ಮಕ್ಕಳ ಕವಿತೆಗಳನ್ನು ರಚಿಸುವುದು ಅವನ್ನು ಓದಿದಷ್ಟು ಸುಲಭವಲ್ಲ. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂಥ ಭಾಷೆ, ಪ್ರಾಸ ಮುಖ್ಯ. ಜತೆಗೆ ಅವರು ನಿತ್ಯ ನೋಡುವ, ಕೇಳುವ, ಅನುಭವಿಸುವ ಘಟನೆಗಳನ್ನೇ ವಸ್ತುವಾಗಿಟ್ಟುಕೊಳ್ಳಬೇಕು. 'ಬಾಪು ಪಾಪು' ಕವನ ಸಂಕಲನದಲ್ಲಿ ಇಂಥ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಅಕ್ಬರ್ ಸಿ.ಕಾಲಿಮಿರ್ಚಿ. ಇಲ್ಲಿ 53 ಕವಿತೆಗಳಿವೆ. ಅದಕ್ಕೆ ಪೂರಕವಾಗಿ ಬದ್ರಿನಾಥ ಪುರೋಹಿತ ಅವರ ಚೆಂದದ ರೇಖಾಚಿತ್ರಗಳಿವೆ. ಶಿಶು ಸಾಹಿತಿ ಪ್ರೊ.ರಾಜಶೇಖರ ಕಕ್ಕುಂದಾ ಮುನ್ನುಡಿಯಲ್ಲಿ ಹೇಳಿರುವಂತೆ, 'ಮಕ್ಕಳ ಪರೀಕ್ಷೆಯಲ್ಲಿ ಕಾಲಿಮಿರ್ಚಿ ಅವರು ಪಾಸಾಗುವುದು ಖಂಡಿತ'. ಕೊಪ್ಪಳ ಜಿಲ್ಲೆ ಭಾಗ್ಯನಗರ ಮಂಜುನಾಥ ಬಡಾವಣೆಯ ಕನ್ನಡ ಮೈತ್ರಿ ಪ್ರಕಾಶನ (ಮೊ: 9731327829) ಈ ಸಂಕಲನ ಪ್ರಕಟಿಸಿದೆ. ಬೆಲೆ ರು.50.