ದಾನಶೂರ ಶಿಬಿ ಚಕ್ರವರ್ತಿ

ಶಿಬಿ ಚಕ್ರವರ್ತಿ ದಾನ-ಧರ್ಮಗಳಲ್ಲಿ ಎತ್ತಿದ ಕೈ. ಕರ್ಣನಷ್ಟೇ ಖ್ಯಾತ. ರಾಜ್ಯದ ಜನತೆ...
ದಾನಶೂರ ಶಿಬಿ ಚಕ್ರವರ್ತಿ
Updated on: 

ಶಿಬಿ ಚಕ್ರವರ್ತಿ ದಾನ-ಧರ್ಮಗಳಲ್ಲಿ ಎತ್ತಿದ ಕೈ. ಕರ್ಣನಷ್ಟೇ ಖ್ಯಾತ. ರಾಜ್ಯದ ಜನತೆ ಇವನ ಆಡಳಿತದಲ್ಲಿ ಸುಖ ಶಾಂತಿಯಿಂದ ಇದ್ದರು. ಇವನ ಜನಪ್ರಿಯತೆಯನ್ನು ಕಂಡು ಸಹಿಸದ ದೇವೇಂದ್ರ ಹಾಗೂ ಅಗ್ನಿದೇವ ಇವನನ್ನು ಪರೀಕ್ಷಿಸಲು ನಿರ್ಧರಿಸಿದರು.
ದೇವೇಂದ್ರ ಗಿಡುಗನಾಗಿ, ಅಗ್ನಿದೇವ ಪಾರಿವಾಳದ ರೂಪ ಧರಿಸಿ ಶಿಬಿ ಚಕ್ರವರ್ತಿಯ ರಾಜ್ಯಕ್ಕೆ ಬಂದರು. ಗಿಡುಗವು ಪಾರಿವಾಳವನ್ನು ಬೆನ್ನಟ್ಟಿತು. ಪಾರಿವಾಳ ಹಾರುತ್ತಾ, ಹಾರುತ್ತಾ ಶಿಬಿ ರಾಜನ ಆಸ್ಥಾನಕ್ಕೆ ಬಂದು 'ಪ್ರಭು ಕಾಪಾಡು....' ಎಂದು ದೈನ್ಯದಿಂದ ಬೇಡಲಾರಂಭಿಸಿತು.
ಸಕಲ ಜೀವರಕ್ಷಕನೆನಿಸಿದ್ದ ಶಿಬಿ ಪಾರಿವಾಳವನ್ನು ಕೈಯಲ್ಲಿ ಹಿಡಿದು ರಕ್ಷಿಸುವುದಾಗಿ ಅಭಯ ನೀಡಿದ. ಮರುಕ್ಷಣ ಧಾವಿಸಿ ಬಂದ ಗಿಡುಗ, 'ಮಹಾರಾಜ, ಈ ಪಾರಿವಾಳ ನನ್ನ ಆಹಾರ. ನಾನು ಮೂರು ದಿನಗಳಿಂದ ಹಸಿದಿದ್ದೇನೆ. ಇದನ್ನು ತಿನ್ನದಿದ್ದರೆ ನಾನು ಸಾಯುತ್ತೇನೆ. ಆ ಪಾರಿವಾಳವನ್ನು ಇತ್ತ ತಳ್ಳು' ಎಂದಿತು. ರಾಜನು 'ನನ್ನನ್ನೇ ನಂಬಿ ಬಂದ ಪಾರಿವಾಳವನ್ನು ಕೊಡಲು ಸಾಧ್ಯವಿಲ್ಲ. ನಿನಗೆ ಬೇಕಾದರೆ ಬೇರೆ ಮಾಂಸವನ್ನು ಕೊಡುತ್ತೇನೆ' ಎಂದು ಹೇಳಿದ.
ಇದನ್ನೇ ಕಾಯುತ್ತಿದ್ದ ಗಿಡುಗ 'ಮಹಾರಾಜ, ಬೇರೆ ಮಾಂಸ ಕೊಡುವುದಾದರೆ ಈ ಪಾರಿವಾಳದ ತೂಕದಷ್ಟೇ ನಿನ್ನ ದೇಹದ ಮಾಂಸವನ್ನು ಕೊಡು' ಎಂದಿತು.
ಒಪ್ಪಿದ ರಾಜ ಒಂದು ದೊಡ್ಡ ತಕ್ಕಡಿಯನ್ನು ತರಿಸಿ ಒಂದು ಪರಡಿಯಲ್ಲಿ ಪಾರಿವಾಳವನ್ನಿರಿಸಿ ಇನ್ನೊಂದರಲ್ಲಿ ತನ್ನ ದೇಹದ ಸ್ವಲ್ಪಸ್ವಲ್ಪವೇ ಮಾಂಸವನ್ನು ಕತ್ತರಿಸಿ ಹಾಕಲಾರಂಭಿಸಿದ.
ಏನಾಶ್ಚರ್ಯ! ಎಷ್ಟೇ ಮಾಂಸ ಹಾಕಿದರೂ ಪಾರಿವಾಳದ ತೂಕಕ್ಕೆ ಸಮನಾಗುತ್ತಿಲ್ಲ. ಅಚ್ಚರಿಗೊಂಡ ರಾಜ ಕೊನೆಗೆ ತಾನೇ ಪರಡಿಯಲ್ಲಿ ಕುಳಿತುಬಿಟ್ಟ. ತಕ್ಷಣ ಇಂದ್ರ ಮತ್ತು ಅಗ್ನಿ ದೇವರು ನಿಜರೂಪ ತಳೆದು 'ಮಹಾರಾಜ ನಿನ್ನ ಬಗ್ಗೆ ಕೇಳಿದ್ದೆವು. ಇಂದು ಕಣ್ಣಾರೆ ಕಂಡೆವು. ನಿನಗೆ ಮೊದಲಿನ ದೇಹ ಲಭಿಸಲಿ. ನಿನ್ನ ದಾನಶೀಲತೆ ಜಗದ್ವಿಖ್ಯಾತವಾಗಲಿ' ಎಂದು ಹರಸಿ ಅದೃಶ್ಯರಾದರು.

- ಕೆ. ಶ್ರೀನಿವಾಸರಾವ್, ಹರಪನಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com