ಕ.ಪ್ರ. ವಾರ್ತೆ ಬೆಂಗಳೂರು ಜು.10
ಏನೆಲ್ಲಾ ಹೊಸ ಕಾರ್ಯಕ್ರಮಗಳು? ಹಳೆಯ ಕಾರ್ಯಕ್ರಮಗಳ ಪರಿಸ್ಥಿತಿ ಏನು? ಸಂಪನ್ಮೂಲ ಸಂಗ್ರಹಕ್ಕೆ ಮಾರ್ಗಗಳೇನು?
ಹೀಗೆ ಸಾಕಷ್ಟು ಪ್ರಶ್ನೆ, ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಹಾಗೂ ಒಟ್ಟಾರೆ ಎಂಟನೇ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ.
ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮಂಡಿಸಿದ ಬಜೆಟ್ ಬದಿಗಿಟ್ಟು ಆರ್ಥಿಕ ವರ್ಷದ ಮಧ್ಯೆ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿರುವುದು ಒಂದೆಡೆಯಾದರೆ, ಬಜೆಟ್ ಮೊತ್ತ ಎಷ್ಟಿರಬಹುದು ಎಂಬ ಪ್ರಶ್ನೆ ಪ್ರಮುಖವಾಗಿ ಕಾಡುತ್ತಿದೆ.
ಏಕೆಂದರೆ, ಈ ಹಿಂದೆ ಉಪಮುಖ್ಯಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿ ಮಂಡಿಸಿದ ಏಳು ಉತ್ತಮ ಬಜೆಟ್ಗಳಿಂದಾಗಿ ಆರ್ಥಿಕ ತಜ್ಞ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು. ಅಷ್ಟೇ ಅಲ್ಲ, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ಆದ್ಯತೆ ನೀಡಿದ್ದರು. ಆದರೆ, ಈ ಬಾರಿ ಪರಿಸ್ಥಿತಿ ಅವರಿಗೆ ಪೂರಕವಾಗಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ದುಂದುವೆಚ್ಚವಾಗಿರುವುದರಿಂದ ಬಜೆಟ್ನಲ್ಲಿ ಹೊಸ ಕಾರ್ಯಕ್ರಮಗಳಿಗೆ ಅನುದಾನ ಒದಗಿಸುವುದರ ಜತೆಗೆ ಇಲಾಖಾ ಯೋಜನೆಗಳಿಗೂ ಹಣ ನೀಡಬೇಕಾಗುತ್ತದೆ. ಜತೆಗೆ ಲೋಕಸಭೆ ಚುನಾವಣೆ ಸಮೀಪದಲ್ಲೇ ಇರುವುದರಿಂದ ಜನಪ್ರಿಯ ಕಾರ್ಯಕ್ರಮಗಳನ್ನು ಪ್ರಕಟಿಸಲೇ ಬೇಕಾದ ಅನಿವಾರ್ಯತೆ ಇದೆ.
ಬಜೆಟ್ ಗಾತ್ರ ಹೆಚ್ಚಳ: ಜಗದೀಶ್ ಶೆಟ್ಟರ್ ಅವರು 2013-14ನೇ ಸಾಲಿಗೆ 1,17,005 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದರು. ಇದರ ಜತೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ಅನೇಕ ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ. ಬಜೆಟ್ನಲ್ಲಿ ಇನ್ನಷ್ಟು ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. ಜತೆಗೆ ಹಿಂದಿನ ಸರ್ಕಾರ ರೂಪಿಸಿದ್ದ ಕಾರ್ಯಕ್ರಮಗಳನ್ನು ಮಧ್ಯೆ ಸ್ಥಗಿತಗೊಳಿಸುವುದು ಕಷ್ಟಸಾಧ್ಯ. ಇದರಿಂದಾಗಿ ಬಜೆಟ್ ಮೊತ್ತ 1.25 ಲಕ್ಷ ಕೋಟಿ ಮೀರಬಹುದು ಎಂದು ಅಂದಾಜಿಸಲಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರ ಯೋಜನಾ ಆಯೋಗಕ್ಕೆ 2013-14ನೇ ಸಾಲಿಗೆ 46,450 ಕೋಟಿ ಯೋಜನಾ ವೆಚ್ಚ ಸಲ್ಲಿಸಿತ್ತು. ಇದನ್ನು ಪರಿಷ್ಕರಿಸಿರುವ ಕೇಂದ್ರ ಯೋಜನಾ ಆಯೋಗ 47 ಸಾವಿರ ಕೋಟಿ ಯೋಜನಾ ವೆಚ್ಚಕ್ಕೆ ಅನುಮೋದನೆ ನೀಡಿದೆ. ಇದು ಹಿಂದಿನ ಸರ್ಕಾರಕ್ಕಿಂತ 550 ಕೋಟಿ ಹೆಚ್ಚು. ಹೀಗಾಗಿ ಸಹಜವಾಗಿಯೇ ಬಜೆಟ್ ಗಾತ್ರವೂ ಹೆಚ್ಚಲಿದೆ.
ಸಂಪನ್ಮೂಲ ಸಂಗ್ರಹ ಹೇಗೆ?: ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡಿಸುವ ಚೊಚ್ಚಲ ಬಜೆಟ್ ಸಾಕಷ್ಟು ಹೊಸ ಕಾರ್ಯಕ್ರಮಗಳನ್ನು ಹೊಂದಿರುವುದು ಮತ್ತು ಹಿಂದಿನ ಸರ್ಕಾರದ ಕೆಲವು ಕಾರ್ಯಕ್ರಮಗಳು ರದ್ದುಗೊಳ್ಳುವುದು ಸಾಮಾನ್ಯ. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಏಕೆಂದರೆ, ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 2013-14ನೇ ಸಾಲಿನ ಬಜೆಟ್ಅನ್ನು ಮಂಡಿಸಿ, ಅದಕ್ಕೆ ಅನುಮೋದನೆಯನ್ನೂ ಪಡೆದುಕೊಂಡಿದ್ದಾರೆ. ಇದೀಗ ಸಿದ್ದರಾಮಯ್ಯ ಅವರೂ 2013-14ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ.
ಹೀಗಾಗಿ ಆರ್ಥಿಕ ವರ್ಷದ ಮಧ್ಯೆ ಜಗದೀಶ್ ಶೆಟ್ಟರ್ ಮಂಡಿಸಿದ್ದ ಬಜೆಟ್ನ ಕಾರ್ಯಕ್ರಮಗಳನ್ನು ರದ್ದುಗೊಳಿಸುವುದು ಅಂದುಕೊಂಡಷ್ಟು ಸುಲಭವಲ್ಲ. ಅದೇ ರೀತಿ ಅವುಗಳನ್ನು ಮುಂದುವರಿಸಿಕೊಂಡೇ ಹೊಸ ಕಾರ್ಯಕ್ರಮಗಳನ್ನು ಘೋಷಿಸುವುದಾದರೆ ಹೆಚ್ಚುವರಿಯಾಗಿ ಸಾಕಷ್ಟು ಆರ್ಥಿಕ ಸಂಪನ್ಮೂಲ ಬೇಕಾಗುತ್ತದೆ. ತೆರಿಗೆ ಹೆಚ್ಚಿಸದೆ ಅಥವಾ ಇಲಾಖಾ ಅನುದಾನದಲ್ಲಿ ಕಡಿತ ಮಾಡದೇ ಇದ್ದರೆ ಹಣಕಾಸು ಹೊಂದಿಸುವುದು ಕಷ್ಟವಾಗುತ್ತದೆ.
ಸಾವಿರಾರು ಕೋಟಿ ಬೇಕು: ಇನ್ನು ರಾಜ್ಯದ ನೀರಾವರಿ ಯೋಜನೆಗೆ 10 ಸಾವಿರ ಕೋಟಿ ಒದಗಿಸಿಯೇ ತೀರುತ್ತೇವೆ ಎಂದು ಅವರು ಶಪಥ ಮಾಡಿದ್ದಾರೆ. ರೈತರಿಗೆ ಬಡ್ಡಿ ರಹಿತ ಬೆಳೆ ಸಾಲದ ಮಿತಿ 1ರಿಂದ 2 ಲಕ್ಷಕ್ಕೆ ಏರಲಿದೆ. ಇದಲ್ಲದೆ, ಈಗಾಗಲೇ ಘೋಷಿಸಿದ ಕಾರ್ಯಕ್ರಮಗಳಿಗೆ ಸಾವಿರಾರು ಕೋಟಿ ರುಪಾಯಿ ಹೊಂದಿಸಬೇಕಾಗುತ್ತದೆ. ಈ ಎಲ್ಲಾ ಒತ್ತಡಗಳ ಮಧ್ಯೆ ಸಿದ್ದರಾಮಯ್ಯ ಅವರು ಸಿಲುಕಿರುವುದರೊಂದಿಗೆ ಮಿತವ್ಯಯಕ್ಕೂ ಆದ್ಯತೆ ನೀಡಿ ಆರ್ಥಿಕ ಶಿಸ್ತು ಕಾಪಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇವೆಲ್ಲವನ್ನೂ ಹೇಗೆ ನಿಭಾಯಿಸುತ್ತಾರೆ ಎಂಬುದಕ್ಕೆ ಶುಕ್ರವಾರ ಮಂಡಿಸಲಿರುವ ಬಜೆಟ್ ಉತ್ತರ ನೀಡಲಿದೆ.