ಓಡಿ ಬಂದ ದೃಶ್ಯಗಳು

ಓಡಿ ಬಂದ ದೃಶ್ಯಗಳು
Updated on: 

ಚಿತ್ರ: ಬಯೋಸ್ಕೋಪ್ (2008)
ಭಾಷೆ: ಮಲೆಯಾಳಂ
ನಿರ್ದೇಶನ: ಕೆ.ಎಂ. ಮಧುಸೂಧನನ್
ಅವಧಿ: 94 ನಿಮಿಷ
ತಾರಾಗಣ: ನೆಡುಂಬರಂ ಗೋಪಿ, ಭರತನ್ ನಜ್ರಾಕ್ಕಲ್, ಮೇಖಾ ರಾಜನ್, ವಾಲ್ಟರ್ ವ್ಯಾಗ್ನರ್, ಮುರುಗನ್.


ಕತ್ತಲ ಕೋಣೆಯ ಬೆಳಕಿನ ಪುಟ್ಟ ಕಿಂಡಿಯಿಂದ ಹೊರಡುವ ಬೆರಗಿನ ಚಿತ್ರಗಳು ಮತ್ತು ಅವುಗಳನ್ನು ದಿಟ್ಟಿಸುವ ನೋಟಗಳ ವಿಸ್ಮಯಕ್ಕೆ ಆಗಾಗ ನಾವೂ ಪಾತ್ರರಾಗುತ್ತೇವೆ. 'ಸಿನಿಮಾ' ಎನ್ನುವ ಪರಿಕಲ್ಪನೆ ಹುಟ್ಟುವ ಮೊದಲೇ 'ಓಡುವ ಚಿತ್ರಗಳು' ಎಂದು ಜನರಲ್ಲಿ ಕುತೂಹಲ ಮೂಡಿಸಿದ ಆ ಬೆಳ್ಳಿಪರದೆಯ ಆರಂಭ ದಿನಗಳ ಚಮತ್ಕಾರಗಳು, ಅಚ್ಚರಿಗಳು, ಭಾವುಕತೆ ಮೂಡಿಸಿದ ಕ್ಷಣಗಳನ್ನು ಪದಗಳಿಂದ ವರ್ಣಿಸುವುದು ಅಷ್ಟು ಸುಲಭವಲ್ಲ. ನೀವು ಕಮಲ್ ನಿರ್ದೇಶನದ 'ಸೆಲ್ಯುಲಾಯ್ಡ್‌' ಚಿತ್ರ ನೋಡಿರಬೇಕಲ್ಲವೆ? ಮಲೆಯಾಳಂ ಚಿತ್ರರಂಗಕ್ಕೆ ಮೊಟ್ಟ ಮೊದಲ ಬಾರಿಗೆ ತನ್ನ ನೆಲದಿಂದಲೇ ಸಿನಿಮಾ ಪರಿಚಯಿಸಿದ ಜೆ.ಸಿ. ಡೇನಿಯಲ್ ಚಿತ್ರಕೃಷಿಯ ರೋಚಕತೆ ಹಾಗೂ ವಿಷಾದ ಪಯಣವನ್ನು ತೆರೆದಿಡುವ ಚಿತ್ರವಿದು.
ಪ್ರತಿ ಕ್ಷಣ ಸಿನಿಮಾ ಪರದೆಯನ್ನು ಮೋಹಿಸಿದವನನ್ನು ಅದೇ ಬಣ್ಣದ ಜಗತ್ತು ಕಾಣೆಯಾಗಿಸಿದ ಕಥೆ. ಪರದೆ ಮೇಲೆ ತನ್ನ ಮುಖವನ್ನೇ ತಾನೇ ನೋಡಲಾಗದೆ ಚಿತ್ರ ಬಿಡುಗಡೆ ದಿನವೇ ಹುಟ್ಟೂರನ್ನೇ ಬಿಟ್ಟು ಅಜ್ಞಾತಗೊಂಡವಳ ದುರಂತ ಕಥೆ. ಸಿನಿಮಾಗಾಗಿ ತನ್ನೂರಲ್ಲೇ ಬದುಕಿನ ಗೂಡನ್ನೇ ಕಳೆದುಕೊಂಡವನ ವಿಷಾದ ಛಾಯೆ. ಒಂದು ಮೂಕಿ ಚಿತ್ರದ ಮೂಲಕ ಬೆಳ್ಳಿತೆರೆಯನ್ನು ಬೆಳಗಿಸುವ ಸಾಹಸ ಮಾಡಿ, ಕೊನೆಗೆ ದಿಕ್ಕಿಲ್ಲದಂತೆ ಪಾಳು ಬಿದ್ದ ಮನೆಯಲ್ಲಿ ಪ್ರಾಣ ಬಿಟ್ಟವನ ಚರಿತ್ರೆಯನ್ನು ತೆರೆದಿಡುವ ಚಿತ್ರ 'ಸೆಲ್ಯುಲಾಯ್ಡ್‌'. ಸಿನಿಮಾ ಕಲೆ ಹುಟ್ಟಿಕೊಂಡ ಆರಂಭದ ದಿನಗಳ ಚರಿತ್ರೆಯೇ ಹಾಗಿತ್ತು. ಯಾರೂ ಕೇಳಿರದ, ನೋಡಲಾಗದ ವಿಸ್ಮಯ ದಿನಗಳು. ಅದೇ ರೀತಿ ಸಿನಿಮಾ ಮೋಹಕ್ಕೊಳಗಿ, ಸಿನಿಮಾನೇ ತನ್ನ ಕಾಯಕ ಎಂದವನ ಕುಟುಂಬದ ಸ್ಥಿತಿಯನ್ನು ತೆರೆದಿಡುವ ಅದೇ ನಾಡಿನ ಮತ್ತೊಂದು ಚಿತ್ರ 'ಬಯೋಸ್ಕೋಪ್‌'. ಕಮಲ್‌ರ 'ಸೆಲ್ಯುಲಾಯ್ಡ್‌' ಚಿತ್ರ ಹಾಗೂ ಇದಕ್ಕೂ ಹಿಂದೆ ಬಂದ ಕೆ.ಎಂ. ಮಧುಸೂಧನನ್ ಅವರ 'ಬಯೋಸ್ಕೋಪ್‌' ಚಿತ್ರಕ್ಕೂ ಯಾವುದೇ  ಸಂಬಂಧವಿಲ್ಲ. ಆದರೆ ಎರಡೂ ಚಿತ್ರಗಳ ಅಂತರಂಗ ಮತ್ತು ಬೆಡಗು ಒಂದೇ. ಕಮಲ್ ಚಿತ್ರದಲ್ಲಿ ಸಿನಿಮಾ ಮಾಡಿದವನ ರೋಚಕತೆ, ಕಳೆದುಹೋದ ಚರಿತ್ರೆ ಬಿಚ್ಚಿಟ್ಟರೆ, ಇಲ್ಲಿ ಸ್ಥಿರ ಚಿತ್ರಗಳನ್ನು ಜೋಡಿಸಿ ಚಲಿಸುವ ಚಿತ್ರಗಳಂತೆ ಬಿಳಿ ಪರದೆ ಮೇಲೆ ಓಡಿಸುವವನ ಕಥೆ ಹೇಳುತ್ತದೆ. ಇಟಲಿಯ 'ಸಿನಿಮಾ ಪ್ಯಾರಡಿಸೋ' ಕೂಡ ನೋಡುಗರಲ್ಲಿ ಇದೇ ಬೆರಗು, ರೋಚಕತೆ ಕಟ್ಟಿಕೊಡುತ್ತದೆ.
ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಆಫ್ ಕಾರ್ಪೋರೇಷನ್ (ಎನ್‌ಎಫ್‌ಡಿಸಿ) ನಿರ್ಮಾಣದ 'ಬಯೋಸ್ಕೋಪ್‌' ಚಿತ್ರದ್ದು 20ನೇ ಶತಮಾನದ ಕಥೆ. ರಾಷ್ಟ್ರಪ್ರಶಸ್ತಿ, ಐದು ವಿಭಾಗಗಳಲ್ಲಿ 2008ರ ಕೇರಳ ರಾಜ್ಯ ಪ್ರಶಸ್ತಿ, ನ್ಯೂಯಾರ್ಕ್, ಜರ್ಮನಿ ಚಿತ್ರೋತ್ಸವಗಳ ಪ್ರದರ್ಶನ ಮತ್ತು ಪ್ರಶಸ್ತಿಗಳಿಗೆ ಪಾತ್ರವಾದ ಈ ಚಿತ್ರದ ಕೇಂದ್ರಬಿಂದು ದಿವಾಕರನ್. ನಿರ್ದೇಶಕರೇ ಬರೆದ ಕೃತಿಯನ್ನು ಆಧರಿಸಿದ ಕಥೆ ಇಲ್ಲಿದೆ. ಮಧುಸೂಧನನ್ ಅವರು 'ಬಯೋಸ್ಕೋಪ್‌' ಹೆಸರಿನಲ್ಲಿ ಬರೆದ ಕೃತಿ ವರುಣಿ ಜೋಸಪ್ ಅವರ ನಿಜಜೀವನದ ಕಥೆ. ಇದರ ಮುಂದುವರಿದ ಭಾಗ 'ಕನ್ನಡಿ ಕೊಟ್ಟಾಕ' ಹೆಸರಿನಲ್ಲಿ ಪ್ರಕಟವಾಗಿದೆ. ಕೃತಿಯ ಪಾತ್ರಗಳು ಚಿತ್ರದಲ್ಲಿ ಜೀವ ಪಡೆದುಕೊಂಡಿವೆ. ದಿವಾಕರನ್ ಒಮ್ಮೆ ಮಲಬಾರ್ ತೀರದಿಂದ ತಮಿಳುನಾಡಿಗೆ ಬರುತ್ತಾನೆ. ಇಲ್ಲಿ ಆಗಲೇ ವಿದೇಶಿಗನೊಬ್ಬ ಸ್ಥಿರ ಚಿತ್ರಗಳನ್ನು ಬಯೋಸ್ಕೋಪ್ ಮುಂದೆ ರೀಲಿನಂತೆ ಜೋಡಿಸಿ ವೇಗವಾಗಿ ತಿರುಗಿಸುವ ಮೂಲಕ ಓಡುವ ಚಿತ್ರಗಳನ್ನು ತೋರಿಸುತ್ತಾನೆ. ತುಟಿಕ್ ಪಿಟಿಕ್ ಎನ್ನದೆ ಪ್ರಪಂಚದಲ್ಲೇ ನೋಡಿರದ ಅದ್ಭುತವೊಂದನ್ನು ನೋಡುತ್ತಿದ್ದೇವೆ ಎನ್ನುವ ಭಾವನೆ ಮೂಡಿಸುವ ವಿದೇಶಿಗನ ಈ ಮಾಯಾಜಾಲಕ್ಕೆ ಕೇರಳದಿಂದ ಬರುವ ದಿವಾಕರನ್ ಕೂಡ ಸಿಲುಕುತ್ತಾನೆ. ಚಲಿಸುವ ರೈಲು, ಓಡುವ ಜನ, ಕುದುರೆಗಳು, ಯುದ್ಧದ ಸನ್ನಿವೇಶ, ಕಾರ್ಖಾನೆ... ಹೀಗೆ ಒಂದಿಷ್ಟು ದೃಶ್ಯಗಳನ್ನು ತೆರೆ ಮೇಲೆ ನೋಡುವ ಜನ ನಿತ್ಯ ಅದರ ಬಗ್ಗೆಯೇ ಮಾತನಾಡಿಕೊಳ್ಳುತ್ತಿದ್ದರೆ, ದಿವಾಕರನ್ ಮಾತ್ರ ಬಿಳಿ ಪರದೆ ಮೇಲೆ ಚಿತ್ರಗಳನ್ನು ಓಡಿಸುವುದು ಹೇಗೆಂಬುದರ ಬಗ್ಗೆ ಅದೇ ವಿದೇಶಿಗನಿಂದ ತರಬೇತಿ ತೆಗೆದುಕೊಳ್ಳುತ್ತಾನೆ. ಮುಂದೆ ತನ್ನೂರಿಗೆ ಬಯೋಸ್ಕೋಪ್ ತಂದು ಚಿತ್ರಗಳ ಪ್ರದರ್ಶನಕ್ಕೆ ಮುಂದಾಗುತ್ತಾನೆ. ಕೆಲವರು ಸ್ವಾಗತಿಸಿದರೆ, ಇನ್ನು ಕೆಲವರು ವಿರೋಧಿಸುತ್ತಾರೆ. ಮತ್ತೊಂದಿಷ್ಟು ಜನ 'ಅದೆಲ್ಲ ಸುಳ್ಳು. ಬಟ್ಟೆ ಮೇಲೆ ಜನ, ರೈಲು, ಕುದುರೆ ಓಡುವುದುಂಟೆ?' ಎಂದು ಕೊಂಕು ನುಡಿಯುತ್ತಾರೆ. 'ನಮ್ಮನ್ನು ಗುಲಾಮರನ್ನಾಗಿಸಿದವರ ಸಂಸ್ಕೃತಿಯನ್ನು ನಾವು ಮುಂದುವರಿಸುವುದೇ?' ಸ್ವತಃ ದಿವಾಕರನ್‌ರ ತಂದೆ ಸಿಟ್ಟಾಗುತ್ತಾರೆ.
ಆದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ದಿವಾಕರನ್, ಬಯೋಸ್ಕೋಪ್ ಮೂಲಕ ಚಿತ್ರಗಳ ಪ್ರದರ್ಶನ ಮುಂದುವರಿಸುತ್ತಾನೆ. ಇತ್ತ ದಿವಾಕರನ್‌ರ ಪತ್ನಿ ನಳನಿ ಅರೋಗ್ಯ ಸ್ಥಿತಿ ಸರಿ ಇಲ್ಲ. ಜೀವಚ್ಛವವಾಗಿ ಆಕೆ ಹಾಸಿಗೆ ಹಿಡಿದಿದ್ದಾಳೆ. ಆದರೂ ಆಕೆಗೆ ಬಯೋಸ್ಕೋಪ್ ನೋಡುವ ಆಸೆ. ಆದರೆ ಮನೆಯೊಡತಿಯ ಆಸೆ  ಕೊನೆಗೆ ದಿವಾಕರನ್‌ರಿಂದ ಈಡೇರಿಸಲಾಗದು. 'ಬನ್ನಿ ಬನ್ನಿ ಚಲಿಸುವ ಚಿತ್ರಗಳು, ರೈಲು, ಮಾತನಾಡುವ ಮನುಷ್ಯರು, ಓಡುವ ಕುದುರೆಗಳನ್ನು ನೋಡಿ' ಎಂದು ಪ್ರಚಾರ ಮಾಡುವ, ಜನ ತಮ್ಮ ತಮ್ಮಲ್ಲೇ ಗುಸುಗುಸ ಎಂದು ಮಾತನಾಡಿಕೊಂಡು ಟೆಂಟ್ ಕಡೆ ಬರುವ, ರೈಲು ಚಲಿಸುತ್ತಿದ್ದಂತೆ ಕಾಣುವ ದೃಶ್ಯವನ್ನು ನೋಡಿ ಬೆರಗುಗೊಳ್ಳುವಂಥ ದೃಶ್ಯಗಳ ಮೂಲಕ ಹಾಗೂ ರಾತ್ರಿ ಕೂಡ ಹೆಣ್ಣು ಮಕ್ಕಳು ಮೇಕಪ್ ಮಾಡಿಕೊಂಡು ಚಿತ್ರ ನೋಡಲು ಬರುವ ದೃಶ್ಯಗಳಿಂದ ನಿಜವಾಗಲೂ ನಿರ್ದೇಶಕರು ಸಿನಿಮಾ ಜಗತ್ತಿನ ಬೆರಗುಗಳನ್ನು ಕಟ್ಟಿಕೊಡುತ್ತಾರೆ. ಯಕ್ಷಗಾನ, ಕೋಲಾಟ, ನಾಟಕಗಳೇ ಚೆನ್ನಾಗಿರುತ್ತವೆ ಎನ್ನುವ ಮೂಲಕ ಸ್ಥಳೀಯ ಸಂಸ್ಕೃತಿಗೂ ಹಾಗೂ ಹೊರಗಡೆಯಿಂದ ಬಂದ ಸಿನಿಮಾ ಕಲೆ ನಡುವೆ ಸಣ್ಣ ವ್ಯತ್ಯಾಸ ಹೇಳುವ ಪ್ರಯತ್ನ ಮಾಡುತ್ತಾರೆ ನಿರ್ದೇಶಕರು. ಸಾಕ್ಷ್ಯಚಿತ್ರದಂತೆ ಇಡೀ ಕಥೆಯನ್ನು ನಿರೂಪಿಸಿದ್ದರೂ, ಎಂ.ಜೆ. ರಾಜೇಂದ್ರಕೃಷ್ಣನ್‌ರ ಛಾಯಾಗ್ರಹಣ, ಪ್ರತಿ ದೃಶ್ಯವನ್ನು ಅಲಂಕರಿಸುವ ನೆರಳು, ಬೆಳಕಿನ ವಿನ್ಯಾಸ, ನೆಲದ ಸಾಂಸ್ಕೃತಿಯನ್ನು ಬಿಂಬಿಸುವ ಹಾಡಿನ ಸಾಲುಗಳು ಚಿತ್ರಕ್ಕೆ ಹೊಸ ಮೆರುಗು ನೀಡಿವೆ.

-ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com