ಬರೆಯುವುದಕ್ಕೇನಡ್ಡಿ?

ಬರೆಯುವುದಕ್ಕೇನಡ್ಡಿ?
Updated on

ಇದ್ದಕ್ಕಿದ್ದಂತೆ ತಲೆ ಖಾಲಿಯಾಗಿಬಿಡುತ್ತದೆ. ಮೇಜಿನ ಮೇಲಿಟ್ಟ ಖಾಲಿ ಹಾಳೆ ಹಾಗೂ ಪೆನ್ನು ಭಯೋತ್ಪಾದಕರಂತೆ ಕಾಣತೊಡಗುತ್ತವೆ. ಏನೋ ಬರೆಯಬೇಕು. ಆದರೆ ಏನು ಬರೆಯಬೇಕು? ಹೇಗೆ ಬರೆಯಬೇಕು? ಗೊತ್ತಾಗುತ್ತಿಲ್ಲ. ಇಂಥದೊಂದು ಅನುಭವ ಸಾಹಿತಿಗಳಿಗೆ ಆಗುತ್ತಿರುತ್ತದೆ. ಬರಹವೇ ವೃತ್ತಿಯಾಗಿರುವವರಿಗಂತೂ ಇದು ಸಾಮಾನ್ಯ. 'ರೈಟರ್ಸ್ ಬ್ಲಾಕ್‌' ಎಂಬುದು ಇದಕ್ಕೆ ಸುಂದರವಾದ ಹೆಸರು. ಇದರ ಅನುಭವ ಮಾತ್ರ ಸುಂದರವಾದದ್ದಲ್ಲ ಎಂಬುದು ಅನುಭವಿಸಿದವರಿಗೆ ಗೊತ್ತು.
ಕೆಲವರಿಗೆ ಇದು ಕೆಲವು ದಿನಗಳ ಮಾತು. ಹಲವರಿಗೆ ತಿಂಗಳು, ವರ್ಷ. ಯವ್ವನದಲ್ಲಿ ಭರ್ಜರಿ ಸಕ್ಸಸ್‌ನ ಕೃತಿ ಕೊಟ್ಟು ನಂತರ ಜೀವಮಾನ ಪೂರ್ತಿ ಏನೂ ಬರೆಯಲಾಗದೆ ನಾಶವಾದವರೂ ಇದ್ದಾರೆ. ಇವೆಲ್ಲ 'ಲೇಖನ ಸಂಕಟ'ದ ನಾನಾ ವಿಧಗಳೇ. ಇದರಿಂದ ಹೊರಬರುವ ಬಗೆ ಹೇಗೆ? ಪ್ರಖ್ಯಾತ ಸಾಹಿತಿಗಳು ಹೇಳಿದ್ದು ಇಲ್ಲಿದೆ:

  • ಬರೆಯುತ್ತಲೇ ಇರುತ್ತೇನೆ. ಎರಡು ವಾರ 'ಬೆಕ್ಕು ಚಾಪೆ ಮೇಲೆ ಕುಳಿತಿತ್ತು, ಇಲಿಯಲ್ಲ' ಎಂಬ ವಾಕ್ಯವನ್ನೇ ತಿರುತಿರುಗಿಸಿ ಬರೆಯುತ್ತೇನೆ. ಅದರಂಥ ಮಹಾ ಕೆಟ್ಟ, ಕಳಪೆ ಗದ್ಯ ಇನ್ನೊಂದಿರಲಿಕ್ಕಿಲ್ಲ. ಆದರೆ ಬರೆಯಲಂತೂ ಪ್ರಯತ್ನಿಸುತ್ತೇನೆ.(ಮಾಯಾ ಏಂಜೆಲೋ)
  • ಬರೆಯುವುದರಲ್ಲಿ ನಾನು ಖುಷಿಪಡುತ್ತಿದ್ದೀನಾ? ಈ ಪ್ರಶ್ನೆ ಕೇಳಿಕೊಳ್ಳಿ. ಖುಷಿ ಇಲ್ಲವೆಂದಾದರೆ, ನೀವು ಬರೆಯುವುದು ಬಿಟ್ಟು ಇನ್ನೇನಾದರೂ ಮಾಡುವುದು ಒಳ್ಳೆಯದು. ನಾನು ಒಂದು ದಿನವೂ ಕೆಲಸ ಮಾಡಿಲ್ಲ, ಎಂಜಾಯ್ ಮಾಡಿದ್ದೇನೆ. (ರೇ ಬ್ರಾಡ್‌ಬರಿ)
  • ಮುಂದೆ ಹೋಗುವುದರ ರಹಸ್ಯವೆಂದರೆ ಆರಂಭಿಸುವುದು. ಆರಂಭಿಸಲು ನೀವು ಹಾಕಿಕೊಂಡ ಭಾರಿ, ಸಂಕೀರ್ಣ ಯೋಜನೆಗಳನ್ನು ಸಣ್ಣಪುಟ್ಟ ಯೋಜನೆಗಳಾಗಿ ಪರಿವರ್ತಿಸಿ ಮೊದಲಿನಿಂದ ತೋಡಗುವುದು. (ಮಾರ್ಕ್ ಟ್ವೇನ್)
  • ಮುಂದೇನಾಗುತ್ತದೆ, ಮುಂದೇನು ಬರೆಯಬೇಕು ಎಂಬ ಸ್ಪಷ್ಟ ಚಿತ್ರಣ ಇದ್ದಾಗ ನಿಲ್ಲಿಸುವುದು ಒಳ್ಳೆಯದು. ಹಾಗಿದ್ದಾಗ, ಮರುದಿನ ಮುಂದುವರಿಸಲು ಯಾವುದೇ ತೊಂದರೆ ಆಗುವುದಿಲ್ಲ. ನೀವು ತುಂಬಾ ತಲೆಕೆಡಿಸಿಕೊಂಡು, ಚಿಂತಿಸುತ್ತಾ ಇದ್ದರೆ, ಶುರುಮಾಡುವ ಮುನ್ನವೇ ಬಳಲಿರುತ್ತೀರಿ. (ಅರ್ನೆಸ್ಟ್ ಹೆಮಿಂಗ್‌ವೇ)
  • ರೈಟರ್ಸ್ ಬ್ಲಾಕ್ ಕಾಡುತ್ತಿದ್ದರೆ, ನೀವು ಬರೆಯುತ್ತಿರುವುದು ನಿಮ್ಮ ಬಾಸ್‌ಗಾಗಿಯೋ ನಿಮ್ಮ ಓದುಗರಿಗಾಗಿಯೋ ಅಲ್ಲವೆಂಬಂತೆ ನಟಿಸಿ. ನಿಮ್ಮ ಅತ್ಯಂತ ಪ್ರೀತಿಪಾತ್ರರಿಗಾಗಿ, ಉದಾಹರಣೆಗೆ ನಿಮ್ಮ ತಾಯಿ, ತಂಗಿ, ಅಥವಾ ಇನ್ಯಾರೋ  ಆತ್ಮೀಯರಿಗಾಗಿಯಷ್ಟೇ ಬರೆಯುತ್ತಿದ್ದೀರಿ ಅಂದುಕೊಳ್ಳಿ. (ಜಾನ್ ಸ್ಟೀನ್‌ಬಕ್)
  • ನಿಮ್ಮ ಡೆಸ್ಕ್‌ನಿಂದ ಎದ್ದೇಳಿ. ವಾಕ್ ಹೋಗಿ, ಸ್ನಾನ ಮಾಡಿ, ನಿದ್ದೆ ಮಾಡಿ, ಧ್ಯಾನ ಮಾಡಿ, ಸಂಗೀತ ಕೇಳಿ, ಚಿತ್ರಿಸಿ, ಅಡುಗೆ ಮಾಡಿ. ಆದರೆ ಇತರರ ಶಬ್ದಗಳು ನಿಮ್ಮ ಕಿವಿ ತುಂಬುವಂತಹ ಪಾರ್ಟಿಗಳಿಗೆ ಹೋಗದಿರಿ. ಟಿವಿನೋಡಬೇಡಿ. ಪದಗಳು ಹರಿದುಬರಲು ಅವಕಾಶ ಬಿಡಿ, ತಾಳ್ಮೆಯಿಂದಿರಿ. (ಹಿಲರಿ ಮ್ಯಾಂಟೆಲ್)
ಕ್ರಾಸ್‌ವರ್ಡ್ ಪ್ರಶಸ್ತಿ
- ಕೇರ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com