ಅನುಭಾವ ಸಾಹಿತ್ಯ ಅಳವಡಿಸಿಕೊಳ್ಳಿ

Updated on

ಅನುಭಾವ ಸಾಹಿತ್ಯ ಮಾಲಿಕೆ ವಿಚಾರಗೋಷ್ಠಿಯಲ್ಲಿ ಸಾಹಿತಿ ಡಾ. ಕಲ್ಗುಡಿ
 ರುದ್ರಪ್ಪ ಆಸಂಗಿ
ಡಾ.ಫ.ಗು. ಹಳಕಟ್ಟಿ ವೇದಿಕೆ, ಬಿಜಾಪುರ:
ಅನುಭಾವ ಸಾಹಿತ್ಯಕ್ಕೆ ನಮ್ಮ ವ್ಯಕ್ತಿತ್ವವನ್ನು ದೊಡ್ಡದು ಮಾಡುವ ಶಕ್ತಿ ಇದೆ. ಅದನ್ನು ಅರಿಯುವುದೇ ಅನುಭಾವ ಸಾಹಿತ್ಯ. ಬಸವಣ್ಣನವರು ಒಬ್ಬ ಅನುಭಾವಿ. ಹಾಗಾಗಿ ಅವರ ಕಳಬೇಡ.. ಕೊಲಬೇಡ, ಹುಸಿಯ ನುಡಿಯಲು ಬೇಡ... ಎನ್ನುವ ವಚನದಲ್ಲಿಯೂ ಅನುಭಾವಿ ಸಾಹಿತ್ಯ ಹಾಸು ಹೊಕ್ಕಾಗಿದೆ. ಇದನ್ನು ಅರಿತು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದು ಹೆಚ್ಚು ಮಹತ್ವ ಪಡೆದಿದೆ ಎಂದು ಸಾಹಿತಿ ಡಾ. ಬಸವರಾಜ ಕಲ್ಗುಡಿ ಹೇಳಿದರು.
ಇಲ್ಲಿನ ಸೈನಿಕ ಶಾಲೆ ಆವರಣದಲ್ಲಿ ಭಾನುವಾರ ನಡೆದ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಅನುಭಾವ ಸಾಹಿತ್ಯ ಮಾಲಿಕೆಯಲ್ಲಿ ಆಯೋಜಿಸಿದ್ದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅನುಭಾವ ಸಾಹಿತ್ಯದ ಹುಟ್ಟು: ಗಾಂಧೀಜಿ ಸತ್ಯ, ಅಹಿಂಸೆಯನ್ನು ತಂದರು. ಹಿಂಸೆಯನ್ನು ಅಹಿಂಸೆಗೆ ತರುವ ಕ್ರಿಯೆಯೇ ಅನುಭಾವ ಸಾಹಿತ್ಯವಾಗುತ್ತದೆ. ಬೇಂದ್ರೆ, ಕುವೆಂಪು, ಮಧುರ ಚೆನ್ನರು ಅನುಭಾವ ಸಾಹಿತ್ಯವನ್ನು ಚೆನ್ನಾಗಿ ಹುಟ್ಟು ಹಾಕಿದ್ದಾರೆ.
ಅನುಭಾವ ಕ್ಷಣ ಕ್ಷಣದ ಬದುಕಿನಲ್ಲಿ ಜನರನ್ನು ಎಷ್ಟು ಹತ್ತಿರದಿಂದ ಕಾಣುತ್ತೇವೆಯೋ ಅದುವೇ ಅನುಭಾವ. ಬೇಂದ್ರೆ ಅವರು ಇದನ್ನೇ ಹೇಳಿದ್ದಾರೆ. ಹೆಣ್ಣನ್ನು ಸಹಯೋಗಿಯನ್ನಾಗಿ ನೋಡಬೇಕು. ಈ ರೀತಿ ಅನುಭಾವ ಪ್ರತಿಯೊಬ್ಬರಲ್ಲಿ ಅರಿವಿಗೆ ಬರಬೇಕು ಎಂದರು.
ಸಾಹಿತಿ ಡಾ. ನಟರಾಜ ಬೂದಾಳು ಅವರು ಶರಣರ, ಸೂಫಿಗಳ, ತತ್ವಪದಕಾರರ ತಾತ್ವಿಕ ನೆಲೆಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಶರಣರ, ಸೂಫಿಗಳ, ತತ್ವ ಪದಗಳ ಮೂರು ಧಾರೆಗಳು ಅನುಭಾವ ಸಾಹಿತ್ಯದಲ್ಲಿ ಬರುತ್ತವೆ. ಕೆಳಸ್ತರದ ಬಡವರು ಅನುಭಾವ ಸಾಹಿತ್ಯವನ್ನು ಕಟ್ಟಿದ್ದಾರೆ. ಈ ಬಡವರು ತಮ್ಮ ನೆಲೆಯನ್ನೇ ಕಳೆದುಕೊಂಡಿದ್ದಾರೆ. ಚರಿತ್ರೆಕಾರರು ಅವರನ್ನು ಅಪವ್ಯಾಖ್ಯಾನ ಮಾಡಿದ್ದಾರೆ ಎಂದರು.
ಒಳಗಿವೆ ಕನಕನ ವಿಚಾರಗಳು: ಅನುಭಾವ ಸಾಹಿತ್ಯವನ್ನು ಒಡೆದು ಹಾಕುತ್ತಿರುವ ಸರ್ಕಾರ ಹಾಗೂ ಮಠವನ್ನು ವಿರೋಧಿಸಬೇಕು. ಕೃಷ್ಣ ಮಠಗಳಲ್ಲಿ ಕನಕ ವಿಚಾರಗಳನ್ನು ಒಳಗಿಡಲಾಗಿದೆ. ಆದರೆ ಕನಕನನ್ನು ಒಳಗೆ ಬಿಟ್ಟುಕೊಂಡಿಲ್ಲ ಎಂದು ಹೇಳಿದರು. ಸಾಹಿತಿ ಡಾ. ರಹಮತ್ ತರೀಕೆರೆ ಅವರು ಮಾತನಾಡಿ, ಎರಡನೇ ಇಬ್ರಾಹಿಂ ಆದಿಲಶಾಹಿ ಸ್ವತಃ ಆಳದಲ್ಲಿ ಅನುಭಾವಿಯಾಗಿದ್ದನು. ಸಾಮಾನ್ಯ ಮನುಷ್ಯನಿಂದ ದೊರೆಯತನಕ ಅನುಭಾವ ಅಂತರ್ಗತವಾಗಿದೆ. ಬಿಜಾಪುರದಲ್ಲಿ ಆದಿಲಶಾಹಿ ಕಾಲದಲ್ಲಿ 160ಕ್ಕೂ ಹೆಚ್ಚು ಸೂಫಿ ಸಂತರು ಇದ್ದರು. ಅವರೆಲ್ಲರೂ ಅನುಭಾವಿ ಸಾಹಿತಿಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅನುಭಾವಿ ಸಾಹಿತಿಗಳು ಬೇರೆ ಯಾವುದೇ ಜಿಲ್ಲೆಯಲ್ಲಿ ಸಿಗುವುದಿಲ್ಲ ಎಂದು ಹೇಳಿದರು.
ಆರ್. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ರುದ್ರೇಶ ಅದರಂಗಿ ನಿರೂಪಿಸಿದರು. ಡಾ. ಸೋ.ಮು. ಭಾಸ್ಕರಾಚಾರ್ಯ ವಂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com