

ಜೈಪುರ: ಕನ್ನಡಿಗ, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು.ಆರ್. ಅನಂತಮೂರ್ತಿ ಅವರು ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಅಂತಿಮ ಸುತ್ತಿನಲ್ಲಿ ಒಟ್ಟು 10 ಮಂದಿ ಇದ್ದಾರೆ. ಮೇ 22 ರಂದು ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.
80 ವರ್ಷದ ಅನಂತಮೂರ್ತಿ ಅವರು ಬೂಕರ್ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿದ್ದಾರೆ ಎಂಬ ವಿಷಯವನ್ನು ಜೈಪುರದಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವದಲ್ಲಿ ಪ್ರಕಟಿಸಲಾಗಿದೆ. ಈ ಪ್ರಶಸ್ತಿಯು 51 ಲಕ್ಷ ಮೊತ್ತ ಒಳಗೊಂಡಿದೆ. ಅನುವಾದಕಾರನಿಗೆ 12 ಲಕ್ಷ ನೀಡಲಾಗುತ್ತದೆ. ಲಂಡನ್ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕನ್ನಡದ ನವ್ಯ ಸಾಹಿತ್ಯದಲ್ಲಿ ಹೊಸ ಪರಂಪರೆಗೆ ಕಾರಣರಾದ ಅನಂತಮೂರ್ತಿ ಅವರು 5 ಕಾದಂಬರಿಗಳನ್ನು ಬರೆದಿದ್ದಾರೆ. ಅಲ್ಲದೆ 8 ಸಣ್ಣಕಥೆಗಳು, ಮೂರು ಕವನ ಸಂಕಲನಗಳನ್ನೂ ಬರೆದಿದ್ದಾರೆ. ಇವರ ಸಾಹಿತ್ಯ ದೇಶದ ಇತರೆ ಭಾಷೆಗಳಿಗೆ ಅನುವಾದಗೊಂಡಿರುವುದಲ್ಲದೆ, ಆಂಗ್ಲ ಭಾಷೆಗೂ ಭಾಷಾಂತರಗೊಂಡಿವೆ.
ಈ ಪ್ರಶಸ್ತಿಯನ್ನು 2 ವರ್ಷಕ್ಕೊಮ್ಮೆ ಮಾತ್ರ ನೀಡಲಾಗುತ್ತದೆ. ವಿಶೇಷವೆಂದರೆ ಕಾದಂಬರಿಕಾರರಿಗೆ ಮಾತ್ರ ಇದನ್ನು ನೀಡಲಾಗುತ್ತದೆ. ಮ್ಯಾನ್ ಬೂಕರ್ ಸಂಸ್ಥೆ ಈ ಪ್ರಶಸ್ತಿ ನೀಡುತ್ತದೆ. ಅನಂತಮೂರ್ತಿ ಅವರು ಮೈಸೂರಿನಲ್ಲಿ ಆಂಗ್ಲ ಭಾಷಾ ಸಾಹಿತ್ಯ ಅಧ್ಯಯನ ನಡೆಸಿದ್ದಾರೆ. ಬರ್ಮಿಂಗ್ಹ್ಯಾಮ್ ವಿವಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.