ಫ.ಗು. ಹಳಕಟ್ಟಿ ಪ್ರಧಾನ ವೇದಿಕೆ, ಬಿಜಾಪುರ: ಸಮ್ಮೇಳನಾಧ್ಯಕ್ಷರಿಂದ ಶಾಂತಿ ಮಂತ್ರ, ಏಕತೆಯ ಪಾಠ. ಸಾಹಿತ್ಯ ಪರಿಷತ್ ಅಧ್ಯಕ್ಷರಿಂದ ಉಗ್ರ ಭಾಷಣ. ಅಲ್ಲಲ್ಲಿ ವಿವಾದ, ಜಟಾಪಟಿ. ಬಹುತೇಕ ಸಾಹಿತ್ಯ ಸಮ್ಮೇಳನದಂತೆ ಬಿಜಾಪರದಲ್ಲೂ ಕಾಣದ ಶಿಸ್ತು ಮತ್ತು ಸಮಯಪಾಲನೆ. ಬಿಜಾಪುರದಲ್ಲಿ ಬರವಿದ್ದರೂ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಡಲಿಲ್ಲ ಜನರ ಬರ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರು ರಾಜ್ಯಕ್ಕೆ ನೀರಿನ ವಿಷಯದಲ್ಲಿ ಅನ್ಯಾಯವಾದರೆ, ಒಕ್ಕೂಟ ವ್ಯವಸ್ಥೆಯಿಂದಲೇ ಹೊರಹೋಗುವ ಚಿಂತನೆ ನಡೆಸಬೇಕಾದೀತು ಎಂಬ ಉಗ್ರ ಎಚ್ಚರಿಕೆ ನೀಡಿದರು. ಅದರ ನಂತರ ಮಾತನಾಡಿದ ಸಮ್ಮೇಳನಾಧ್ಯಕ್ಷ ಕೋ.ಚನ್ನಬಸಪ್ಪ ಅವರು, 'ಮತಾಂತರಗಳಾಗಲಿ, ನೀರಿನ ವಿವಾದಗಳಾಗಲಿ ಶಾಂತಿಯುತವಾಗಿಯೇ ಬಗೆಹರಿಸಿಕೊಳ್ಳಬೇಕು. ಜಾತಿ-ಮತ ದ್ವೇಷದ ಬೆಂಕಿಗೆ ಸಿಲುಕಿ ನಾಶವಾಗುವ ಬದಲು ಬುದ್ಧರಾಗಿಯೇ ಜೀವಿಸೋಣ. ಕರ್ನಾಟಕ ಎಂದಿಗೂ ಸರ್ವಜನಾಂಗದ ಶಾಂತಿಯ ತೋಟವಾಗಿರಲಿ' ಎಂದು ಶಾಂತಿಯ ಮಂತ್ರ ಪಠಿಸಿದರು. ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಲಂಬಿ ಅವರ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಮಾತನಾಡಿ, 'ಭಾರತ ಮೊದಲು. ನಂತರ ಕರ್ನಾಟಕ' ಎಂದರು. ಆದರೆ, ಅಧ್ಯಕ್ಷರ ಭಾಷಣ ಯಾವುದೇ ಚರ್ಚೆ, ಪ್ರತಿಕ್ರಿಯೆ ಉಂಟುಮಾಡುವಲ್ಲಿ ಯಶಸ್ವಿಯಾಗಲಿಲ್ಲ. ನಂತರ ಯಾವುದೇ ಚರ್ಚೆಗಳು ಕೂಡ ಅದರ ಕುರಿತು ನಡೆಯಲಿಲ್ಲ.
ಪೂರ್ವ ಸಿದ್ಧತೆಗಳ ಕೊರತೆ, ಜನರಲ್ಲಿ ಹಿಂದಿನ ದಿನದವರೆಗೂ ಕಾಣದ ಉತ್ಸಾಹದ ನಡುವೆಯೇ ಶನಿವಾರ ಆರಂಭಗೊಂಡ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು. ಆದರೆ, ಊಟದ ನಂತರ ಜನ ಸಾಗರ ಗಮನಾರ್ಹವಾಗಿ ಕರಗಿತು. ಉದ್ಘಾಟನಾ ಕಾರ್ಯಕ್ರಮದ ನಂತರದ ಗೋಷ್ಠಿಗಳಿಗೆ ಖಾಲಿ ಖುರ್ಚಿಗಳೇ ಪ್ರೇಕ್ಷಕರು. ಮುಂದಿನ ಸಾಲಿನಲ್ಲಿ ಮಾತ್ರ ಜನ ಕಾಣುತ್ತಿದ್ದರು. ಈ ಬಾರಿಯ ಸಾಹಿತ್ಯ ಸಮ್ಮೇಳದ ಅಚ್ಚರಿಯೆಂದರೆ ಪುಸ್ತಕದ ಮಾರಾಟ ಉತ್ತಮವಾಗಿದೆ. ಯಾವಾಗಲೂ ಮಾರಾಟವಿಲ್ಲ ಎಂದು ಕೊರಗುತ್ತಿದ್ದ ಪುಸ್ತಕ ಮಾರಾಟಗಾರರಿಗೆ ಧೂಳಿನ ನಡುವೆಯೂ ಉತ್ತಮ ವ್ಯಾಪಾರವಿದೆ.
ವ್ಯವಸ್ಥೆಗಳ ಕೊರತೆ ಕುರಿತು ಜನರಿಂದ, ಪ್ರತಿನಿಧಿಗಳಿಂದ ಸಾಕಷ್ಟು ದೂರುಗಳಿವೆ. ಅದಕ್ಕೆ ಸೂಕ್ತವಾಗಿ ಸ್ಪಂದಿಸಲು ಮತ್ತು ಸೂಕ್ತ ವ್ಯವಸ್ಥೆ ಕಲ್ಸಿಸಲು ಸಂಘಟಕರು ವಿಫಲರಾಗಿದ್ದಾರೆ. ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸಣ್ಣಪುಟ್ಟ ದೋಷಗಳು ಇರುತ್ತವೆ. ಆದರೆ, ಪ್ರತಿ ಬಾರಿಯ ಸಮ್ಮೇಳನದಲ್ಲೂ ಈ ಸಮಸ್ಯೆಗಳು ಕಾಡುವುದೇಕೆ ಎಂಬ ಜನರ ಪ್ರಶ್ನೆಗೆ ಸಂಘಟಕರ ಬಳಿ ಉತ್ತರವಿದ್ದಂತಿಲ್ಲ. ವಿಶೇಷವಾಗಿ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಮತ್ತು ಜಿಲ್ಲಾ ಸಮಿತಿ ನಡುವೆ ಹೊಂದಾಣಿಕೆಯ ಕೊರತೆಯೂ ಇರುವಂತಿದೆ. ಈ ಬಗ್ಗೆ ಸಾಹಿತಿಗಳ ವಲಯದಲ್ಲೂ ಗುಸುಗುಸು ಇದೆ. ಇದು ಕೂಡ ಅವ್ಯವಸ್ಥೆಗಳಿಗೆ ಕಾರಣ ಎನ್ನಲಾಗುತ್ತಿದೆ.
79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಕ್ಕೆ ಜನಸಾಗರವೇ ಹರಿದು ಬಂದಿದ್ದು ಮತ್ತು ಮೆರವಣಿಗೆಗೆ ಬಿಜಾಪುರದ ಜನರ ಅದ್ಭುತ ಸ್ಪಂದನವೇ ಮೊದಲ ದಿನದ ಹೈಲೈಟ್. ಉಳಿದಂತೆ ಸಮ್ಮೇಳನ ಸಪ್ಪೆ ಸಪ್ಪೆ.
- ವಿನಾಯಕ ಭಟ್ ಮೂರೂರು
Advertisement