

ನಿತ್ಯ ಆತನದು ದೂರದ ಹೊಳೆಯಿಂದ ನೀರು ಹೊತ್ತು ತಂದು ಹಾಕುವ ಕೆಲಸ. ಕೈಯ್ಯಲ್ಲೆರಡು ಕೊಡಗಳು. ಒಂದು ಕೊಡ ಅರ್ಧ ಬಿರುಕು ಬಿಟ್ಟಿತ್ತು. ಹೀಗಾಗಿ ನಿತ್ಯ ಅದರಲ್ಲಿ ತಂದ ಅರ್ಧದಷ್ಟು ನೀರು ಸೋರಿ ಹೋಗುತ್ತಿತ್ತು. ಇದರಿಂದ ಆ ಕೊಡಕ್ಕೆ ತನ್ನ ಬಗ್ಗೆ ಕೀಳರಿಮೆಯೂ, ಇನ್ನೊಂದು ಕೊಡದ ಬಗ್ಗೆ ಅಸೂಯೆಯೂ ಆಗುತ್ತಿತ್ತು. ಒಂದು ದಿನ ಈ ಕೊಡದ ದುಃಖದ ಕಟ್ಟೆಯೊಡೆಯಿತು. ಅದು ಆತನಲ್ಲಿ ಹೇಳಿತು, 'ನನ್ನ ದೌರ್ಬಲ್ಯದಿಂದ ನೀನು ಪಡುವ ಶ್ರಮ ಸಾರ್ಥಕವಾಗುತ್ತಿಲ್ಲ. ನೀನೆಷ್ಟೇ ಕಷ್ಟ ಪಟ್ಟು ಹೊತ್ತು ನೀರು ತೆಗೆದುಕೊಂಡು ಹೋದರೂ ಅರ್ಧ ಸೋರಿ ಹೋಗಿ ನಾನು ನಿನಗೆ ಯಜಮಾನನ ಹೊಗಳಿಕೆ ತಪ್ಪುವಂತೆ ಮಾಡುತ್ತಿದ್ದೇನೆ ಎಂದು ದುಃಖಿಸಿತು. ಅದಕ್ಕೆ ಆತ ಸಮಾಧಾನಿಸಿದ, 'ನಿನ್ನ ಕೊರತೆ ನೋಡಿಯೇ ನೀರಿಗೆ ಹೋಗುವ ದಾರಿಯ ಒಂದು ಬದಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟೆ. ನಿತ್ಯ ನಿನ್ನನ್ನು ನಾನು ಹೂವು ಹಾಸಿರುವ ಬದಿಯಲ್ಲೇ ಹೊತ್ತು ತರುತ್ತಿದ್ದೇನೆ. ಗಿಡದ ಆ ಹೂಗಳಿಂದಲೇ ನಿತ್ಯ ಯಜಮಾನನ ಮನೆಯ ಟೇಬಲ್ ಅಲಂಕರಿಸುತ್ತಿದ್ದೇನೆ. ಇದರಿಂದ ಯಜಮಾನ ಸಂಪ್ರೀತರಾಗುತ್ತಾರೆ. ಇದಕ್ಕೆಲ್ಲ ನೀನೇ ಕಾರಣ ಎಂದ!