

ಒಬ್ಬ ರೈತನ ಹತ್ತಿರ ಸದೃಢ ಆಕಳು ಇತ್ತು. ಅವನು ಅದನ್ನು ಬಹಳ ಕಾಳಜಿಯಿಂದ ಬೆಳೆಸಿದ್ದ. ಅದು ಹೆಚ್ಚು ಹಾಲನ್ನು ಕೊಡುತ್ತಿತ್ತಲ್ಲದೆ ನೋಡಲಿಕ್ಕೆ ಕೂಡಾ ಮಜಬೂತಾಗಿತ್ತು. ಕೆಲವು ಕಳ್ಳರ ಗುಂಪಿನ ವಕ್ರದೃಷ್ಟಿ ಈ ಆಕಳ ಮೇಲೆ ಬಿತ್ತು. ಹೇಗಾದರೂ ಮಾಡಿ ಅದನ್ನು ಅಪಹರಿಸಿ ದೂರದ ಸಂತೆಯಲ್ಲಿ ಮಾರಿ ಭಾರಿ ಲಾಭ ಮಾಡಿಕೊಳ್ಳಬೇಕು ಎಂದು ಹೊಂಚು ಹಾಕಿದರು.
ಈ ಮಧ್ಯೆ ಒಂದು ದಿನ ರೈತ ಆಕಳನ್ನು ಬಯಲಿಗೆ ಕರೆತಂದು ಹುಲ್ಲು ಮೇಯಲು ಬಿಟ್ಟ. ಅದು ಮೇಯುತ್ತಾ ಬಹು ದೂರ ಸಾಗಿತು. ಆಗ ಕಳ್ಳರು ಒಂಟಿ ಯಾಗಿ ಮೇಯುತ್ತಿರುವ ಆ ಆಕಳನ್ನು ನೋಡಿ ಹಿಡಿದು ಪರಾರಿಯಾಗತೊಡಗಿದರು. ಹೀಗೆ ಆಕಳನ್ನು ಹಿಡಿದು ಓಡುವುದನ್ನು ಆ ರೈತನ ಸ್ನೇಹಿತ ನೋಡಿ ದೂರದಲ್ಲಿರುವ ರೈತನಿಗೆ ಕೂಗಿ ಹೇಳಿದ. ತಕ್ಷಣವೇ ರೈತನು ಕೈಗೆ ಸಿಕ್ಕ ಮರದ ಬಡಿಗೆಯನ್ನು ಹಿಡಿದು ಕಳ್ಳರನ್ನು ಬೆನ್ನಟ್ಟಿದ. ಕಳ್ಳರು ಆತಂಕದಿಂದ ಆಕಳನ್ನು ಹಿಡಿದು ಓಡತೊಡಗಿದರು.
'ಕಳ್ಳರು, ಕಳ್ಳರು.. ಹಿಡಿಯಿರಿ' ಎಂದು ಕೂಗುತ್ತಿದ್ದ ರೈತನ ಕೂಗಿಗೆ ಅಕ್ಕ ಪಕ್ಕದ ಹೊಲದ ಜನರು ಪ್ರತಿಕ್ರಿಯಿಸಿ ಸೇರತೊಡಗಿದರು. ಓಡುತ್ತಾ ಇದ್ದ ರೈತ ತನ್ನ ಶಕ್ತಿಯನ್ನೆಲ್ಲ ಪ್ರಯೋಗಿಸಿ ಕೈಯಲ್ಲಿದ್ದ ಕೋಲನ್ನು ಬೀಸಿ ಎಸೆದ. ಅದು ಕಳ್ಳರ ದಾರಿಯ ಮುಂದೆ ಬಿತ್ತು. ಆಕಳನ್ನು ಹಿಡಿದುಕೊಂಡಿದ್ದ ಕಳ್ಳರು ಸಿಕ್ಕಿ ಬಿಟ್ಟೆವೆಂದು ಹೆದರಿ ಅಲ್ಲೇ ನಿಂತರು. ರಭಸದಲ್ಲಿ ಬಂದ ರೈತ ಕಳ್ಳರನ್ನು ಕುರಿತು 'ನನ್ನ ಆಕಳನ್ನು ನನಗೆ ನೀಡಿ. ಇಲ್ಲವಾದರೆ ನನ್ನ ತಂದೆ ಆಗ ಏನು ಮಾಡಿದ್ದರೋ ಅದನ್ನೇ ನಾನು ಈಗ ಮಾಡುವೆ' ಎಂದು ಆಕ್ರೋಶಭರಿತವಾಗಿ ಗದರಿದ.
ರೈತನ ಕೋಪೋದ್ರೇಕದ ಮಾತುಗಳನ್ನು ಕೇಳಿದ ಕಳ್ಳರು ಆಕಳನ್ನು ರೈತನ ಕೈಗೆ ಕೊಟ್ಟು ತಮ್ಮನ್ನು ಬಿಟ್ಟು ಬಿಡಬೇಕೆಂದು ಕೇಳಿಕೊಂಡರು. ಅಲ್ಲದೇ 'ನಿಮ್ಮ ಆಕಳನ್ನು ನಾವು ಮರಳಿ ನೀಡಿದ್ದೇವೆ. ನೀವು ಹೇಳಿದಂತೆ ನಿಮ್ಮ ತಂದೆ ಮಾಡಿದ ಕಾರ್ಯ ತಿಳಿಸುವಿರಾ?' ಎಂದು ಆಸಕ್ತಿಯಿಂದ ಕಳ್ಳನೊಬ್ಬ ಕೇಳಿದ.
ಆ ಕಳ್ಳನ ಕಾತುರದ ಪ್ರಶ್ನೆಯನ್ನು ಆಲಿಸಿ ತಾನು ಸಮಯಕ್ಕೊಂದು ಉಪಾಯವನ್ನು ಮಾಡಿ ಅಪಾಯವನ್ನು ಜಯಿಸಿದೆ ಎಂಬ ಭಾವನೆಯಿಂದ ರೈತ ನಗತೊಡಗಿದ. ಕೊನೆಗೆ ತನ್ನ ನಗೆಯನ್ನು ನಿಲ್ಲಿಸಿ ಗಂಭೀರವಾಗಿ ಹೇಳಿದ 'ಬಹಳ ಜಾಗರೂಕತೆಯಿಂದ ಕೇಳಿ! ಈ ಮೊದಲು ನನ್ನ ತಂದೆಯ ಆಕಳನ್ನು ನಿಮ್ಮಂತೆ ಕೆಲವು ಕಳ್ಳರು ಕಳ್ಳತನ ಮಾಡಿದರು. ಕಳ್ಳರನ್ನು ಹಿಡಿಯಲು ಓಡದೇ ಅದರ ಬದಲು ಹೊಸದೊಂದು ಆಕಳನ್ನು ಖರೀದಿಸಿದರು. ಆ ಹೊಸ ಆಕಳೇ ಇದು' ಎಂದು ತುಸು ನಗುತ್ತಾ ಪ್ರಸ್ತಾಪಿಸಿದ. ಕಳ್ಳರು ಆ ರೈತನ ಮಾತು ಕೇಳಿ ಅನಾವಶ್ಯಕವಾಗಿ ಅವಿವೇಕಕ್ಕೆ ಗುರಿಯಾಗಿ ಮೂರ್ಖರಾದೆವಲ್ಲ ಎಂದು ಮರುಗುತ್ತಾ ಅಲ್ಲಿಂದ ಕಾಲ್ಕಿತ್ತರು.
ಸದ್ಯ, ತನ್ನ ಉಪಾಯ ಫಲಿಸಿತಲ್ಲ ಎಂಬ ಸಮಾಧಾನದಲ್ಲಿ ರೈತನು ತನ್ನ ಆಕಳನ್ನು ಹಿಡಿದು ಮನೆಯ ಕಡೆಗೆ ನಡೆದ.
ವಿರೇಶ ಮಾಶೆಟ್ಟಿ ವಂದಾಲ