ಆತ ತನ್ನ ತಂದೆ ತಾಯಿಯನ್ನೇ ಕೊಲೆ ಮಾಡಿದ್ದ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆತ ತಪ್ಪಿತಸ್ಥ ಎಂದು ತೀರ್ಮಾನಿಸಿತು. ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸಲು ನ್ಯಾಯಾಧೀಶರು ಆತನನ್ನು ಪ್ರಶ್ನಿಸಿದರು. 'ನೋಡಪ್ಪಾ ನಿನ್ನ ಮೇಲೆ ಹೊರಿಸಲಾಗಿರುವ ಆರೋಪ ಸಾಬೀತಾಗಿದೆ. ನೀನು ತಪ್ಪಿತಸ್ಥ ಎಂದು ತೀರ್ಮಾನಿಸಲಾಗಿದೆ. ನೀನೇನಾದರೂ ಹೇಳುವುದಿದೆಯಾ?'
ಆತ ಹೇಳಿದ: 'ಸ್ವಾಮೀ, ನಾನು ಅನಾಥ ಸ್ವಾಮೀ, ಅಪ್ಪ- ಅಮ್ಮ ಇಲ್ಲದ ತಬ್ಬಲಿ! ನನ್ನನ್ನು ಬಿಟ್ಟು ಬಿಡಿ ಸ್ವಾಮೀ...'
- ಪಿ.ಜೆ.ರಾಘವೇಂದ್ರ
===
ಅವನು- ಅವಳು
ಅವಳು ಕೇವಲ ಹತ್ತೇ ನಿಮಿಷ ಫೋನ್ ಮಾಡಿ ಕೆಳಗಿಟ್ಟರೆ, ಅದು ರಾಂಗ್ ನಂಬರ್ರೇ.
ಅವನಿಗೆ ಅವಳಿಗಿಂತ ರೇಡಿಯೋನೇ ಇಷ್ಟ. ಬೇಕೆಂದಾಗ ಅದರ ಮಾತನ್ನು ನಿಲ್ಲಿಸಬಹುದು.
ಅವನಿಗೆ ತುಂಬಾ ಹಸಿವಾಗಿತ್ತು. ಮೆನುದಲ್ಲಿದ್ದ ಹೋಟೆಲಿನ ಹೆಸರೊಂದನ್ನು ಬಿಟ್ಟು ಮಿಕ್ಕಿದ್ದೆಲ್ಲಾ ತಿಂದ.
ಅವಳು ಅವನ ಹಣವನ್ನು ಉಳಿಸಿದಳು; ಬೇರೆಯವನನ್ನು ಮದುವೆಯಾದಳು.
ಅವಳ ಬಾಯಿಯಲ್ಲಿರುವ ಹಲ್ಲುಗಳೆಲ್ಲ ಸ್ವಂತದ್ದೇ, ಸ್ವಂತ ದುಡ್ಡಿನಿಂದ ಕಟ್ಟಿಸಿಕೊಂಡದ್ದು.
===
ವಿಮರ್ಶೆ!
ಸಾರಸ್ವತ ಲೋಕದಲ್ಲಿ ಸಾಹಿತಿಗಳು ಮತ್ತು ವಿಮರ್ಶಕರ ನಡುವೆ ಸಂಘರ್ಷ ಯಾವಾಗಲೂ ಇದ್ದದ್ದೇ. ಕಟು ವಿಮರ್ಶೆಗಳು ಬಂದಾಗ ವಿಮರ್ಶಕರನ್ನು ಅಷ್ಟೇ ಕಟುಮಾತುಗಳಿಂದ ಸಾಹಿತಿಗಳು ಜರೆಯುವುದು ಹಿಂದಿನಿಂದಲೂ ಇದೆ. ಇಂಥ 'ಜರೆತ'ದ ಕೆಲವು ಸ್ಯಾಂಪಲ್ಲುಗಳು-
ಜಾಣರನ್ನು ವಿಮರ್ಶಿಸುವ ದಡ್ಡನೇ ವಿಮರ್ಶಕ- ಅನಾನಿಮಸ್
ವಿಮರ್ಶಕ, ಶ್ರೀಮಂತರ ಉಡುಪುಗಳಿಗೆ ಹೊಳಪು ಬರಿಸಿ ಕೊಳೆ ತೆಗೆಯುವ ಬ್ರಶ್ಗೆ ಸಮ- ಸರ್ ಹೆನ್ರಿ ಪೊಟ್ಜಿನ್
ಬದುಕಿರುವವರ ಬರಹಗಳಲ್ಲಿ ಲೋಪದೋಷಗಳನ್ನು ಹುಡುಕುವುದು, ಹಿಂದಿನವರ ಬರಹಗಳನ್ನು ಎತ್ತಿ ಕೊಂಡಾಡುವುದು ವಿಮರ್ಶೆಯ ಕೆಲಸ. ಲೇಖಕ ಬದುಕಿರುವಾಗ ಅವನ ಕಳಪೆ ಕೆಲಸವನ್ನೇ ಆಡಿಕೊಳ್ಳುತ್ತೇವೆ; ಅದೇ ಲೇಖಕ ಸತ್ತಾಗ ಅವನ ಅತ್ಯುತ್ತಮ ಕೆಲಸದ ಗುಣಗಾನ ಮಾಡುತ್ತೇವೆ- ಸಾಮ್ಯುಯಲ್ ಜಾನ್ಸನ್
ವಿಮರ್ಶಕರು ಅಂದರೆ ಯಾರು ಅಂದುಕೊಂಡಿದ್ದೀರಿ? ಸಾಹಿತ್ಯ ಮತ್ತು ಕಲೆಯಲ್ಲಿ ಸೋತವರು!- ಬೆಂಜಮಿನ್ ಡಿಸ್ರೇಲಿ
ನಿರ್ಗತಿಕ ಕಳ್ಳ, ಕಳ್ಳರನ್ನು ಹಿಡಿಯುವ ಕೆಲಸಕ್ಕೆ ಇಳಿದಂತೆ, ಕೆಲಸದಲ್ಲಿ ಸೋತ ಲೇಖಕ ವಿಮರ್ಶೆಗೆ ಇಳಿಯುತ್ತಾನೆ.- ಪರ್ಸಿ ಬೈಷೆ ಶೆಲ್ಲಿ
ವಿಮರ್ಶಕರಲ್ಲಿ ಎರಡು ಗುಂಪು. ಹೇಳಲು ಅತಿ ಕಡಿಮೆ ವಿಷಯ ಇರುವವರು ಮತ್ತು ಹೇಳಲು ಏನೂ ಇಲ್ಲದವರು!- ಮ್ಯಾಕ್ಸ್ ಬೀರ್ಭೋಮ್
ವಿಮರ್ಶಕ ಎಂದರೆ ಓಡುವುದನ್ನು ಹೇಳಿಕೊಡುವ ಕುಂಟ!- ಜಾನಿಂಗ್ ಪೊಲಾಕ್
ದಾರಿ ಗೊತ್ತಿದ್ದು, ವಾಹನವನ್ನು ನಡೆಸಲು ಬರದವನೇ ವಿಮರ್ಶಕ- ಕೆನಿತ್ ಟೈನಾನ್
ನಾಟಕ ವಿಮರ್ಶಕ ನಾಟಕಕಾರನಿಗೆ ಅವನು ಬರೆದಿರುವುದರ ಅರ್ಥವನ್ನು ವಿವರಿಸುತ್ತಾನೆ- ವಿಲ್ಸನ್ ಮಿಜನರ್
(ಆಧಾರ: ಕ್ಯಾಸೆಲ್ಸ್ ಡಿಕ್ಷನರಿ ಆಫ್ ಸಿನಿಕಲ್ ಕೊಟೇಶನ್ಸ್)
- ಸಂ: ಸಂಪಟೂರು ವಿಶ್ವನಾಥ್