ಅಣೆಕಟ್ಟು

ಅಣೆಕಟ್ಟು

ಮುಂಗಾರು ಶುರುವಾದ ತಕ್ಷಣ ಪತ್ರಿಕೆಗಳಲ್ಲಿ ಒಂದು ಸುದ್ದಿ ಕಾಯಂ. ಅದು ಇಂದು ಈ ಅಣೆಕಟ್ಟಿಗೆ ಇಷ್ಟು ನೀರು ಬಂತು, ಆ ಅಣೆಕಟ್ಟೆ ಭರ್ತಿಯಾಗಲು ಇಂತಿಷ್ಟು ಅಡಿ ಬಾಕಿ ಇದೆ ಎಂದು. ಈ ವಾರ ಅಣೆಕಟ್ಟುಗಳ ಬಗ್ಗೆ ಸ್ವಲ್ಪ ತಿಳಿಯೋಣ, ಏನಂತೀರಾ?
ಅಣೆ ಎಂದರೆ ಅಡ್ಡಗಟ್ಟೆ ಎನ್ನುವ ಅರ್ಥವಿದೆ. ಅಣೆಕಟ್ಟೆ ಎಂದರೆ ನೀರಿನ ಪ್ರವಾಹಕ್ಕೆ ಅಡ್ಡವಾಗಿ ಹಾಕಿದ ಕಟ್ಟೆ. ಸಾಮಾನ್ಯವಾಗಿ ಅಣೆಕಟ್ಟೆ ನಿರ್ಮಾಣದ ಉದ್ದೇಶ ನದಿ ನೀರನ್ನು ಸಂಗ್ರಹಿಸಿ ಅದನ್ನು ನೀರಾವರಿ, ಕುಡಿಯುವ ನೀರು ಪೂರೈಕೆ, ವಿದ್ಯುತ್ ಉತ್ಪಾದನೆ ಹೀಗೆ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳುವುದು. ಅಣೆಕಟ್ಟೆ ತುಂಬಿದಾಗ ಅದರ ಕ್ರಸ್ಟ್‌ಗೇಟುಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತದೆ.
ಮೆಸೊಪೊಟೊಮಿಯಾ ಮತ್ತು ಮಧ್ಯ ಪ್ರಾಚ್ಯಗಳಲ್ಲಿ ಸಾವಿರಾರು ವರ್ಷ ಹಿಂದೆಯೇ ಅಣೆಕಟ್ಟುಗಳನ್ನು ನಿರ್ಮಿಸಿದ್ದರು. ಮೆಸೊಪೊಟೊಮಿಯಾದ ಟೈಗ್ರಿಸ್, ಯುಫ್ರೆಟಿಸ್ ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು ಎನ್ನುವುದು ಇತಿಹಾಸಕಾರರ ಅಭಿಪ್ರಾಯ. ಲಭ್ಯ ದಾಖಲೆಗಳ ಪ್ರಕಾರ, 3000 ವರ್ಷ ಹಿಂದೆ ನಿರ್ಮಿಸಿದ್ದು ಎನ್ನಲಾಗಿರುವ ಜೋರ್ಡಾನ್‌ನ ಜಾವಾ ಅಣೆಕಟ್ಟು ಜಗತ್ತಿನ ಅತ್ಯಂತ ಪುರಾತನ ಅಣೆಕಟ್ಟು ಎಂದು ಗುರುತಿಸಲಾಗಿದೆ.
ಭಾರತದ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರು ಅವರು 'ಅಣೆಕಟ್ಟುಗಳು ಆಧುನಿಕ ಭಾರತದ ನವ ದೇಗುಲಗಳು' ಎಂದು ಬಣ್ಣಿಸಿದ್ದರು. ಭಾರತದಲ್ಲಿ 2012ರ ಮಾಹಿತಿಯಂತೆ ಸುಮಾರು 3200 ಅಣೆಕಟ್ಟೆ, ಬ್ಯಾರೇಜ್‌ಗಳಿವೆ. ಸಟ್ಲೆಜ್ ನದಿಗೆ ಅಡ್ಡವಾಗಿ ನಿರ್ಮಿಸಿರುವ ಭಾಕ್ರಾ ಅಥವಾ ಗೋವಿಂದ ಸಾಗರ ಅಣೆಕಟ್ಟು ಸ್ವತಂತ್ರ ಭಾರತದ ಮೊದಲ ಅಣೆಕಟ್ಟು. 225.55 ಮೀಟರ್ ಎತ್ತರದ (518.25 ಮೀಟರ್ ಅಗಲ) ಇದು ದೇಶದ ಎರಡನೇ ಅತಿದೊಡ್ಡ ಅಣೆಕಟ್ಟು ಕೂಡ. 260 ಮೀಟರ್ ಎತ್ತರ, 575 ಮೀಟರ್ ಅಗಲದ ತೆಹ್ರಿ ಅಣೆಕಟ್ಟು ಮೊದಲ ದೊಡ್ಡ ಅಣೆಕಟ್ಟು. ಇದು ಉತ್ತರಾಖಂಡದಲ್ಲಿದ್ದು ಭಾಗೀರಥಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ.
ಕೆಆರ್‌ಎಸ್ ಎಂದು ಸಂಕ್ಷಿಪ್ತವಾಗಿ ಹೇಳಲಾಗುವ ಕೃಷ್ಣರಾಜಸಾಗರ ಕರ್ನಾಟಕದ ಮೊದಲ ಅಣೆಕಟ್ಟು. ಇದು ಸರ್ ಎಂ.ವಿಶ್ವೇಶ್ವರಯ್ಯ ಅವರ ಬುದ್ಧಿಶಕ್ತಿಯ ಪ್ರತಿಬಿಂಬ ಕೂಡ. ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಅಣೆಕಟ್ಟು 1932ರಲ್ಲಿ ಕಾರ್ಯಾರಂಭ ಮಾಡಿತು. ಇದರ ಎತ್ತರ 124.80 ಅಡಿ. ಅಗಲ 3.5 ಮೀಟರ್.  ಬಳ್ಳಾರಿ ಜಿಲ್ಲೆ ಹೊಸಪೇಟೆ ಬಳಿ ಕರ್ನಾಟಕ-ಆಂಧ್ರಪ್ರದೇಶ ಸರ್ಕಾರಗಳು ಜಂಟಿಯಾಗಿ ನಿರ್ಮಿಸಿರುವ ತುಂಗಭದ್ರಾ ಅಣೆಕಟ್ಟೆ ರಾಜ್ಯದ ಅತಿ ದೊಡ್ಡ ಅಣೆಕಟ್ಟೆ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 2441 ಮೀಟರ್ ಎತ್ತರ, 49.38 ಮೀಟರ್ ಅಗಲದ ಈ ಅಣೆಕಟ್ಟೆ 33 ಕ್ರೆಸ್ಟ್‌ಗೇಟ್‌ಗಳನ್ನು ಹೊಂದಿದೆ. ರಾಜ್ಯದಲ್ಲಿ 15 ಪ್ರಮುಖ ಅಣೆಕಟ್ಟೆಗಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com