ಕನ್ನಡಪ್ರಭ ವಾರ್ತೆ ಹಾಸನ ಜು.13
ಹಾಸನದಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿ ಬಂದ ಅದೇ ಸಮುದಾಯದ ಪುರುಷರ ವಿರುದ್ಧ ಸಿಡಿದೆದಿದ್ದಾರೆ. ಅಷ್ಟೇ ಅಲ್ಲ, ಮಸೀದಿಯಲ್ಲಿ ತಮಗೆ ನಮಾಜ್ ಮಾಡಲು ಅವಕಾಶ ನೀಡಲು ವಿರೋಧಿಸಿರುವುದಕ್ಕೆ ತೀವ್ರ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆಗೆ ಹೋಗಿ, ಪ್ರಾರ್ಥನೆ ಸಲ್ಲಿಸಲು ತಮಗೆ ಅವಕಾಶ ಮಾಡಿಕೊಡಬೇಕೆಂದು ಮುಸ್ಲಿಂ ಮಹಿಳೆಯರು ವಾದಿಸಿದ್ದಾರೆ. ಇದಕ್ಕೆ ಲೇಖಕಿ ಬಾನು ಮುಷ್ತಾಕ್ ಕೂಡ ಸಾಥ್ ನೀಡುವ ಮೂಲಕ ಮುಸ್ಲಿಂ ಮಹಿಳೆಯರ ಪರ ಧ್ವನಿ ಎತ್ತಿದ್ದಾರೆ. ಶನಿವಾರ ಮಧ್ಯಾಹ್ನ ಡಿವೈಎಸ್ಪಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹಿಳೆಯರ ಪರ ವಾದ ಮಂಡಿಸಿದ ಬಾನು ಮುಷ್ತಾಕ್, 'ಇದೇನು ಹೊಸದಲ್ಲ. ಕೆಲವರು ಮಾತ್ರ ತಕರಾರು ಎತ್ತಿರುವುದು ಸರಿಯಲ್ಲ' ಎಂದು ಕಿಡಿಕಾರಿದರು.
ಇದೇ ವೇಳೆ ಡಿವೈಎಸ್ಪಿ ಕಚೇರಿ ಹೊರಗೆ ಇದ್ದ ಹಲವಾರು ಮುಸ್ಲಿಂ ಮಹಿಳೆಯರು, ದೇಶಕ್ಕೆ, ಸಮಾಜಕ್ಕೆ, ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ಮಸೀದಿಯಲ್ಲಿ ಪ್ರಾರ್ಥಿಸುವುದು ತಪ್ಪು ಎನ್ನುವುದು ಸರಿಯಲ್ಲ. ನಮ್ಮ ಹಕ್ಕನ್ನು ಪಡೆಯಲು ಇವರು ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಏನಿದು ಘಟನೆ?: ಮಸೀದಿಗಳಲ್ಲಿ ಮುಸ್ಲಿಂ ಮಹಿಳೆಯರು ಪ್ರಾರ್ಥನೆ ಮಾಡುವಂತಿಲ್ಲ. ಆದರೆ ಹಾಸನ ನಗರದ ಕೆ.ಆರ್.ಪುರಂನಲ್ಲಿ ಇರುವ ಮಸೀದಿಯಲ್ಲಿ ರಂಜಾನ್ ಸಂದರ್ಭದಲ್ಲಿ ಮಹಿಳೆಯರೂ ಮಸೀದಿಗೆ ಬಂದು ಪ್ರಾರ್ಥನೆ ಮಾಡುವ ಅವಕಾಶ ನೀಡಲಾಗಿದೆ. ಪ್ರತಿ ದಿನ ಮಹಿಳೆಯರು ಮಸೀದಿಗೆ ಹೋಗಿ ನಮಾಜ್ ಸಲ್ಲಿಸುತ್ತಿದ್ದಾರೆ. ಇದಕ್ಕೆ ಮುಸ್ಲಿಂ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ಹೊರತುಪಡಿಸಿ ಬೇರೆಲ್ಲೂ ಮುಸ್ಲಿಂ ಮಹಿಳೆಯರು ಮಸೀದಿಗೆ ಬಂದು ಪ್ರಾರ್ಥನೆ ಮಾಡುವಂತಿಲ್ಲ. ಹೀಗಾಗಿ ಅವರಿಗೆ ಮಸೀದಿಯಲ್ಲಿ ನಮಾಜ್ ಮಾಡಲು ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶ ನೀಡಿದ ಹಾಸನ ಮಸೀದಿ ಆಡಳಿತ ಮಂಡಳಿ ನಿರ್ಧಾರಕ್ಕೆ ಆ ಸಮುದಾಯದ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಕರಾರು ಇಲ್ಲ: ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶ ನೀಡಿರುವ ಬಗ್ಗೆ ಯಾವುದೇ ತಕರಾರು ಇಲ್ಲ. ಮಸೀದಿಯ ಆಡಳಿತ ಮಂಡಳಿಯವರು ಸರಿ ಎಂದು ತಿಳಿದ ಮೇಲೆ ತಾನೇ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶ ನೀಡಿದ್ದಾರೆ. ಹಾಗೆಯೇ ಮುಸ್ಲಿಂ ಮಹಿಳೆಯರೂ ಮಸೀದಿಯಲ್ಲಿ ಪ್ರಾರ್ಥನೆ ಮಾಡುವುದು ತಪ್ಪಲ್ಲ ಎಂದೇ ತಿಳಿದು ಮಸೀದಿಗೆ ಹೋಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇದು ವಿವಾದಾತ್ಮಕ ವಿಚಾರವೇನೂ ಅಲ್ಲ ಎಂಬುದು ಲೇಖಕಿ ಬಾನು ಮುಷ್ತಾಕ್ ಸಮರ್ಥನೆ.
ಆದರೆ.. ಅವಕಾಶ ಇಲ್ಲ: ಆದರೆ, ಇದಕ್ಕೆ ತಕರಾರು ತೆಗೆದಿರುವ ಟಿಪ್ಪುಸೇನೆಯ ಹಾಸನ ಜಿಲ್ಲಾಧ್ಯಕ್ಷ ಅಕ್ಮಲ್ ಜಾವೇದ್ ಅವರು, 'ಮುಸ್ಲಿಂ ಸಂಪ್ರದಾಯ ನಿಯಮಗಳಲ್ಲಿ ಮಹಿಳೆಯರು ಮಸೀದಿಗಳಿಗೆ ಬಂದು ನಮಾಜ್ ಮಾಡಲು ಅವಕಾಶ ಇಲ್ಲ. ಪುರುಷರು ಮಸೀದಿಯಲ್ಲಿ ಇಮಾಂ ಗುರುಗಳ ಹಿಂದೆ ನಮಾಜ್ ಮಾಡುತ್ತಾರೆ. ಮಹಿಳೆಯರಿಗೆ ಇಮಾಂಗಳಿಲ್ಲ. ಆದ್ದರಿಂದ ನಾಲ್ಕು ಗೋಡೆಗಳ ನಡುವೆ ಮಸೀದಿ ಬಿಟ್ಟು ಬೇರೆ ಕಡೆ ನಮಾಜ್ ಮಾಡಬಹುದು. ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶ ನೀಡಿರುವುದನ್ನು ತಪ್ಪಿಸಬೇಕು ಎಂದು ವಕ್ಫ್ ಬೋರ್ಡ್ಗೆ ಪತ್ರ ಬರೆದಿದ್ದೇನೆ' ಎನ್ನುತ್ತಾರೆ.
ಹಾಸನದಲ್ಲಿ ಕೆಲವರ ವೈಯಕ್ತಿಕ ಪ್ರತಿಷ್ಠೆಯಿಂದಾಗಿ, ತಮ್ಮ ವಿರೋಧದ ನಡುವೆಯೂ ಮಸೀದಿಯಲ್ಲಿ ಮಹಿಳೆಯರಿಗೆ ರಾತ್ರಿವೇಳೆ ಪ್ರಾರ್ಥನೆ ಮಾಡಲು ಅವಕಾಶ ನೀಡಲಾಗಿದೆ ಎಂದೂ ಜಾವೇದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವಕ್ಫ್ ಮಂಡಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೇ ಸಮುದಾಯದ ನಡುವೆ ಐಕ್ಯತೆ ಒಡೆಯುವ ಮುನ್ನ ಆಡಳಿತ ಮಂಡಳಿ ಎಚ್ಚೆತ್ತು ಮಹಿಳೆಯರು ಫರ್ದಾ ಧರಿಸಿ ಮಸೀದಿಗೆ ಬರುವುದನ್ನು ನಿಷೇಧಿಸಬೇಕು. ಅಲ್ಲದೆ ಜಿಲ್ಲಾಡಳಿತ ಮತ್ತು ಪೊಲೀಸರೂ ಮಧ್ಯಪ್ರವೇಶಿಸಿ ಆಡಳಿತ ಮಂಡಳಿಯವರಿಗೆ ಬುದ್ಧಿವಾದ ಹೇಳಬೇಕು ಎಂದು ಮನವಿ ಮಾಡಿದ್ದಾರೆ.
ಮುಖಂಡರೇ ಬಗೆಹರಿಸಿಕೊಳ್ಳಲಿ: ಈ ಸಂಬಂಧ ಡಿವೈಎಸ್ಪಿ ಕಚೇರಿಯಲ್ಲಿ ಶನಿವಾರ ಮುಸ್ಲಿಂ ಮುಖಂಡರ ಮತ್ತು ಧಾರ್ಮಿಕ ಗುರುಗಳ ಸಭೆ ನಡೆಸಲಾಯಿತು.
ಈ ವೇಳೆ ಮಹಿಳೆಯರಿಗೆ ಮಸೀದಿಯಲ್ಲಿ ನಮಾಜ್ ಮಾಡಲು ನೀಡಿರುವ ಅವಕಾಶದ ಕುರಿತು ಚರ್ಚೆ ನಡೆಸಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಲಾಯಿತು. ಅದಕ್ಕೆ ಸಭೆಯಲ್ಲಿದ್ದ ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷ ಸಯ್ಯದ್ ಖಾಸಿಂ, ಅಮೀರ್ ಮತ್ತು ಕೆ.ಆರ್. ಪುರಂ ಮಸೀದಿಗಳ ಧಾರ್ಮಿಕ ಗುರುಗಳು ಒಪ್ಪಿದರು. ಸಭೆಯಲ್ಲಿ ಲೇಖಕಿ ಬಾನುಮುಷ್ತಾಕ್ ಇತರರು ಇದ್ದರು.
ಮಸೀದಿ ಆಡಳಿತ ಮಂಡಳಿಯವರು ಸರಿ ಎಂದು ಮನವರಿಕೆ ಮಾಡಿಕೊಂಡ ಬಳಿಕ ನಮಾಜ್ಗೆ ಅನುಮತಿ ನೀಡಿದ್ದಾರೆ. ಮುಸ್ಲಿಂ ಮಹಿಳೆಯರು ನಮಾಜ್ ಮಾಡುವುದು ತಪ್ಪಲ್ಲ ಎಂದು ತಿಳಿದೇ ಮಸೀದಿಗೆ ತೆರಳುತ್ತಿದ್ದಾರೆ. ಇದು ವಿವಾದಾತ್ಮಕ ವಿಚಾರ ಏನೂ ಅಲ್ಲ.
- ಭಾನು ಮುಷ್ತಾಕ್, ಲೇಖಕಿ
ನಮಾಜ್ ವಿಚಾರ ಕಾನೂನು ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಬಗ್ಗೆ ಸಮುದಾಯದ ಮುಖಂಡರೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ಬಗ್ಗೆ ಮುಖಂಡರಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಅದಕ್ಕೆ ಅವರು ಒಪ್ಪಿದ್ದಾರೆ.
-ರವಿಪ್ರಕಾಶ್, ಡಿವೈಎಸ್ಪಿ
ದಯಾಶಂಕರ ಮೈಲಿ