ಎಣ್ಣೆ ಮತ್ತು ನೀರು ಎರಡೂ ದ್ರವಗಳೇ ಆಗಿದ್ದರೂ ಒಂದರಲ್ಲೊಂದು ಬೆರೆಯುವುದಿಲ್ಲ. ಅದನ್ನು ಚೆಂದದ ಪ್ರಯೋಗದೊಂದಿಗೆ ಕಂಡುಕೊಳ್ಳೋಣ.
ಬೇಕಾಗುವ ಪದಾರ್ಥಗಳು
ಕಾಲು ಲೋಟ ನೀರು
ಕಾಲು ಲೋಟ ಸೂರ್ಯಕಾಂತಿ ಎಣ್ಣೆ
ಕಾಲು ಲೋಟ ಜೇನುತುಪ್ಪ
ಕಾಲು ಲೋಟ ವಿಮ್ ಲಿಕ್ವಿಡ್(ಪಾತ್ರೆ ತೊಳೆವ)
ಆಲ್ಕೋಹಾಲ್
3 ಗ್ಲಾಸ್
ಎರಡು ಬಗೆಯ ಆಹಾರ ಬಣ್ಣಗಳು
ಪ್ರಯೋಗ ವಿಧಾನ
ಮೊದಲು ಗ್ಲಾಸಿನ ಮಧ್ಯ ಭಾಗಕ್ಕೆ, ಪಕ್ಕೆಗಳಿಗೆ ತಾಗದಂತೆ ಎಚ್ಚರಿಕೆಯಿಂದ ಜೇನುತುಪ್ಪ ಹಾಕಿರಿ. ಈಗ ಗ್ಲಾಸನ್ನು ಸ್ವಲ್ಪ ವಾಲಿಸಿ ಅದರ ಪಕ್ಕೆಗಳ ಮೇಲೆ (ಸೈಡಿನಿಂದ) ನಿಧಾನವಾಗಿ ವಿಮ್ ಲಿಕ್ವಿಡ್ ಅನ್ನು ಹಾಕಿರಿ. ನಂತರ ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಬಣ್ಣವನ್ನು ಹಾಕಿ ಕಲಕಿ. ಇನ್ನೊಂದು ಲೋಟದಲ್ಲಿ ಆಲ್ಕೋಹಾಲ್ ತೆಗೆದುಕೊಂಡು ಅದಕ್ಕೆ ಮತ್ತೊಂದು ಬಣ್ಣ ಹಾಕಿ. ಈಗ ಬಣ್ಣದ ನೀರನ್ನು ಗ್ಲಾಸ್ ಅಲ್ಲಾಡದಂತೆ ಸ್ವಲ್ಪ ವಾಲಿಸಿ, ನಿಧಾನವಾಗಿ ಕೆಳಗಿಳಿಸಿ. ನಂತರ ಇದೇ ಮಾದರಿಯಲ್ಲಿ ಸೂರ್ಯಕಾಂತಿ ಎಣ್ಣೆ ಹಾಗೂ ಆಲ್ಕೋಹಾಲ್ ಬಗ್ಗಿಸಿ. ಈಗ ನೋಡಿ, ಅಷ್ಟೂ ದ್ರವ ಪದಾರ್ಥಗಳೂ ಬೇರೆ ಬೇರೆ ಬಣ್ಣಗಳಲ್ಲಿ ಬೇರೆ ಬೇರೆ ಲೇಯರ್‌ಗಳಾಗಿ ಕುಳಿತಿರುತ್ತವೆ. ಇವ್ಯಾವುದೂ ಒಂದರಲ್ಲೊಂದು ಬೆರೆಯುವುದಿಲ್ಲ ಏಕೆ?
ಏಕೆಂದರೆ ಒಂದೊಂದು ದ್ರವ ಪದಾರ್ಥದ ಜಿಗುಟೂ(ಥಿಕ್‌ನೆಸ್) ಬೇರೆ ಬೇರೆ. ಹೆಚ್ಚು ದಪ್ಪದ ದ್ರವವು ಅಡಿಗೆ ಇರುತ್ತದೆ. ಸಕ್ಕರೆ ಅಂಶ ಹೆಚ್ಚಿದ್ದಷ್ಟೂ ದ್ರವ ಪದಾರ್ಥವು ಹೆಚ್ಚು ದಪ್ಪವಿರುತ್ತದೆ.
ಸ್ವಲ್ಪ ಸಮಯದ ನಂತರ ಗ್ಲಾಸ್‌ನ ಬಾಯಿ ಮುಚ್ಚಿ ಚೆನ್ನಾಗಿ ಕದಡಿ ಪಕ್ಕದಲ್ಲಿಡಿ. 5 ನಿಮಿಷಗಳ ನಂತರ ಗಮನಿಸಿ, ಯಾವುದಾದರೂ ಎರಡು ದ್ರವ ಪದಾರ್ಥಗಳು ಬೆರೆತಿವೆಯೇ ಎಂದು.
Advertisement