

ಅಂದೊಂದು ಕಾಲವಿತ್ತು ಮಗು ಬೆಳೆಯುತ್ತ ಹೋದಂತೆ ಮೆದುಳೂ ಬೆಳೆಯುತ್ತದೆ ಎಂದು ಎಲ್ಲರೂ ಭದ್ರವಾಗಿ ನಂಬಿದ್ದರು. ಈಗ ವಿಜ್ಞಾನ ತೆರೆದಿಟ್ಟ ಸತ್ಯ ಆ ನಂಬಿಕೆಯನ್ನು ಬುಡಮೇಲು ಮಾಡಿದೆ. ಗರ್ಭಧಾರಣೆಯ ಕ್ಷಣದಿಂದಲೇ ಮಗುವಿನ ಮೆದುಳಿನ ನರಕೋಶಗಳು ಉಳಿದೆಲ್ಲ ನರಕೋಶಗಳಿಗಿಂತ ವೇಗವಾಗಿ ವೃದ್ಧಿಯಾಗುತ್ತವೆ ಮತ್ತು ಅವನ್ನು ಉತ್ತೇಜಿಸಿದಷ್ಟೂ ಹೆಚ್ಚು ಚುರುಕಾಗುತ್ತವೆ ಎನ್ನುತ್ತವೆ ಸಂಶೋಧನೆಗಳು. ಹುಟ್ಟಿನ ನಂತರ ಮೂರು ವರ್ಷಗಳ ವರೆಗೆ ಮೆದುಳಿನ ಬೆಳವಣಿಗೆ ತೀವ್ರಗತಿಯಲ್ಲಿರುತ್ತದೆ. ಹುಟ್ಟಿದಾಗ ಮಗುವಿನ ಮೆದುಳಿನ ತೂಕ ಪ್ರೌಢವಯಸ್ಕರ ಮೆದುಳಿನ ಶೇ.25, ಒಂದೇ ವರ್ಷಕ್ಕೆ ಶೇ.50, ಎರಡನೇ ವರ್ಷದ ಹೊತ್ತಿಗೆ ಶೇ.75 ಮತ್ತು ಮೂರು ವರ್ಷದ ಹೊತ್ತಿಗೆ ಶೇ. 90 ಬೆಳೆದಿರುತ್ತದೆ. ವಯಸ್ಕರಲ್ಲಿರುವ ಸುಮಾರು ನೂರು ಬಿಲಿಯನ್ ನ್ಯೂರಾನ್‌ಗಳ ಪೈಕಿ ಬಹುತೇಕ ಈ ಬೆಳವಣಿಗೆಯ ಅವಧಿಯಲ್ಲಿ ರೂಪುಗೊಂಡವುಗಳೇ.
ನ್ಯೂರಾನ್‌ಗಳೆಂಬ ಮೆದುಳಿನಲ್ಲಿರುವ ಸಂಪರ್ಕ ಕೊಂಡಿಗಳು ಚಟುವಟಿಕೆಯಲ್ಲಿ ಪ್ರಮುಖ ಪಾತ್ರದಾರಿಗಳು. ಮೆದುಳಿಗೆ ಹೆಚ್ಚು ಪ್ರಚೋದನೆ ಸಿಕ್ಕಿದಷ್ಟೂ ಈ ನ್ಯೂರಾನ್‌ಗಳು ಒಂದಕ್ಕೊಂದು ಬೆಸೆದುಕೊಳ್ಳುವ ಸಿನ್ಯಾಪ್ಟಿಕ್ ಕನೆಕ್ಷನ್ ಎಂಬ ಪ್ರಕ್ರಿಯೆ ಹೆಚ್ಚುತ್ತ ಹೋಗುತ್ತದೆ. ಬಾಲ್ಯದಲ್ಲಿ ಹೆಚ್ಚು ಸಿನ್ಯಾಪ್ಟಿಕ್ ಕನೆಕ್ಷನ್‌ಗಳು ರೂಪುಗೊಂಡಷ್ಟೂ ಮಗು ಹೆಚ್ಚು ಚುರುಕಾಗುತ್ತದೆ ಮತ್ತು ಸೂಕ್ಷ್ಮಗ್ರಾಹಿಯಾಗುತ್ತದೆ. ಈ ಪ್ರಕ್ರಿಯೆ ಖಡ್ಗಕ್ಕೆ ಸಾಣೆ ಹಿಡಿವಂಥದ್ದು. ಬಳಸಿದಷ್ಟೂ ಬೆಳೆಯುವ ಇವು ಬಳಸದೇ ಇದ್ದಂತೆಲ್ಲ ನಶಿಸುತ್ತ ಹೋಗುತ್ತವೆ. ನರಕೋಶಗಳ ನಡುವಿನ ಸಂಪರ್ಕ ನಶಿಸಿ ಹೋಗುವ ಈ ಪ್ರಕ್ರಿಯೆಯೇ ಪ್ರೂನಿಂಗ್.
ನ್ಯೂರಾನ್‌ಗಳು ಯಾವುದೇ ವಯಸ್ಸಿನಲ್ಲಾದರೂ ಹೊಸದಾಗಿ ರೂಪುಗೊಳ್ಳಬಲ್ಲವು ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಿವೆಯಾದರೂ ಹಳೆಯ ನಶಿಸಿದ ನ್ಯೂರಾನ್‌ಗಳ ಜಾಗವನ್ನು ತುಂಬುವಷ್ಟೇ ಹೊಸದು ಹುಟ್ಟಿಕೊಳ್ಳುತ್ತವೆಯೆಂಬುದನ್ನೂ ಒತ್ತಿ ಹೇಳುತ್ತವೆ. ಎಳೆಯ ಮಕ್ಕಳು ಪ್ರೂನಿಂಗ್‌ನ ಹಂತವನ್ನು ದಾಟಿರುವುದಿಲ್ಲವಾದ ಕಾರಣ ಈ ವಯೋವಾನದಲ್ಲಿ ಗರಿಷ್ಠ ಕಲಿಕೆ ಸಾಧ್ಯ.
ಅಗಾಧ ಸಾಮರ್ಥ್ಯವಿರುವ ಮೆದುಳಿಗೆ ಅಷ್ಟೇ ಹಸಿವು ಮತ್ತು ಕೊಟ್ಟ ಅಷ್ಟೂ ಜ್ಞಾನ ಅರಗಿಸಿಕೊಂಡು ಉಳಿಸಿಕೊಂಡು, ಬೆಳೆಸಿಕೊಳ್ಳುವ ಶಕ್ತಿಯಿರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಪೂರ್ವ ಬಾಲ್ಯಾವಧಿಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಸುಂದರ ಮತ್ತು ಸರಿಯಾದ ರೀತಿಯಲ್ಲಿ ಪೋಷಿಸುವವರ ಅವಶ್ಯಕತೆ ಬಹಳ ಇದೆ.
ಅಪ್ಪ ಅಮ್ಮಂದಿರಿಬ್ಬರೂ ತುತ್ತಿನ ಚೀಲದೆಡೆ ಮುಖ ಮಾಡಬೇಕಾದ ಅನಿವಾರ್ಯತೆಯ ಇಂದಿನ ದಿನಗಳಲ್ಲಿ ಪೂರ್ವ ಬಾಲ್ಯಾವಧಿ ಶಿಕ್ಷಕರಿಗೆ ಬೇಡಿಕೆ ಹೆಚ್ಚಿದೆ. ಜತೆಗೇ ಈ ವ್ಯಾಪ್ತಿಯಲ್ಲಿ ಯಾರ್ಯಾರು ಬರುತ್ತಾರೆ ಮತ್ತು ಅವರಿಗಿರುವ ಅರ್ಹತೆಗಳೇನು ಎಂಬ ಮೌಲಿಕ ಪ್ರಶ್ನೆಯೊಂದು ಮೂಡುತ್ತದೆ. ಪ್ಲೇ ಹೋಂಗಳು, ನರ್ಸರಿ, ಚೈಲ್ಡ್ ಕೇರ್ ಸೆಂಟರ್, ಡೇ ಕೇರ್ ಸೆಂಟರ್, ಎಲ್‌ಕೆಜಿ, ಯುಕೆಜಿಗಳು ಪೂರ್ವ ಬಾಲ್ಯಾವಧಿ ವ್ಯಾಪ್ತಿಗೆ ಬರುವಂಥವುಗಳೇ. ಇವೆಲ್ಲವೂ ಮಗುವಿನ ಪಾಲನೆ ಪೋಷಣೆಯ ಗುರುತರ ಜವಾಬ್ದಾರಿಯನ್ನು ತನ್ಮೂಲಕ ಮಕ್ಕಳ ಬುದ್ಧಿ ಮತ್ತು ಕ್ರಿಯಾಶೀಲತೆ, ರಚನಾತ್ಮಕ ಪ್ರತಿಭೆಗಳ ಅನಾವರಣಕ್ಕೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕಿರುತ್ತದೆ. ಮಕ್ಕಳಿಗೆ ಸಾಮಾಜಿಕ ನಡವಳಿಕೆ, ಶಿಷ್ಟಾಚಾರಗಳನ್ನು ಕಲಿಸಿ ತಿದ್ದಿ ತೀಡುವ ಹೊಣೆಯನ್ನೂ ಹೊರಬೇಕಿರುತ್ತದೆ. ಇಷ್ಟೆಲ್ಲವನ್ನು ನಿರ್ವಹಿಸಬೇಕಾದಲ್ಲಿ ಅವಶ್ಯಕ ಜ್ಞಾನ, ಪೂರಕ ಶಿಕ್ಷಣ ಅವರಿಗಿರಬೇಕಾದ್ದು ಮುಖ್ಯ. ಸಮಯಕ್ಕೆ ಸರಿಯಾದ, ಬೆಳವಣಿಗೆಗೆ ಅನುಗುಣವಾಗುವ ಉತ್ತೇಜನೆಯ ಕೊರತೆಯಿಂದಾಗಿ ಮೆದುಳಿನ ಸಾಮರ್ಥ್ಯ ನಶಿಸುವುದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ ಎಂಬುದು ಇಂದಿನ ಬಹಳಷ್ಟು ಶಿಕ್ಷಣ ತಜ್ಞರ ಅಭಿಮತ.
ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಶ್ರೀಮತಿ ವಿಎಚ್‌ಡಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ (ಸರ್ಕಾರಿ ಕಾಲೇಜು). ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆ (Pre School Education and Management (PSEM)) ಎಂಬ ಸ್ನಾತಕೋತ್ತರ ಪದವಿಯನ್ನು ಎರಡು ವರ್ಷಗಳ ಹಿಂದೆಯೇ ಪರಿಚಯಿಸಿದೆ. ಮಾನವ ವಿಕಾಸ ವಿಭಾಗಕ್ಕೆ ಒಳಪಟ್ಟ ಈ ಪದವಿ ಸಾಮಾನ್ಯ ಮಕ್ಕಳೂ ಅಲ್ಲದೆ ವಿಕಲಚೇತನ ಮಕ್ಕಳ ಬಾಲ್ಯ ಶಿಕ್ಷಣವನ್ನೂ ಒಳಗೊಂಡಿದೆ. ಪೂರ್ವ ಬಾಲ್ಯಾವಧಿ ಶಿಕ್ಷಣ ಮತ್ತು ನಿರ್ವಹಣೆಯ ಸಮಗ್ರ ಪಠ್ಯಗಳನ್ನು ಒಳಗೊಂಡಿರುವುದಲ್ಲದೆ ಅವುಗಳ ಅಳವಡಿಕೆಗಾಗಿ ಮಕ್ಕಳ ಮಂದಿರ ಎಂಬ ಪ್ರಾಯೋಗಿಕ ಶಿಶುವಿಹಾರವನ್ನೂ ಹೊಂದಿದ್ದು ಕಲಿಕೆಗೆ ಸಹಕಾರಿಯಾಗಿದೆ.
ಯಾವುದೇ ಪದವೀಧರರು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಈ ಪದವಿ ಮುಗಿಸಿದವರಿಗೆ ಉದ್ಯೋಗಾವಕಾಶಗಳೂ ಬಹಳಷ್ಟಿವೆ. ಸಂಶೋಧನಾ ಕ್ಷೇತ್ರಗಳಲ್ಲಿ ಸಹಾಯಕರಾಗಿ, ಸಂಶೋಧಕರಾಗಿ, ಮಕ್ಕಳ ನಿಯತಕಾಲಿಕಗಳು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ, ಆಟಿಕೆ ತಯಾರಿಕಾ ಉದ್ಯಮಗಳಲ್ಲಿ, ವಾಕ್ ಶ್ರವಣಕೇಂದ್ರಗಳಲ್ಲಿ, ಮಕ್ಕಳ ಆಡಿಯೋ ವೀಡಿಯೋ ಕ್ಷೇತ್ರಗಳಲ್ಲಿ ಸಲಹೆಗಾರರಾಗಿ ಮತ್ತು ಉದ್ಯೋಗಿಗಳಾಗಿ ತೊಡಗಿಸಿಕೊಳ್ಳಬಹುದು. ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುವ ಸಂಸ್ಥೆಗಳಲ್ಲಿ, ಶಾಲೆಗಳಲ್ಲಿ ಆಪ್ತ ಸಹಾಯಕ ವೃತ್ತಿ
ಕೈಗೊಳ್ಳಬಹುದು. ಮಕ್ಕಳ ಕಲ್ಯಾಣ ಇಲಾಖೆಯಲ್ಲಿ, ನಿಪ್ಸಿಡ್ (Nipccd), ಐ.ಸಿ.ಡಿ.ಎಸ್ (ICDS) ಗಳಲ್ಲೂ ಉದ್ಯೋಗ ಕಂಡುಕೊಳ್ಳಬಹುದು. ಎಲ್ಲಕ್ಕೂ ಹೆಚ್ಚಾಗಿ ಹೊಸ ಹೊಸ ಪರಿಕಲ್ಪನೆಗಳಿಂದ ತಯಾರಿಸಲ್ಪಡುವ ಕಲಿಕಾ ಮಾದರಿಗಳನ್ನು ಅಳವಡಿಸಿ ಸ್ವ-ಉದ್ಯೋಗ ಮಾಡುವ ಅವಕಾಶ ಹೇರಳವಾಗಿದೆ.
ಹೊಸತನದಿಂದ ಕೂಡಿದ ಮತ್ತು ಹಲವು ಸವಾಲುಗಳಿಗೆ ನಮ್ಮನ್ನು ತಯಾರು ಮಾಡಬಲ್ಲ ಈ ಪದವಿ ತುಂಬ ಆಸಕ್ತಿಕರವಾಗಿದ್ದು ನನ್ನೊಳಗೆ ಸುಪ್ತವಾಗಿದ್ದ ಪ್ರತಿಭೆಯ ಅನಾವರಣ ಮಾಡಿದೆ. ಕೋರ್ಸ್ ಮುಗಿಸಿ ತಿಂಗಳೊಳಗೆ ಕೆಲಸ ದೊರಕಲು ಕಾರಣ ನಾನು ಈ ಪದವಿ ಮಾಡಿದ್ದೇ ಆಗಿದೆ ಎನ್ನುತ್ತಾರೆ ಈಗಿನ್ನೂ ಪದವಿ ಮುಗಿಸಿ ತನ್ನ ಆಸಕ್ತಿಯ ವೃತ್ತಿ ದೊರಕಿಸಿಕೊಂಡಿರುವ ದೀಕ್ಷಾ ಆರಾಧ್ಯ.
ಮಕ್ಕಳ ಬೇಕು ಬೇಡಗಳ ಪೂರೈಕೆಯ ಜತೆಗೇ ಮಕ್ಕಳ ಜತೆಗಿದ್ದು ಮಕ್ಕಳಿಗಾಗಿ ಕೆಲಸ ಮಾಡುವ ಆಸಕ್ತಿ, ಮಕ್ಕಳಿಗೆ ನವೀನತೆಯ ದಾರಿ ತೋರಿಸುವ ಜತೆಗೆ ಸ್ವಾವಲಂಬನೆ ಆತ್ಮಗೌರವ ಬೆಳೆಸುವ ಶ್ರದ್ಧೆ, ಮಗುವಿನ ಜತೆಮಗುವಾಗಿ ಬೆರೆಯುವ ಹಂಬಲ ಇದ್ದವರಿಗೆ ಪೂರ್ವ ಬಾಲ್ಯಾವಧಿ ಶಿಕ್ಷಣವೆಂಬ ಕ್ಷೇತ್ರ ಸುವರ್ಣಾವಕಾಶದ ಹೆಬ್ಬಾಗಿಲು.
- ವಿಜಯಲಕ್ಷ್ಮಿ.ಎಂ