತು ತರುವ ಸಂಗತಿಯದು. ಅದನ್ನು ಸ್ವಾಭಾವಿಕವಾಗಿ ಯಾವ ಹೆಣ್ಣೂ ಸ್ವೀಕರಿಸಲಾರಳು. ಅನಿರೀಕ್ಷಿತ ಆಘಾತದೊಂದಿಗೆ, ನೋವು, ಅಸಹಾಯಕತೆ, ಆತಂಕಗಳು ಮೊದಲೇ ಹೆಣ್ಣನ್ನು ಜರ್ಜರಿತಗೊಳಿಸಿರುತ್ತವೆ. ಅಂಥದ್ದರಲ್ಲಿ ಹೆಣ್ತನದ ಪ್ರತೀಕವನ್ನೇ ತೆಗೆದುಹಾಕಬೇಕು ಎಂಬುದನ್ನು ಅರಗಿಸಿಕೊಳ್ಳುವುದು ಅವಳಿಗೆ ಅಸಾಧ್ಯ ಸಂಗತಿಯೇ. ಆದರೆ, ರೋಗ ಕೈ ಮೀರುವ ಹಂತದಲ್ಲಿ ಇದು ಕೆಲವೊಮ್ಮೆ ಅನಿವಾರ್ಯವಾಗಿಬಿಡುತ್ತದೆ. ಇಂಥ ಸನ್ನಿವೇಶದಲ್ಲಂತೂ ಯಾವುದೇ ಹೆಣ್ಣಿನ ಮನಃಸ್ಥಿತಿ ತೀರಾ ಕುಸಿದುಹೋಗುತ್ತದೆ. ಆಕೆ ಇದ್ದದ್ದೂ ಅದೇ ಪರಿಸ್ಥಿತಿಯಲ್ಲಿ. ಹೇಗೆ ತಾನೆ ಸಹಿಸಿಯಾಳು? ಹೆಣ್ತನದ ಸೌಭಾಗ್ಯದ ಸಂಕೇತವೇ ಗೆದ್ದಲು ಹಿಡಿದು ನಿಲ್ಲುವುದು ಯಾವ ದೃಷ್ಟಿಯಿಂದಲೂ ಆಕೆಗೆ ಸಹ್ಯವೆನಿಸಲು ಸಾಧ್ಯವೇ ಇಲ್ಲ. ಆದರೂ ಅದಕ್ಕೆ ಅವಳನ್ನು ಒಪ್ಪಿಸಬೇಕಿತ್ತು. ಹಾಗೆ ಒಪ್ಪಿಸಲೇ ಕುಳಿತಿದ್ದೆ ಆ ಆಸ್ಪತ್ರೆಯ ಬೆಡ್‌ನ ಮೇಲೆ, ಅವಳ ಪಕ್ಕದಲ್ಲೇ.
ನನ್ನ ಪ್ರವಚನ ಎಷ್ಟು ಆಕೆಯ ತಲೆಯಲ್ಲಿ ಹೋಗುತ್ತಿತ್ತೋ, ಇಲ್ಲವೋ ಕಣ್ಣಿರಾಗಿಯೇ ಕುಳಿತು ತಲೆ ಅಲ್ಲಾಡಿಸುತ್ತಿದ್ದಳಾಕೆ. 'ನೋಡು ಗೆಳತಿ, ಹಾಗೆ ನೋಡಿದರೆ ಕ್ಯಾನ್ಸರ್ ಬಂದವರೆಲ್ಲ ಬದುಕುವ ಸಾಧ್ಯತೆಯೇ ಇಲ್ಲ ಎಂದೇನಿಲ್ಲ. ಅಥವಾ ಸ್ತನವನ್ನು ಛೇದಿಸಿದಾಕ್ಷಣ ಇಡೀ ಬದುಕೇ ಮುಗಿದು ಹೋಗುತ್ತದೆ ಎನ್ನುವುದರಲ್ಲಿ ಅರ್ಥವೂ ಇಲ್ಲ. ಜೀವಕ್ಕಿಂತ, ಜೀವನಕ್ಕಿಂತ ಹೆಚ್ಚಾದುದು ಬೇರೇನಿದೆ ಹೇಳು?'. ನನಗೂ ಗೊತ್ತಿತ್ತು ಇಂಥವೆಲ್ಲ ಸಂಗತಿಗಳನ್ನು ಮನವರಿಕೆ ಮಾಡಿಕೊಡುವುದು ಕುಟುಂಬ, ಸಮಾಜದ ಜವಾಬ್ದಾರಿ. ಮೂಲಭೂತವಾಗಿ ಆಕೆಗೆ ಬೇಕಿದ್ದುದು ಸಂತೈಕೆ ಹಾಗೂ ಆತ್ಮವಿಶ್ವಾಸವಾಗಿತ್ತು. ಹಾಗೊಂದು ರೋಗಕ್ಕೆ ತಾನು ತುತ್ತಾಗಿದ್ದೇನೆ ಎಂಬ ವಿಚಾರವೇ ಆಕೆಯನ್ನು ಜೀವನದಿಂದ ವಿಮುಖವಾಗುವಂತೆ ಮಾಡಿತ್ತು. ಅದರಲ್ಲೂ ಆಕೆಗಿನ್ನೂ ಇಪ್ಪತ್ತೈದು. ಹತ್ತು ಹಲವು ಊಹಾತ್ಮಕ ಭಯ, ಇನ್ನೊಂದೆಡೆ ಅವಳನ್ನು ಬಾಧಿಸುತ್ತಿತ್ತು. ಖಿನ್ನತೆ ತನ್ನಿಂದ ತಾನಾಗಿಯೇ ಆವರಿಸಿಕೊಳ್ಳಲಾರಂಭಿಸಿತ್ತು. ಸಾಲದ್ದಕ್ಕೆ ನಂಬಿಕೆ ಮತ್ತು ಆತ್ಮವಿಶ್ವಾಸದ ಬುಡವನ್ನೇ ಅಲ್ಲಾಡಿಸುವ ರೀತಿಯಲ್ಲಿ ಸುತ್ತಲಿನವರು ಭಿತ್ತುತ್ತಿದ್ದ ಸಲ್ಲದ ಭೀತಿ.
ಎಷ್ಟು ವಿಚಿತ್ರ ನೋಡಿ, ಆಧುನಿಕ ವೈದ್ಯ ವಿಜ್ಞಾನ ಇಷ್ಟೆಲ್ಲ ಪ್ರಗತಿಯನ್ನು ಸಾಧಿಸಿರುವ ಈ ದಿನಮಾನಗಳಲ್ಲೂ ಮೌಢ್ಯ ನಮ್ಮನ್ನು ಬೆಸೆದುಕೊಂಡೇ ನಿಂತಿದೆ. ನಿರ್ಲಕ್ಷ್ಯ ನಮ್ಮ ಮನದಂಗಳದಿಂದ ತೊಲಗಿಲ್ಲ. ಸಂಕೋಚದ ಸಂಕೋಲೆಯನ್ನು ನಾವು ಬಿಸುಡಿಲ್ಲ. ಜತೆಗೆ ರೋಗ ವೈಭವೀಕರಣ.
ಮನದ ಮೂಲೆಯಲ್ಲಿ ಮನೆ ಮಾಡಿರುವ ವಿಚಿತ್ರ ಸಂಶಯ, ನಿರ್ಲಕ್ಷ್ಯ, ಸಂಕೋಚ, ಆತಂಕ, ಅಧೈರ್ಯವನ್ನು ಕಿತ್ತೆಸೆದು ರೋಗ ನಿಯಂತ್ರಣಕ್ಕೆ ಟೊಂಕ ಕಟ್ಟಲು ಅವಳನ್ನು ನಾನು ಸಜ್ಜುಗೊಳಿಸಬೇಕಿತ್ತು. ಛಾತಿ, ಖಾಲಿತನದ ಭ್ರಮೆ ಬಿಟ್ಟು ಬದುಕಿನ ಪ್ರೀತಿಯನ್ನು ಜೀವಂತಗೊಳಿಸಿಕೊಳ್ಳುವುದು ಸುಲಭದ ಮಾತೇನಾಗಿರಲಿಲ್ಲ. ಬಡಪೆಟ್ಟಿಗೆ ಬಗ್ಗುವ ಮನಸ್ಸಾಗಿರಲಿಲ್ಲ ಅವಳದ್ದು. ಹಳೆಯದರ ಗಟ್ಟಿತನದ ಮೇಲೆ ಏಳುವ ಹೊಸತರ ಮಹಲು ಖಂಡಿತಾ ಅಷ್ಟೇ ಮೌಲ್ಯಯುತ ಎನಿಸಿಕೊಳ್ಳುತ್ತದೆ ಗೆಳತಿ ಎಂದೆ. ಊಹ್ಞೂಂ, ಜಗ್ಗಲಿಲ್ಲ ಅವಳು. 'ನಾನಿನ್ನು ಬದುಕಿದ್ದು ಏನು ಪ್ರಯೋಜನ?' ಆಕೆಯದ್ದು ಒಂದೇ ವರಾತ. ಬೇರೆ ಉಪಾಯ ಉಳಿದಿರಲಿಲ್ಲ ನನಗೆ. ಮಾತನಾಡುತ್ತಲೇ ನನ್ನೆದೆಯ ಮೇಲೆ ಆಕೆಯ ಕೈ ತಂದುಕೊಂಡೆ. ಧೈರ್ಯ ತುಂಬುವ ಸ್ಪರ್ಶದಂತೆ ನನ್ನ ವರ್ತನೆಯನ್ನವಳು ವ್ಯಾಖ್ಯಾನಿಸುತ್ತಿದ್ದಿರಬೇಕು. 'ಅನಿವಾರ್ಯ ಎಂಬ ಕಾರಣಕ್ಕೆ ಅದನ್ನು ಒಪ್ಪಿಕೊಳ್ಳುವುದಕ್ಕಿಂತ ಸಂತಸದಲ್ಲಿ ಸ್ವೀಕರಿಸಿದರೆ ಯಾವ ಬದಲಾವಣೆಯೂ ನೋವು ಕೊಡುವುದಿಲ್ಲ. ಅಂಥ ಬದಲಾವಣೆಗೆ ನಾನು ಸಿದ್ಧಳಾಗಿ ಎಷ್ಟೋ ದಿನಗಳಾದವು ಗೆಳತಿ, ನೀನು...?' ಎಂದೇ ತಕ್ಷಣಕ್ಕೆ ಅವಳಿಗೆ ಏನೊಂದೂ ಅರ್ಥವಾಗಲಿಲ್ಲ. ಕ್ಷಣವಷ್ಟೆ, ನನ್ನೆದೆಯ ಮೇಲೆ ಹರಿದಾಡುತ್ತಿದ್ದ ಆಕೆಯ ಕೈಗಳು ಎರಡು ಭಾಗಗಳ ವ್ಯತ್ಯಾಸವನ್ನು ಗುರುತಿಸಿದ್ದವು. ಸಹಜ, ಕೃತಕಗಳ ವ್ಯತ್ಯಾಸ ಗುರುತಿಸಲು ಆಕೆಗೆ ಹೆಚ್ಚು ಕಾಲ ಹಿಡಿಯಲಿಲ್ಲ. 'ನಿನಗೂ...?' ಪ್ರಶ್ನಾರ್ಥಕವಾಗಿ ಅವಳು ಮಾತು ತುಂಡರಿಸಿದ್ದಳು. ಅಷ್ಟೆ, ನಾನು ನಗುತ್ತಾ ಹೊರನಡೆದಿದ್ದೆ. ಅದಾಗಿ ವಾರ ಕಳೆಯುವುದರಲ್ಲಿ ನನ್ನ ಗೆಳತಿ ಚೇತರಿಸಿಕೊಂಡ ಸುದ್ದಿ ಬಂದಿದೆ ಇದೀಗ...

- ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com