ಬೆಂಗಳೂರು: ರಾಜ್ಯದ ಅಲ್ಲಲ್ಲಿ ಸೋಮವಾರ ತುಸು ಮಳೆಯಾಗಿದ್ದು, ದಕ್ಷಿಣ ಕರಾವಳಿ, ಕೊಡಗು ಹಾಗೂ ಬಿಜಾಪುರ ಜಿಲ್ಲೆಗಳಲ್ಲಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನರು ಪರದಾಡುವಂತಾಯಿತು.
ಬಿಜಾಪುರದಲ್ಲಿ ಭಾನುವಾರದಿಂದಲೂ ಸುರಿಯುತ್ತಿರುವ ಮಳೆಯಿಂದ ಡೋಣಿ ನದಿ ತುಂಬಿ, ಸೋಮವಾರ ಸಂಜೆಯಿಂದ ಅಪಾಯದ ಮಟ್ಟ ತಲುಪಿದೆ. ಇದರಿಂದ ಕೋಟೆ-ಹಡಿನಾಳ ರಸ್ತೆ ಸಂಚಾರ ಬಂದ್ ಆಗಿದ್ದು, ಹಡಗಿನಾಳ ಗ್ರಾಮಸ್ಥರು ಸೇರಿದಂತೆ ಶಿವಪುರ, ಮುಕಿಹಾಳ ನಾಗೂರ, ಹಗರುಂಡ ಗ್ರಾಮಗಳ ಜನರು ಪರದಾಡುವಂತಾಗಿದೆ. ತಾಳಿಕೋಟೆ-ಹಡಗಿನಾಳ ರಸ್ತೆಯಲ್ಲಿ ಡೋಣಿ ನದಿಗೆ ಅಡ್ಡಲಾಗಿ 2002ರಲ್ಲಿ ಕೆಳ ಮಟ್ಟದ ಸೇತುವೆ ನಿರ್ಮಿಸಲಾಗಿದೆ. ಆದರೆ, ಪ್ರತಿ ಬಾರಿಯೂ ಮಳೆಯಾದಾಗ ಸಂಚಾರ ಸಂಪರ್ಕ ಕಳೆದುಕೊಳ್ಳುತ್ತದೆ. ಈ ಬಾರಿಯೂ ನೀರು ಬಂದಿದ್ದು, ನದಿ ದಾಟಲಾಗದ ಜನರು 13 ಕಿ.ಮೀ. ಸುತ್ತುವರಿದು, ಮುಕಿಹಾಳ, ಮಿಣಜಗಿ ಮೂಲಕ ಹಾಯ್ದು ಹೋದರು.
ಕರಾವಳಿಯಲ್ಲಿ ಮಳೆ: ಉಡುಪಿ ಜಿಲ್ಲೆಯಲ್ಲಿಯೂ ಕಳೆದೆರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಕೃಷಿ ಬೆಳೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಜಿಲ್ಲೆಯ ವಿವಿಧೆಡೆ ತುಸು ಹಾನಿ ಸಂಭವಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ತೀವ್ರತೆ ಕಡಿಮೆಯಾಗಿದ್ದರೂ, ಮಂಗಳೂರಿನ ವೆಲೆನ್ಸಿಯಾದಲ್ಲಿ ಮನೆ ಗೋಡೆ ಕುಸಿದು ಹಾನಿಗೊಳಗಾಗಿವೆ. ಉಮಾವತಿ ಎಂಬವರಿಗೆ ಗಾಯಗಳಾಗಿದ್ದು, ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.