ನಿಂತು ಕಲಿತರೆ ರ್ಯಾಂಕ್ ಗ್ಯಾರಂಟಿ

ನಿಂತು ಕಲಿತರೆ ರ್ಯಾಂಕ್ ಗ್ಯಾರಂಟಿ
Updated on: 

ಶಾಲೆಗಳೆಲ್ಲ ಹೈಟೆಕ್ ಆಗಿವೆ. ನೆಲದ ಬೆಂಚು, ಹಳೇ ಡೆಸ್ಕುಗಳೆಲ್ಲ ಮೂಲೆ ಸೇರಿ ಹಲವು ವರ್ಷಾಚರಣೆಗಳೂ ಆಗಿವೆ. ಈಗೇನಿದ್ದರೂ ಪ್ರೈವೇಟ್ ಸ್ಕೂಲುಗಳಲ್ಲಿ ಈಸಿ ಚೇರ್, ಕುಶನ್ ಸೀಟುಗಳ ಜಮಾನ. ಡೊನೇಶನ್ ಕೊಟ್ಟಿದ್ದಕ್ಕೆ ಸಾರ್ಥಕವೆನ್ನುವಂಥ ಆಸನ ವ್ಯವಸ್ಥೆ. ಹೀಗೆ ಮಾಡಿಬಿಟ್ಟರೆ ಎಲ್ಲ ವಿದ್ಯಾರ್ಥಿಗಳೂ ರ್ಯಾಂಕ್ ಬರುತ್ತಾರೆಂಬ ಮೂಢನಂಬಿಕೆ.
ಆದರೆ, ಬ್ರಿಟನ್ನಿನ ಸ್ಕೂಲೊಂದರಲ್ಲಿ ಹೀಗೆಲ್ಲ ಇಲ್ಲ. ಮಕ್ಕಳು ನಿಂತುಕೊಂಡೇ ಓದ್ತಾರೆ, ಬರೀತಾರೆ! ಹೀಗೆ ವ್ಯಾಸಂಗ ಮಾಡಿದ ಅಷ್ಟೂ ವಿದ್ಯಾರ್ಥಿಗಳು ಪಡೆದಿದ್ದು ಅತ್ಯುತ್ತಮ ರಿಸಲ್ಟ್. ಈ 'ಸ್ಟ್ಯಾಂಡಿಂಗ್ ಡೆಸ್ಕ್‌' ಬಳಸಿದ ವಿದ್ಯಾರ್ಥಿಗಳ ಏಕಾಗ್ರತೆ ಅತ್ಯುತ್ತಮವಂತೆ. ಅವರ ಆರೋಗ್ಯ ಕೂಡ ಅಷ್ಟೇ ಹಿತಕರವಾಗಿದೆಯಂತೆ.
ಏಕಾಗ್ರತೆ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸಲೆಂದೇ ವೆಸ್ಟ್ ಯಾರ್ಕ್‌ಶೈರ್‌ನ ಬ್ರಾಡ್‌ಫೋರ್ಡ್‌ನಲ್ಲಿರುವ 'ಗ್ರೋವ್ ಹೌಸ್ ಪ್ರೈಮರಿ ಸ್ಕೂಲ್‌ನಲ್ಲಿ ಈ ಪ್ರಯೋಗ ಮಾಡಲಾಯಿತು. ಅಂದಹಾಗೆ, 9ರಿಂದ 10 ವರ್ಷದ ವಿದ್ಯಾರ್ಥಿಗಳಿಗಷ್ಟೇ ಈ ಸ್ಟ್ಯಾಂಡಿಂಗ್ ಡೆಸ್ಕ್. ಅಷ್ಟಕ್ಕೂ ಈ ಶಾಲೆ ಏಕಾಏಕಿ ನಿರ್ಧಾರ ಕೈಗೊಂಡು ಈ ಪ್ರಯೋಗ ನಡೆಸಿಲ್ಲ. ಪೋಷಕರ ಒಪ್ಪಿಗೆ ಮೇರೆಗೆ 55 ವಿದ್ಯಾರ್ಥಿಗಳನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲಾಯಿತು. 27 ವಿದ್ಯಾರ್ಥಿಗಳಿಗೆ 7 ವಾರ ನಿಲ್ಲುವ ಡೆಸ್ಕ್ ಮೇಲೆ ಪಠ್ಯ ಅಭ್ಯಸಿಸುವಂತೆ ಹೇಳಲಾಯಿತು. ಉಳಿದ ಅರ್ಧ ವಿದ್ಯಾರ್ಥಿಗಳು ಎಲ್ಲರಂತೆ ಕುಳಿತು ಪಠ್ಯಾಭ್ಯಾಸ ಮಾಡಬೇಕಿತ್ತು. ನಂತರದ 7 ವಾರಗಳಲ್ಲಿ ಉಳಿದರ್ಧ ವಿದ್ಯಾರ್ಥಿಗಳಿಗೆ ನಿಂತು ಪಠ್ಯ ಅಭ್ಯಸಿಸುವಂತೆ ಸೂಚಿಸಲಾಯಿತು. ಆ ವೇಳೆ ಮಕ್ಕಳ ಎತ್ತರ, ತೂಕ, ರಕ್ತದೊತ್ತಡ, ಸೊಂಟದ ಸುತ್ತಳತೆ ಹಾಗೂ ಚಲನಾ ಕೌಶಲ್ಯದ ಪ್ರಮಾಣ ಬರೆದಿಡಲಾಯಿತು. ಕೊನೆಯಲ್ಲಿ ಹೋಲಿಸಿ ಫಲಿತಾಂಶ ಕಂಡುಕೊಳ್ಳಲಾಯಿತು.
ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಯುಎಸ್‌ನ ಶಾಲೆಗಳಲ್ಲಿ ಈಗಾಗಲೇ ಅಂಥ ಪ್ರಯೋಗಗಳನ್ನು ಮಾಡಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಏಕಾಗ್ರತೆಯನ್ನು ಕಾಯ್ದುಕೊಳ್ಳಲಾಗಿದೆ. ಅಂಥ ಶಾಲೆಗಳ ಫಲಿಂತಾಂಶವೂ ಬಂಪರ್ರೇ ಆಗಿದೆ. ಯಾಕೆ ಈ ವ್ಯವಸ್ಥೆಯನ್ನು ಭಾರತದಲ್ಲಿ ಮಾಡಬಾರದು? <

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com