

ಕೆಮಿಕಲ್ ರಿಯಾಕ್ಷನ್ ಅನ್ನೋ ಪದ ಕೇಳಿರ್ತೀಯ. ಅದನ್ನಾ ಇವತ್ತು ಪ್ರಯೋಗ ಮಾಡಿ ತಿಳಿದುಕೊಳ್ಳೋಣ. ಒಂದು ಬಲೂನ್, 40ಎಂ.ಎಲ್ ನೀರು, ಒಂದು ಜ್ಯೂಸ್ ಬಾಟಲ್, ಸ್ಟ್ರಾ, ನಿಂಬೆ ಜ್ಯೂಸ್, ಮತ್ತು ಟೀ ಸ್ಪೂನ್‌ನಷ್ಟು ಬೇಕಿಂಗ್ ಸೋಡಾ ತೆಗೆದುಕೋ. ಮೊದಲಿಗೆ ಬೆಲೂನ್‌ಅನ್ನು ಒಂದೆರಡು ಬಾರಿ ಊದಿ, ಗಾಳಿ ತೆಗೆದು ಸಡಿಲ ಮಾಡಿಕೋ. 40ಎಂಎಲ್ ನೀರನ್ನು ಬಾಟಲಿಯೊಳಗೆ ಸುರಿ. ಬೇಕಿಂಗ್ ಸೋಡಾವನ್ನು ಅದರೊಳಗೆ ಹಾಕು. ಸ್ಟ್ರಾ ಮೂಲಕ ಚೆನ್ನಾಗಿ ಕದಡು. ಸೋಡಾ ಪೂರ್ತಿಯಾಗಿ ನೀರಲ್ಲಿ ಕರಗಬೇಕು. ಈಗ ನಿಂಬೆಜ್ಯೂಸ್‌ಅನ್ನು ಅದರೊಳಗೆ ಹಾಕು. ತಕ್ಷಣ ಬೆಲೂನ್ ಬಾಯಿಯನ್ನು ಬಾಟಲಿಯ ಮೇಲ್ಭಾಗದ ಬಿರಡೆಗೆ ಫಿಕ್ಸ್ ಮಾಡಿಬಿಡು. ನಂತರ ಆಗುವ ಬದಲಾವಣೆ ನೋಡು!
ನೀನು ಮೇಲೆ ಹೇಳಿದಂತೆ ಸರಿಯಾಗಿ ಮಾಡಿದ್ದರೆ ಬೆಲೂನ್ ದೊಡ್ಡದಾಗುತ್ತಾ ಹೋಗುತ್ತದೆ. ಬೇಕಿಂಗ್ ಸೋಡಾದೊಂದಿಗೆ ನಿಂಬೆ ಜ್ಯೂಸ್ ಸೇರಿದಾಗ ಅಲ್ಲಿ ಆಗುವ ಬದಲಾವಣೆಗೆ 'ಕೆಮಿಕಲ್ ರಿಯಾಕ್ಷನ್' ಎನ್ನುವುದು. ಅಡುಗೆ ಸೋಡ ಬೇಸ್ ಆಗಿರುತ್ತದೆ. ಇನ್ನು ನಿಂಬೆ ಜ್ಯೂಸ್ ಆ್ಯಸಿಡ್. ಎರಡೂ ಸೇರಿದಾಗ ಇಂಗಲದ ಡೈ ಆಕ್ಸೈಡ್‌ಆಗಿ ಮಾರ್ಪಡುತ್ತದೆ. ಆಗ ಗಾಳಿ ಮೇಲಕ್ಕೆ ದೂಡಲ್ಪಡುತ್ತದೆ. ಆಗ ಗಾಳಿ ಬಾಟಲಿಯಿಂದ ಹೊರ ಬರುತ್ತದೆ. ಬಲೂನ್‌ಅನ್ನು ಅದರ ಬಾಯಿಗೆ ಸಿಕ್ಕಿಸಿದ್ದರಿಂದ ಅದರ ಗಾತ್ರ ದೊಡ್ಡದಾಗುತ್ತದೆ.