ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜು.14-
ಬಡ ಕುಟುಂಬಗಳಿಗೆ ಸರ್ಕಾರ ಕಡಿಮೆ ದರದಲ್ಲಿ ಅಕ್ಕಿ, ಮನೆ ನಿರ್ಮಾಣಕ್ಕೆ ಸಹಾಯಧನ ಸೇರಿದಂತೆ ಬಡತನ ನಿರ್ಮೂಲನೆಗಾಗಿ ಹಲವು ಕಾರ್ಯಕ್ರಮಗಳನ್ನೂ ಜಾರಿಗೊಳಿಸುತ್ತಿದೆ. ಅವುಗಳಲ್ಲಿ ನಿವೇಶನ ರಹಿತ ಬಡವರಿಗೆ ನಿವೇಶನ ಒದಗಿಸುವ 'ಹೋಮ್ಸ್ಟೆಡ್ ಸೈಟ್' ಯೋಜನೆಯೂ ಒಂದು.
ಈ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ 60.81 ಕೋಟಿಯನ್ನು ರಾಜ್ಯದ 18 ಜಿಲ್ಲೆಗಳು ಬಳಸಿಕೊಂಡೇ ಇಲ್ಲ! ಕೇಂದ್ರ ಸರ್ಕಾರ ಬಡವರಿಗೆ ನಿವೇಶನ ನೀಡಲು 2010-11ನೇ ಸಾಲಿನಲ್ಲಿ ಬಿಡುಗಡೆ ಮಾಡಿದ್ದ ಈ ಹಣದಲ್ಲಿ ಈವರೆಗೂ ಒಂದು ರುಪಾಯಿಯೂ ಖರ್ಚಾಗಿಲ್ಲ. ಅದುದರಿಂದ ಇತ್ತೀಚೆಗೆ ಈ ಹಣವನ್ನು ಇಂದಿರಾ ಅವಾಸ್ ಯೋಜನೆಗೆ ವರ್ಗಾಯಿಸಲಾಗಿದೆ. ಕರ್ನಾಟಕದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವ ಉದ್ದೇಶದಿಂದ ಸರ್ಕಾರ ಅನುದಾನ ನೀಡಿದರೂ ಅದು ಬಳಕೆಯಾಗಿಲ್ಲ. ಈ ಮೂಲಕ ರಾಜ್ಯದ ಲಕ್ಷಾಂತರ ಬಡವರನ್ನು ಅಧಿಕಾರಿಗಳು ಈ ಯೋಜನೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ.
ಡಿಸಿ ಖಾತೆಗೆ ಜಮಾ: ಈ ಅನುದಾನವನ್ನು ಜಿಲ್ಲಾಧಿಕಾರಿಗಳ ಖಾತೆಗೆ 2010ರ ಜೂನ್ 21 ರಂದೇ ಬಿಡುಗಡೆ ಮಾಡಲಾಗಿತ್ತು. ಇದುವರೆಗೂ ಈ ಅನುದಾನ ಬಳಕೆಯಾಗದ ಕಾರಣ ಜೂ.25ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿ, ಇಂದಿರಾ ಅವಾಸ್ ಯೋಜನೆಯ 2ನೇ ಕಂತಿಗೆ ಬಿಡುಗಡೆ ಮಾಡಬೇಕಾಗಿದ್ದ ಅನುದಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಸೂಚಿಸಿದೆ. ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾದ ಸಂಪೂರ್ಣ ಅನುದಾನವನ್ನು 3.63 ಕೋಟಿ ಬಡ್ಡಿಯೊಂದಿಗೆ ಒಟ್ಟು 64.64 ಕೋಟಿ ಹಿಂಪಡೆದು ಜಿಪಂ ಸಿಇಒ ಹೆಸರಿನಲ್ಲಿರುವ ಇಂದಿರಾ ಅವಾಸ್ ಯೋಜನೆ ಖಾತೆಗೆ ವರ್ಗಾಯಿಸಲಾಗಿದೆ.
ಬಡವರಿಗೆ ಅನ್ಯಾಯ: ರಾಜ್ಯದಲ್ಲಿ ಲಕ್ಷಾಂತರ ಮಂದಿ ನಿವೇಶನ ರಹಿತ ಬಡವರಿದ್ದಾರೆ. ಅವರಿಗೆ ಕಂದಾಯ ಭೂಮಿ ಇಲ್ಲವೇ ಖಾಸಗಿಯವರಿಂದ ಭೂಮಿಯನ್ನು ಖರೀದಿಸಿ ನಿವೇಶನ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಹೋಮ್ಸ್ಟೆಡ್ ಸೈಟ್ ಯೋಜನೆಯನ್ನು ಜಾರಿಗೆ ತಂದಿತ್ತು. ಕೈಯಲ್ಲಿ ಅನುದಾನ ಇದ್ದರೂ ಡಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳು ಮನಸು ಮಾಡಿದ್ದರೆ ನಿವೇಶನ ಇಲ್ಲದ ಕೊರಗು ಬಡವರಿಂದ ದೂರವಾಗುತ್ತಿತ್ತು. ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿಯೇ ಇಲ್ಲ ಎಂಬುದಕ್ಕೆ ಈ ಯೋಜನೆಯ ವೈಫಲ್ಯವೇ ಒಂದು ನಿದರ್ಶನ.
ಯಾವ ಜಿಲ್ಲೆಗೆ ಎಷ್ಟು ಹಣ ಬಿಡುಗಡೆಗೊಂಡಿತ್ತು? (ಕೋಟಿ ಗಳಲ್ಲಿ)
ಬೆಂಗಳೂರು ಗ್ರಾ. 2.89
ಬೆಂಗಳೂರು ನಗರ 2.93
ಬೀದರ್ 2.16
ಚಾಮರಾಜನಗರ 4.82
ಚಿಕ್ಕಬಳ್ಳಾಪುರ 2.60
ಚಿಕ್ಕಮಗಳೂರು 3.00
ಚಿತ್ರದುರ್ಗ 8.99
ದಕ್ಷಿಣ ಕನ್ನಡ 1.93
ಹಾಸನ 2.07
ಕೊಡಗು 1.11
ಕೋಲಾರ 2.03
ಮಂಡ್ಯ 4.29
ಮೈಸೂರು 4.65
ರಾಮನಗರ 3.66
ಶಿವಮೊಗ್ಗ 3.80
ತುಮಕೂರು 7.19
ಉಡುಪಿ 1.05
ಉತ್ತರ ಕನ್ನಡ 1.57
- ಆರ್. ತಾರಾನಾಥ್