

ಆ ಸರ್ಕಾರಿ ಶಾಲೆಯಲ್ಲಿ ಇಲ್ಲಿಯವರೆಗೆ 5ನೇ ತರಗತಿಯವರೆಗೆ ಮಾತ್ರ ಇತ್ತು. ಹೊಸದಾಗಿ 6ನೇ ತರಗತಿಯನ್ನು ಪ್ರಾರಂಭಿಸಲಾಯಿತು. ಅದಕ್ಕಾಗಿ ಹೊಸ ಕೊಠಡಿಯನ್ನು ಕಟ್ಟಿಸಿದ್ದಲ್ಲದೆ, ಶಿಕ್ಷಕಿಯೊಬ್ಬರನ್ನೂ ನಿಯೋಜಿಸಲಾಗಿತ್ತು. ಆದರೆ, 6ನೇ ಕ್ಲಾಸಿನ ಕೆಲವೇ ಪುಸ್ತಕಗಳು ಬಂದಿದ್ದವು. ಎಲ್ಲರಿಗೂ ಸಿಕ್ಕಿರಲಿಲ್ಲ. ಬಂದಂಥ ಪುಸ್ತಕಗಳನ್ನೇ 4 ವಿದ್ಯಾರ್ಥಿಗಳಿಗೊಂದರಂತೆ ನೀಡಲಾಗಿತ್ತು.
ಅದರಂತೆ ಹಾಸ್ಟೆಲಿನಲ್ಲಿದ್ದ ಕೋದಂಡ, ರವಿ, ಸಂದೇಶ ಮತ್ತು ದೀಪಕ್ ನಾಲ್ವರಿಗೂ ಸೇರಿ ನೀಡಿದರು. ಆ ಪುಸ್ತಕಗಳನ್ನು ಕೋದಂಡನೊಬ್ಬನೇ ಇಟ್ಟುಕೊಂಡ. ಪುಸ್ತಕ ಸಿಕ್ಕ ಸಂತೋಷದಲ್ಲಿ ಇಡೀ ಊರಿಗೆ ಕೇಳುವಂತೆ ಜೋರು ಓದತೊಡಗಿದ. ಇದರಿಂದಾಗಿ ಉಳಿದ ಮೂವರು ಸಹಪಾಟಿಗಳಿಗೆ ಹಿಂಸೆ. ಕೋದಂಡ ಬಲಾಢ್ಯನಾಗಿದ್ದರಿಂದ ಪುಸ್ತಕ ಕೇಳಲೂ ಅವರಿಗೆ ಭಯ. ಪುಸ್ತಕ ಕೊಡದಿದ್ದರೆ ಹೋಗಲಿ, ತಾವು ಕ್ಲಾಸಿನಲ್ಲಿ ಬರೆದುಕೊಂಡ ನೋಟ್ಸನ್ನಾದರೂ ಓದೋಣವೆಂದರೆ ಕೋದಂಡ ಅದಕ್ಕೂ ಅವಕಾಶ ಕೊಡುತ್ತಿರಲಿಲ್ಲ.
ಒಂದಿನ ರವಿ, ಸಂದೇಶ ಮತ್ತು ದೀಪಕ್ ಟೀಚರ್ ಬಳಿ ಈ ಬಗ್ಗೆ ದೂರು ನೀಡಿದರು. ಕೊನೆಗೆ ಟೀಚರೇ ಒಂದು ಉಪಾಯ ಸೂಚಿಸಿದರು.
ಆ ದಿನ ಕೋದಂಡ ರೂಮಿಗೆ ಬಂದವನೇ ಪುಸ್ತಕ ತೆರೆದು ಜೋರಾಗಿ ಓದತೊಡಗಿದ. ಕೂಡಲೇ ಉಳಿದ ಮೂವರೂ ಮುಸುಕೆಳೆದು ಮಲಗಿಬಿಟ್ಟರು. ದಿನಂಪ್ರತಿ ಇದೇ ರೀತಿಯಲ್ಲಿ ನಡೆಯುತ್ತಿತ್ತು. ಗೆಳೆಯರು ಮಲಗಿದರಲ್ಲ ಎಂದು ಕೋದಂಡ ಮತ್ತಷ್ಟು ಚೆನ್ನಾಗಿ ಓದುತ್ತಿದ್ದ.
ಈ ಬಾರಿ ಆ ಮೂವರಂತೂ ಪುಸ್ತಕ ಇಲ್ಲದ್ದರಿಂದ ಓದಲಿಲ್ಲ. ನಾನೊಬ್ಬನೇ ಪಾಸಾಗುವವನು ಎಂಬ ಅಹಂ ಕೋದಂಡನಲ್ಲಿತ್ತು. ಆದರೆ ಪರೀಕ್ಷೆಯ ಫಲಿತಾಂಶ ಬೇರೆಯೇ ಆಗಿತ್ತು. ರವಿ, ಸಂದೇಶ ಮತ್ತು ದೀಪಕರು ಪ್ರಥಮ ಶ್ರೇಣಿಯಲ್ಲಿ ಪಾಸು! ಕೋದಂಡ ಫೇಲು! ಆ ಅವಮಾನದಿಂದ ಕೋದಂಡ ಕುಗ್ಗಿ ಹೋದ. ಬಳಿಕ ಸ್ವತಃ ಶಿಕ್ಷಕಿಯೇ ಬಂದು ಸಮಾಧಾನ ಹೇಳಿದರು. 'ಕೋದಂಡಾ, ನೀನು ಜೋರಾಗಿ ಓದುವುದರಿಂದ ಈ ಮೂವರಿಗೆ ಪುಸ್ತಕ ಅಗತ್ಯವೇ ಇಲ್ಲ. ನೀನು ಓದಿದ್ದನ್ನೇ ಏಕಾಗ್ರತೆಯಿಂದ ಆಲಿಸಿದರು. ಎಲ್ಲ ವಿಷಯವನ್ನೂ ನೆನಪಿನಲ್ಲಿರಿಕೊಂಡು ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರು. ಆದರೆ ನೀನು ಜೋರಾಗಿ ಓದಿದರೂ ನಿನ್ನ ಮನಸ್ಸಿನಲ್ಲೇನೂ ಉಳಿಯಲಿಲ್ಲ. ನೀನು ಅವರೆಲ್ಲ ಫೇಲ್ ಆಗುವುದನ್ನೇ ಬಯಸುತ್ತಿದ್ದೆ. ಅದು ಒಳ್ಳೆಯತನವಲ್ಲ. ಇನ್ನಾದರೂ ಒಳ್ಳೆಯ ಮನಸ್ಸಿನಿಂದ ನಡೆದುಕೊಳ್ಳುವುದನ್ನು ರೂಢಿಸಿಕೊ' ಎಂದಾಗ ಕೋದಂಡನಿಗೆ ತನ್ನ ತಪ್ಪಿನ ಅರಿವಾಗಿತ್ತು. ತಲೆ ತಗ್ಗಿಸಿ ಕ್ಷಮೆ ಕೇಳಿದ ಹಾಗೂ ಉಳಿದ ಮೂವರನ್ನೂ ಸಂಧಿಸಿ ಕ್ಷಮೆ ಯಾಚಿಸಿದ.
ದತ್ತಗುರು ಕಂಠಿ