ಕ.ಪ್ರ.ವಾರ್ತೆ, ಬೆಂಗಳೂರು, ಜು. 16-
ರಾಜ್ಯದಲ್ಲಿ ಮುಂಗಾರು ಸ್ವಲ್ಪ ಜೋರಾಗಿಯೇ ಇದೆ. ಯಾಕೆಂದರೆ, ವಾಡಿಕೆಗಿಂತ ಮುಂಚಿತವಾಗಿಯೇ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿವೆ. ಕೆಲವ ದಿನಗಳ ಹಿಂದಷ್ಟೇ ಕಬಿನಿ ಮತ್ತು ಹಾರಂಗಿ ತುಂಬಿದ್ದರೆ, ಇದೀಗ ಕರ್ನಾಟಕ ಮತ್ತು ಆಂಧ್ರಪ್ರದೇಶದ ಜೀವನಾಡಿಯಾಗಿರುವ ತುಂಗಭದ್ರಾ ಹಾಗೂ ಆಲಮಟ್ಟಿ ಜಲಾಶಯಗಳು ಯಾವುದೇ ಕ್ಷಣದಲ್ಲಿ ಭರ್ತಿಯಾಗಬಹುದು. 1633 ಅಡಿ(100.855 ಟಿಎಂಸಿ ನೀರು) ಗರಿಷ್ಠ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಭರ್ತಿಯಾಗಲು ಇನ್ನು ಕೇವಲ 7 ಅಡಿ ಮಾತ್ರ ಬಾಕಿ ಇದೆ. ಮಂಗಳವಾರ ನೀರಿನ ಮಟ್ಟ 1625.97 ಅಡಿ ಇತ್ತು. ಅಲ್ಲದೆ, ಜಲಾಶಯಕ್ಕೆ 36484 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹಾಗಾಗಿ ಇತ್ತೀಚಿನ ವರ್ಷಗಳಲ್ಲಿ ತುಂಗಭದ್ರಾ ಜಲಾಶಯ ವಾಡಿಕೆಗಿಂತ ಬಹುಬೇಗನೆ ಭರ್ತಿಯಾಗುತ್ತಿದೆ. ಆಗಸ್ಟ್ 15ರಂದು ಜಲಾಶಯದ ಕ್ರಸ್ಟ್ ಗೇಟ್ಗಳನ್ನು ತೆರೆಯುವ ಸಾಧ್ಯತೆ ಇದೆ.
ಆಲಮಟ್ಟಿ ತುಂಬಲು ಇನ್ನು 2.5 ಮೀಟರ್ ಬಾಕಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಹಾಗಾಗಿ, ಆಲಮಟ್ಟಿ ಜಲಾಶಯ ಭರ್ತಿಗೆ ಇನ್ನು ಕೇವಲ 2.5 ಮೀಟರ್ ಮಾತ್ರ ಬಾಕಿ ಇದೆ. 519 ಮೀಟರ್ ಎತ್ತರ ಆಲಮಟ್ಟಿ ಜಲಾಶಯದಲ್ಲೀಗ ಮಂಗಳವಾರ 517.5 ಮೀಟರ್ ನೀರು ಇತ್ತು. 85064 ಕ್ಯುಸೆಕ್ ಒಳಹರಿವು ಇದೆ. 29,365 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಮಹಾರಾಷ್ಟ್ರದ ರಾಜಾಪುರ ಹಾಗೂ ದೂಧಗಂಗಾ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರ ಬಿಡಲಾಗುತ್ತಿದೆ.
ನಾರಾಯಣಪುರದಿಂದ ನೀರು-ಎಚ್ಚರಿಕೆ: ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ನಾರಾಯಣಪುರ ಅಣೆಕಟ್ಟೆ ಕೂಡಾ ತುಂಬಲು ಕೇವಲ 1 ಮೀಟರ್ ಬಾಕಿ ಇದ್ದು, ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಇದೆ. ಹಾಗಾಗಿ, ನದಿಯ ಇಕ್ಕೆಲುಗಳ ಗ್ರಾಮಸ್ಥರಿಗೆ ಎಚ್ಚರಿಕೆಯಿಂದಿರುವಂತೆ ಅಧಿಕಾರಿಗಳು ತಿಳಿಸಿದ್ದಾರೆ.ತಗ್ಗಿದ ಕೃಷ್ಣೆ, ಮಲಪ್ರಭೆ ಪ್ರವಾಹ
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಪ್ರವಾಹದಲ್ಲಿ ಇಳಿಮುಖವಾಗಿದೆ. ಮಲಪ್ರಭೆಯ ಪ್ರವಾಹದಿಂದಾಗಿ ಜಲಾವೃತವಾಗಿದ್ದ ಖಾನಾಪುರ ತಾಲೂಕಿನ ಮೂರು ಗ್ರಾಮಗಳ ಪೈಕಿ ಎರಡು ಗ್ರಾಮಗಳೀಗ ಮುಕ್ತವಾಗಿವೆ. ಇನ್ನೂ ಒಂದು ಗ್ರಾಮ ಜಲಾವೃತವಾಗಿದೆ. ಹಾಗೆಯೇ ಕೃಷ್ಣಾ ನದಿಯ ನೆರೆಯಿಂದಾಗಿ ಮುಳುಗಡೆಯಾಗಿದ್ದ ಏಳು ಸೇತುವೆಗಳ ಪೈಕಿ ಆರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಯಾವುದೇ ಹಾನಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಎನ್.ಜಯರಾಂ ತಿಳಿಸಿದ್ದಾರೆ.
ರಾಯಚೂರಲ್ಲಿ, ಕೊಡಗು, ದ.ಕ.ದಲ್ಲಿ ಮಳೆ: ರಾಯಚೂರು ನಗರದಲ್ಲಿ ಮಂಗಳವಾರ 2 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ರಾಯಚೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಇದೇ ವೇಳೆ, ಕೊಡಗು ಜಿಲ್ಲೆಯಲ್ಲೂ ಧಾರಾಕಾರ ಮಳೆ ಸುರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆ ಇತ್ತು. ಇನ್ನುಳಿದಂತೆ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗಿದೆ.