

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ 75ನೇ ಹುಟ್ಟುಹಬ್ಬ ಇಂದು. ಅವರ ನೆನಪಿನೊಟ್ಟಿಗೆ ಯಾಕೋ ಈ ಜಾಹಿರ್ ಕಣ್ಮುಂದೆ ಬರುತ್ತಾರೆ...
ಹೀಗೊಂದು ದಿನ. ಮುಸ್ಸಂಜೆ. ಕುರುಚಲು ಗಡ್ಡ, ಕೆಂಪು ಬಣ್ಣದ ಬಿಳಿಗೆರೆ ಒಳಗೊಂಡ ಮಾಸಲು ಜರ್ಕಿನು,ಧೊಗಲೆ ಪ್ಯಾಂಟು ಧರಿಸಿರುವ ಪರಮಾಪ್ತ ಮುದುಕನೊಬ್ಬ ಸಿಂಗಲ್ ಸೀಟಿನ ಬಜಾಜ್ ಚೇತಕ್ ಸ್ಕೂಟರ್ ಮೇಲೇರಿ ಸವಾರಿ ಹೊರಟಿದ್ದಾರೆ. ಒಂದು ಪುಟ್ಟ ವಿಶ್ವಕೋಶದಂತೆ ತೋರುವ ಈ ಮುದುಕಜ್ಜನ ಎರಡು ಚಕ್ರದ ಸ್ಕೂಟರ್ ಗಾಡಿಯ ತುಂಬೆಲ್ಲ ಸುಧಾ, ಕನ್ನಡಪ್ರಭ, ಪ್ರಜಾವಾಣಿ, ಮಯೂರ, ಸಂಯುಕ್ತ ಕರ್ನಾಟಕ, ಬಾಲಮಂಗಳ, ಚಂಪಕ, ಸ್ಪರ್ಧಾಸ್ಫೂರ್ತಿ, ಚಂದಮಾಮ, ರೂಪತಾರ- ಇತ್ಯಾದಿ ನಿಯತಕಾಲಿಕೆಗಳು ಜತೆಗೂಡಿ ಪಯಣ ಬೆಳೆಸಿವೆ. ಆ ಸಂದರ್ಭ ಅದೇ ದಾರಿಯಲ್ಲಿ ಅಮ್ಮನ ತೋರು ಬೆರಳು ಹಿಡಿದು ಸಾಗುವ ಹುಡುಗನೊಬ್ಬ 'ಜಾಹಿರ್ ಮಾಮಾ' ಎಂದು ಕೂಗಿ ಕರೆಯುತ್ತಾನೆ. ಕಂದನ ಕರುಳಿನ ಕರೆ ಕಿವಿಗೆ ತಲುಪಿದ್ದೇ ತಡ ತನ್ನ ಪುಟ್ಟ ಚೀಲದಲ್ಲಿರುವ 'ಬಾಲಮಿತ್ರ'ವನ್ನು ಅವನ ಪುಟ್ಟ ಕೈಗಳ ಮೇಲಿಟ್ಟು ಮುಗುಳ್ನಗೆ ತೋರುತ್ತಾರೆ ಈ ಹಿರಿಯ. ನಿಜ, ಪ್ರಶಾಂತ ಚಿತ್ತ ಸಂತನಂತೆ ಬದುಕುತ್ತಿರುವ ಅಕ್ಷರ ಜೋಗಿ ಇವರು.
ಸರಿ ಸುಮಾರು ನಲವತ್ತು ವರುಷಗಳಿಂದಲೂ ಪತ್ರಿಕೆ ವಿತರಣೆಯನ್ನೇ ತನ್ನ ಬದುಕಾಗಿಸಿಕೊಂಡಿರುವ ಜಾಹಿರ್ ಸಾಹೇಬರು ಕೆಲಕಾಲ ಅಂಚೆಪೇದೆಯೂ ಆಗಿದ್ದರು. ಮುಂಜಾವು ಐದರ ವೇಳೆಗಾಗಲೇ ಮೂಡಿಗೆರೆ ಬಸ್ ಸ್ಟ್ಯಾಂಡ್ ಸಮೀಪದ ಅಯ್ಯಂಗಾರ್ ಬೇಕರಿ ಮುಂದಿನ ಸಿಮೆಂಟ್ ಕಟ್ಟೆ ಮೇಲೆ ಕುಳಿತು ಪತ್ರಿಕಾ ವ್ಯಾನುಗಳನ್ನು ಚಾತಕ ಪಕ್ಷಿಯಂತೆ ಕಾಯುವ ಅವರ ಕಾಯಕ ಪ್ರೀತಿ ನಿಜಕ್ಕೂ ಸ್ಫೂರ್ತಿ.
ಸುರಿಯುವ ಮಳೆ, ಕೊರೆವ ಚಳಿ ಎನ್ನದೆ ಓದುಗ ಗ್ರಾಹಕರಿಂದ ಚಿಲ್ಲರೆ ಹಣ ಪಡೆದು ಸುದ್ದಿಮಿತ್ರ ಪತ್ರಿಕೆಗಳನ್ನು ಕೈಗಿಡುವ ಇವರು ನಾಡಿನ ಹೆಸರಾಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ಆಪ್ತರಲ್ಲೊಬ್ಬರು. ವಿಶೇಷವೆಂದರೆ, 'ಪೂರ್ಣಚಂದಿರ ರಜ ಹಾಕಿದ ನಿನ್ನಯ ಮೊಗವನು ಕಂಡಕ್ಷಣ' ಎಂಬ ಕವಿ ಜಯಂತ ಕಾಯ್ಕಿಣಿಯವರ ಕವಿತೆ ಸಾಲಿಗೆ ಸದಾ ಮಾದರಿಯಾಗಿ ಬದುಕುತ್ತಿರುವ ನಿತ್ಯ ಸಾಹಿತ್ಯ ಸಂಗಾತಿ. ಈ ಬಗ್ಗೆ ಜಾಹಿರ್ ಸಾಬರನ್ನು ಮಾತನಾಡಿಸಿದರೇ ಮುಗ್ಧರಂತೆ ಹೀಗೆ ನುಡಿಯುತ್ತಾರೆ- 'ಒಮ್ಮೆ ತೇಜಸ್ವಿಯವರು, ಏ ಜಾಹಿರ್ ನಿಂತ್ಕೋ... ಅಂತ ಫೋಟೋ ತೆಗೆದುಕೊಂಡಿದ್ರು. ಯಾಕೋ ಗೊತ್ತಿಲ್ಲ!'
-ಸಂಪತ್ ಬೆಟ್ಟಗೆರೆ