

ಮಕ್ಕಳೇ ಈ ದಿನ ಮನೆಯಲ್ಲೇ ಚಿಕ್ಕದಾಗಿ ಒಂದು ಜ್ವಾಲಾಮುಖಿ ಸೃಷ್ಟಿಸಿ ಮಜಾ ನೋಡಿ.
ಬೇಕಾಗುವ ವಸ್ತುಗಳು
ವಿನೆಗರ್
ಬೇಕಿಂಗ್ ಸೋಡಾ(ಬೇಕಿಂಗ್ ಪೌಡರ್ ಅಲ್ಲ)
ಒಂದು ಪಾತ್ರೆ/ ಬಾಟಲ್
ಟವೆಲ್
ಹೀಗೆ ಮಾಡಿ
ಬಾಟಲ್‌ನೊಳಗೆ ಬೇಕಿಂಗ್ ಸೋಡಾ ಹಾಕಿ ಮೇಲಿನಿಂದ ವಿನೆಗರ್ ಸುರಿಯಿರಿ. ಮತ್ತೆ ಮ್ಯಾಜಿಕ್ ನೋಡಿ.
ಕಾರಣ ಏನು?
ಬೇಕಿಂಗ್ ಸೋಡಾ (ಸೋಡಿಯಂ ಬೈಕಾರ್ಬೋನೇಟ್) ಬೇಸ್ ಮತ್ತು ವಿನೆಗರ್(ಅಸಿಟಿಕ್) ಆ್ಯಸಿಡ್ ಆಗಿರುವುದರಿಂದ ಅವೆರಡನ್ನೂ ಒಂದುಗೂಡಿಸಿದಾಗ ಕಾರ್ಬೋನಿಕ್ ಆ್ಯಸಿಡ್ ಸೃಷ್ಟಿಯಾಗುತ್ತದೆ. ಇದು ತುಂಬಾ ದುರ್ಬಲ ದ್ರಾವಣ ಆಗಿರುವುದರಿಂದ ತಕ್ಷಣ ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ಆಗಿ ಬೇರೆಯಾಗುತ್ತದೆ. ಈ ಸಮಯದಲ್ಲಿ ಚಿಕ್ಕ ಜ್ವಾಲಾಮುಖಿಯಂಥ ಮ್ಯಾಜಿಕ್ ನಡೆಯುತ್ತದೆ.
ಮನೆಯೊಳಗೇ ಮಳೆಬಿಲ್ಲು ಸೃಷ್ಟಿಸಿ
ಕಾಮನಬಿಲ್ಲು ಎಂದರೆ ಯಾರಿಗಿಷ್ಟವಿಲ್ಲ ಹೇಳಿ? ಇಂಥಾ ಕಾಮನಬಿಲ್ಲು ಆಗಸದಿಂದ ಇಳಿದು ಬಂದು ನಿಮ್ಮ ಮನೆಯೊಳಗೇ ಕುಳಿತರೆ ಹೇಗಿರುತ್ತದೆ? ತುಂಬಾ ಸಣ್ಣ ಪ್ರಯೋಗದಲ್ಲಿ ನಿಮ್ಮ ಮನೆಯೊಳಗೆ ಕಾಮನಬಿಲ್ಲು ಬಂದು ಕುಳಿತುಬಿಡುತ್ತದೆ.
ಬೇಕಾಗುವ ವಸ್ತುಗಳು
ಮುಕ್ಕಾಲು ಭಾಗ ನೀರು ತುಂಬಿದ ಗಾಜಿನ ಲೋಟ
ಬಿಳಿ ಪೇಪರ್
ಸೂರ್ಯನ ಬೆಳಕಿರುವ ದಿನ
ಹೀಗೆ ಮಾಡಿ
ಮನೆಯೊಳಗೆ ಸೂರ್ಯನ ಬೆಳಕು ಬೀಳುವ ಕಿಟಕಿ ಹತ್ತಿರ ನೀರು ತುಂಬಿದ ಗಾಜಿನ ಲೋಟ ಮತ್ತು ಪೇಪರ್ ತೆಗೆದುಕೊಂಡು ಹೋಗಿ. ಲೋಟವನ್ನು ಪೇಪರಿನ ಮೇಲೆ ಹಿಡಿಯಿರಿ. ಸೂರ್ಯನ ಬೆಳಕು ಗಾಜಿನ ಲೋಟದ ಮೂಲಕ ಪೇಪರ್ ಮೇಲೆ ಬೀಳುವಂತೆ ಹಿಡಿಯಿರಿ. ಕಿರಣಗಳು ವಕ್ರಗೊಂಡು(ರಿಫ್ರ್ಯಾಕ್ಟ್) ಪೇಪರಿನ ಮೇಲೆ ಕಾಮನಬಿಲ್ಲನ್ನು ಸೃಷ್ಟಿಸುತ್ತವೆ. ಲೋಟವನ್ನು ಬೇರೆ ಬೇರೆ ಕೋನಗಳಲ್ಲಿ ಹಿಡಿದು ಪರಿಣಾಮ ವೀಕ್ಷಿಸಿ.
ಕಾರಣ ಏನು?
ಸೂರ್ಯನ ಕಿರಣಗಳು ಮಳೆಹನಿಯನ್ನು ಹಾದು ಹೊರಬರುವಾಗ ಬೆಂಡ್ ಆಗಿ ಏಳು ಬಣ್ಣಗಳಾಗಿ ಹೊರಹೊಮ್ಮುತ್ತದೆ. ಈ ಪ್ರಯೋಗದಲ್ಲಿ ಕೂಡಾ ನಾವು ಸೂರ್ಯನ ಕಿರಣಗಳು ನೀರನ್ನು ಹಾಯುವಂತೆ ಮಾಡುತ್ತೇವೆ. <