ದಾವಾ ಹೂಡಬಹುದು

Updated on: 

ಮುಮ್ತಾಜ್ ಬೇಗಂ, ಊರು ಬೇಡ
ಅಜ್ಜಿಗೆ ನನ್ನ ತಾಯಿ ಒಬ್ಬಳೇ ಮಗಳು. ನಮ್ಮ ತಾಯಿಗೆ ನಾಲ್ಕು ಜನ ಮಕ್ಕಳು. ನಾನು ಮತ್ತು ಮೂವರು ಗಂಡುಮಕ್ಕಳು. ತಾಯಿ ನನ್ನ ತಮ್ಮಂದಿರ ಹೆಸರಿಗೆ ಎಲ್ಲ ಆಸ್ತಿಯನ್ನೂ ಬರೆದು 2006ರಲ್ಲಿ ತೀರಿಹೋಗಿದ್ದಾಳೆ. ನನಗೆ ಆಸ್ತಿಯಲ್ಲಿ ಹಕ್ಕಿಲ್ಲವೇ?

- ಸುನ್ನಿ (ಹನಾಫಿ) ನಿಯಮದಂತೆ ನಿಮ್ಮ ತಾಯಿ ನಿಮ್ಮ ಒಪ್ಪಿಗೆಯಿಲ್ಲದೆ ತನ್ನ ಆಸ್ತಿಯಲ್ಲಿ 1/3 ಭಾಗ ಮಾತ್ರ ನಿಮ್ಮ ತಮ್ಮಂದಿರಿಗೆ ಬರೆಯಬಲ್ಲಳು. ಆದ್ದರಿಂದ ಉಳಿದ 2/3 ಭಾಗ ಆಸ್ತಿಯಲ್ಲಿ ನಿಮಗೆ 1/3 ಭಾಗ ಹಾಗೂ ನಿಮ್ಮ ತಮ್ಮಂದಿರಿಗೆ ಉಳಿದ 2/3 ಭಾಗ ಬರುತ್ತದೆ. ನೀವು ಈ ಬಗ್ಗೆ ನ್ಯಾಯಾಲಯದಲ್ಲಿ ದಾವಾ ಹೂಡಬಹುದು.

ಬಡ್ತಿಗೆ ನಿಮ್ಮ ಅರ್ಹತೆ ಮಾನದಂಡವಾಗುತ್ತದೆ
ಎನ್.ಎಸ್. ತುಮಕೂರು
ನಾನು ಕಾಲೇಜು ಶಿಕ್ಷಣ ಇಲಾಖೆಯಲ್ಲಿ 'ಡಿ' ಗ್ರೂಪ್ ನೌಕರ. 'ಸಿ' ಗ್ರೂಪ್ ದರ್ಜೆಯಲ್ಲಿ ಹುದ್ದೆ ಖಾಲಿಯಿಲ್ಲ ಎಂದು ಅವರು ತಿಳಿಸಿದ್ದಾರೆ. ಈಗ ನಾನು ತಿಂಗಳಲ್ಲಿ 15 ದಿನ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕು. ಅದು ನನಗೆ ಇಷ್ಟವಿಲ್ಲ. ನನಗೆ ಎಂಟು ವರ್ಷ ಸರ್ವೀಸ್ ಆಗಿದ್ದರೂ ಬಡ್ತಿ ಕೊಡುತ್ತಿಲ್ಲ. ಪರಿಹಾರವೇನು?
- 'ಡಿ' ಗ್ರೂಪ್ ನೌಕರರು ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುವುದು ನಿಮ್ಮ ಕರ್ತವ್ಯ. ಬಡ್ತಿಯು ನಿಮ್ಮ ಹಕ್ಕಲ್ಲ. ನಿಮ್ಮ ಕೆಳಗಿನವರಿಗೆ ಬಡ್ತಿ ನೀಡುವ ಮೊದಲು ನಿಮ್ಮ ಅರ್ಹತೆ ಪರಿಗಣಿಸಬೇಕು ಅಷ್ಟೇ.

ವ್ಯವಸ್ಥಾಪತ್ರದಲ್ಲಿರುವವರಿಗೆ ಮಾತ್ರ ಹಕ್ಕು
ಹೆಸರು, ಊರಿಲ್ಲ
ನನ್ನ ತಾಯಿಯ ತಾಯಿ ತನ್ನ ಆಸ್ತಿ ಎಲ್ಲವೂ ತನ್ನ ಕಾಲಾನಂತರ ತನ್ನ ಪುತ್ರ, ಪೌತ್ರರಿಗೆ ಸೇರಬೇಕೆಂದು ವ್ಯವಸ್ಥಾಪತ್ರ ಮಾಡಿ ಆ ಪತ್ರವನ್ನು ರಿಜಿಸ್ಟರ್ ಮಾಡಿಸಿದ್ದು, ಅದಕ್ಕೆ ಅವರ ಮಕ್ಕಳಿಂದ ನನ್ನ ತಾಯಿ ಮತ್ತು ಅವರ ಇಬ್ಬರು ಸಹೋದರಿಯರು ಸಹಿ ಹಾಕಿರುತ್ತಾರೆ. ಅಜ್ಜಿ 1991ರಲ್ಲಿ ಹಾಗೂ ತಾಯಿ 1982ರಲ್ಲಿ ಕಾಲವಾದರು. ಈಗ ಅಂದರೆ 1993ರಲ್ಲಿ ನಾವಿಬ್ಬರು ಸಹೋದರರು ಅಜ್ಜಿಯ ಆಸ್ತಿಯನ್ನು ಹಂಚಿಕೊಂಡಿದ್ದೇವೆ. ನಮ್ಮ ಸಹೋದರಿಯರು ತಮಗೂ ಅಜ್ಜಿಯ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ದಾವಾ ಹಾಕಿದ್ದಾರೆ. ಇದು ಸರಿಯೇ?
- ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ಇದರ ಕಲಂ 14ರ ಪ್ರಕಾರ ಒಬ್ಬ ಮಹಿಳೆಯ ಆಸ್ತಿಯು ಆಕೆಯ ಸ್ವಂತದ್ದಾಗಿದ್ದು ಅದನ್ನು ಅವರು ಯಾರಿಗೆ ಬೇಕಾದರೂ ಬರೆಯುವ ಪರಮಾಧಿಕಾರವಿದೆ. ಆದ್ದರಿಂದ ಅವರು ತಮ್ಮ ವ್ಯವಸ್ಥಾಪತ್ರದಲ್ಲಿ ಯಾರ್ಯಾರಿಗೆ ಬರೆದಿದ್ದಾರೋ ಅವರಿಗೆ ಮಾತ್ರ ಹಕ್ಕು ಬರುತ್ತದೆ.

 ಯಾವ ಪರಿಹಾರವೂ ದೊರೆಯುವುದಿಲ್ಲ
ಎಚ್.ಎನ್. ದೇವರಾಜ್, ಹುಲಿಬೆಲೆ, ಬಂಗಾರಪೇಟೆ ತಾ. ಕೋಲಾರ ಜಿಲ್ಲೆ
ನನ್ನ ತಂದೆಯ ತಂದೆಯವರು 1957ರಲ್ಲಿ ತಮ್ಮ ಆಸ್ತಿಯನ್ನು ತಮ್ಮ ಮೊದಲನೇ ಹಾಗೂ ಎರಡನೆ ಗಂಡುಮಕ್ಕಳ ಹೆಸರಿಗೆ ಬರೆದು ಕಾಲವಾದರು. ಅವರಿಬ್ಬರೂ 1967ರಲ್ಲಿ ಅದನ್ನು ಬೇರೆಯವರಿಗೆ ಮಾರಾಟ ಮಾಡಿದರು. ನಂತರ ಎರಡನೆಯವರ ಮಗ ದಾವಾ ಹಾಕಿ ಅದರಲ್ಲಿ ಎರಡು ಎಕರೆ ಜಮೀನು ಪಡೆದಿರುತ್ತಾನೆ. ಪ್ರಶ್ನೆ ಏನೆಂದರೆ, ನನ್ನ ತಂದೆ ಹಾಗೂ ಚಿಕ್ಕಪ್ಪನವರು ಆ ಮಾರಾಟ ಪತ್ರಕ್ಕೆ ಸಹಿ ಹಾಕಿರುವುದಿಲ್ಲ. ಈಗ ಮೊಮ್ಮಕ್ಕಳಾದ ನಮಗೆ ಆಸ್ತಿಯಲ್ಲಿ ಹಕ್ಕಿಲ್ಲವೇ?

- ನಿಮ್ಮ ತಾತನವರ ಆಸ್ತಿ ಸ್ವಯಾರ್ಜಿತವಾಗಿದ್ದರೆ ಅವರು ಇಬ್ಬರು ಮಕ್ಕಳಿಗೆ ಮಾತ್ರ ಬರೆದಿದ್ದಾರೆ. ಉಳಿದವರಿಗೆ ಅದರಲ್ಲಿ ಹಕ್ಕಿರುವುದಿಲ್ಲ. ಒಂದು ವೇಳೆ ಪಿತ್ರಾರ್ಜಿತವಾಗಿದ್ದರೆ ಆಗಲೇ ತಕರಾರು ಮಾಡಬೇಕಾಗಿತ್ತು. ಅಲ್ಲದೆ ಮೊದಲಿಬ್ಬರು ಮಕ್ಕಳು ಅದನ್ನು 1967ರಲ್ಲಿ ಮಾರಾಟ ಮಾಡಿದಾಗಲಾದರೂ ತಕರಾರು ಮಾಡಿ ನ್ಯಾಯಾಲಯಕ್ಕೆ ಹೋಗಬೇಕಾಗಿತ್ತು. ಈಗ ಆ ಜಮೀನು ಪರಭಾರೆಯಾಗಿ 46 ವರ್ಷಗಳೇ ಕಳೆದಿದ್ದು, ಲಿಮಿಟೇಷನ್ ಆಗಿಹೋಗಿರುತ್ತದೆ. ಎರಡನೆಯವರ ಮಗನ ಮಾತು ಬೇರೆ. ಆತನಿಗೆ ತನ್ನ ತಂದೆಗೆ ಬಂದ ಆಸ್ತಿ ಪಿತ್ರಾರ್ಜಿತವಾಗಿದ್ದು ಆತನಿಗೆ ಪಾಲಿದೆ. ಹೀಗಾಗಿ ನಿಮಗೆ ಯಾವ ಪರಿಹಾರವೂ ದೊರೆಯಲಾರದು.

-ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com