

ಗಲ್ಫ್ ಚಾಂಪಿಯನ್ಶಿಪ್ ಮುಗಿಸಿಕೊಂಡು ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಆ ಬಾಕ್ಸರ್ ಮನಸ್ಸಿನಲ್ಲಿ ದುಗುಡ. ಎದೆ ಒಂದೇ ಸವನೆ ಡವಡವ ಬಡಿದುಕೊಳ್ಳುತ್ತಿತ್ತು. ಮೈಯ್ಯೆಲ್ಲಾ ಬೆವರತೊಡಗಿತ್ತು. ಉಂಡ ಸೋಲು ಮಾತ್ರ ಪದೇ ಪದೆ ಕಾಡುತ್ತಿತ್ತು. ಆ ಕಾಡುವಿಕೆ ಕೇವಲ ಸೋಲಿನದ್ದಾಗಿರಲಿಲ್ಲ. ಆ ಸೋಲು ಮುಂದೆ ಸಂಭವಿಸಬಹುದಾಗಿದ್ದ ಅವಘಢಕ್ಕೆ ನಾಂದಿಯಾಗಬಹುದು ಎಂಬ ಆತಂಕ. ಮನೆ ತಲುಪಿದ 5 ನಿಮಿಷದಲ್ಲೇ ಫೋನ್ ರಿಂಗಣಿಸಿತು.
ಬಾಗ್ದಾದ್ನ ಈಶಾನ್ಯ ಮೂಲೆಯಲ್ಲಿದ್ದ ಇರಾಕಿ ಒಲಿಂಪಿಕ್ಸ್ ಸಂಸ್ಥೆಯಿಂದ ಬಂದ ದೂರವಾಣಿ ಅದು. 'ತಕ್ಷಣವೇ ಬಾ. ಸಾಹೇಬರು ನಿನ್ನನ್ನು ನೋಡಬೇಕೆಂದಿದ್ದಾರೆ' ಎಂದು ಹೇಳಿತು ಆ ಧ್ವನಿ. ಸಾಹೇಬರು ಎಂಬ ಹೆಸರು ಕೇಳಿದ ಕೂಡಲೇ ಬಾಕ್ಸರ್ನ ಹೃದಯ ಸ್ಫೋಟಗೊಂಡಂತಾಯ್ತು. ಸರಿ... ಮನೆಯಿಂದ ಹೊರಟ ಬಾಕ್ಸರ್ ಇರಾಕಿ ಒಲಿಂಪಿಕ್ಸ್ ಸಂಸ್ಥೆಯನ್ನು ಪ್ರವೇಶಿಸಿದ. ಸುಮಾರು 30 ಅಂತಸ್ತಿನ ಕಟ್ಟಡ. ಲಿಫ್ಟ್ನಲ್ಲಿ ಮೇಲಿನ ಅಂತಸ್ತಿನವರೆಗೂ ಬಂದ ಈತನನ್ನು ಅದಾಗಲೇ ಸಿಸಿ ಟಿವಿಯಲ್ಲಿ ಗಮನಿಸಿದ್ದ ಇಬ್ಬರು ಸೈನಿಕರು ಆತನನ್ನು ಕಪ್ಪು ಕೋಣೆಯೊಂದಕ್ಕೆ ಕರೆದೊಯ್ದರು. ಕೆಲ ಹೊತ್ತಿನಲ್ಲೇ ಆತ ಸಾಹೇಬರ ಮುಂದಿದ್ದ.
ಮಿರಿಮಿರಿ ಮಿಂಚುವ ದಿರಿಸು, ಕೈಯ್ಯಲ್ಲಿ ಸದಾ ಫ್ರಾನ್ಸ್ನ ದುಬಾರಿ ಚುಟ್ಟಾ. ಅದನ್ನು ಸೇದುತ್ತಾ ಒಳಬಂದ ಸಾಹೇಬರು, ಒಮ್ಮೆ ತಮ್ಮ ತಾತ್ಸಾರದ ದೃಷ್ಟಿಯನ್ನು ಬಾಕ್ಸರ್ನತ್ತ ಬೀಸಿದರು. ರಾಕ್ಷಸತ್ವ ತುಂಬಿದ್ದ ಆ ದೃಷ್ಟಿಗೆ ತತ್ತರಿಸಿದ ಬಾಕ್ಸರ್ ಉಗುಳು ನುಂಗಿಕೊಂಡ. ಸಾಹೇಬರು ಅಬ್ಬರಿಸಿದರು- 'ನೀನು ನನಗೆ ಏನೆಂದು ಹೇಳಿ ಹೋಗಿದ್ದೆ?' ಆತನಲ್ಲಿ ಉತ್ತರವಿರಲಿಲ್ಲ. 'ನಾನು ಹೇಳಿರಲಿಲ್ಲವಾ, ಗಲ್ಫ್ ಚಾಂಪಿಯನ್ಶಿಪ್ನಲ್ಲಿ ಸೋತರೆ ಮರಳಿ ಇರಾಕ್ಗೆ ಕಾಲಿಡಬೇಡ ಎಂದು? ಮತ್ಯಾಕೆ ಕಾಲಿಟ್ಟೆ?' ಅಬ್ಬರಿಸಿತು ಧ್ವನಿ.
ಮತ್ತೆ ಆ ಬಾಕ್ಸರ್ನನ್ನು ಯಾರೂ ಜೀವಂತವಾಗಿ ನೋಡಲಿಲ್ಲ.
---
ಅಂತಾರಾಷ್ಟ್ರೀಯ ಪಂದ್ಯಾವಳಿಯೊಂದರಲ್ಲಿ ಸೋತಿದ್ದಕ್ಕೆ ಸಾಹೇಬ ಹೀಗೆ ಶಿಕ್ಷಿಸಿದವರಲ್ಲಿ ಬಾಕ್ಸರ್ ಮೊದಲಿಗನೇನಲ್ಲ. ಇಂಥ ಪ್ರಕರಣಗಳು ಅನೇಕ ನಡೆದಿದ್ದವು. ಹಾಗೆ ಸಾಹೇಬರಿಂದ ಮರಣದಂಡನೆಗೊಳಗಾದ ಕ್ರೀಡಾಳುಗಳ ಸಂಖ್ಯೆ 36. ಗೆಲ್ಲಲಿಲ್ಲ ಎಂಬ ಕಾರಣಕ್ಕಾಗಿ ಅಂಗವಿಕಲತೆಗೆ ಅಥವಾ ಹಿಂಸೆಗೆ ಒಳಗಾದವರಿಗಂತೂ ಲೆಕ್ಕವಿಲ್ಲ. ಹೀಗೆ ಕ್ರೀಡಾಳುಗಳಲ್ಲಿ ಭೀತಿಯನ್ನು ಬಿತ್ತುವ ಮೂಲಕವೇ ತನ್ನ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತರುತ್ತೇನೆ ಎಂಬ ಹುಂಬತನ ಹೊಂದಿದ್ದ ಆ ಸಾಹೇಬನ ಹೆಸರು ಉದೈ ಹುಸೇನ್. ಇರಾಕ್ ಕಂಡ ಸರ್ವಾಧಿಕಾರಿ ಸದ್ದಾಂ ಹುಸೇನ್ನ ಹಿರಿಯ ಮಗ.
ಚಿಕ್ಕಂದಿನಿಂದಲೂ ಹುಂಬತನದಿಂದಲೇ ಬೆಳೆದ ಉದೈ, ನಟೋರಿಯಸ್ ಆಗಿಬಿಟ್ಟ. ತನ್ನ 16ನೇ ವಯಸ್ಸಿನಲ್ಲೇ ತುಂಬಿದ ಪಾರ್ಟಿಯೊಂದರಲ್ಲಿ ತನ್ನ ತಂದೆಯ ಆಪ್ತ ಸೇವಕನೊಬ್ಬನನ್ನು ಕೊಂದ ಈತ ಅಲ್ಲಿಂದಲೇ ತನ್ನ ಸ್ಯಾಡಿಸ್ಟ್ ಮನಸ್ಥಿತಿಯನ್ನು ಜಗಜ್ಜಾಹೀರು ಮಾಡಿದ್ದ. ಇದೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇರಾಕ್ ಕಾನೂನಿನಂತೆ ಗಡೀಪಾರು ಆದೇಶ ಪಡೆದು ಸ್ವಿಡ್ಜರ್ಲೆಂಡ್ಗೆ ಪಲಾಯನ ಮಾಡಿದ್ದ. ಅದು 80ರ ದಶಕ. ಇತ್ತ ಮಗನನ್ನು ಕ್ಷಮಿಸಿದ ಸದ್ದಾಂ, ದೇಶದ ಕಾನೂನನ್ನೇ ಸಡಿಲಗೊಳಿಸಿ, ಮಗನನ್ನು ಸ್ವದೇಶಕ್ಕೆ ವಾಪಸ್ ಕರೆಸಿಕೊಂಡ. ಅಷ್ಟರಲ್ಲಾಗಲೇ ಇರಾನ್ ಹಾಗೂ ಇರಾಕ್ ಮಧ್ಯೆ ಯುದ್ಧ ಆರಂಭವಾಗಿತ್ತು. ಎಲ್ಲೆಡೆ ಪ್ರಕ್ಷುಬ್ದ ವಾತಾವರಣವಿತ್ತು. ಯುವಕರನ್ನು ದೇಶದ ಹೆಸರಿನಲ್ಲಿ ಒಗ್ಗೂಡಿಸಬೇಕಿತ್ತು. ಆದರೆ, ಅದು ಸುಲಭದ ಮಾತಾಗಿರಲಿಲ್ಲ. ಇರಾಕಿ ಯುವಕರು ಅಂದಿನ ದಿನಗಳಲ್ಲಿ ಕ್ರೀಡಾಕ್ಷೇತ್ರದಲ್ಲಿ ಹೆಚ್ಚಿನ ಒಲವು ತೋರುತ್ತಿದ್ದರು. ಕ್ರೀಡೆಗಳ ಮೂಲಕವೇ ಇರಾಕಿ ಯುವಕರನ್ನು ಒಗ್ಗೂಡಿಸಲು ಬಯಸಿದ ಸದ್ದಾಂ, ದೇಶದ ಕ್ರೀಡಾವಲಯವನ್ನು ನಿಯಂತ್ರಿಸುತ್ತಿದ್ದ ಇರಾಕಿ ಒಲಿಂಪಿಕ್ಸ್ ಸಂಸ್ಥೆಗೆ ಹೆಚ್ಚಿನ ಸ್ವಾಯತ್ತತೆ ಕೊಟ್ಟು, ಆ ಸಂಸ್ಥೆಗೆ ಮಗನನ್ನು ಅಧ್ಯಕ್ಷರನ್ನಾಗಿ ಕೂರಿಸಿದ. 1884ರಲ್ಲಿ ಒಲಿಂಪಿಕ್ಸ್ ಸಂಸ್ಥೆಯ ಅಧಿಕಾರ ಪಡೆದ ಉದೈಗೆ ಆಗಿನ್ನೂ ಕೇವಲ 20 ವರ್ಷ.
ಅದೇ ಸದ್ದಾಂ ಮಾಡಿದ ದೊಡ್ಡ ತಪ್ಪು. ಹೀಗೆ, ತಂದೆಯಿಂದ ಇರಾಕ್ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷನಾದ ಉದೈ, ನಂತರ ಇರಾಕ್ ಫುಟ್ಬಾಲ್ ಸಂಸ್ಥೆಯನ್ನೂ ತನ್ನ ಕಪಿಮುಷ್ಠಿಗೆ ತಂದುಕೊಂಡ. ಅಲ್ಲಿಂದ ಶುರುವಾಯ್ತು ಇರಾಕ್ ಕ್ರೀಡಾಳುಗಳ ಗೋಳಿನ ಕಥೆ. ಪ್ರತಿಯೊಬ್ಬ ಕ್ರೀಡಾಳಿನ ಮೇಲೂ ಒತ್ತಡ ಹೇರಲು ಶುರು ಮಾಡಿದ. ಮುಖ್ಯವಾದ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಗೆಲ್ಲಲೇಬೇಕು ಎಂಬ ಒತ್ತಡ ಹೇರುತ್ತಿದ್ದ. ಫಲಿತಾಂಶ ತರದ ಕ್ರೀಡಾಳುಗಳನ್ನು ಹಿಂಸಿಸುತ್ತಿದ್ದ ಅಥವಾ ಅವರನ್ನು ಮುಗಿಸಿಬಿಡುತ್ತಿದ್ದ. ಹೀಗೆ ಆತನ ಕ್ರೂರ ಮನಸ್ಥಿತಿಗೆ ಸಿಕ್ಕು ಸತ್ತ ಅಥ್ಲೀಟ್ಗಳ ಸಂಖ್ಯೆ ಸುಮಾರು 36 ಎಂದು ಮಾಧ್ಯಮಗಳು ಹೇಳಿವೆ. ಹಿಂಸೆಗೊಳಗಾದವರಿಗಂತೂ ಲೆಕ್ಕವಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾಕ್ ಸೋತರೆ, ಅದು ನಾನು ಸೋತಂತೆ ಎಂದು ಅಬ್ಬರಿಸುತ್ತಿದ್ದ ಉದೈ, ಪಂದ್ಯಾವಳಿಗಳಲ್ಲಿ ಸೋಲುತ್ತಿದ್ದ ಅಥ್ಲೀಟ್ಗಳನ್ನು ಅಂಗವಿಕಲರನ್ನಾಗಿಸುತ್ತಿದ್ದ. ಏಷ್ಯಾ ಕಪ್ ಪಂದ್ಯಾವಳಿಗೆ ಅರ್ಹತೆ ಪಡೆಯಲು ತನ್ನ ದೇಶದ ಫುಟ್ಬಾಲ್ ಆಟಗಾರರು ವಿಫಲರಾದಾಗ, ತಂಡದ ಪ್ರಮುಖ ಆಟಗಾರನ ಕಾಲು ಊನಗೊಳ್ಳುವಂತೆ ಛಡಿಯೇಟು ಕೊಡಿಸಿದ್ದ. ಪದಕ ಗೆಲ್ಲದವರ ಬೆನ್ನಿನ ಚರ್ಮ ಸುಲಿಸುತ್ತಿದ್ದ. ಹಿಂಸೆಯಿಂದ ಗಾಯಗೊಂಡವರನ್ನು ಚರಂಡಿಗೆ ತಳ್ಳಲಾಗುತ್ತಿತ್ತು. ಇದರಿಂದ, ಗಾಯಾಳುಗಳು ಸೋಂಕು ತಗುಲಿ ನರಳಿ ಸಾಯಬೇಕು ಎನ್ನುವುದು ಉದೈ ಆಜ್ಞೆಯಾಗಿತ್ತು. ಹೀಗೆ, ನಾನಾ ರೀತಿಯ ಹಿಂಸೆ ನೀಡುತ್ತಿದ್ದರಿಂದ ಇಡೀ ದೇಶದ ಕ್ರೀಡೋತ್ಸಾಹವೇ ಉಡುಗಿ ಹೋಯ್ತು. ದೇಶದ ಕ್ರೀಡಾಕ್ಷೇತ್ರಕ್ಕೆ ಕಾಲಿಡುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಯಿತು. ಅದನ್ನು ಅಂಕಿ-ಅಂಶಗಳೇ ದೃಢೀಕರಿಸುತ್ತವೆ. 1980ರಲ್ಲಿ ನಡೆದಿದ್ದ ಸಿಡ್ನಿ ಬೇಸಿಗೆ ಒಲಿಂಪಿಕ್ಸ್ಗೆ ಇರಾಕ್ನಿಂದ 46 ಅಥ್ಲೀಟ್ಗಳು ಪಾಲ್ಗೊಂಡಿದ್ದರೆ, 2000ದ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದು ಕೇವಲ 4 ಮಂದಿ. ಅನಧಿಕೃತ ಅಂಕಿ-ಅಂಶಗಳ ಪ್ರಕಾರ, ಉದೈ ಕೊಂದ ಅಥ್ಲೀಟ್ಗಳ ಸಂಖ್ಯೆ ನಿಜಕ್ಕೂ 52!
ಕ್ರೀಡೆಯಾಗಲೀ, ಸಂಗೀತವಾಗಲೀ ಅಥವಾ ಇನ್ಯಾವುದೇ ಸೃಜನಶೀಲ ಕಲಾಪ್ರಾಕಾರ, ಯಾವುದೋ ಒತ್ತಡದಿಂದ ಬೆಳೆಯಲಾರವು. ಅವುಗಳಿಗೆ ಬೆಳೆಯುವ ವಾತಾವರಣವಿದ್ದಲ್ಲಿ ಬೆಳೆಯುತ್ತವೆ. ಇಡೀ ದೇಶದ ಕ್ರೀಡೋತ್ಸಾಹವೇ ಉಡುಗಿದರೆ ಆ ದೇಶ ಉದ್ಧಾರವಾದೀತಾದರೂ ಹೇಗೆ? ಇದು ಎಲ್ಲ ದೇಶಗಳ ಸರ್ವಾಧಿಕಾರಿಗಳಿಗೂ ಪಾಠ.
- ಚೇತನ್ ಓ.ಆರ್.
chethan.media@gmail.com