

ಶಾಲೆ ಮುಗಿಸಿ ಬಂದ ಚಂದ್ರನಿಗೆ ಅವನ ಅಮ್ಮ ತಿನ್ನಲು ರೊಟ್ಟಿ ಕೊಟ್ಟು 'ನೀನು ಈ ರೊಟ್ಟಿಗಳನ್ನು ತಿಂದು ನಮ್ಮ ಅವರೇ ಹೊಲಕ್ಕೆ ಹೋಗಿ ಬಾ. ಅಲ್ಲಿ ಯಾರಾದರೂ ಕಾಯಿಗಳನ್ನು ಕೊಯ್ದು ಬಿಡುತ್ತಾರೆ, ನಾವು ಕಾಯಿಯನ್ನು ಕೊಯ್ದು ಮಾರುವವರೆಗೂ ನೀನು ಹೊಲದ ಕಡೆ ಹೋಗಬೇಕು' ಎಂದಳು. 'ಸರಿಯಮ್ಮಾ' ಎಂದು ಜೇಬಿಗೆ ಕಡಲೇಕಾಯಿ ಬೆಲ್ಲ ಹಾಕಿಕೊಂಡು ಹೊಲದ ಕಡೆ ನಡೆದ.
ಹೊಲದಲ್ಲಿನ ಆಲದ ಮರದ ಬುಡದಲ್ಲಿ ಕುಳಿತು ಕಡಲೇಕಾಯಿ ತಿನ್ನುತ್ತಾ ಅವರೇ ಸಾಲಿನತ್ತ ಕಣ್ಣಾಡಿಸಿದ. ಪ್ರತಿ ಸಾಲಿನಲ್ಲೂ ಹತ್ತೆಂಟು ಹಕ್ಕಿಗಳು ಗಿಡದಿಂದ ಗಿಡಕ್ಕೆ ಹಾರುತ್ತಿದ್ದವು. ಆವರೇ ಗೊನೆಗಳ ಮೇಲೆ ಹರಿದಾಡುವ ಹುಳುಗಳನ್ನು ಆ ಹಕ್ಕಿಗಳು ಹೆಕ್ಕಿ ತಿನ್ನುತ್ತಿದ್ದವು. 'ಪಕ್ಷಿಗಳು ಸಹ ರೈತರ ಮಿತ್ರರು' ಎಂದು ಗುರುಗಳು ಹೇಳಿದ ಮಾತು ನೆನಪಾಯಿತು. ಕತ್ತಲಾಗುತ್ತಲೆ ಮನೆಯ ಕಡೆ ಹೊರಟ.
ಮಾರನೆಯ ದಿನ ಅವ್ವ ಅಪ್ಪನಿಗೆ 'ನೋಡಿ ಇವತ್ತು ಮೋಡ ಬಂದಿದೆ. ಈ ವರ್ಷ ಅವರೆಗೊನೆ ಚೆನ್ನಾಗಿದೆ ಮೋಡ ವಾತಾವರಣದಲ್ಲಿ ಹುಳು ಹೆಚ್ಚಾಗಿ ಕಾಯಿಯನ್ನು ತಿಂದು ಬಿಡುತ್ತದೆ. ಅಕ್ಕ ಪಕ್ಕದವರೆಲ್ಲ ಔಷಧಿ ಹೊಡೆಸುತ್ತಿದ್ದಾರೆ. ನಾವೂ ಹೊಡೆಸಬೇಕು' ಎಂದಳು. ಅಲ್ಲೇ ಇದ್ದ ಚಂದ್ರ ಇದನ್ನೆಲ್ಲ ಕೇಳಿಸಿಕೊಂಡು 'ಅವ್ವ ಅವರೆ ಗಿಡಕ್ಕೆ ಔಷಧಿ ಹೊಡೆಸಿದರೆ ಪಕ್ಷಿಗಳಿಗೆ ತೊಂದರೆಯಾಗುತ್ತದೆ'. 'ಪಕ್ಷಿಗಳಿಗೆ ತೊಂದರೆಯಾಗುತ್ತದೆ ಅಂತ ನಮ್ಮ ಅವರೆಗೊನೆಗಳನ್ನು ಹಾಳು ಮಾಡಿಕೊಳ್ಳುವುದೆ' ಎಂದಳು 'ಅದು ಹಾಗಲ್ಲವ್ವಾ, ಹಾಗೇ ಔಷಧ ಹೊಡೆಸಿದಾಗ ಹುಳುಗಳು ಸಾಯಬಹುದಾದರೂ ಸ್ವಲ್ಪ ದಿನದಲ್ಲೇ ಮತ್ತೆ ಹುಳುಗಳು ಬಂದು ಕಾಯಿ ತಿನ್ನುತ್ತವೆ. ಆಗ ಆ ಹುಳುಗಳನ್ನು ತಿನ್ನಲು ಪಕ್ಷಿಗಳು ಬರುವುದಿಲ್ಲ. ಆಗ ಹುಳುಗಳು ಹೆಚ್ಚಾಗಿ ಕಾಯಿಯು ಹಾಳಾಗುತ್ತದೆ' ಎಂದ. 'ನಿನಗೇನು ಗೊತ್ತಿಲ್ಲ ಮಗ, ಹಕ್ಕಿಗಳೆ ಅರ್ಧ ಕಾಯಿಯನ್ನು ಹಾಳು ಮಾಡುತ್ತವೆ' 'ಅಮ್ಮ, ನೀವು ತಪ್ಪು ತಿಳಿದಿದ್ದೀರಿ ಅಷ್ಟೆ. ನಾನೇ ದಿನವೂ ನೋಡಿದ್ದೇನೆ ಹಕ್ಕಿಗಳು ಗಿಡದಲ್ಲಿನ ಹುಳುಗಳನ್ನಷ್ಟೆ ತಿನ್ನುತ್ತವೆ. ಎರೆಹುಳು, ಗೆಜ್ಜಲು, ಇರುವೆ ಮತ್ತು ಪಕ್ಷಿಗಳು ರೈತರ ಮಿತ್ರರಂತೆ ಎಂದು ನಮ್ಮ ಮೇಷ್ಟ್ರು ಹೇಳಿದ್ದಾರೆ. ನಾವು ಹೀಗೆ ಔಷಧಿ ಹೊಡೆದರೆ ಗೆಜ್ಜಲು, ಇರುವೆ ಸಾಯುತ್ತವೆಯಲ್ಲದೆ ಹಕ್ಕಿಗಳು ಹೊಲಕ್ಕೆ ಬರುವುದಿಲ್ಲ. ಹಾಗಾಗಿ ಇದೊಂದು ಸಾರಿ ನನ್ನ ಮಾತು ಕೇಳವ್ವಾ..' ಎಂದು ಚಂದ್ರ ಅಮ್ಮನನ್ನು ಕೇಳಿಕೊಂಡ.
'ಸರಿ ಮಗ, ಈ ಬಾರಿ ಔಷಧಿ ಬೇಡವೆಂದು ಹೇಳ್ತೀನಿ. ಆದರೆ ಅವರೆಕಾಯಿಯ ಪರಿಸ್ಥಿತಿ ಏನಾಗುತ್ತೆ ಕಾದು ನೋಡೋಣ' ಎಂದಳು. ಅಂದಿನಿಂದ ದಿನವು ಸ್ಕೂಲ್ ಆದ ನಂತರ ಹೊಲ ಕಾಯಲು ಚಂದ್ರ ಹೋಗತೊಡಗಿದ. ಅಕ್ಕ-ಪಕ್ಕದ ಹೊಲದವರೆಲ್ಲ ಔಷಧಿ ಹೊಡೆಸಿದರು. ಅವರ ಹೊಲಗಳಿಗೆ ಒಂದು ಹಕ್ಕಿಯೂ ಸುಳಿಯಲಿಲ್ಲ. ಚಂದ್ರನ ಹೊಲದಲ್ಲಿ ಮಾತ್ರ ಹಕ್ಕಿಗಳ ಕಲರವ! ಇದನ್ನೆಲ್ಲ ಕಂಡ ಚಂದ್ರನಿಗೆ ಖುಷಿಯಾಗುತ್ತಿತ್ತು. ಕಾಯಿಗಳು ಬಲಿತು ತಳ್ಳಾದವು. ಸಾಲು ಸಾಲು ಹಿಡಿದು ಕಾಯಿ ಬಿಡಿಸಿದರು. ಮೂಟೆ ಮೂಟೆ ಕಾಯಿ ಸಿಕ್ಕಿತು. ಅಕ್ಕ-ಪಕ್ಕದವರ ಹೊಲದಲ್ಲಿ ಹುಳುಗಳ ಕಾಟದಿಂದ ಉತ್ತಮ ಬೆಳೆ ಬರಲಿಲ್ಲ. ಪಕ್ಷಿಗಳು ಅತ್ತ ಸುಳಿಯದೇ ಅವರ ಕಾಯಿಯಲ್ಲಿ ಕಾಳು ಹೆಚ್ಚು ಸಿಗಲಿಲ್ಲ. ಚಂದ್ರನ ಹೊಲದಲ್ಲಿ ಔಷಧಿ ಹೊಡೆಯದಿದ್ದರಿಂದ ಹಕ್ಕಿಗಳು ಬಿಡುವಿಲ್ಲದೆ ಹುಳುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಂಡವು. ಉತ್ತಮ ಬೆಳೆಗೂ ಸಹಕರಿಸಿದವು. ಮಗನ ಬುದ್ಧಿವಂತಿಕೆಗೆ ಅಪ್ಪ-ಅವ್ವ ಇಬ್ಬರೂ ತಲೆದೂಗಿ ಆನಂದಿಸಿದರು. ಪ್ರಕೃತಿಯಲ್ಲಿ ಒಂದಕ್ಕೊಂದು ಸಂಬಂಧವಿದೆ. ಪ್ರಕೃತಿಗೆ ವಿರುದ್ಧವಾಗಿ ನಡೆಯದೆ ಪ್ರಕೃತಿಗೆ ಹೊಂದಿಕೊಂಡರೆ ನಮಗೆ ಒಳ್ಳೆಯದಾಗುತ್ತೆ ಎನ್ನುವುದಕ್ಕೆ ಚಂದ್ರನ ಹೊಲದಲ್ಲಿ ಬಂದ ಉತ್ತಮ ಬೆಳೆಯ ಅವರೆ ಕಾಯಿಗಳೇ ಸಾಕ್ಷಿ.
- ಸಾ.ಮ.ಶಿವಮಲ್ಲಯ್ಯ