ರಾಜನು ಮಂತ್ರಿಯೊಂದಿಗೆ ಕಾಡಿಗೆ ಬೇಟೆಗೆ ಹೋಗಿದ್ದನು. ಅಲ್ಲಿ ಅಕಸ್ಮಾತ್ ಎಡವಿಬಿದ್ದು ಗಾಯ ಮಾಡಿಕೊಂಡ. ಆಗ ಅವನ ಎಡಗಾಲಿನ ಬೆರಳೇ ಕತ್ತರಿಸಿಹೋಯಿತು. ಇದನ್ನು ನೋಡಿದ ಮಂತ್ರಿ, 'ಆದದ್ದೆಲ್ಲ ಒಳಿತೇ ಆಯಿತು' ಎಂದನು. ರಾಜನಿಗೆ ವಿಪರೀತ ಕೋಪ ಬಂತು. ಆ ಕೋಪದಲ್ಲಿ ತಾನೇನು ಮಾಡುತ್ತಿರುವೆನೆಂದು ತಿಳಿಯದೆ ಮಂತ್ರಿಯನ್ನು ಅಲ್ಲೇ ಇದ್ದ ಬಾವಿಗೆ ತಳ್ಳಿ, ಮುಂದೆ ನಡೆದ.
ಮಾರ್ಗಮಧ್ಯದಲ್ಲಿ ಕೆಲವು ಕಾಳಿ ಉಪಾಸಕರು ನರಬಲಿ ಕೊಡಬೇಕೆಂದು ಸೂಕ್ತ ವ್ಯಕ್ತಿಗಾಗಿ ಹುಡುಕುತ್ತಿದ್ದರು. ರಾಜನು ಒಬ್ಬನೆ ಅಲ್ಲಿ ಬರುತ್ತಿದ್ದರಿಂದ ಅವನ ಮೇಲೆ ಎರಗಿ, ಸೆರೆಹಿಡಿದರು ಅವರೆಲ್ಲ. ರಾಜನನ್ನು ಕಾಳಿಯ ಮುಂದೆ ನಿಲ್ಲಿಸಲಾಯಿತು. ಪುರೋಹಿತರನು ಬಂದು ಪರೀಕ್ಷೆ ನಡೆಸಿದರು. ರಾಜನ ಕಾಲ್ಬೆರಳು ಕತ್ತರಿಸಿ ಹೋಗಿರುವುದನ್ನು ಕಂಡು ಪುರೋಹಿತರು ಹೇಳಿದರು, 'ಇವನು ಬಲಿಗೆ ಅಯೋಗ್ಯ, ಇವನ ಬೆರಳು ಕತ್ತರಿಸಿ ಹೋಗಿದೆ. ಇವನನ್ನು ಬಿಟ್ಟು ಬಿಡಿ'. ಕಾಳಿಯ ಉಪಾಸಕರು ರಾಜನನ್ನು ಅಲ್ಲಿಂದ ಬಿಟ್ಟರು.
ಆಗ ಮಂತ್ರಿಯ ಮಾತು 'ಆದದ್ದೆಲ್ಲ ಒಳಿತೇ ಆಯಿತು' ಎಂಬುದು ನೆನಪಾಯಿತು ರಾಜನಿಗೆ. ಆತನನ್ನು ತಳ್ಳಿದ್ದ ಬಾವಿಯ ಹತ್ತಿರ ಬಂದ. ಅಲ್ಲಿ ಮಂತ್ರಿಯು ಒಂದು ಬಳ್ಳಿಯನ್ನು ಹಿಡಿದುಕೊಂಡು ನೇತಾಡುತ್ತಾ ದೇವರನ್ನು ಪ್ರಾರ್ಥಿಸುತ್ತಿದ್ದನು. ರಾಜನು ತಡ ಮಾಡದೇ ಅವನನ್ನು ಮೇಲಕ್ಕೆತ್ತಿದನು. ನಡೆದದ್ದನ್ನೆಲ್ಲ ವಿವರಿಸಿದನು. ಅಲ್ಲದೆ, ತಾನು ಕೋಪದಲ್ಲಿ ಮಾಡಿದ ತಪ್ಪಿಗಾಗಿ ಕ್ಷಮೆ ಯಾಚಿಸಿದನು. ಮಂತ್ರಿಯು ಯಾವುದೇ ಆವೇಶಕ್ಕೆ ಒಳಗಾಗದೇ ಸಮಾಧಾನದಿಂದ ಹೇಳಿದ, 'ಆದದ್ದೆಲ್ಲ ಒಳಿತೇ ಆಯಿತು'.
'ಹೇಗೆ?' ಎಂದು ರಾಜ ವಿಚಾರಿಸಿದಾಗ ಮಂತ್ರಿ ವಿವರಿಸಿದ; 'ಎಲೈ ರಾಜನೇ, ನಾನೂ ನಿನ್ನೊಡನೆ ಬಂದಿದ್ದರೆ ಆ ಕಾಳಿ ಉಪಾಸಕರು ನನ್ನ ದೇಹದಲ್ಲಿ ಯಾವ ಊನವೂ ಇಲ್ಲದಿರುವುದನ್ನು ಕಂಡು ನಿನ್ನ ಬದಲು ನನ್ನನ್ನು ಕಾಳಿಗೆ ಬಲಿ ಕೊಡುತ್ತಿದ್ದರು, ಇದರಿಂದ ಒಳಿತಾಯಿತಲ್ಲವೇ?'. ಈ ಮಾತನ್ನು ಕೇಳಿ ರಾಜನು ಮಂತ್ರಿಯ ಜಾಣ್ಮೆಯನ್ನು ಮೆಚ್ಚಿ ಕೊಂಡಾಡಿದನು.
- ಶಿವರಾಮ್ ಭಟ್ ಹತ್ತೊಕ್ಕಲು