

ರಜೆಯನ್ನು ಮಜವಾಗಿ ಕಳೆಯಲು ಪುಟ್ಟಿ ತನ್ನ ಅಜ್ಜಿಯ ಹಳ್ಳಿಗೆ ಹೋಗಿದ್ದಳು. ಅಲ್ಲೊಂದು ಹಳ್ಳ ಹರಿಯುತ್ತಿತ್ತು. ದಿನವೂ ಅಲ್ಲಿಗೆ ಹೋಗಿ ಮನಸೋಇಚ್ಛೆ ನೀರಲ್ಲಿ ಆಡಿ ಕಾಗದದ ದೋಣಿಗಳನ್ನು ಬಿಟ್ಟು ಖುಷಿ ಪಡುತ್ತಿದ್ದಳು ಪುಟ್ಟಿ. ಅಲ್ಲದೆ, ನೀರಲ್ಲಿನ ಮೀನುಗಳಿಗಾಗಿ ಅಜ್ಜಿಯನ್ನು ಕಾಡಿಬೇಡಿ ತೆಗೆದುಕೊಂಡು ಹೋದ ಪುರಿಯನ್ನು ಹಾಕುತ್ತಿದ್ದಳು. ಹೀಗೆ ಪುರಿಯ ರುಚಿ ಕಂಡ ಮೀನುಗಳು ಪುಟ್ಟಿಯ ಬರುವಿಕೆಯನ್ನೇ ಕಾಯುತ್ತಿದ್ದವು. ಹೀಗಿರುವಾಗ ಅವುಗಳು ಪುಟ್ಟಿಯ ಕೈಗೂ ಎಡತಾಗುತ್ತಿದ್ದವು. ಈ ಮೀನುಗಳ ಹೊಳಪು ಪುಟ್ಟಿಯನ್ನು ಬಹುವಾಗಿ ಆಕರ್ಷಿಸಿ ಅವುಗಳನ್ನು ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ.
ಪುಟ್ಟಿ ಒಂದು ದಿನ ನೀರಿನ ಬಾಟಲಿಯನ್ನು ತಂದು ಚೆಂದ ಚೆಂದದ ಮೀನುಗಳನ್ನು ಹಿಡಿದಿಡಿದು ಅದರಲ್ಲಿ ಹಾಕಿಕೊಂಡಳು. ಅವುಗಳೂ ಕೈಯಿಂದ ಕೊಸರಿಕೊಳ್ಳದೆ ಪುರಿ ತಿಂದ ಮುಲಾಜಿಗೆ ಮತ್ತು ಮುಂದು ಅದನ್ನು ಸವಿಯಬಹುದೆಂಬ ಮುಂದಾಲೋಚನೆ ಹೊತ್ತು ಬಾಟಲಿಯನ್ನು ಸೇರಿದವು. ಆ ಬಾಟಲಿಯನ್ನು ಅಜ್ಜಿಯ ಮನೆಯ ನೆರೆಹೊರೆಯವರಿಗೂ ತೋರಿಸಿದಳು. ಅಕ್ಕಪಕ್ಕದ ಮನೆಯ ಮಕ್ಕಳೂ ಪುಟ್ಟಿಯೊಂದಿಗೆ ಸೇರಿ ಮೀನುಗಳನ್ನು ನೋಡಿ ಆನಂದಿಸಿದರು. ಈ ಗದ್ದಲವನ್ನು ಕಂಡ ಅಜ್ಜಿಯು 'ಏನದು ಗಲಾಟೆ? ಏನು ನಡೆದಿದೆ?' ಎಂದು ಮಕ್ಕಳ ಕೇಂದ್ರಬಿಂದುವಾಗಿದ್ದ ಪುಟ್ಟಿಯ ಬಳಿಗೆ ಬಂದಳು. ಪುಟ್ಟಿ ಕೈಯಲ್ಲಿದ್ದ ಬಾಟಲಿಯಲ್ಲಿ ಮೀನುಗಳು ಒದ್ದಾಡುತ್ತಿದ್ದುದ್ದನ್ನು ಅಜ್ಜಿ ನೋಡಿದಳು. 'ಅಜ್ಜಿ, ಈ ಮೀನುಗಳನ್ನು ನಾನೇ ಹಳ್ಳದಿಂದ ಹಿಡಿದು ತಂದಿದ್ದೇನೆ. ನೋಡು' ಎಂದು ಅಜ್ಜಿಯ ಮುಂದೆ ಹಿಡಿದಳು. ಅವು ಅಲ್ಲಿ ಈಜಲು ಜಾಗವಿಲ್ಲದೆ ಒದ್ದಾಡುತ್ತಿದ್ದುದ್ದನ್ನು ನೋಡಿ ಅಜ್ಜಿಗೆ ಮರುಕ ಉಂಟಾಯಿತು. ಮರುಮಾತಿಲ್ಲದೇ ಅಜ್ಜಿಯು ಬಾಟಲಿ ಸಮೇತವಾಗಿ ಪುಟ್ಟಿಯನ್ನು ಎಳೆದುಕೊಂಡು ಹೋಗಿ ಮನೆಯ ಒಂದು ಕೋಣೆಯಲ್ಲಿ ಬಿಟ್ಟು ಹೊರಗಿನಿಂದ ಬಾಗಿಲು ಭದ್ರಪಡಿಸಿದಳು. ಸಂತೋಷದಿಂದ ಕುಣಿದಾಡುತ್ತಿದ್ದ ಪುಟ್ಟಿಗೆ ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಬಂಧಿಯಾಗಿದ್ದಳು. 'ಅಜ್ಜೀ ಅಜ್ಜೀ... ಬಾಗಿಲು ತೆಗಿ, ನನಗೆ ಭಯವಾಗ್ತಿದೆ. ಕತ್ತಲಿದೆ. ಗಾಳಿಯೂ ಇಲ್ಲ, ಇಲಿ, ಹೆಗ್ಗಣಗಳು ಬರುತ್ತವೆ. ಅಜ್ಜೀ ಅಜ್ಜೀ' ಎಂದು ಒಂದೇ ಸಮನೆ ಅಳತೊಡಗಿದಳು. ಅಲ್ಲದೇ 'ನನ್ನೇಕೆ ಹೀಗೆ ಕೂಡಿ ಹಾಕಿದ್ದೀಯಾ? ಬೇಗ ಬಾಗಿಲು ತೆಗಿ' ಎಂದು ಕೂಗಿದಳು.
ಅಜ್ಜಿ ಸ್ವಲ್ಪವೇ ಬಾಗಿಲು ತೆಗೆದು 'ಮಗೂ, ನೋಡಿದ್ಯಾ ಕೋಣೆಯಲ್ಲಿ ನಿನ್ನ ಬಂಧಿಸಿಟ್ಟಾಗ ನಿನಗೆ ಭಯವಾಯ್ತಲ್ವಾ? ಉಸಿರು ಕಟ್ಟಿದ ಅನುಭವವೂ ಆಯ್ತಲ್ವಾ? ಅಲ್ಲದೆ ನಿನಗೆ ಏನಾಗ್ತಿದೆ? ಎಂದು ಬಾಯಿಬಿಟ್ಟು ಹೇಳಿಕೊಂಡೆ. ಆದರೆ ಆ ಬಾಟಲಿಯಲ್ಲಿರುವ ಮೀನುಗಳಿಗೂ ನಿನಗಾದ ಅನುಭವವೇ ಈಗ ಆಗುತ್ತಿದೆ. ಆದರೆ ಅವುಗಳಿಗೆ ಮಾತು ಬರೊಲ್ಲ. ಹೇಳಿಕೊಳ್ಳಲು ಆಗೊಲ್ಲ. ತನ್ನ ಹೆತ್ತವರನ್ನೂ, ಒಡ ಹುಟ್ಟಿದವರನ್ನೂ ಬಿಟ್ಟು ಈ ಬಾಟಲಿಯಲ್ಲಿ ಬಂಧಿಯಾಗಿ ಒದ್ದಾಡುತ್ತಿವೆ. ಹರಿವ ನೀರಲ್ಲಿ ಸ್ವಚ್ಛಂದವಾಗಿ ಈಜಿಕೊಂಡಿದ್ದ ಇವುಗಳಿಗೂ ಉಸಿರು ಕಟ್ಟಿದಂತೆ ಆಗುತ್ತಿದೆ. ನಿನಗೆ ಅದರ ನೋವು ಗೊತ್ತಾಗಲಿ ಎಂದೇ ನಾನು ನಿನ್ನನ್ನು ಹೀಗೆ ಈ ಕೋಣೆಯಲ್ಲಿ ಕೂಡಿ ಹಾಕಿದ್ದು' ಎಂದಳು.
ಎಲ್ಲವನ್ನೂ ಕೇಳಿಸಿಕೊಂಡ ಪುಟ್ಟಿಗೆ ತನ್ನ ಸಂತೋಷಕ್ಕಾಗಿ ಹೀಗೆ ಮೀನುಗಳನ್ನು ಬಾಟಲಿಯಲ್ಲಿ ಬಂಧಿಸಿಟ್ಟಿದ್ದು ತಪ್ಪೆಂದು ಅರಿವಾಯಿತು. ತಕ್ಷಣವೇ ಅಜ್ಜಿಗೆ ಹೇಳಿ ಹಳ್ಳದ ಕಡೆಗೆ ಓಡಿದಳು. ಬಾಟಲಿಯಲ್ಲಿದ್ದ ಮೀನುಗಳನ್ನೆಲ್ಲ ಹಳ್ಳದಲ್ಲಿ ಬಿಟ್ಟಳು. ತನ್ನಿಂದ ತಪ್ಪಾಗಿದ್ದಕ್ಕೆ ಕ್ಷಮೆ ಕೇಳಿದಳು. ಮೀನುಗಳಿಗೆ ಖುಷಿಯಾಯಿತು.
- ಅಮರಯ್ಯಾ ಪತ್ರಿಮಠ