
ಬೀದರಿನಲ್ಲಿ ದೇಶದ ವೈವಿಧ್ಯಮಯ ಕಲಾ ಸಂಸ್ಕೃತಿಯನ್ನು ನೃತ್ಯದ ಮೂಲಕ ಪರಿಚಯಿಸಲಾಯಿತು. ಇಂಥದ್ದೊಂದು ಪವಾಡ ಸೃಷ್ಟಿಸಿದ್ದು ಮೂಡಬಿದರೆಯ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಭವ್ಯ ಕಾರ್ಯಕ್ರಮ...
ಬೀದರಿನ ಆ ಸಂಜೆ ರಸಮಯವಾಗಿತ್ತು. ಚುಮುಚುಮು ಚಳಿಯ ಮಧ್ಯ ಕಿಕ್ಕಿರಿದು ಸೇರಿದ್ದ ಜನಸ್ತೋಮ. ವೈಭವಪೂರಿತ ವೇದಿಕೆ. ದೇಶದ ವೈವಿಧ್ಯಮಯ ಕಲಾ ಸಂಸ್ಕೃತಿಯನ್ನು ನೃತ್ಯದ ಮೂಲಕ ಪರಿಚಯಿಸಲಾಯಿತು. ಇಂಥದ್ದೊಂದು ಪವಾಡ ಸೃಷ್ಟಿಸಿದ್ದು ಮೂಡಬಿದರೆಯ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಭವ್ಯ ಕಾರ್ಯಕ್ರಮ.
ಬಿಸಿಲೂರಿನವರಿಗೆ ಕಲೆಯ ಅಂತರಾಳವನ್ನು ಪರಿಚಯಿಸಿದರು ನುಡಿಸಿರಿಯ ಪುಟ್ಟ ಮಕ್ಕಳು, ಕಲಾವಿದರು. ಹಸಿ ಬರ, ಒಣ ಬರ, ರಾಜಕೀಯ ಪರಚಾಟ, ಹೋರಾಟಗಳನ್ನಷ್ಟೇ ಕಂಡಿದ್ದ ಇಲ್ಲಿನ ಜನ ವಿರಾಸತ್‌ನ ಈ ಅದ್ಭುತ ಕಾರ್ಯಕ್ರಮ ಕಂಡು ಹಿಗ್ಗಿದರು.
ಗಣೇಶ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಆರಂಭದ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನಕ್ಕೇ ಮಾರುಹೋದ ಇಲ್ಲಿನವರು ಕಣ್ಣು ಮಿಟುಕಿಸದೇ ವೇದಿಕೆಯತ್ತ ಚಿತ್ತ ನೆಟ್ಟಿದ್ದರು. ಅದರಲ್ಲೂ ಮಣಿಪುರಿ ಸ್ಟಿಕ್ ಡ್ಯಾನ್ಸ್ ಎಲ್ಲರನ್ನೂ ವಿಚಲಿತಗೊಳಿಸಿದರೆ, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಇಡೀ ಸಾಂಸ್ಕೃತಿಕ ಸಮಾಗಮದ ವೈಶಿಷ್ಟ್ಯತೆಗೆ ಸಾಕ್ಷಿ ಎಂಬಂತಿತ್ತು. ಬಡಗುತಿಟ್ಟು ಯಕ್ಷಪ್ರಯೋಗ- ದಶಾವತಾರ, ಒಡಿಸ್ಸಿ ನೃತ್ಯ, ಭರತನಾಟ್ಯ- ನವದುರ್ಗೆಯರು, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಮ್, ಕಿರು ನಾಟಕ- ದೇವ ವೃದ್ಧರು, ಕೇರಳದ ಒಪ್ಪಣಂ, ಕಥಕ್ ನೃತ್ಯ, ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹದ ಬೇಟೆ ನೃತ್ಯ ಸೇರಿದಂತೆ ಅನೇಕ ಪ್ರಸಂಗ ನೃತ್ಯಗಳು ಬಹಳ ಮೆಚ್ಚುಗೆಯಾದವು.
- ಅಪ್ಪಾರಾವ್ ಸೌದಿ
Advertisement