ಮನೆಯ ಪಕ್ಕದ
ಖಾಲಿ ಜಾಗದಲಿ ನಿಂತು
ಕನಸ ಕಂಡಳು ಅಪ್ಪಿ ಮನದೊಳಗೆ
ಹೂದೋಟದ ಕನಸು
ಕಂಡಳು ಮನದಲಿ
ಶುಚಿ ಮಾಡಿದಳು ಕ್ಷಣದೊಳಗೆ
ಚಿಕ್ಕ ಸಲಿಕೆಯ ಹಿಡಿದು
ಸಾವಕಾಶದಲಿ ನೆಲ ಅಗಿದು
ಮಣ್ಣ ಹದ ಮಾಡಿದಳು ದಿನದ ಒಳಗೆ
ಗೆಳತಿಯರ ಮನೆ ಮನೆಗೆ
ಇಲ್ಲಿಂದ ಅಲ್ಲಿಗೆ ತಿರು ತಿರುಗಿ
ತಂದಳು ಗಿಡ, ಬಳ್ಳಿಗಳನು ಅಲ್ಲಿಗೆ
ಅಂದ ಚಂದದ ಗಿಡಕೆ,
ಬಳ್ಳಿಯನು ನೆಡುವಾಕೆ,
ಕುಣಿಯ ತೆಗೆದಳು ಅಪ್ಪಿ ಒಪ್ಪುವ ಹಾಗೆ
ಗಿಡ ಬಳ್ಳಿ ನೆಟ್ಟಾಯ್ತು,
ನೀರು ಗೊಬ್ಬರ ಹಾಕಾಯ್ತು,
ಚಿಗುರು ಒಡೆಯಿತು ಎಲ್ಲ ವಾರದೊಳಗೆ
ದಿನ ದಿನವು ನೀರುಣಿಸಿ
ಮೇಲಿಂದ ಹನಿ ಹರಿಸಿ
ಸಮಯ ಕಳೆದಳು ಅಪ್ಪಿ ಹೂದೋಟದೊಳಗೆ
ವರುಷ ಉರುಳಿದ ಮೇಲೆ
ಹೂಗಳಾ ಲೀಲೆ
ಬಂತು ಪಾತರಗಿತ್ತಿ, ದುಂಬಿಗಳು ಬಳಿಗೆ
ಚಂದದಾ ಹೂದೋಟ
ಮುದವಾದ ಆ ನೋಟ
ಪರಿಮಳ ಬೀರುತ ನಿಂತಿತು ಊರಿನೊಳಗೆ
ಅಪ್ಪಿ ಜಾರಿ ಬಂದಳು ಕನಸಿನಿಂದ
ಗೆಳೆತಿಯರೊಡನೆ ಕೂಡಿ
ಕಂಡ ಕನಸ ನನಸ ಮಾಡಿದಳು ಚಿಟಿಗೆಯೊಳಗೆ
- ಬೀರಣ್ಣ ನಾಯಕ, ಮೊಗಟಾ