

ಕನ್ನಡಿಗೆ ಮುಖವೊಡ್ಡಲೂ ಇವನಿಗೆ ಮುಜುಗರ. ಮುಖ ಫುಟ್ಬಾಲಿನ ಅಗಲ. ಕಣ್ಣುಗಳು ನಾಲ್ಕಾಣೆಯಗಲ. ತನ್ನೀ ವಿರೂಪಕ್ಕೆ ಯಾರನ್ನು ಆರೋಪಿಸುವುದು? ಹುಟ್ಟಾ ಕಮ್ಯುನಿಸ್ಟು. ದೇವರ ವಿಳಾಸ ಇಟ್ಟುಕೊಂಡವನಲ್ಲ. ಕಣ್ಣ ಕಿಟಕಿಗೆ ಕೂಲಿಂಗ್ ಗ್ಲಾಸಿನ ಮುಚ್ಚಳ ಜಡಿದು, 'ನಾನೇ ಈ ಜಗತ್ತಿನ ಬಿಗ್ ಬ್ರದರ್' ಎಂಬರ್ಥದಲ್ಲಿ ಈತ ಅಬ್ಬರಿಸಿದಾಗ ನಮ್ಮ ಕಿವಿಗೂ ಚುಂಬಿಸಿದ ಪದ 'ಗಂಗ್ನಂ ಸ್ಟೈಲ್'. ಹಾಡಿನಲ್ಲಿ ಅದೇನು ಮಾತ್ರೆ ಬೆರೆಸಿದ್ದನೋ, ಇವನ ಪೋಸ್ಟರು ಕಂಡಲ್ಲೆಲ್ಲ ವಿಶ್ವದ ಲಲನೆಯರು ಲಿಪ್ಸ್ಟಿಕ್ ಮೆತ್ತಿಬಿಟ್ಟರು. ಯೂಟ್ಯೂಬ್ನ ಬೇಲಿ ಜಿಗಿದು ಮೊಬೈಲಲ್ಲಿ ಕುಣಿದ. ಬ್ಲೂಟೂಥ್ನಿಂದ ಹಾರುತ್ತಾ ದೇಶ ದೇಶ ತಲುಪಿದ, ವೀಸಾದ ಮಂಡೆಬಿಸಿಯಿಲ್ಲದೆ!
ಪಾರ್ಕ್ ಜೆ ಸ್ಯಾಂಗ್ ತನ್ನ ಹೆಸರನ್ನು 'ಪಿಎಸ್ವೈ' ಎಂದು ಪರಿಷ್ಕರಿಸಿಕೊಂಡು ಇಂದು ನಮ್ಮೆದುರು ನಲಿಯುತ್ತಿದ್ದಾನೆ. ಇವನು ಬರೆಯುವ ಕೆಲವು ಹಾಡುಗಳು ಕೊರಿಯನ್ನರಿಗೇ ಅರ್ಥವಾಗುವುದಿಲ್ಲವೆಂದ ಮೇಲೆ ಆ ಬಗ್ಗೆ ಕೊರೆದರೆ ಪಾಪ ಪ್ರಾಪ್ತಿ ಆದೀತು. ಆದರೆ, ಇವನನ್ನು ಕಂಡಾಗಲೆಲ್ಲ ಕೆಲವು ಶಂಕೆಗಳು ಪೀಡಿಸುತ್ತವೆ. ಪೋಲಿ ಸಾಹಿತ್ಯವನ್ನು ಆಲ್ಬಮ್ಮುಗಳಿಗೆ ತುರುಕುವ ಈತನಿಗೆ ಯೋಗರಾಜ್ ಭಟ್ಟರೇ ಪುರೋಹಿತಿಕೆ ಕಲಿಸಿಕೊಟ್ಟರೇನೋ! ಇವನು ಹೇಳುವ ವಯಸ್ಕರ ಜೋಕುಗಳನ್ನು ನೆನೆದರೆ ರಾಜು ಅನಂತಸ್ವಾಮಿ ದಕ್ಷಿಣ ಕೊರಿಯಾದಲ್ಲಿ ಬದುಕಿದ್ದಾರೇನೋ! ಈತನ ಕೊರಿಯೋಗ್ರಫಿ, ಕುಣಿತಗಳೆಲ್ಲ ಸರಿಸುಮಾರಾಗಿ ಪ್ರಭುದೇವನ ಹೆಜ್ಜೆಗಳ ಅಚ್ಚು.
ಹುಟ್ಟುವಾಗಲೇ ಕಿವಿಯಲ್ಲಿ ಹತ್ತಿ ಇಟ್ಟುಕೊಂಡಿರಬೇಕು ಈತ; ಯಾರ ಮಾತನ್ನೂ ಕೇಳುವವನಲ್ಲ್ಲ. 'ಪಿಎಸ್ವೈ ಇದ್ದಲ್ಲಿ ನಗುವೂ ನಗುತ್ತದೆ. ಪೋಲಿ ಜೋಕುಗಳನ್ನು ಹೇಳಲೆಂದೇ ಕ್ಲಾಸಿಗೆ ಬರುತ್ತಿದ್ದ. ಸಣ್ಣ ವಯಸ್ಸಿನಲ್ಲೇ ನನ್ನೆದೆಗೆ ಚಾಕ್ಪೀಸನ್ನು ಗುರಿಯಿಟ್ಟು ರೇಗಿಸಿದ್ದ' ಎಂದು ಸಂದರ್ಶನವೊಂದರಲ್ಲಿ ಇವನ ವೃತ್ತಾಂತ ಬಿಡಿಸಿಡುತ್ತಾರೆ ಲೇಡಿ ಟೀಚರೊಬ್ಬರು. ಕ್ಲಾಸೆನ್ನುವುದೇ ಇವನಿಗೆ ಬೋರಾಗಿತ್ತಂತೆ. ಅವರೇನು ನನಗೆ ಕಲಿಸುವುದೆನ್ನುವ ಧಿಮಾಕು ಬೇರೆ.
ತಂದೆ ಪಾರ್ಕ್ ವನ್ ಹೊ, ಒಂದು ಸಾಫ್ಟ್ವೇರ್ ಕಾರ್ಪೊರೇಶನ್ನಿನಲ್ಲಿ ಮ್ಯಾನೇಜರು. ಏಕೈಕ ಸುಪುತ್ರ ಈ ಕೊರಿಯಾದ ಕೆಳದರ್ಜೆಯ ಕಾಲೇಜುಗಳಲ್ಲಿ ಓದುವುದು ಬೇಡವೆಂದು ಅಮೆರಿಕದ ಬೊಸ್ಟಾನ್ ಯುನಿವರ್ಸಿಟಿಯಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ಗೆ ಈತನನ್ನು ಸೇರಿಸಿದ ಪಾರ್ಕ್. ಆ ವ್ಯವಹಾರ ಲೆಕ್ಕಗಳನ್ನು ಬಿಡಿಸುವ ಮುಖನಾ ಇವನದ್ದು? ಪ್ಯಾಕುಗಟ್ಟಲೆ ಸಿಗರೇಟು, ರಾತ್ರಿಯಿಡೀ ವೋಡ್ಕಾ ಹೊಡೆದು ಒಂದಷ್ಟು ದಿನ ತೂರಾಡಿದ. ಬಿಡುವಿದ್ದಾಗಲೆಲ್ಲ ಪೋಲಿ ಹಾಡು ಬರೆದ. ತೊದಲು ನಾಲಗೆಯಲ್ಲಿ ರಾಗವಾಗಿ ಹಾಡಲೆತ್ನಿಸಿದ. ಅಪ್ಪ ಓದಲು ಕಳುಹಿಸುತ್ತಿದ್ದ ದುಡ್ಡಿನಿಂದ ಗಿಟಾರು ಕೊಂಡ. ಸಂಗೀತ ಕಲಿಕೆಗೆ ಸಾಕಷ್ಟು ಸಾಮಾನು ತಂದ. ಒಂದು ಮ್ಯೂಸಿಕ್ ಅಕಾಡೆಮಿಗೂ ಸೇರಿದ. ಆದರೆ, ಅಲ್ಲೂ ಪಿಎಸ್ವೈ ಶಾಸ್ತ್ರಬದ್ಧವಾಗಿ ಕಲಿಯದೆ ತನ್ನದೇ ಸ್ವಂತ ರಚನೆ ಸೃಷ್ಟಿಸತೊಡಗಿದ. ತನ್ನ ಸಾಹಿತ್ಯಗಳಿಗೆ ಅಮೆರಿಕದಿಂದಲೇ ಆಡಿಯೋ ರಚಿಸಿ ಕೊರಿಯಾಕ್ಕೆ ಕಳುಹಿಸುತ್ತಿದ್ದ. ಅವುಗಳಲ್ಲಿ ಅನೇಕ ಹಾಡುಗಳು ಸುಸಂಸ್ಕೃತರು ಕೇಳಲೇಬಾರದ್ದಾಗಿದ್ದರಿಂದ ಗುಟ್ಟಾಗಿ ಹರಿದಾಡತೊಡಗಿದವು . ಪ್ರಮುಖ ಬಾರು, ಪಬ್ಬುಗಳು ಮುಗಿಬಿದ್ದು ಇವನ ಸಿಡಿಗಳ ಆಲಾಪನೆಗಿಳಿದವು . ಸಿಯೋಲ್ನ ಪ್ರಮುಖ ಸಿಡಿ ಕಂಪನಿ ಈತನಿಂದ ವಿಡಿಯೋ ಆಲ್ಬಂ ಮಾಡಿಸಲೇಬೇಕೆಂದು ಏರ್ ಟಿಕೆಟಿನ ಹಣ ಕಳುಹಿಸಿ, 'ದಕ್ಷಿಣ ಕೊರಿಯಾದಲ್ಲೇ ಬಂದು ನೆಲೆಸು' ಎಂದು ಆಮಂತ್ರಿಸಿತು. ಇವನು ಖುಷಿಯಲ್ಲೇ ಸ್ವದೇಶದ ಏರ್ಪೋರ್ಟಿನಲ್ಲಿಳಿದ. ಇವನ ಆಕರ್ಷಣೆಯಿಲ್ಲದ ಮುಖ ಕಂಡು ಅದು ತನ್ನ ನಿರ್ಧಾರ ಕೈಬಿಟ್ಟಿತು.
ಸಿಕ್ಕಸಿಕ್ಕಲ್ಲಿ ಸಿಗರೇಟು ಸೇದಿದ ಕಾರಣಕ್ಕೆ 25 ದಿನ ಜೈಲು ಸೇರಿದ ಪಿಎಸ್ವೈ. ಮಗನನ್ನು ಕಾಣಲು ಜೈಲಿಗೆ ತಂದೆ- ತಾಯಿ ಬಂದರು. ತಂದೆ ಅವನಿಗೆ ಶುಭಾಶಯ ಕೋರಿ, 'ನೋಡು ಸಿಗರೇಟು ತೊರೆಯಲು ನಿನಗಿದು ಸಕಾಲ' ಎಂದಷ್ಟೇ ಹೇಳಿದ. 'ನೀನು ಜೈಲಿನಿಂದ ಹೊರಬಂದರೆ ಇನ್ನೇನಾದರೂ ಸಮಸ್ಯೆ ಸೃಷ್ಟಿಸುತ್ತೀಯ' ಎಂದ ತಾಯಿ, ಜಾಮೀನು ಕೊಡಿಸದೆ ವಾಪಸಾದಳು.
ಜೈಲಿನಿಂದ ಹೊರಬಂದ ಮೇಲೆ 'Psy from the psycho world' ಎಂಬ ಆಲ್ಬಂ ಹೊರಬಿಟ್ಟ. ಅಲ್ಲಿನ ಅಶ್ಲೀಲ- ಮೊಂಡು ಸಾಹಿತ್ಯ, ವಿಲಕ್ಷಣ ಕುಣಿತ ಕಂಡ ಕೊರಿಯಾ ಸರ್ಕಾರ ಅದನ್ನು 'ಎಡೆಬಿಡಂಗಿ ಆಲ್ಬಂ' ಎಂದಿತು. ಆ ಕಟು ವಿಮರ್ಶೆಯನ್ನು ಇಂವ ಕಿವಿಗೇ ಹಾಕಿಕೊಳ್ಳಲಿಲ್ಲ. ಕೆಲವೇ ತಿಂಗಳಲ್ಲಿ 'Sa 2' ಎಂಬ ಇನ್ನೊಂದು ಆಲ್ಬಂ ಬಿಡುಗಡೆ ಮಾಡಿದ. 'ಇವನ ಗೀತೆಗಳು ಹದಿಹರೆಯದವರನ್ನು ಉದ್ರೇಕಿಸುತ್ತವೆ' ಎಂದು ಸರ್ಕಾರ ಅದನ್ನು ಬ್ಯಾನ್ ಮಾಡಿತು. ಆದರೆ, ಇವತ್ತಿಗೂ ಆ ಆಲ್ಬಂ ಕೊರಿಯಾದಲ್ಲಿ ಗುಪ್ತವಾಗಿ ಮಾರಾಟವಾಗುತ್ತಿದೆ.
2002ರಲ್ಲಿ ಸಿಯೋಲ್ನಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ಗೆ ಇವನ '3psy' ಆಲ್ಬಮ್ಮಿನ 'ಚಾಂಪಿಯನ್' ಹಾಡು ಆಯ್ಕೆಯಾಯಿತು. ಆದರೆ, 'ಅಮೆರಿಕವನ್ನಿಲ್ಲಿ ದ್ವೇಷಿಸಲಾಗಿದೆ' ಎಂಬ ಆರೋಪವೂ ಇದರೊಂದಿಗೆ ಕೇಳಿಬಂತು. ಪಿಎಸ್ವೈ ಇದನ್ನು ಸಮರ್ಥಿಸಿಕೊಂಡ. 'ಅಮೆರಿಕದ ಮಿಲಿಟರಿ ಟ್ರಕ್ಕು ಸಿಯೋಲ್ನಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಬಲಿತೆಗೆದುಕೊಂಡಿದ್ದು ನ್ಯಾಯವೇ?' ಎಂದು ಕೇಳಿದ. ಕೊರಿಯನ್ನರು ಬೆನ್ನಿಗಿದ್ದು ಬೆಂಬಲಿಸಿದರು.
ಅಪ್ಪ- ಅಮ್ಮನ ಬಳಿ ದುಡ್ಡಿದ್ದರೂ ಮಗನಿಗೆ ಕೊಡಲಿಲ್ಲ. ಸ್ನೇಹಿತರಿಂದ ಕೈ ಸಾಲವೂ ಸಿಗಲಿಲ್ಲ. 18-35 ವರ್ಷದೊಳಗಿನವರ ಕಡ್ಡಾಯ ಮಿಲಿಟರಿ ಸೇವೆ ಕಾಯ್ದೆ ಈತನ ತಲೆಮೇಲೆ ತೂಗುತ್ತಿತ್ತು. ಭದ್ರತಾ ಪಡೆಗೆ ಸೇರಿದರೆ ಹಾಡು ಗೀಚುವುದಕ್ಕೆ, ಡ್ಯಾನ್ಸು ಪ್ರಾಕ್ಟೀಸು ಮಾಡುವುದಕ್ಕೆ ಸಮಯವಿರುವುದಿಲ್ಲವೆಂದು ಸೈನ್ಯಕ್ಕೆ ಸಂಬಂಧಿಸಿದ ಸಾಫ್ಟ್ವೇರ್ ಕಂಪನಿಯಲ್ಲಿ ಟೆಕ್ನಿಕಲ್ ಎಕ್ಸ್ಪರ್ಟಾಗಿ ಕೆಲಸ ಮಾಡಲು ಬಯಸಿದ. ಆಡಳಿತ ಒಪ್ಪಿತು. ಅಲ್ಲೂ 'Sa Jib' ಎಂಬ ಆಲ್ಬಂ ಹೊರತಂದ. ಅದು ಭಾರಿ ಮನ್ನಣೆ ಗಿಟ್ಟಿಸಿತಾದರೂ ಸಹೋದ್ಯೋಗಿಗಳ ಕೋಪಕ್ಕೆ ಗುರಿಯಾಯಿತು. 'ಇದು ದೇಶಸೇವೆಯ ನಿರ್ಲಕ್ಷ್ಯ. ಸೈನಿಕನಿಗೆ ಮನರಂಜನೆ ಸೃಷ್ಟಿಗೆ ಅನುಮತಿ ನೀಡಬಾರದು' ಎಂದು ಕೋರ್ಟಿಗೆ ಹೋದರು. ಹೌದೆಂದಿತು ಕೋರ್ಟು. ಬೇರೆ ವಿಭಾಗದಲ್ಲಿ ಒಂದು ವರ್ಷ ಹೆಚ್ಚುವರಿ ಕೆಲಸ ಮಾಡುವ ಆದೇಶಕ್ಕೂ ತಲೆಬಾಗಿದ ಪಿಎಸ್ವೈ. ಒಟ್ಟಾರೆ ಇಂವ ಸೈನ್ಯದಿಂದ ಎರಡು ಬಾರಿಹೊರಬಿದ್ದವ.
ಕಳೆದವರ್ಷ ಹೊರಬಂದ 'ಒಪ್ಪನ್ ಗಂಗ್ನಂ ಸ್ಟೈಲ್' ಆಲ್ಬಮ್ಮಿನ ಯಶಸ್ಸನ್ನು ಮಾತ್ರ ಯಾರಿಂದಲೂ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಪಿಎಸ್ವೈ ಅಸಾಧಾರಣ ಎನಿಸಿಕೊಂಡ. ಹಲವು ಗಿನ್ನೆಸ್ ದಾಖಲೆಗಳಿಗೆ ಹೆಸರಾದ. ಯೂಟ್ಯೂಬ್ನಲ್ಲಿ ರಾತ್ರೋರಾತ್ರಿ ಕೋಟ್ಯಂತರ ವೀಕ್ಷಕರನ್ನು ಪಡೆದು, ಸಾಕಷ್ಟು ಹಣ ಗಳಿಸಿಕೊಂಡ. ಆ ದಿನ ಈತನಿಗೆ ಹಲವರು ಟ್ವೀಟ್ ಮಾಡಿದಾಗ ಜೋಕು ಮಾಡುತ್ತಿದ್ದಾರೆ ಎನ್ನಿಸಿತಂತೆ. ನಂತರ ವಿಶ್ವದ ಖ್ಯಾತ ಪಾಪ್ ತಾರೆಯರು ಟ್ವೀಟಿಸಿದಾಗ ಇವನಿಗೆ ಇದೇನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲವಂತೆ.
ಶುದ್ಧ ಪೋಲಿ ಹೌದಾದರೂ ಈತ ಯಾವತ್ತೂ ಇನ್ನೊಬ್ಬಳ ಹಿಂದೆ ಹೋದವನಲ್ಲ. ಯೂ ಹೈ ಯೋನ್ಳನ್ನು ಮೂರೂವರೆ ವರುಷ ಪ್ರೀತಿಸಿ ಮದುವೆಯಾದ. ಇಬ್ಬರು ಅವಳಿ ಹೆಣ್ಣುಮಕ್ಕಳು ಹುಟ್ಟಿದರು. ಹೆಂಡತಿಯೆದುರು ಈಗಲೂ 'ವೋಡ್ಕಾ ನನ್ನ ಗರ್ಲ್ಫ್ರೆಂಡ್' ಎಂದು ರೇಗಿಸುತ್ತಾನೆ. ಉಸಿರುಗಟ್ಟುವ ಹಾಡಿನ ಮಧ್ಯ ಆಕ್ಸಿಜನ್ ಟ್ಯಾಂಕನ್ನು ಖಾಲಿ ಮಾಡುತ್ತಾ ಬೆರಗು ಹುಟ್ಟಿಸಿ, ಭಯವನ್ನೂ ಸೃಷ್ಟಿಸುತ್ತಾನೆ. ವಿಪರೀತ ಸ್ಟಂಟುಗಳಿಂದ ಮಂಡಿನೋವಾದಾಗಲೆಲ್ಲ ಆ್ಯಕ್ಯುಪಂಕ್ಚರಿನ ಸೂಜಿಗಳಲ್ಲಿ ಡ್ರಗ್ಸನ್ನು ಬೆರೆಸಿ ಚುಚ್ಚಿಕೊಂಡು ವಿರಮಿಸುತ್ತಾನೆ.
'ಸಂತೋಷವಾದಾಗಲೂ ಕುಡಿಯುತ್ತೇನೆ. ದುಃಖವಾದಾಗಲೂ ಕುಡಿಯುತ್ತೇನೆ. ಮಳೆ ಇದ್ದರೂ ಕುಡಿಯುತ್ತೇನೆ. ಸುಡುವ ಬಿಸಿಲಿದ್ದರೂ ಕುಡಿಯುತ್ತೇನೆ. ಯಾವಾಗ ಕುಡಿಯುವುದಿಲ್ಲವೆಂದರೆ, ಕುಡಿದು ತಲೆಹಿಡಿದುಕೊಂಡಾಗ!' ಎನ್ನುವ ಪಿಎಸ್ವೈ ಹಾಗೆಯೇ ಪೋಲಿ ಜೋಕನ್ನೂ ಹೇಳಿದ; 'ನನಗೆ ಬಾಟಲಿ ಖಾಲಿಮಾಡುವುದೆಂದರೆ, ಹುಡುಗಿಯನ್ನು ವಿವಸ್ತ್ರಗೊಳಿಸಿದಂತೆ'!
ಉತ್ತರ ಕೊರಿಯಾ ಯುದ್ಧ ಘೋಷಿಸದೆಯೂ ಪಿಎಸ್ವೈ 'ಗುಂಡಿಗೆ' ಬಲಿಯಾಗುತ್ತಿದ್ದಾನೆ! ದಕ್ಷಿಣ ಕೊರಿಯಾ ಮಾತ್ರ ಸುಮ್ಮನಿದೆ!
- ಕೀರ್ತಿ
kolgarkeerthi @gmail.com