ಕಂದಮ್ಮಗಳಿಗೆ ಮಕ್ಕಳ ಕಥೆ ಹೇಳುವ ಕಾಲ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಆದರೆ, ಮಕ್ಕಳ ಕಥೆಗಳನ್ನು ಓದಿ ತಿಳಿಯಲು 'ಅಭಿನವ' ಪ್ರಕಾಶನ, ಹಿರಿಯ ಲೇಖಕಿ ಶಾಂತಾ ನಾಗರಾಜ್ ಅವರ 'ಕಾಗಜ್ಜನ ನ್ಯಾಯ' ಕೃತಿಯನ್ನು ಹೊರತಂದಿದೆ. ಹಕ್ಕಿಗಳಿಗೂ ಮನಸ್ಸಿದೆ. ಅವು ಕೂಡ ಮನುಷ್ಯರಂತೆ ಯೋಚಿಸುತ್ತವೆ ಎಂಬ ಕಲ್ಪನೆಯನ್ನು ಈ ಪುಸ್ತಕದಲ್ಲಿ ಕಥೆಯಾಗಿಸಲಾಗಿದೆ. ಒಟ್ಟು ಹತ್ತು ಕಥೆಗಳಿವೆ. ಇಲ್ಲಿನ ಅನೇಕ ಕಥೆಗಳು ಪಂಚತಂತ್ರ ಕಥೆಗಳಿಗೆ ಪರ್ಯಾಯ ಎಂಬಂತಿದ್ದರೂ, ಹೊಸತನದ ಸ್ಪರ್ಶದಿಂದ ಬೆರಗುಗೊಳಿಸುತ್ತವೆ. ಕಲಾವಿದ ಪ.ಸ. ಕುಮಾರ್ ಚಿತ್ರಗಳು ಆಕರ್ಷಕವಾಗಿವೆ. ಬೆಲೆ: 50 ರು.