

ನೋಡಲು ಥೇಟ್ ಹಾವಿನಂತೇ! ಮೆಲ್ಲಗೆ ಬಗ್ಗಿ ನೋಡುತ್ತಿರುವ ಭಂಗಿಯಲ್ಲಿ ಕಾಣಿಸುತ್ತದೆ. ಹಾವಿನ ಭಯವಿರುವ ಯಾವುದೇ ಪ್ರಾಣಿ ಪಕ್ಷಿಗಳು ಹತ್ತಿರ ಹೋಗುವುದಿಲ್ಲ. ಈಗಲೋ ಆಗಲೋ ಹಿಡಿದು ನುಂಗುವಂತೆ ಕಾಣಿಸುವ ಇದು ನಿಜವಾದ ಹಾವಲ್ಲ. ಒಂದು ಕ್ಯಾಟರ್ಪಿಲ್ಲರ್. ಪರಭಕ್ಷಕಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಕ್ಯಾಟರ್ಪಿಲ್ಲರ್‌ಗಳಿಗೆ ಪ್ರಕೃತಿದತ್ತವಾಗಿ ಬಂದಿರುವ ರಕ್ಷಣೆ. ಸಹಜವಾಗಿ ಮೊದಲ ನೋಟಕ್ಕೆ ಹಾವೆಂಬಂತೆ ಭಾಸವಾಗುವುದರಿಂದ ಅದರ ಹತ್ತಿರ ಸುಳಿಯಲು ಯಾರೂ ಮುಂದಾಗುವುದಿಲ್ಲ. ಹೊರಮೈ ತೋರಿಕೆಯಿಂದಲೇ ಸಾವಿನಿಂದ ಪಾರಾಗುತ್ತವೆ. ತನ್ನ ಕಾಲುಗಳನ್ನು ಹಿಂದಕ್ಕೆಳೆದುಕೊಂಡು ಸೊಪ್ಪಿನ ಮರೆಯ ಕೊಂಬೆಯಲ್ಲಿ ನೇತು ಹಾಕಿಕೊಂಡಿರುತ್ತದೆ. ಹಿಂಬದಿಯಲ್ಲಿ ಹಾವಿನ ಕಣ್ಣುಗಳಂತೆ ಕಾಣುವ ಆಕಾರವಿದ್ದು ಪರಭಕ್ಷಕಗಳನ್ನು ಸುಲಭವಾಗಿ ಬೇಸ್ತು ಬೀಳಿಸುತ್ತವೆ.
'ಸ್ನೇಕ್ ಕ್ಯಾಟರ್ಪಿಲ್ಲರ್'ಗಳೆಂದೇ ಕರೆಯಲ್ಪಡುವ ಇವುಗಳು ಹಿಮೊರೋಪ್ಲಾನ್ಸ್ ಟ್ರಿಪ್ಟೋಲೆಮಸ್ ಎಂಬ ಚಿಟ್ಟೆಗಳಾಗಿ ಮಾರ್ಪಡುತ್ತವೆ. 10ರಿಂದ 30 ದಿನಗಳ ವರೆಗೆ ಬದುಕುವ ಸ್ನೇಕ್ ಕ್ಯಾಟರ್ಪಿಲ್ಲರ್‌ಗಳು ಕೋಸ್ಟಾರಿಕಾ, ಬೆಲೀಜ್, ಮೆಕ್ಸಿಕೋ, ಗ್ವಾಟೆಮಾಲಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.