

ಭೂಮಿಯ ನೀರು ಆವಿಯಾಗಿ ಮೇಲಿನ ವಾತಾವರಣದಲ್ಲಿ ತಂಪಾದಾಗ ಮೋಡಗಳುಂಟಾಗುತ್ತವೆ. ತಂಪು ಗಾಳಿಗೆ ನೀರನ್ನು ಹೊರಲು ಸಾಧ್ಯವಾಗದು. ಆಗ ನೀರಿನ ಆವಿಯು ಮೋಡವಾಗುತ್ತದೆ. ಒಂದು ಗಾಜಿನ ಬಾಟಲಿನಲ್ಲಿ ಮೋಡಗಳು ಸೃಷ್ಟಿಯಾಗುವುದನ್ನು ಈ ಪ್ರಯೋಗವು ಪ್ರಾತ್ಯಕ್ಷಿಸುತ್ತದೆ. ಇದೇ ಬಗೆಯಲ್ಲಿ ವಾತಾವರಣದಲ್ಲಿಯೂ ಮೋಡಗಳುಂಟಾಗುತ್ತವೆ.
ಬೇಕಾದ ಸಾಮಗ್ರಿಗಳು
ಒಂದು ಅಗಲ ಬಾಯಿಯಿರುವ ದೊಡ್ಡ ಗಾಜಿನ ಬಾಟಲಿ.
ನುಣ್ಣಗಿನ ಸುಣ್ಣದ ಪುಡಿ
ಬಲೂನಿನಿಂದ ಕತ್ತರಿಸಿದ ರಬ್ಬರ್ ಹಾಳೆ
ರಬ್ಬರ್ ಬ್ಯಾಂಡ್
ಹೀಗೆ ಮಾಡಿ
ದೊಡ್ಡ ಬಾಟಲಿನೊಳಗೆ ಸ್ವಲ್ಪ ನೀರು ಸುರಿಯಿರಿ. ಮುಚ್ಚಳವನ್ನು ಭದ್ರವಾಗಿ ಹಾಕಿ 15 ನಿಮಿಷ ಬಿಡಿ. ಇಷ್ಟರಲ್ಲಿ ನೀರು ಸ್ವಲ್ಪ ಆವಿಯಾಗಿ ಬಾಟಲಿಯೊಳಗೆ ತುಂಬಿಕೊಂಡಿರುತ್ತದೆ.
ಮುಚ್ಚಳ ತೆಗೆದು ಸ್ವಲ್ಪ ಸುಣ್ಣದ ಪುಡಿ ಅಥವಾ ಟಾಲ್ಕಮ್ ಪುಡಿಯನ್ನು ಸಿಂಪಡಿಸಿ. ತಕ್ಷಣವೇ ರಬ್ಬರ್ ಹಾಳೆಯಿಂದ ಬಾಟಲಿಯ ಮೂತಿಯನ್ನು ಮುಚ್ಚಿ, ರಬ್ಬರ್ ಬ್ಯಾಂಡ್‌ನಿಂದ ಭದ್ರಪಡಿಸಿ.
ಈಗ ರಬ್ಬರ್ ಹಾಳೆಯ ಮೇಲೆ ಕೈ ಇಟ್ಟು ಒತ್ತಿ. ಆಗ ಒಳಗಿನ ಗಾಳಿಯ ಒತ್ತಡ ಹೆಚ್ಚುತ್ತದೆ. ಇದರಿಂದಾಗಿ ಗಾಳಿಯ ಶಾಖ ಏರಿ ಅದು ಹೆಚ್ಚು ಆವಿಯನ್ನು ಹಿಡಿದಿಟ್ಟುಕೊಳ್ಳುತ್ತದೆ. 15 ಸೆಕೆಂಡ್‌ಗಳ ಬಳಿಕ ಕೈ ಸಡಿಲಿಸಿ. ಗಾಳಿಯು ತಂಪಾಗುತ್ತದೆ. ಆಗ ಮೋಡವೊಂದು ಬಾಟಲಿಯೊಳಗೆ ಕಾಣಿಸುತ್ತದೆ. ನೀವು ಸಿಂಪಡಿಸಿದ ಸುಣ್ಣದ ನುಣ್ಣನೆಯ ಕಣಗಳ ಸುತ್ತ ನೀರಿನ ಆವಿಯು ಹನಿಗೂಡುತ್ತದೆ.
= ವಿ.ಎಸ್.ಎಸ್. ಶಾಸ್ತ್ರಿ