

ನವದೆಹಲಿ/ಕೋಲಾರ: ಇನ್ನು ಮುಂದೆ ಕೋಲಾರ ಜನತೆ ಬದುಕು ಬಂಗಾರವಾಗಲಿದೆ.
13 ವರ್ಷಗಳ ಹಿಂದೆ ಮುಚ್ಚಿಹೋಗಿದ್ದ ಕೋಲಾರ ಚಿನ್ನದ ಗಣಿ ಮತ್ತೆ ಆರಂಭಿಸಲು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಕೋಲಾರ ಭಾಗದಲ್ಲಿ ಹರ್ಷದ ಹೊನಲು ಎದ್ದಿದೆ. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರನ್ನೊಳಗೊಂಡ ಪೂರ್ಣ ಪೀಠ ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ.
2001ರಲ್ಲಿ ಕೇಂದ್ರದಲ್ಲಿ ಎನ್ಡಿಎ ಸರ್ಕಾರವಿದ್ದ ಸಂದರ್ಭದಲ್ಲಿ ಈ ಗಣಿಯನ್ನು ಮುಚ್ಚಲಾಗಿತ್ತು. ಆಗಿನಿಂದಲೂ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಗಣಿಗಾರಿಕೆ ಪುನರಾರಂಭಕ್ಕೆ ಹೋರಾಟ ನಡೆಯುತ್ತಲೇ ಇತ್ತು. ಅಲ್ಲದೆ ಕೋಲಾರ ಜಿಲ್ಲೆಯವರೇ ಆದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರು ಪ್ರಭಾವ ಬಳಸಿ 2006ರ ಕೇಂದ್ರ ಸಂಪುಟ ಸಭೆಯಲ್ಲಿ ಗಣಿಗಾರಿಕೆ ಆರಂಭಕ್ಕೆ ಸಮ್ಮತಿ ಪಡೆದಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಇದೀಗ ಸುಪ್ರೀಂಕೋರ್ಟ್ ಕೂಡ ಗಣಿಗಾರಿಕೆ ಆರಂಭಿಸುವುದಕ್ಕೆ ಹಸಿರು ನಿಶಾನೆ ತೋರಿದೆ.
2006 ಜುಲೈ 7ರ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಕುರಿತಂತೆ ತೆಗೆದುಕೊಂಡ ನಿರ್ಣಯಗಳಿಗೆ ಮರುಜೀವ ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಆದೇಶ ಹೊರಬಿದ್ದ ತಕ್ಷಣವೇ ಗ್ಲೋಬಲ್ ಟೆಂಡರ್ ಕರೆಯಬೇಕು. ಜೊತೆಗೆ ಕರ್ನಾಟಕ ಹೈಕೋರ್ಟ್ನ ಕಂಪನಿ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
ಸದ್ಯದಲ್ಲೇ ಆರಂಭ: ಈಗಾಗಲೇ ಜಾಗತಿಕವಾಗಿ ಟೆಂಡರ್ ಕರೆಯಲಾಗಿದೆ. ಆದರೆ ಕರ್ನಾಟಕ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಸ್ಥಗಿತವಾಗಿತ್ತು. ಇದೀಗ ಸುಪ್ರೀಂಕೋರ್ಟ್ ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸಿದ್ದರಿಂದ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಈ ಪ್ರಕ್ರಿಯೆ ಇನ್ನು 5 ತಿಂಗಳಲ್ಲಿ ಮುಗಿಯಲಿದೆ. ಇನ್ನಾರು ತಿಂಗಳಲ್ಲಿ ಗಣಿಗಾರಿಕೆ ಆರಂಭವಾಗಿ, ಹಿಂದಿನ 3500 ಕಾರ್ಮಿಕರ ಜೊತೆಗೆ, ಒಟ್ಟು 5000 ಮಂದಿ ಕಾರ್ಮಿಕರ ಬದುಕು ಬಂಗಾರವಾಗಲಿದೆ. ಅಲ್ಲದೆ ಕೋಲಾರ ಜನತೆಯ ಆಶೋತ್ತರಗಳು ಗಣಿಗಾರಿಕೆ ಮೂಲಕ ಮತ್ತೆ ಚಿಗುರಿಕೊಳ್ಳಲಿವೆ.
ಕಾರ್ಮಿಕರ ಸಂಭ್ರಮ: ಕೋಲಾರದಲ್ಲಿ ಮತ್ತೆ ಚಿನ್ನದ ಗಣಿಗಾರಿಕೆ ಆರಂಭಿಸಲು ಸಮ್ಮತಿ ಸಿಗುತ್ತಿದ್ದಂತೆ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕಾರ್ಮಿಕ ಕುಟುಂಬಗಳು, ಕಾರ್ಮಿಕ ಒಕ್ಕೂಟದ ಸಂಘಗಳ ಮುಖಂಡರು, ವಿವಿಧ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಕೋಲಾರದ ಸೂರಜ್ಮುಲ್ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ.
ಕೆಜಿಎಫ್ ಕ್ಷೇತ್ರದ ಚಿನ್ನದ ಗಣಿ ಕಾರ್ಮಿಕರು ಮತ್ತು ಕಾರ್ಮಿಕರ ಒಕ್ಕೂಟದ ಸಂಘಗಳು ಮತ್ತು ಕೆಜಿಎಫ್ನ ಲಕ್ಷಾಂತರ ಜನತೆಗೆ ಸುಪ್ರೀಂಕೋರ್ಟ್ ತೀರ್ಪು ಖುಷಿ ತಂದಿದೆ.
- ಯಶವಂತರಾಜ್,
ಕಾರ್ಮಿಕ ಒಕ್ಕೂಟ ಸಂಘದ ಅಧ್ಯಕ್ಷ