ಆಟವ ನೋಡಿರಯ್ಯ...

ಆಟವ ನೋಡಿರಯ್ಯ...
Updated on: 

ಆಟಗಳಲ್ಲಿ ನನಗೆ ಕ್ರಿಕೆಟ್ ತುಂಬ ಇಷ್ಟ. ನಂತರದ ಸ್ಥಾನ ಟೆನ್ನಿಸ್ಸಿಗೆ. ಕ್ರಿಕೆಟ್ಟನ್ನು ನಾನು ಆಡಿದ್ದಕ್ಕಿಂತಲೂ ನೋಡಿದ್ದೇ ಜಾಸ್ತಿ. ಅದೂ 1967ರ ನಂತರ, ನಾನು ಚಿಂತಾಮಣಿಯಲ್ಲಿ ಮೇಸ್ಟರಾಗಿ ಉದ್ಯೋಗಸ್ಥನಾದ ಮೇಲೆ. ಆಗ ನಾನು ಕ್ರಿಕೆಟ್ ಮ್ಯಾಚುಗಳನ್ನು ನೋಡಲು ಚಿಂತಾಮಣಿಯಿಂದ ಬೆಂಗಳೂರಿಗಷ್ಟೇ ಅಲ್ಲದೆ ದೂರದ ಮದ್ರಾಸು(ಚೆನ್ನೈ) ಮತ್ತು ಪುಣೆಗೂ ಹೋಗಿ ಬಂದದ್ದುಂಟು.
1973ರ ಜನವರಿ 12ರಿಂದ 17ರವರೆಗೆ ಮದ್ರಾಸಿನಲ್ಲಿ ಇಂಗ್ಲೆಂಡ್ ಮತ್ತು ಭಾರತದ ನಡುವೆ ಕ್ರಿಕೆಟ್ ಟೆಸ್ಟ್ ಮ್ಯಾಚಿತ್ತು. ನಾವು ಒಂದಷ್ಟು ಗೆಳೆಯರು ಚಿಂತಾಮಣಿಯಿಂದ ಮದ್ರಾಸಿಗೆ ಬಂದು, ಒಂದು ಮನೆ ಬಾಡಿಗೆಗೆ ಪಡೆದುಕೊಂಡು, ಆರು ದಿನ ಅಲ್ಲಿ ತಂಗಿದ್ದೆವು. ಐದು ದಿನ ಮ್ಯಾಚು. ನಡುವೆ ಒಂದು ದಿನ ವಿಶ್ರಾಂತಿ. ಬೆಳಿಗ್ಗೆ ಆರು ಗಂಟೆಗೆಲ್ಲ ಎದ್ದು, ಸಿದ್ಧವಾಗಿ, ಗ್ಯಾಲರಿಯಲ್ಲಿ ಸೀಟು ಹಿಡಿಯಲು, ಚೆಪಾಕ್ ಸ್ಟೇಡಿಯಮ್ಮಿಗೆ ಧಾವಿಸುತ್ತಿದ್ದೆವು. ನಂತರ ಬೆಳಗಿನ ಚಹಾ, ತಿಂಡಿ, ಊಟ ಎಲ್ಲ ಕೂತ ಕಡೆಯಲ್ಲೇ.
ಪಂದ್ಯದ ಮೂರನೆಯ ದಿನ. ಜಿ.ಆರ್.ವಿಶ್ವನಾಥ್ ಬ್ಯಾಟ್ ಮಾಡುತ್ತಿದ್ದರು. ನಾನು ಸಿಗರೇಟ್ ಸೇದುತ್ತ, ನನ್ನ ಆಗಿನ ಆರಾಧ್ಯ ದೈವವಾಗಿದ್ದ ವಿಶ್ವನಾಥರ ಕಲಾತ್ಮಕ ಆಟವನ್ನು ಕಣ್ಣಿಂದ ಸವಿಯುತ್ತಿದ್ದೆ. ವಿಶ್ವನಾಥ್ ತಮ್ಮ ಅನನ್ಯ ಶೈಲಿಯ ಸ್ಕ್ವೇರ್ ಕಟ್ ಮಾಡಿ, ಒಂದು ಬೌಂಡರಿ ಬಾರಿಸಿದರು. 'ಹೋ...' ಎಂದು ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ನಾನೂ ಸಹ. ಆ ಕೋಲಾಹಲದಲ್ಲಿ, ನನ್ನ ಬಲಗೈ ಬೆರಳುಗಳ ನಡುವೆ ಉರಿಯುತ್ತಿದ್ದ ಸಿಗರೇಟು ಎದುರಿಗೆ ಕುಳಿತಿದ್ದ ಒಬ್ಬಾತನ ಬೆನ್ನಿಗೆ ತೀಡಿತು. ಆತನ ಟೆರೆಲಿನ್ ಶರ್ಟ್‌ನ ಹಿಂಭಾಗ ಸುರ್ರೆಂದು ಸುಟ್ಟು, ಅಲ್ಲಿ ಭಾರತ ದೇಶದ ನಕ್ಷೆ ಮೂಡಿತು. ಆತ ತನ್ನ ಬೆನ್ನು ಸವರಿಕೊಳ್ಳುತ್ತ, ಚಕ್ಕೆಂದು ಹಿಂದಕ್ಕೆ ತಿರುಗಿ, ನನ್ನತ್ತ ನೋಡಿದ. ಕಟ್ಟುಮಸ್ತಾದ ತಮಿಳು ಧಾಂಡಿಗ. ನನಗೇನೋ ಅನಾಹುತ ಕಾದಿದೆ ಎಂದುಕೊಂಡು, 'ಸ್ಸಾರೀ...' ಎಂದೆ. ಆದರೆ ಆ ಆಸಾಮಿಗೆ ವಿಶ್ವನಾಥ್ ಬಾರಿಸಿದ ಬೌಂಡರಿಯಿಂದ ಎಷ್ಟು ಖುಷಿಯಾಗಿತ್ತೆಂದರೆ, 'ಪರವಾ ಇಲ್ಲೆ ವಿಡುಂಗ. ಎವ್ವಳ ಅಳಗಾನ ಶಾಟ್ ಇಲ್ಲೇ ಎನಕ್ಕುಂ ಒರು ಸಿಗರೇಟು ಕುಡುಂಗ' (ಪರವಾಗಿಲ್ಲ ಬಿಡಿ. ಎಂಥಾ ಸೊಗಸಾದ ಶಾಟ್ ಅಲ್ವಾ? ನನಗೂ ಒಂದು ಸಿಗರೇಟ್ ಕೊಡಿ) ಎಂದು, ನನ್ನಿಂದ ಒಂದು ಸಿಗರೇಟು ಪಡೆದು, ಹಚ್ಚಿಕೊಂಡು, 'ಥ್ಯಾಂಕ್ಸ್‌'  ಎಂದ. 'ಬದುಕಿದೆಯಾ ಬಡ ಜೀವವೇ'  ಎಂದುಕೊಂಡು, ನಾನು ಮನದಲ್ಲೇ ವಿಶ್ವನಾಥ್ ಅವರಿಗೆ ನನ್ನ ಥ್ಯಾಂಕ್ಸ್ ಸಲ್ಲಿಸಿದೆ.
ಕಾಲಕ್ರಮದಲ್ಲಿ ಕ್ರಿಕೆಟ್ ಮ್ಯಾಚುಗಳ ಟೀವಿ ನೇರ ಪ್ರಸಾರ ಬಂತು. ಒಂದು ದಿನದ ಚುಟುಕು ಕ್ರಿಕೆಟ್ ಬಂತು. ಅದರ ಪರಿಣಾಮವಾಗಿ ಐದು ದಿನಗಳ ಟೆಸ್ಟ್ ಕ್ರಿಕೆಟ್ ಮಂಕಾಯಿತು. ನನಗೂ ವಯಸ್ಸಾಯಿತು. ಈಗ ಸ್ಟೇಡಿಯಮ್ಮಿಗೆ ಹೋಗಿ ಮ್ಯಾಚ್ ನೋಡುವಷ್ಟು ಉತ್ಸಾಹ ಉಳಿದಿಲ್ಲ. ಮನೆಯಲ್ಲೇ ಆರಾಮಾಗಿ ಕೂತು, ತಪ್ಪದೆ ಟಿವಿಯಲ್ಲಿ ಮ್ಯಾಚ್ ನೋಡುತ್ತೇನೆ. 1983ರಲ್ಲಿ ಕಪಿಲ್ಸ್ ಡೆವಿಲ್ಸ್ ಇಂಗ್ಲೆಂಡಿನಲ್ಲಿ ವೆಸ್ಟ್ ಇಂಡೀಸ್ ದೈತ್ಯಪಡೆಯನ್ನು ಸೋಲಿಸಿ, ಅತ್ಯಂತ ಅನಿರೀಕ್ಷಿತವಾಗಿ ವಿಶ್ವಕಪ್ ಗೆದ್ದದ್ದನ್ನು ನೋಡಿ ಸಂಭ್ರಮಿಸಿದ್ದೇನೆ. ಹಾಗೆಯೇ, 2007ರಲ್ಲಿ ಮೊದಲ ಸುತ್ತಿನಲ್ಲೇ ಹೀನಾಯವಾಗಿ ಸೋತು ನಿರ್ಗಮಿಸಿದ್ದನ್ನು ಕಂಡು ನಾಚಿಕೆಯಿಂದ ಕುಗ್ಗಿಹೋದದ್ದೂ ನಿಜ. ಅದಕ್ಕೆ ಪರಿಹಾರವೆಂಬಂತೆ,  2011ರಲ್ಲಿ, 'ಕ್ಯಾಪ್ಟನ್ ಕೂಲ್‌' ಧೋನಿಯ ನಾಯಕತ್ವದಲ್ಲಿ, ಭಾರತ ಮತ್ತೊಮ್ಮೆ ವಿಶ್ವಕಪ್ ಎತ್ತಿಹಿಡಿದು, ತನ್ನ ಸಾಮರ್ಥ್ಯ ಮೆರೆದಿದೆ. ಜೊತೆಗೆ, ಇತ್ತೀಚೆಗಷ್ಟೇ ಇಂಗ್ಲೆಂಡಿನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನೂ ಸಹ ಗೆದ್ದು, ಭಾರತ ಏಕದಿನ ಕ್ರಿಕೆಟ್ಟಿನಲ್ಲಿ ತನ್ನ ಅಗ್ರಸ್ಥಾನವನ್ನು ಭದ್ರ ಪಡಿಸಿಕೊಂಡಿದೆ.
ಕ್ರಿಕೆಟ್ಟಿನಲ್ಲಿ ಭಾರತದ ಏಳುಬೀಳುಗಳ ಬಗ್ಗೆ ನಾನು ಆಗಿಂದಾಗ್ಗೆ ನನ್ನ ಕವಿತೆಗಳ ಮೂಲಕ ಸ್ಪಂದಿಸಿದ್ದೇನೆ. 1987ರಲ್ಲಿ ಭಾರತ ಮತ್ತು ಪಾಕೀಸ್ತಾನಗಳ ಜಂಟಿ ಆತಿಥ್ಯದಲ್ಲಿ ನಡೆದ  ರಿಲಯನ್ಸ್ ಕಪ್ ಹೆಸರಿನ ವಿಶ್ವಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ ಹಂತ ತಲುಪಿದ್ದವು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಆಸ್ಟ್ರೇಲಿಯ ಎದುರು ಸೋತಾಗ ನಮ್ಮ ಸಂಭ್ರಮ ಇಮ್ಮಡಿಯಾಗಿತ್ತು. ಆದರೆ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡಿಗೆ ಸೋತಾಗ ನಮಗಾದ ನಿರಾಸೆ ಅಷ್ಟಿಷ್ಟಲ್ಲ. ಕೋಲ್ಕತ್ತಾದಲ್ಲಿ ನಡೆಯಲಿದ್ದ ಫೈನಲ್ ಪಂದ್ಯದಲ್ಲಿ ನಮ್ಮ ತಂಡ ಗೆದ್ದು ವಿಶ್ವಕಪ್ಪಿನೊಂದಿಗೆ ಬೀಗುವುದೆಂಬ ನಮ್ಮ ನಂಬಿಕೆ ಹುಸಿಯಾಯಿತು. ಆ ಪಂದ್ಯವನ್ನು ಟಿ.ವಿ.ಯಲ್ಲಿ ವೀಕ್ಷಿಸುತ್ತಿದ್ದಾಗ ನನ್ನ ಮನದಲ್ಲಿ ಉಕ್ಕಿದ ಭಾವತರಂಗಗಳನ್ನು 'ಸೆಮಿಫೈನಲ್ ಉದ್ಗಾರಗಳು' ಎಂಬ ಕವಿತೆಯಲ್ಲಿ ಹಿಡಿದಿಟ್ಟಿದ್ದೇನೆ.
2003ರ ವಿಶ್ವಕಪ್ ಏಕದಿನದ ಪಂದ್ಯಗಳು ದಕ್ಷಿಣ ಆಫ್ರಿಕ, ಜಿಂಬಾಬ್ವೆ ಮತ್ತು ಕೀನ್ಯಾಗಳಲ್ಲಿ ಜಂಟಿಯಾಗಿ ನಡೆಯುವಂತೆ ಏರ್ಪಾಟಾಗಿತ್ತು. ಆದರೆ ಪಂದ್ಯಗಳು ಪ್ರಾರಂಭವಾಗುವ ಕಾಲಕ್ಕೆ ಜಿಂಬಾಬ್ವೆಯಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಕಾರಣವಾಗಿ ಹಿಂಸಾಚಾರ ಭುಗಿಲೆದ್ದಿತ್ತು. ಹೀಗಾಗಿ ಅಲ್ಲಿ ತಮ್ಮ ಪಂದ್ಯಗಳನ್ನು ಆಡಲು ದಕ್ಷಿಣ ಆಫ್ರಿಕ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಿರಾಕರಿಸಿ, ತಮಗೆ ಗೆದ್ದರೆ ಬರಬಹುದಾಗಿದ್ದ ಅಂಕಗಳನ್ನು ಕಳೆದುಕೊಂಡವು. ಏಕೆಂದರೆ ಆ ದೇಶದ ಆಟಗಾರರಿಗೆ ಜೀವಭಯವಿತ್ತು. ಆದರೆ ಭಾರತದ ಆಟಗಾರರು ಜಿಂಬಾಬ್ವೆಯಲ್ಲಿ ತಮ್ಮ ಪಂದ್ಯ ಆಡದೆ ವಿಧಿಯಿರಲಿಲ್ಲ. ಆಡದಿದ್ದರೆ ಭಾರತದಲ್ಲಿನ ಅಭಿಮಾನಿಗಳಿಂದ ಅವರಿಗೆ ಜೀವಭಯವಿತ್ತು. ಸೆಮಿಫೈನಲ್ಲಿನಲ್ಲಿ ಭಾರತ ತನ್ನ ಪಾರಂಪರಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ಮೇಲೆ ಜಯಭೇರಿ ಬಾರಿಸಿದಾಗ, ಭಾರತೀಯರಿಗೆಲ್ಲ ಹಬ್ಬವೋ ಹಬ್ಬ. ಅದೇ ಫೈನಲ್ಲಿನಲ್ಲಿ ಆಸ್ಟ್ರೇಲಿಯಾಗೆ ಭಾರತ ಸೋತಾಗ ಆಳಿಗೊಂದು ಕಲ್ಲು. ಇದನ್ನು ಕಂಡು ನಾನು ಬರೆದ ಕವಿತೆ 'ಅಂಕದ ಕೋಳಿ'.
ಇಡಿಗವನಗಳಷ್ಟೇ ಅಲ್ಲದೆ ಕೆಲವು ಹನಿಗವನಗಳನ್ನೂ ಸಹ ನಾನು ಕ್ರಿಕೆಟ್ ಬಗ್ಗೆ ಬರೆದಿದ್ದೇನೆ. ಗಂಗೂಲಿಯ ನಾಯಕತ್ವದಲ್ಲಿ ನಮ್ಮ ತಂಡ ಸತತವಾಗಿ ಸೋಲುತ್ತಿದ್ದಾಗ, ನಾನು ಬರೆದದ್ದು ಈ ಹನಿಗವನ-
 
ಗಂಗೂಲಿ ಹೇಳಿದ್ದು
ನಮ್ಮ ಸತತ ಸೋಲಿಗೆ
ಕಾರಣಗಳು ಹಲವು.
ಬಹು ಮುಖ್ಯ ಕಾರಣ-
ಎದುರಾಳಿಯ ಗೆಲುವು.

ಹಾಗೆಯೇ, ಕಪಿಲ್‌ದೇವ್ ಜುಟ್ಟು ಬಿಟ್ಟಾಗ ಬರೆದದ್ದು-

ಗುಟ್ಟು
ಕಪಿಲ್‌ದೇವನ ಜುಟ್ಟು
ಗೊತ್ತೇ ಅದರ ಗುಟ್ಟು
ಜುಟ್ಟಿನ ಕೂದಲು ಒಟ್ಟು
ಅವನ ಗಳಿಸಿದ ವಿಕೆಟ್ಟು
ನ
ಕ್ರಿಕೆಟ್ ಮಾತ್ರವಲ್ಲದೆ ಟೆನ್ನಿಸ್ ಬಗ್ಗೆ ಸಹ ನನ್ನ ಕೆಲವು ಹನಿಗವನಗಳಿವೆ-
 
ಗುರಿ
ಟೆನ್ನಿಸ್ಸಿನ ಮೋಹಿನಿ
ಗ್ಯಾಬ್ರಿಲಾ ಸಬಾಟಿನಿ
ಕೋಟ್ಯಂತರ ಹೃದಯಗಳು
ನಿನಗೆ ಸೋತ ವೇಳೆ
ಸ್ಟೆಫಿಗೆ ನೀ ಸೋತದ್ದಕ್ಕೆ
ಅಳುವೆಯಲ್ಲೇ, ಬಾಲೆ

 ಏಕೆ?
 ಮೌನಿಯಲ್ಲ, ಸಲೀಸಲ್ಲ
ಮೋನಿಕಾ ಸೆಲೀಸ್,
ಏಕೆ ನಿನಗೆ ಇಂಥಾ ಹೆಸರು
ಹೇಳುವೆಯಾ ಪ್ಲೀಸ್
 
ವಕ್ಷಪಾತ
ಗೆದ್ದರೇನು ಸೋತರೇನು
ಮುದ್ದು ಮುಖದ ಸಾನಿಯಾ
ಅವಳ ಕಡೆಯೇ ಮೀಡಿಯಾ

ಎಲ್ಲ ಆಟಗಳನ್ನೂ ಪ್ರೇಮದಾಟದೊಂದಿಗೆ ಸಮೀಕರಿಸಿ, ನಾನು ಬರೆದ ಪ್ರೇಮಗೀತೆ 'ಬಣ್ಣಿಸಲೇ, ಹೆಣ್ಣೇ'  ಇಂದಿಗೂ ಜನಪ್ರಿಯವಾಗಿದೆ. ನನ್ನ ಕಾಲದ 'ಕಪಿಲ'ನಿಗೆ ಬದಲು ಇಂದಿನ ಧೋನಿ, 'ಗವಾಸ್ಕರ್‌'ಗೆ ಬದಲು 'ತೆಂಡೂಲ್ಕರ್‌' ಎಂದು ಹೆಸರು ಬದಲಿಸಿ, ಇಂದಿನ ಯುವಕರೂ ಸಹ ಆ ಹಾಡನ್ನು ಹಾಡಿಕೊಂಡು ಕಣ್ಣೀರ ಧಾರೆ ಹರಿಸುತ್ತಾರೆ. ಪ್ರೇಮದಲ್ಲೂ 'ಮೋಸದಾಟ' ಅನಾದಿ-ಅನಂತ ಎಂಬುವುದೇ ಆ ಹಾಡಿನ ಸಾರ. ಹೀಗಾಗಿ, 'ಒಲವೇ, ನೀನೆಲ್ಲಿ? ಇನ್ಯಾವ ಹೆಣ್ಣಿನಲ್ಲಿ?' ಎಂಬ ಗಂಡಿನ ವ್ಯರ್ಥ ಶೋಧ ನಿತ್ಯ ನಿರಂತರ.

ಬಣ್ಣಿಸಲೇ, ಹೆಣ್ಣೇ
ಬಣ್ಣಿಸಲೇ, ಹೆಣ್ಣೇ ಏನು ಬಣ್ಣಿಸಲೇ, ಹೆಣ್ಣೇ,
ನಿನ್ನ ಮಹಿಮೆಯನು
ಏನೆಂದು ಬಣ್ಣಿಸಲೇ
 
ಗೋಲು ಹೊಡೆದಂತೆ ಮರಡೋನ
ತಪ್ಪಿಸಿ ಎಲ್ಲರನೂ,
ಮಿಂಚುನೋಟದಲ್ಲೇ
ನನ್ನೆದೆಯ ಹೊಕ್ಕೆಯಲ್ಲೇ
ಕಪಿಲನ ಸಿಕ್ಸರಿನಂತೆ
ನಮ್ಮ ಪ್ರೇಮ ಕೂಡ,
ದಾಟಿ ಹಾರಿತಲ್ಲೇ
ಈ ಜಗದ ಎಲ್ಲ ಎಲ್ಲೆ
 
ಸೋತಳು ನಿನಗೆ ಪಿ.ಟಿ. ಉಷಾ
ಅಡೆತಡೆಗಳ ದಾಟಿ,
ಓಡುವ ವೇಗದಲಿ,
ನನ್ನ ಕೂಡುವ ತವಕದಲಿ
ಮೀರಿದೆ ನಾನು ಗವಾಸ್ಕರನ
ನೂರುಗಳ ದಾಖಲೆ,
ನಿನಗಿತ್ತ ಮುತ್ತಿನಲ್ಲಿ,
ಪಡೆದ ಸಿರಿ ಸಂಪತ್ತಿನಲಿ.
ಎಲ್ಲ ಆಟಗಳೂ ತೀರಿದವು
ಈಗ ಕಣ್ಣಾಮುಚ್ಚಾಲೆ.
ಎಲ್ಲಡಗಿದೆ, ನಲ್ಲೇ
ಇನ್ಯಾರ ತೆಕ್ಕೆಯಲ್ಲೇ
ಉಳಿಸಿಹೋದೆಯಾ ನನಗೆ
ಮುಗಿಯದ ಹುಡುಕಾಟ
ಒಲವೇ, ನೀನೆಲ್ಲಿ
ಇನ್ಯಾವ ಹೆಣ್ಣಿನಲ್ಲಿ?

ಅಂಕದ ಕೋಳಿ
ಇಂಗ್ಲೆಂಡಿನವರು ಜಿಂಬಾಬ್ವೆಯಲ್ಲಿ
ಆಡಲಿಲ್ಲ
ಆಡಲು ಜೀವ ಭಯ.
ಭಾರತೀಯರು ಜಿಂಬಾಬ್ವೆಯಲ್ಲಿ
ಆಡಿದರು
ಆಡದಿದ್ದರೆ ಜೀವ ಭಯ.
 
ಆಸ್ಟ್ರೇಲಿಯಾಗೆ ಭಾರತ ಸೋತಾಗ
ಆಳಿಗೊಂದು ಕಲ್ಲು
ಪಾಕಿಸ್ತಾನದ ಮೇಲೆ ಭಾರತ ಗೆದ್ದಾಗ
ಹೂಮಳೆ ಎಲ್ಲೆಲ್ಲೂ.
 
ಒಟ್ಟಾರೆ ಇಂದು ಕ್ರಿಕೆಟ್ಟಿಗನೆಂದರೆ
ಏನೇ ಹೇಳಿ,
ಅವನೊಂದು ಚೆನ್ನಾಗಿ ಮೇಯಿಸಿದ
ಅಂಕದ ಕೋಳಿ.
 
ಗೆದ್ದರೆ, ಆ ಕೋಳಿಯ ಹೆಸರಲ್ಲಿ
ಮೇಜವಾನಿ
ಸೋತರೆ, ಆ ಕೋಳಿಯನ್ನೇ ಕೊಯ್ದು
ಬಿರಿಯಾನಿ.

ಸೆಮಿಫೈನಲ್ ಉದ್ಗಾರಗಳು
ಸೋತಿತು ಸದ್ಯ ಪಾಕು
ಇಳಿಯಿತು ಅದರ ಧಿಮಾಕು
ಯಾರಿದ್ದಾರೆ ಇನ್ನು
ತಡೆಯಲು ನಮ್ಮನ್ನು
ನಮಗೇ ವಿನ್ನು ನಮಗೇ ಚಿನ್ನದ
ರನ್ನದ ರಿಲಯನ್ ಕಪ್
ಬಕಪ್, ಬಾಯ್ಸ್ ಬಕಪ್
 
ಇವನ್ಯಾರಪ್ಪ ಗೂಚು
ಸಿಂಗ್, ಶಾಸ್ತ್ರಿಗೂ ಪೇಚು
ಬ್ಯಾಟೇ ಇವನಿಗೆ ಕಸಬರಿಗೆ,
ಎಂಥ ಬಾಲು ಬೌಲ್ ಮಾಡಿದರೂ
ಗುಡಿಸುವನಲ್ಲ ಬೌಂಡರಿಗೆ

ಎಷ್ಟು ರನ್ನಾದರೇನು ಶಿವ
ಚಚ್ಚಿಬಿಡ್ತಾರೆ ನಮ್ಮೋರು
ನಾಗಪುರದಲ್ಲಿ ನೋಡಲಿಲ್ಲವ
 
ಗವಾಸ್ಕರನಿಂದ ಬೋಣಿ-
ಮುಳುಗತೊಡಗಿತೇ, ಅಯ್ಯೋ,
ನಮ್ಮ ಒಡಕು ದೋಣಿ
 
ಶ್ರೀಕಾಂತ, ಲೋ ಸಿದ್ದು
ನಿಮಗೇನ್ರೋ ಬಂದದ್ದು
ಇಲ್ಲೇ ಠುಸ್ಸೆನ್ನಬೇಕಾ
ನಿಮ್ಮ ಸಿಕ್ಸರ್ ಸಿಡಿಮದ್ದು
 
ಸಂಕಟಕಾಲಕ್ಕಿಲ್ಲದೆ ಹೋದೆಯ
ವೆಂಗಸರ್ಕ್‌ರನೇ
ಪಾಪ, ಅಜರುದ್ದೀನು
ಒಬ್ಬ, ಏನು ತಾನೆ ಕಿಸಿದಾನು
 
ಶುರುವಾಗಿದೆ ತಾಳಿ
ಕಪಿಲನ ಭರ್ಜರಿ ದಾಳಿ
ಹೀಗೇ ಇಕ್ಕಿದನೆಂದರೆ
ಗೆಲ್ಲಲು ಏನಿದೆ ತೊಂದರೆ
ಅಯ್ಯೋ ಕೊಟ್ಟನೆ ಕ್ಯಾಚು
ಮುಂಡಾಮೋಚಿತೆ ಮ್ಯಾಚು

ಅಕಟಕಟಾ
ನಮ್ಮೋರ ಪಾಲಿಗೆ
ಇಲ್ಲವಾಯಿತೇ
ಕಲ್ಕಟಾ

- ಬಿ.ಆರ್. ಲಕ್ಷ್ಮಣ್ ರಾವ್
lakshmanaraobr@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com