ಆಹಾರ ಭದ್ರತೆ

ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆ ಕೊನೆಗೂ ಲೋಕಸಭೆಯಲ್ಲಿ ಮಂಡನೆಯಾಗಿದೆ.
ಆಹಾರ ಭದ್ರತೆ
Updated on

ನವದೆಹಲಿ: ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆ ಕೊನೆಗೂ ಲೋಕಸಭೆಯಲ್ಲಿ ಮಂಡನೆಯಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಾಲಿಗೆ ಮಹತ್ವದ್ದಾಗಿರುವ ಈ ಮಸೂದೆಯನ್ನು ಆಹಾರ ಸಚಿವ ಕೆ.ವಿ. ಥಾಮಸ್ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು. ಈ ಮಸೂದೆಯಿಂದ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಪೂರೈಸಲಾಗುವ ಆಹಾರ ಧಾನ್ಯಗಳಲ್ಲಿ ಯಾವುದೇ ವ್ಯತ್ಯಾಸವಾಗದು ಎಂಬ ಭರವಸೆ ನೀಡಿದರು.
ಆದರೆ, ಪ್ರತಿಪಕ್ಷಗಳು ಮಾತ್ರ ಈ ಮಸೂದೆಯ ಗುರಿ ಚುನಾವಣೆಯೇ ಹೊರತು ಬಡವರಲ್ಲ. ಈಗಿನ ಸ್ಥಿತಿಯಲ್ಲಿ ಮಸೂದೆಗೆ ಒಪ್ಪಿಗೆ ನೀಡಲು ಸಾಧ್ಯವೇ ಇಲ್ಲ ಎನ್ನುವ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿವೆ. ಈ ನಡುವೆ, ಯುಪಿಎಗೆ ಬಾಹ್ಯ ಬೆಂಬಲ ನೀಡಿರುವ ಸಮಾಜವಾದಿ ಪಕ್ಷ ಕೂಡ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಸೂದೆಗೆ ಸಂಬಂಧಿಸಿ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ಕಿಡಿಕಾರಿದೆ.
ಹಸಿವು, ಅಪೌಷ್ಟಿಕತೆ ನಿವಾರಣೆ ಗುರಿ-ಸೋನಿಯಾ: ಆಹಾರ ಭದ್ರತಾ ಮಸೂದೆ ಚುನಾವಣೆ ಗಿಮಿಕ್ ಎನ್ನುವ ವಾದವನ್ನು ತಳ್ಳಿಹಾಕಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಹಸಿವು ಮತ್ತು ಅಪೌಷ್ಟಿಕತೆ ನಿವಾರಣೆಯೇ ಪಕ್ಷದ ಮುಖ್ಯ ಗುರಿ ಎಂದು ಹೇಳಿದ್ದಾರೆ. ಈ ಮಹತ್ವಾಕಾಂಕ್ಷಿ ಮಸೂದೆಗೆ ಎಲ್ಲಾ ಸಂಸದರು ಪಕ್ಷಭೇದ ಮರೆತು ಬೆಂಬಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಲೋಕಸಭೆಯಲ್ಲಿ ಪಕ್ಷದ ಪರ ಹಿಂದಿಯಲ್ಲಿ ಚರ್ಚೆ ಆರಂಭಿಸಿ ಅಪರೂಪದ ಭಾಷಣ ಮಾಡಿದ ಸೋನಿಯಾ, ದೇಶವಾಸಿಗಳಿಗೆ ಆಹಾರ ಒದಗಿಸುವಲ್ಲಿ ಭಾರತ ಶಕ್ತವಾಗಿದೆ ಎನ್ನುವ ಬಹುದೊಡ್ಡ ಸಂದೇಶ ರವಾನಿಸುವ ಕಾಲ ಸನ್ನಿಹಿತವಾಗಿದೆ. ಕೋಟ್ಯಂತರ ಮಂದಿಗೆ ಆಹಾರ ಭದ್ರತೆ ಒದಗಿಸಲು ಇದೊಂದು ಐತಿಹಾಸಿಕ ಅವಕಾಶ ಎಂದರು.
ಆಹಾರ ಭದ್ರತಾ ಯೋಜನೆಯಿಂದ ರೈತರಿಗೆ ಲಾಭ ಆಗುತ್ತದೋ ಇಲ್ಲವೋ ಎನ್ನುವುದು ಇಲ್ಲಿ ಮುಖ್ಯವಲ್ಲ ಎಂದ ಸೋನಿಯಾ, ಸಂಪನ್ಮೂಲವನ್ನು ಹೇಗಾದರೂ ಮಾಡಿ ಕ್ರೋಢೀಕರಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದೇ ವೇಳೆ, ಈ ಮಸೂದೆ ಜಾರಿಗೆ ಪಡಿತರ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅಗತ್ಯ ಎಂದೂ ತಿಳಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಮುಲಾಯಂ ಗುಡುಗು: ಆಹಾರ ಭದ್ರತಾ ಮಸೂದೆಯನ್ನು ಚುನಾವಣೆಯನ್ನು ಮುಂದಿಟ್ಟುಕೊಂಡು ಮಂಡಿಸಲಾಗುತ್ತಿದೆಯೇ ಹೊರತು ಬೇರಿನ್ನೇನೂ ಅಲ್ಲ ಎನ್ನುವ ಮೂಲಕ ಎಸ್ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಕಾಂಗ್ರೆಸ್ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ಮಸೂದೆಯಿಂದ ರಾಜ್ಯ ಸರ್ಕಾರಗಳ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ. ಹಾಗಾಗಿ ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆಯುವ ವರೆಗೆ ಮಸೂದೆಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಮಸೂದೆ ಔಚಿತ್ಯದ ಕುರಿತು ಹಲವು ಪ್ರಶ್ನೆಗಳನ್ನೆತ್ತಿದ ಮುಲಾಯಂ, ಇದರಿಂದ ರೈತರಿಗೆ ತೊಂದರೆಯಾಗಲಿದೆ. ಬಡವರ ಬಗ್ಗೆ ಸರ್ಕಾರಕ್ಕೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಹಸಿವಿನಿಂದ ಸಾವಿರಾರು ಜನ ಸಾಯುತ್ತಿದ್ದಾಗ ಯಾಕೆ ಈ ಮಸೂದೆಯನ್ನು ಜಾರಿಗೊಳಿಸಿಲ್ಲ?
ದೇಶದಲ್ಲಿ ಎಷ್ಟು ಮಂದಿ ಬಡವರಿದ್ದಾರೆ ಎನ್ನುವ ಕುರಿತೂ ಮಸೂದೆಯಲ್ಲಿ ಪ್ರಸ್ತಾಪ ಇಲ್ಲ. ನಿಮ್ಮ ಬಳಿ ಅಂಕಿ- ಅಂಶಗಳೇ ಇಲ್ಲ, ಕೇವಲ ಊಹೆಯ ಆಧಾರದ ಮೇಲೆ ಮಸೂದೆ ಮಂಡಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಮಸೂದೆಗೆ ಕೆಲವೊಂದು ತಿದ್ದುಪಡಿ ತಂದರಷ್ಟೇ ತಾವು ಮಸೂದೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲೇ ಅಂಗೀಕಾರ ಆಗಬೇಕು: ಯುಪಿಎ ಪಾಲಿಗೆ ಮಹತ್ವದ್ದಾಗಿರುವ ಈ ಮಸೂದೆಗೆ ಮುಂಗಾರು ಅಧಿವೇಶನದಲ್ಲೇ ಅಂಗೀಕಾರ ಪಡೆಯುವುದು ಸರ್ಕಾರದ ಗುರಿ. ಒಂದು ವೇಳೆ ಇದರಲ್ಲಿ ಸರ್ಕಾರ ವಿಫಲವಾದರೆ ಈ ಮಸೂದೆ ಸಂಬಂಧ ಕೆಲ ತಿಂಗಳ ಹಿಂದೆ ಹೊರಡಿಸಿದ್ದ ಅಧ್ಯಾದೇಶ ರದ್ದಾಗಲಿದೆ.
ಮುಂಗಾರು ಅಧಿವೇಶನ ಸೆ.6ರ ವರೆಗೆ ವಿಸ್ತರಣೆ: ಮುಂಗಾರು ಅಧಿವೇಶನದ ಅವಧಿಯನ್ನು ಸೆ.6ರ ವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪ್ರಮುಖ ಮಸೂದೆಗಳಿಗೆ ಈ ಅಧಿವೇಶನದಲ್ಲೇ ಅಂಗೀಕಾರ ಪಡೆಯುವ ಉದ್ದೇಶವನ್ನು ಸರ್ಕಾರ ಇಟ್ಟುಕೊಂಡಿದೆ. ಆ.5ರಂದು ಆರಂಭವಾದ ಮುಂಗಾರು ಅಧಿವೇಶನ ಆ.31ರಂದು ಮುಕ್ತಾಯ ಕಾಣಬೇಕಿತ್ತು. ಆದರೆ, ಕಲ್ಲಿದ್ದಲು ಹಗರಣ ಹಾಗೂ ತೆಲಂಗಾಣ ರಾಜ್ಯ ರಚನೆಗೆ ಸಂಬಂಧಿಸಿ ಕಲಾಪದ ಬಹುತೇಕ ಅವಧಿ ಗದ್ದಲದಲ್ಲೇ ಕೊಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

ದೇಶದ ಜನರ ಆಹಾರ ಭದ್ರತೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಭಾರತಕ್ಕೆ ಸಾಧ್ಯವಿದೆ ಎನ್ನುವ ದೊಡ್ಡ ಸಂದೇಶ ರವಾನಿಸಲು ಇದು ಸಕಾಲ. ನಮ್ಮ ಗುರಿ ಹಸಿವು ಹಾಗೂ ಅಪೌಷ್ಟಿಕತೆಯನ್ನು ದೇಶದಲ್ಲಿ ಹೊಡೆದೋಡಿಸುವುದಾಗಿದೆ.
-ಸೋನಿಯಾ ಗಾಂಧಿ,
ಕಾಂಗ್ರೆಸ್ ಅಧ್ಯಕ್ಷೆ


ಈ ಮಸೂದೆ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಪ್ರಯತ್ನ ನಡೆಯುತ್ತಿದೆ. ನೀವು ಜನರ ಭಾವನೆಗಳ ಜತೆಗೆ ಆಟವಾಡುತ್ತಿದ್ದೀರಿ. ಮೊದಲು ನಿಮ್ಮ ಆದ್ಯತೆಗಳೇನು, ದೇಶದ ಜನರ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಪರಿಗಣಿಸಿ.
-ಮುರಳಿ ಮನೋಹರ್ ಜೋಶಿ,
ಬಿಜೆಪಿ ಮುಖಂಡ


ಆಹಾರ ಭದ್ರತೆಯಲ್ಲಿ, ಮತಭದ್ರತೆ: ವ್ಯಂಗ್ಯ
ಇದು ಆಹಾರಭದ್ರತೆಯಲ್ಲ, ಮತ ಭದ್ರತೆ ಮಸೂದೆ! ಆಹಾರಭದ್ರತಾ ಮಸೂದೆಯನ್ನು ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಲೋಕಸಭೆಯಲ್ಲಿ ವ್ಯಂಗ್ಯವಾಡಿದ್ದು ಹೀಗೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಮಸೂದೆ ಮಂಡನೆಯಾಗುತ್ತಿದೆ. ಸರ್ಕಾರಕ್ಕೆ ಬಡವರ ಪರ ಕಾಳಜಿಯೇ ಇಲ್ಲ. ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದ ಬಳಿಕ ಸರ್ಕಾರ ಈಗ ಏಕೆ ಈ ಮಸೂದೆ ಮಂಡಿಸುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ವೇಳೆ, ಸರ್ಕಾರದ ಬಳಿ ಸರಿಯಾದ ಅಂಕಿ ಅಂಶಗಳೇ ಇಲ್ಲ. ಈ ಮಸೂದೆ ಮೂಲಕ ಕಾಂಗ್ರೆಸ್ ಜನರನ್ನು ವಂಚಿಸಲು ಹೊರಟಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com