

ಹದಿನೆಂಟು ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಪಂಜ ಎಂಬ ಸಣ್ಣ ಊರಿನಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯೊಂದರ ಮುಖ್ಯ ಉಪನ್ಯಾಸಕರಾಗಿದ್ದ ಪುರುಷೋತ್ತಮ ಬಿಳಿಮಲೆ ಹೇಳಿದ್ದು ಹೀಗೆ: 'ಜಾಗತೀಕರಣದ ಬೀಸಿನಲ್ಲಿ ನಮ್ಮ ದೇಸಿತನ ಮಾಯವಾಗುತ್ತಿದೆ. ನಮ್ಮ ಜಾನಪದ ಕಲೆಗಳಿಗೆ ಮರಳುವುದೊಂದೇ ಅದಕ್ಕೆ ಪರಿಹಾರ'. ಅದಕ್ಕೆ ಅಲ್ಲೇ ಇದ್ದ ರಾಮಚಂದ್ರ ದೇವ ನೀಡಿದ ಉತ್ತರ: 'ಇದು ಸರಿಯಾದ ಅಭಿಪ್ರಾಯವಲ್ಲ. ಜಾನಪದ ಕಲೆಗಳು ಜಾತಿಮೂಲವಾಗಿದ್ದು, ಅವುಗಳಿಗೆ ಮರಳುವುದೆಂದರೆ ಮತ್ತೆ ಹಳೆಯ ಫ್ಯೂಡಲ್ ವ್ಯವಸ್ಥೆಗೆ ಮರಳಬೇಕಾಗುತ್ತದೆ'. ಇದು ಆಗಿನ ಕಾಲದಲ್ಲಿ ತೃತೀಯ ಜಗತ್ತು ಇನ್ನೂ ತಲೆಕೆಡಿಸಿಕೊಳ್ಳುತ್ತಿದ್ದ, ಇನ್ನೂ ರೂಪು ಪಡೆದುಕೊಳ್ಳುತ್ತಿದ್ದ ಚರ್ಚಾವಸ್ತುವಾಗಿತ್ತು. ಜಾಗತಿಕ ಸಂಗತಿಯೊಂದನ್ನು ಸ್ಥಳೀಯ ನೆಲೆಗೆ ಇಬ್ಬರು ವಿದ್ವಾಂಸರು ತಂದದ್ದು ಹೀಗೆ. ಆಗಷ್ಟೇ ರಾಮಚಂದ್ರ ದೇವ, ತಮಗಿದ್ದ ಸಾಹಿತ್ಯಕ ಪ್ರಭಾವಳಿಗಳನ್ನು ತೊರೆದು ಸಾಮಾನ್ಯ ಕೃಷಿಕನಾಗಿ ತಮ್ಮೂರಲ್ಲಿ ನೆಲೆನಿಲ್ಲಲು ಯತ್ನಿಸುತ್ತಿದ್ದರು.
ಇದಾಗಿ ಕೆಲವೇ ವರ್ಷಗಳಲ್ಲಿ ನಮ್ಮ ಯುವ ಬರಹಗಾರರ ಒಕ್ಕೂಟವು ಸುಬ್ರಹ್ಮಣ್ಯದಲ್ಲಿ ಕಥಾ ಕಮ್ಮಟ ಏರ್ಪಡಿಸಿತು. ಕೆ.ಪಿ.ಸುರೇಶ ಇದರ ನಿರ್ದೇಶಕರಾಗಿದ್ದರು. ಉದ್ಘಾಟನೆಗೆ ದೇವರನ್ನು ಕರೆಯಲಾಗಿತ್ತು. ಪುಣ್ಯಾತ್ಮ ಹಿಂದಿನ ದಿವಸ ಫೋನ್ ಮಾಡಲಿಲ್ಲವೆಂದು ಕೋಪಿಸಿಕೊಂಡು ಬರಲೇ ಇಲ್ಲ! ಕಡೆಗೆ ಶಿಬಿರದ ನಿರ್ದೇಶಕರೇ ಅವರಿಗೆ ಕರೆ ಮಾಡಿ, ಹುಡುಗರ ಹುಡುಗಾಟಕ್ಕೆ ತಲೆಕೆಡಿಸಿಕೊಳ್ಳಬಾರದೆಂದು ಮನದಟ್ಟು ಮಾಡಿಸಿದರು. ನಂತರ ಆಗಮಿಸಿದ ದೇವ, ಯಾವ ಕೊಂಕೂ ಇಲ್ಲದೆ ತಿಳಿಮನಸ್ಸಿನಿಂದ ಮಾತನಾಡಿದ್ದರು. 'ರಿಸಾರ್ಟ್' ಎಂಬ ಕತೆಯನ್ನೂ ಓದಿದರು. ಹಳ್ಳಿಯ ಮನೆತನವೊಂದು ತನ್ನ ಘನತೆಗಳನ್ನೆಲ್ಲಾ ಕ್ರಮೇಣ ಕಳೆದುಕೊಂಡು ಮನೆ ಮಾರುವ, ಆ ಮನೆ ಮುಂದೆ ರಿಸಾರ್ಟ್ ಆಗಿ ಪ್ರದರ್ಶನ ವಸ್ತುವಾಗುವ ಕತೆ ಅದು. ಇಂದು ಎಲ್ಲ ಹಳ್ಳಿಗಳಲ್ಲಿ ನಡೆಯುತ್ತಿರುವ ಆಧುನಿಕತೆಯ ಕೋಡಂಗಿಯಾಟವನ್ನು ಅಂದೇ ಚಿತ್ರಿಸಿತ್ತು ಆ ಕತೆ. 'ಕತೆ ಸ್ಫುರಿಸುವುದು ಹೇಗೆ?' ಎಂದೊಬ್ಬರು ಕೇಳಿದ ಪ್ರಶ್ನೆಗೆ 'ಸ್ಫುರಿಸುವುದು ತುರಿಸುವುದು ಏನೂ ಇಲ್ಲ. ಕೂತು ಪಟ್ಟಾಗಿ ಬರೆಯಬೇಕು, ತಿದ್ದಬೇಕು ಅಷ್ಟೇ' ಎಂದು ಉತ್ತರಿಸಿದ್ದು ನೆನಪಾಗುತ್ತಿದೆ.
ಪೇಟೆಗೆ ಬಂದಾಗಲೂ ಅವರು ತಮ್ಮ ಕವನಗಳ ಗುಂಗಿನಲ್ಲಿ ಇರುತ್ತಿದ್ದರು. ಒಮ್ಮೆ ಸುಳ್ಯದಲ್ಲಿ ಸಿಕ್ಕಿದವರನ್ನು ಏನು ಬರೆಯುತ್ತಿದ್ದೀರಿ ಎಂದು ಕೇಳಿದಾಗ 'ಒಂದು ಪದ್ಯ ಬರೀತಿದ್ದೀನಿ' ಎಂದಿದ್ದರು. ಒಂದು ಪದ್ಯವನ್ನು ಅಷ್ಟೆಲ್ಲ ಹೊತ್ತುಕೊಂಡು ಓಡಾಡಬೇಕೆ ಎಂದೆನಿಸಿದ್ದು ನಿಜ. ಆದರೆ ಅವರ ಪದ್ಯ ಹೊರಬಂದಾಗ ಬೆಚ್ಚಿಬಾಳುವಂತಾಗಿತ್ತು. ಅದು ಭರ್ತಿ ನಲುವತ್ತೈದು ಪುಟಗಳ ಪದ್ಯ. 'ಮಾತಾಡುವ ಮರ' ಹೆಸರಿನ ಆ ಪದ್ಯ ಚರಿತ್ರೆ ಮತ್ತು ವರ್ತಮಾನಗಳಲ್ಲಿ ತುಯ್ಯುತ್ತಾ ಒಂದು ತಲೆಮಾರಿನ ಪೊಳ್ಳುತನವನ್ನು ದಾಖಲಿಸುತ್ತದೆ.
ಪೂರ್ಣಚಂದ್ರ ತೇಜಸ್ವಿ ಬಗ್ಗೆ ಇದ್ದಂಥದೇ ಪೂರ್ವಗ್ರಹ ಭಾವನೆಗಳು ಜನರಲ್ಲಿ ರಾಮಚಂದ್ರ ದೇವರ ಬಗೆಗೂ ಇದ್ದಂತೆ ಕಾಣುತ್ತದೆ.
ಇದಕ್ಕೆ ಪೂರಕವಾಗಿಯೇ ಅವರ ನಿಲುವುಗಳು, ವರ್ತನೆಗಳು ಇದ್ದವೆನ್ನಬೇಕು. ದಶಕಗಳ ಕಾಲ ದೆಹಲಿ, ಬೆಂಗಳೂರು, ಮೈಸೂರು ಎಂದು ತಿರುಗಾಡಿದ ಅವರು ಐವತ್ತರ ನಂತರ ತಮ್ಮ ಊರಾದ ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕಲ್ಮಡ್ಕಕ್ಕೆ ಮರಳಿದ್ದರು. ಅಡಿಕೆ, ತೆಂಗು, ಕಾಳುಮೆಣಸು ಎಂದು ಕೃಷಿಲೋಕದಲ್ಲಿ ಮುಳುಗಿದ್ದರು. ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಅಪಸವ್ಯಗಳೇನಾದರೂ ಕಂಡರೆ ಅಲ್ಲಿಂದಲೇ ಸಿಡಿಮದ್ದಿನಂತೆ ಸ್ಫೋಟಿಸುತ್ತಿದ್ದರು. ಅವರ ವಿಮರ್ಶಾ ನೈಷ್ಠುರ್ಯ ಪ್ರಸಿದ್ಧವಾಗಿತ್ತು. ಕೆಟ್ಟ ಕವಿತೆ ಕಂಡರೆ ಅದನ್ನು ಹಾಗೆಂದೇ ನೇರವಾಗಿ ಹೇಳುವವರು.
ಹಿಂದೊಮ್ಮೆ ಅವರು ಗುಬ್ಬಚ್ಚಿಗಳ ಬಗ್ಗೆ ಒಂದು ಲೇಖನ ಬರೆದಿದ್ದರು. ಅದಾಗಿ ತುಸು ಸಮಯದಲ್ಲಿಯೇ ತಮ್ಮ ಪತ್ರಿಕೆಯಲ್ಲಿ ಲಂಕೇಶ್ ಕೂಡ ಗುಬ್ಬಚ್ಚಿಗಳ ಬಗ್ಗೆ ಬರೆದಿದ್ದರು. ಲಂಕೇಶರ ಲೇಖನದ ವಸ್ತು ನನ್ನ ಲೇಖನದಿಂದ ಕದ್ದದ್ದು ಎಂದು ದೇವ ರೇಗಿದ್ದರು. ಆಗ 'ಕನ್ನಡಪ್ರಭ' ಎರಡೂ ಲೇಖನಗಳನ್ನು ಅಕ್ಕಪಕ್ಕದಲ್ಲಿ ಪ್ರಕಟಿಸಿ ಮೌಲ್ಯಮಾಪನದ ಕೆಲಸವನ್ನು ಓದುಗರಿಗೇ ಬಿಟ್ಟಿತ್ತು. ದೇವರ ಲೇಖನ ವಿವರಗಳಿಂದಲೂ ಒಳನೋಟಗಳಿಂದಲೂ ಕೂಡಿದ್ದರೆ, ಲಂಕೇಶರ ಲೇಖನ ಅವರ ಅಂತರಂಗದ ತಲ್ಲಣಗಳ ರೂಪಕವೆಂಬಂತಿತ್ತು. 'ಉದಯವಾಣಿ'ಯಲ್ಲಿ ಅಂಕಣ ಬರೆಯುತ್ತಿದ್ದಾಗ, ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರನ್ನು ಕುಕವಿ ಎಂದು ಕರೆದರು. ಅದು ತೀರಾ ವೈಯಕ್ತಿಕ ಕಾರಣಗಳಿಗಾಗಿತ್ತು. ಅದಕ್ಕೆ ಯಾವುದೇ ಸಮರ್ಥನೆಯೂ ಇರಲಿಲ್ಲ. ಪ್ರಬಲ ಪ್ರತಿಭಟನೆ ಎದುರಾದರೂ ಅವರು ತಮ್ಮ ನಿಲುವು ಸಡಿಲಿಸಲಿಲ್ಲ. ವಿಜಯಕರ್ನಾಟಕದಲ್ಲಿ ಅಂಕಣ ಬರೆಯಲಾರಂಭಿಸಿದಾಗಲೂ ಕೂಡ, ಭೈರಪ್ಪನವರ ಕಾದಂಬರಿಗಳು ಕನ್ನಡಕ್ಕೆ ಯಾಕೆ ಮುಖ್ಯವಾಗಿವೆ, ಯಾಕೆ ಚರ್ಚೆಗೆ ಅರ್ಹವಾಗಿವೆ ಎಂದು ಬರೆದಿದ್ದರು. ದೇವ ತನ್ನ 'ಪ್ರಗತಿಪರ ಸ್ಕೂಲ್ ಆಫ್ ಥಾಟ್' ಅನ್ನು ತೊರೆದಂತಿದೆ ಎಂದು ಹಲವರು ಮಾತಾಡಿಕೊಂಡಿದ್ದರು. ಹಾಗೇನೂ ಇರಲಿಲ್ಲ. ಅವರ ಅಭಿಪ್ರಾಯಗಳಲ್ಲಿ ತಪ್ಪು ಇದ್ದಿರಬಹುದು, ಆದರೆ ಅದನ್ನು ಮಂಡಿಸಲು ಅವರು ಹಿಂಜರಿಯಲಿಲ್ಲ. ದೊಡ್ಡವರ ಅಭಿಪ್ರಾಯಗಳು ನಮಗೆ ಸರಿತೋರದಿದ್ದರೆ ಅದನ್ನು ಹಾಗೇ ಹೇಳಲು ಹಿಂಜರಿಯಬೇಕಾಗಿಲ್ಲ ಎಂದು ನಮಗೆಲ್ಲ ಹೇಳಿಕೊಟ್ಟವರೂ ಅವರೇ. ರವೀಂದ್ರನಾಥ ಠಾಗೋರ್ ಅವರ ಗೀತಾಂಜಲಿಯ ಬಗ್ಗೆ ಕಟುವಾಗಿ ವಿಮರ್ಶಿಸಿ ಬರೆದ ಬಿ.ದಾಮೋದರ ರಾಯರ ಲೇಖನ ಅವರ ಅಚ್ಚುಮೆಚ್ಚಿನದಾಗಿತ್ತು.
ರಾಮಚಂದ್ರ ದೇವ ನಮಗೆ ಯಾಕೆ ಮುಖ್ಯ? ಯಾಕೆಂದರೆ ಅವರು ಆಧುನಿಕ ಮನುಷ್ಯನ ಯಾತನೆಗಳ ಬಗ್ಗೆ ತೀವ್ರವಾಗಿ ಸಂವೇದಿಸಿದ, ಬರೆದ ಬಹುಮುಖ್ಯ ಸಾಹಿತಿ. ಕನ್ನಡದಲ್ಲಿ ಇಂಥ ಕೆಲವೇ ಬರಹಗಾರರಿದ್ದಾರೆ. ಎಂ.ವ್ಯಾಸ, ರಾಘವೇಂದ್ರ ಖಾಸನೀಸ, ಲಂಕೇಶ್ ಇಂಥವರು. ಇಲ್ಲಿನ ವ್ಯಕ್ತಿಗಳಿಗೆ ಯಾತನೆ ಅನಿವಾರ್ಯ. 'ಮೂಗೇಲ' ಎಂಬ ಕತೆಯನ್ನು ಉದಾಹರಣೆಗಾಗಿ ತೆಗೆದುಕೊಳ್ಳಬಹುದು. ಅಲ್ಲಿ ಮೂಗು ಉದ್ದವಾಗಿ ಬೆಳೆದು, ಸರ್ವರ ಪ್ರದರ್ಶನವಸ್ತುವಾಗಿ, ಅಂತರಂಗದಲ್ಲಿ ಕೊಳೆತು ನಾರುವ ವ್ಯಕ್ತಿಯ ಚಿತ್ರಣವಿದೆ. 'ದಂಗೆಯ ಪ್ರಕರಣ' ಕತೆಯಲ್ಲಿ, ಊರಿನ ಜನರ ರೂಢಿಗತ ಅಭಿಪ್ರಾಯಗಳಿಗೆ ಶಾಕ್ ನೀಡಲು ಯತ್ನಿಸುವ ಗೋವಿಂದ ಎಂಬ ವ್ಯಕ್ತಿಯಿದ್ದಾನೆ. ಆದರೆ ಈತನ ಪ್ರಯತ್ನಗಳು ಯಾವ ಫಲವನ್ನೂ ಕೊಡದೆ ಹೋಗುತ್ತವೆ. ಗೋವಿಂದನ ತೊಳಲಾಟ ಆತನದ್ದಾಗಿ ಮಾತ್ರ ಉಳಿಯುತ್ತದೆ. 'ರಿಸಾರ್ಟ್' ಕತೆಯಲ್ಲಿ ಹಳೆವೈಭವಗಳನ್ನೆಲ್ಲ ಕಳೆದುಕೊಂಡು ಹಳಹಳಿಸುತ್ತಿರುವ ಮನೆತನದ ಸುಬ್ರಾಯ ಧನಿ ಇದ್ದಾನೆ. ಆತನ ವ್ಯಕ್ತಿತ್ವಕ್ಕೆ ತಾಳೆಯಾಗುವ ಕೋಡಂಗಿಯೊಬ್ಬನಿದ್ದಾನೆ. ಇಬ್ಬರೂ ಅಪ್ರಸ್ತುತರಾಗಿದ್ದಾರೆ. ಆದರೆ ಅದವರಿಗೆ ಅರ್ಥವಾಗಿಲ್ಲ. ಅಧಿಕಾರ ಹಾಗೂ ವೈಭವಗಳನ್ನು ಕಳೆದುಕೊಂಡ ಕೋಡಂಗಿತನ ರಿಸಾರ್ಟ್ನಲ್ಲಿ ಮರುಹುಟ್ಟು ಪಡೆಯುತ್ತದೆ. ಇವು ಮೂರು ಕತೆಗಳು, ಕನ್ನಡ ಕಥಾಜಗತ್ತಿನಲ್ಲಿ ಶಾಶ್ವತವಾಗಿ ನಿಲ್ಲುವಂಥ ಗಟ್ಟಿತನ ಪಡೆದ ಕತೆಗಳು.
ಕನ್ನಡ ಕಥನಜಗತ್ತಿಗೆ ಅಸಂಗತ ಹಾಗೂ ಮಾಂತ್ರಿಕ ವಾಸ್ತವವನ್ನು ತರಲು ಅವರು ಮಾಡಿದ ಯತ್ನಗಳನ್ನೂ ಇಲ್ಲಿ ನೆನೆಯಬಹುದು. ಮೂಗೇಲ ಅಂಥ ಕತೆ. ಅಲ್ಲಿ ಮೂಗೇಲನ ಮೂಗು ಅನಿಯಂತ್ರಿತವಾಗಿ, ಅಕಾರಣವಾಗಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಎಂ.ಎಸ್.ಕೆ. ಪ್ರಭು, ಎಸ್.ದಿವಾಕರ್ ಮುಂತಾದವರು ನಡೆಸಿದ ಪ್ರಯೋಗಗಳ ಸಾಲಿನಲ್ಲಿ ಇದು ನಿಲ್ಲುತ್ತದೆ. ಮಾತಾಡುವ ಮರ, ಇಂದ್ರಪ್ರಸ್ಥ ಮುಂತಾದ ಕವನಗಳಲ್ಲು ಇದನ್ನು ಅವರು ವಿಸ್ತರಿಸಿದ್ದಾರೆ. ಕೆಲ ಪ್ರಬಂಧಗಳನ್ನೂ ಅವರು ಕತೆ ಎಂಬ ರೀತಿಯಲ್ಲಿ ಪ್ರಕಟಿಸಿದ್ದುಂಟು. ರಥಮುಸಲ ಎಂಬ ನಾಟಕ ಯುದ್ಧದ ನಿರರ್ಥಕತೆ, ಕ್ರೌರ್ಯಗಳನ್ನು ಬಿಂಬಿಸುತ್ತಾ ಬೆಚ್ಚಿ ಬೀಳಿಸುವ ರೀತಿ ಇಂದಿಗೆ ಸಂಗತವಾಗುವಂಥದು. ಈ ರೀತಿ ಮೊದಲಿನಿಂದ ಕೊನೆಯವರೆಗೂ ಅವರು ಪ್ರಯೋಗಗಳಲ್ಲಿ ತಲ್ಲೀನರಾಗಿದ್ದರು ಎನ್ನಬಹುದು.
ಕನ್ನಡ ವಿಮರ್ಶೆ ಅವರನ್ನು ಗಂಭೀರವಾಗಿ ಪರಿಗಣಿಸಿತ್ತೆ? ಬಿ.ಜನಾರ್ದನ ಭಟ್, ಕೃಷ್ಣಮೂರ್ತಿ ಹನೂರು, ಕೆ.ನ.ಶಿವತೀರ್ಥನ್ರಂಥ ಅಲ್ಪಸಂಖ್ಯಾತರು ಅವರ ಬಗ್ಗೆ ಬರೆದದ್ದುಂಟು. ನೇರ, ಭಿನ್ನ ದನಿಗಳಿಗೆ ಮನ್ನಣೆ ಯಾವತ್ತೂ ಕಡಿಮೆಯೇ. ದಿಟ್ಟತನಕ್ಕೆ ಇನ್ನೊಂದು ಹೆಸರಿನಂತಿದ್ದ ದೇವರ ಅಂತ್ಯಸಂಸ್ಕಾರಕ್ಕೆ ಬಂದ ಸಾಹಿತ್ಯ ಲೋಕದ ಮಂದಿಯೂ ಬೆರಳೆಣಿಕೆ ಎಂಬುದೂ ಚೋದ್ಯವೇನಲ್ಲ.
ದೇವ ಎಂಬ ರೂಪಕ
ದೇವ ನನಗೊಂದು ರೂಪಕ. ತನ್ನ ಸಮುದಾಯಕ್ಕೆ ಮರಳಿ ಭಾಷೆ, ಭಾವ ಎಲ್ಲದರಲ್ಲೂ ಅದರೊಂದಿಗೆ ವಿಲೀನವಾಗಲು ಪ್ರಯತ್ನಪಟ್ಟಿದ್ದರು. ಆದರೆ ಅವರ ಬರಹಗಳು ಸಮುದಾಯದ ಭಾಷೆ, ವಿವರ ಬಳಸಿಕೊಂಡಿದ್ದರೂ, ಯಾವುದೋ ಒಂದು ಅಂಶದಲ್ಲಿ ಪರಕೀಯವಾಗಿದ್ದವು. ಪ್ರಯೋಗಶೀಲತೆಯ ರೆಸ್ಟ್ಲೆಸ್ನೆಸ್ ಅವರಲ್ಲಿ ನಿರಂತರವಾಗಿತ್ತು. ಆದರೆ ಅದು ಫಾರ್ಮ್ನಲ್ಲಿ ಇತ್ತಷ್ಟೇ ಹೊರತು, ಕಂಟೆಂಟ್ನಲ್ಲಿ ಅಲ್ಲ. ಕನ್ನಡಕ್ಕೆ ಅವರು ಮುಖ್ಯವೆನಿಸುವುದು ರಥಮುಸಲ ಮುಂತಾದ ನಾಟಕ, ಅನುವಾದಗಳಿಂದ. ತನ್ನ ಸಾಹಿತ್ಯವನ್ನು ಕನ್ನಡಲೋಕ ಗಮನಿಸಿಲ್ಲ ಎಂಬ ಮುನಿಸು, ತನ್ನ ಐಡಿಯಾಗಳನ್ನು ತಮ್ಮ ಸ್ವಂತದ್ದೆನ್ನುವಂತೆ ಬಿಂಬಿಸಿದವರ ಬಗ್ಗೆ ಅವರಲ್ಲಿ ಆಕ್ರೋಶ ಇತ್ತು. ಹಠ ಮತ್ತು ಮಗುವಿನ ಮುಗ್ಧತೆ ಬೆರೆತ ಜೀವ ಅದು!
- ಕೆ.ಪಿ.ಸುರೇಶ, ಕವಿ
- ಹರೀಶ್ ಕೇರ
harishkera@gmail.com