

ಆ ಕಾಡಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿತು. ಆಗ ಒಂದು ಟೊಳ್ಳುಮರದ ರೆಂಬೆಯ ಮೇಲೆ ಒಂದು ಕಾಗೆ ಕುಳಿತು ಗಾಢ ನಿದ್ದೆಯಲ್ಲಿತ್ತು. ಗಾಳಿಗೆ ಮರ ಆಗಲೋ ಈಗಲೋ ಬಿದ್ದು ಹೋಗುವುದರಲ್ಲಿತ್ತು. ಕಾಡಿನಲ್ಲಿ ಬರುತ್ತಿದ್ದ ದಾರಿಹೋಕನೊಬ್ಬ ಒಮ್ಮೆ ಆ ಕಾಗೆಯನ್ನೂ ಮತ್ತೊಮ್ಮೆ ಆ ಮರವನ್ನೂ ದಿಟ್ಟಿಸಿದ. ಖಂಡಿತ ಈ ಮರ ಇನ್ನೇನು ನೆಲ ಕಚ್ಚುವುದರಲ್ಲಿ ಅನುಮಾನವಿಲ್ಲ. ಅನ್ಯಾಯವಾಗಿ ಕಾಗೆ ಸಾಯುತ್ತದೆ. ಮಳೆ ಬೇರೆ ಸುರಿಯತೊಡಗಿದೆ. ಅದಕ್ಕೆ ಎಚ್ಚರಿಸೋಣವೆಂದುಕೊಂಡು, 'ಎಲವೋ ಕಾಗೆರಾಯನೆ, ನೀನು ಬಹಳ ವಿವೇಕಿ ಅಂತಲೇ ತಿಳಿದಿದ್ದೆ. ಕಲ್ಲುಗಳನ್ನು ಒಂದೊಂದಾಗಿ ಹೂಜಿಗೆ ಹಾಕಿ ಅದರ ತಳದಲ್ಲಿದ್ದ ನೀರನ್ನು ದಕ್ಕಿಸಿಕೊಂಡವನು ನೀನೇ ಅಂತ ಕೂಡ ಕೇಳಿದ್ದೆ. ಈಗ ಇದ್ದಕ್ಕಿದ್ದಂತೆ ಇಷ್ಟೊಂದು ದಡ್ಡನಾದೆಯಲ್ಲ? ಹಾರಿ ಎಲ್ಲಿಗಾದರೂ ಸುರಕ್ಷಿತ ಜಾಗಕ್ಕೆ ಹೋಗಬಾರದೆ?'
'ಅಯ್ಯಾ, ನೀವು ಮನುಷ್ಯರು! ನಿಮ್ಮನ್ನು ಬಿಟ್ಟರೆ ಯಾವ ಪ್ರಾಣಿ, ಪಕ್ಷಿಯಾಗಲಿ ಮೂರ್ಖರೆಂದೇ ನೀವು ತಿಳಿಯುತ್ತೀರಿ. ನಮಗೂ ಮೆದುಳಿದೆ ಎನ್ನುವ ವಿಚಾರ ಗೊತ್ತಿದೆ ತಾನೆ?'
'ಗೊತ್ತಪ್ಪಾ ಗೊತ್ತು... ನಿನ್ನನ್ನು ಅವಮಾನಿಸಲೆಂದು ನಾನು ಹಾಗೆ ಹೇಳಲಿಲ್ಲ ಮಾರಾಯ. ಎಲ್ಲಾ ಜೀವವೈವಿಧ್ಯಗಳ ಬಗ್ಗೆಯೂ ಮಾನವರಿಗೆ ಗೌರವವಿದೆ. ನಮ್ಮ ತಪ್ಪುಗಳು ನಮಗೆ ಅರಿವಾಗಿವೆ.'
'ಬಹಳ ಸಂತೋಷ. ಆದರೆ ನನಗೆ ಈ ಮರ ಬಿಟ್ಟು ಹಾರಿಹೋಗು ಅನ್ನಬಹುದೇ ನೀನು? ಈ ಮರ ನಾನು ಹುಟ್ಟಿದಾಗಿನಿಂದಲೂ ನನಗೆ ಆಶ್ರಯ ನೀಡಿದೆ ನಿನಗೆ ಗೊತ್ತಾ?'
'ಹಾಗಲ್ಲ ತಮ್ಮ, ಮರವೇ ಹೇಳ ಹೆಸರಿಲ್ಲವಾದಾಗ ಅದು ಹೇಗೆ ತಾನೆ ನಿನಗೆ ಆಶ್ರಯ ನೀಡೀತು, ಹೇಳು?'
'ಓ ಹಾಗೋ! ನನಗಿಂತಲೂ ನಿನಗೆ ಈ ಭಯ ಹೆಚ್ಚಿರುವಂತೆ ತೋರುತ್ತಿದೆಯಲ್ಲ?'
'ಸಾಕು ಈ ನಿನ್ನ ತಮಾಷೆ. ಇಂಥ ಕಷ್ಟದ ಸಮಯದಲ್ಲೂ ಈ ಬೋಳು ಮರದ ಮೇಲೇ ನಿನಗೆ ವಿಶ್ವಾಸವಿಟ್ಟು ಅದನ್ನೇ ನಂಬಿರುವೆಯಲ್ಲ, ಪಾಪ ಮರುಕವಾಗುತ್ತಿದೆ...'
'ಅಯ್ಯಾ ಮಿತ್ರ, ಯಾರು ನಿನಗೆ ಹೇಳಿದ್ದು, ನಾನು ಈ ಮರವನ್ನೇ ನಂಬಿರುವೆನೆಂದು? ನಾನು ನಂಬಿರುವುದು ಈ ಮರವನ್ನಲ್ಲ. ನನ್ನ ಈ ರೆಕ್ಕೆಗಳನ್ನು'.
'ಅಬ್ಬಾ, ಕಾಗೆರಾಯನೆ. ಮೆಚ್ಚಿದೆ ನಿನ್ನನ್ನು. ಚಿನ್ನದಂಥ ಮಾತಾಡಿದೆ. ನಿನ್ನ ಆತ್ಮವಿಶ್ವಾಸವನ್ನು ನಿನ್ನ ರೆಕ್ಕೆಗಳಿಗೆ ಹೋಲಿಸಿದೆ' ಭಲೇ ಭಲೇ ಎಂದು ಆ ದಾರಿಹೋಕ ಕಾಗೆಯನ್ನು ಮನಸಾರೆ ಹೊಗಳಿ. ಕಾಗೆಯ ಆತ್ಮವಿಶ್ವಾಸವನ್ನು ಮನಸಾರೆ ಪ್ರಶಂಸಿಸುತ್ತಾ ನಡೆದ.
- ಬಿಂಡಿಗನವಿಲೆ ಭಗವಾನ್