ಬೆತ್ತಲು ಬದುಕು ಕತ್ತಲು

ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು ಎಂಬ ಕಾರಣಕ್ಕೆ ತಂದೆ-ತಾಯಿ ಮಗಳನ್ನು ಅದೂ ಬೆತ್ತಲೆ ಸ್ಥಿತಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಗೃಹ...
ಬೆತ್ತಲು ಬದುಕು ಕತ್ತಲು
Updated on: 

ಕನ್ನಡಪ್ರಭ ವಾರ್ತೆ ,   ಬೆಂಗಳೂರು ,   ಜೂ. 4
ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು ಎಂಬ ಕಾರಣಕ್ಕೆ ತಂದೆ-ತಾಯಿ ಮಗಳನ್ನು ಅದೂ ಬೆತ್ತಲೆ ಸ್ಥಿತಿಯಲ್ಲಿ ಕಳೆದ ನಾಲ್ಕು ವರ್ಷದಿಂದ ಗೃಹ ಬಂಧನದಲ್ಲಿಟ್ಟಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಲ್ಲೇಶ್ವರ 17ನೇ ಕ್ರಾಸ್ ನಿವಾಸಿ 35 ವರ್ಷದ ಪಿ.ಹೇಮಾವತಿ ಗೃಹಬಂಧನದಲ್ಲಿದ್ದ ಯುವತಿ. ನಿತ್ರಾಣ ಸ್ಥಿತಿಯಲ್ಲಿರುವ ಆಕೆಯನ್ನು ಗೃಹ ಬಂಧನದಿಂದ ಮುಕ್ತಗೊಳಿಸಿರುವ ಪೊಲೀಸರು, ಸ್ಥಳೀಯರ ನೆರವಿನಿಂದ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.  
ಹೇಮಾಳನ್ನು ಮನೆಯ ಮೂಲೆಯೊಂದರ ಕೊಠಡಿಯಲ್ಲಿ ಪೋಷಕರಾದ ರೇಣುಕಪ್ಪ ಹಾಗೂ ಪುಟ್ಟಗೌರಮ್ಮ ಕೂಡಿ ಹಾಕಿದ್ದರು. ಈ ಗೃಹಬಂಧನಕ್ಕೆ ಕಾರಣ ಕೇಳಿದರೆ ರೇಣುಕಪ್ಪ ಹೀಗೆನ್ನುತ್ತಾರೆ, 'ಆಕೆಗೆ ಈ ಹಿಂದೆ ಚಿಕೂನ್ ಗುನ್ಯಾ ಕಾಯಿಲೆ ಬಂದಿತ್ತು. ಚಿಕಿತ್ಸೆ ಕೊಡಿಸಿದ್ದೆವು. ಆಸ್ಪತ್ರೆಯಿಂದ ಬಂದ ನಂತರ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಮತ್ತೆ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರೂ  ಪ್ರಯೋಜನವಾಗಲಿಲ್ಲ. ಈಗ ಮನೆಯಲ್ಲೇ ಇರುತ್ತಾಳೆ, ಹೊರಗೆ ಹೋಗುವುದಿಲ್ಲ. ಬಟ್ಟೆ ಹಾಕಿಕೊಳ್ಳುವುದಿಲ್ಲ. ಹೇಳಿದ ಮಾತು ಕೇಳುವುದಿಲ್ಲ'.
ಸ್ಥಳೀಯರು ಏನಂತಾರೆ?: ನಗರದ ಎಂ.ಇ.ಎಸ್. ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡಿದ್ದ ಹೇಮಾ ನಗರದ ಚಾರ್ಟೆಂಡ್ ಅಕೌಂಟೆಂಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇದನ್ನು ತಿಳಿದ ಆಕೆಯ ತಂದೆ ಗೃಹಬಂಧನದಲ್ಲಿಟ್ಟಿದ್ದಾರೆ.
ಅದರಲ್ಲೂ ಆಕೆಯನ್ನು ಬೆತ್ತಲೆಯಾಗಿ ಇರಿಸಿದ್ದಾರೆ. ಇದನ್ನು ತಿಳಿದು ಪ್ರಶ್ನಿಸಲು ಹೋದಾಗ ತಮ್ಮ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಲು ಮುಂದಾದರು. ಇದರಿಂದ ತಮ್ಮ ಕುಟುಂಬ ಹಾಗೂ ಮಕ್ಕಳಿಗೆ ತೊಂದರೆಯುಂಟಾಗಬಹುದು ಎಂಬ ಕಾರಣಕ್ಕೆ ಸುಮ್ಮನಾದೆವು.
ಈ ಹಿಂದೆ ಮಲ್ಲೇಶ್ವರ ಠಾಣೆ ಪೊಲೀಸರಿಗೆ ವಿಷಯ ಸಹ ತಿಳಿಸಿದ್ದೆವು. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಾಗಿ ನಾವು ಸುಮ್ಮನಾಗಬೇಕಾಯಿತು ಎಂದರು ಸ್ಥಳೀಯರಾದ ರಜಿನಿ.
ಜಡೆಗಂಟು, ಉದ್ದುದ್ದ ಉಗುರು: ಹೇಮಾಳನ್ನು ನೋಡಿದರೆ ನಿಜಕ್ಕೂ ಎಂತಹವರಿಗೂ ಒಂದು ಕ್ಷಣ ಭಯದ ಜತೆಗೆ ಕರುಣೆಯೂ ಬರುತ್ತಿತ್ತು.
ಕಳೆದ ನಾಲ್ಕು ವರ್ಷದಿಂದ ಕುಳಿತಲ್ಲೇ ಎಲ್ಲ. ಊಟ, ತಿಂಡಿ, ಆಕೆಯ ನಿತ್ಯಕರ್ಮವೂ ಅಲ್ಲೇ ಆಗುತ್ತಿತ್ತು. ಸ್ಥಳೀಯರು ಆಕೆಯನ್ನು ನೋಡಲು ಹೋದಾಗ ಮೈಮೇಲೆ ತುಂಡು ಬಟ್ಟೆಯೂ ಇರಲಿಲ್ಲ. ಆಕೆಗೆ ಸ್ನಾನ, ತಲೆ ಬಾಚುವುದು, ಮುಖ ತೊಳೆಯುವುದು ಯಾವ ಕೆಲಸವೂ ಇರಲಿಲ್ಲ. ಇದರಿಂದ ಹೇಮಾಳ ಜಡೆ ಗಂಟು ಕಟ್ಟಿದ್ದು, ಕೈ ಹಾಗೂ ಕಾಲುಗಳ ಉಗುರುಗಳು ಉದ್ದುದ್ದ ಬೆಳೆದಿದ್ದವು. ದುರ್ನಾತ ಕಂಡ ಎಂತಹವರಿಗೂ, ಆಕೆಯ ಪೋಷಕರ ಮೇಲೆ ಕೋಪ ತರುತ್ತಿತ್ತು.
ಬೆಳಕಿಗೆ ಬಂದದ್ದು ಹೇಗೆ: ಅನ್ನ ಕೊಡಿ.. ಅನ್ನ ಕೊಡಿ.. ಎಂದು ಪ್ರತಿದಿನ ರಾತ್ರಿ ಚೀರುತ್ತಿದ್ದ ಆ ಧ್ವನಿ ಯಾರದ್ದು? ಎಂಬ ಅನುಮಾನ ಮಲ್ಲೇಶ್ವರ 17ನೇ ಕ್ರಾಸ್ ನಿವಾಸಿಗಳನ್ನು ಹಲವು ತಿಂಗಳುಗಳಿಂದ ಕಾಡುತ್ತಿತ್ತು. ಜಾಡು ಹಿಡಿದು ಹೋದ ಸ್ಥಳೀಯರಿಗೆ ಆಘಾತ ಕಾದಿತ್ತು. ಅದೇನೆಂದರೆ ಕಳೆದ ನಾಲ್ಕು ವರ್ಷಗಳಿಂದ ಯಾರ ಕಣ್ಣಿಗೂ ಬೀಳದೆ ಇದ್ದ ಹೇಮಾಳನ್ನು ಬೆತ್ತಲೆಯಾಗಿ ಕೋಣೆಯಲ್ಲಿ ಕೂಡಿ ಹಾಕಿದ್ದ ವಿಷಯ ಗೊತ್ತಾಯಿತು.
ನಂತರ ಈ ಸಂಬಂಧ ಪೊಲೀಸರಿಗೆ ತಿಳಿಸಿದ್ದರು. ಪ್ರಯೋಜನವಾಗದ ಕಾರಣ ಸ್ಥಳೀಯ ಶಾಸಕ ಅಶ್ವತ್ಥ ನಾರಾಯಣ ಅವರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಶಾಸಕರು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಹೇಳಿದರು.
ಎಲ್ಲವೂ ಗೊಂದಲಮಯ: ಈ ಬಗ್ಗೆ ಪ್ರತಿಕ್ರಿಯಿಸಿದ ಪಿಎಸ್‌ಐ ರೇಣುಕಾ, ಇಲ್ಲಿ ಎಲ್ಲವೂ ಒಂದು ರೀತಿ ಗೊಂದಲಮಯವಾಗಿದೆ. ಅವರ ಸಹೋದರನೊಬ್ಬ ಡಿಪ್ಲೊಮಾ ವ್ಯಾಸಂಗ ಮಾಡಿ ಕೆಲಸಕ್ಕೆ ಹೋಗುತ್ತಿದ್ದವನು ಆ ಕೆಲಸ ಬಿಟ್ಟು ಮನೆಯಲ್ಲಿದ್ದಾನೆ. ಹೇಮಾವತಿ ಪರಿಸ್ಥಿತಿ ಹೀಗಿದೆ.
ಸದ್ಯ ತಕ್ಷಣ ಏನೂ ಕ್ರಮಕೈಗೊಳ್ಳಲು ಆಗುವುದಿಲ್ಲ. ನನಗೆ ಮೊದಲಿನ ಜೀವನ ನೀಡಿ ಎಂದು ಹೇಮಾ ಕೇಳಿಕೊಂಡಿದ್ದಾಳೆ. ಆಕೆ ಗುಣಮುಖಳಾದ ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಹೇಮಾವತಿ ಅವರ ಕುಟುಂಬವೇ ಒಂದು ರೀತಿ ವಿಚಿತ್ರ ಎನಿಸುತ್ತದೆ. ಎಲ್ಲರೂ ಮಾನಸಿಕ ಅಸ್ವಸ್ಥರೇ ಇರಬಹುದು ಎಂಬ ಗುಸುಗುಸು ಮಂಗಳವಾರ ಅಲ್ಲಿ ನೆರೆದಿದ್ದ ಸ್ಥಳೀಯರಿಂದ ಕೇಳಿಬರುತ್ತಿದ್ದವು.
ಕೋಟ್ಯಾಧಿಪತಿ: ಮನೆಯ ಗೋಡೆಗಳು ಸುಣ್ಣಬಣ್ಣ ಕಂಡು ವರ್ಷಗಳೇ ಕಳೆದಿವೆ. ಕೂಲಿ ಕಾರ್ಮಿಕರು ಸಹ ವಾಸಿಸಲು ಯೋಗ್ಯವಲ್ಲದ ರೀತಿಯ ಹಳೆಯ ಮುರುಕಲು ಮನೆ ಅದಾಗಿದೆ. ಅದು ರೇಣುಕಪ್ಪ ಅವರಿಗೆ ಸೇರಿದ್ದು. ರೇಣುಕಪ್ಪ ದಂಪತಿಗೆ ಹೇಮಾವತಿ ಹಿರಿಯ ಪುತ್ರಿ ಹಾಗೂ ಬಾಲಚಂದ್ರ, ಸೋಮಶೇಖರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ದುರ್ನಾತ ಬರುತ್ತಿದ್ದ ಮುರುಕಲು ಮನೆಯಲ್ಲಿ ವಾಸಿಸುತ್ತಿರುವ ರೇಣುಕಪ್ಪ ಅವರಿಗೆ ನಗರದ ಯಲಹಂಕ, ಮಲ್ಲೇಶ್ವರ ಸೇರಿದಂತೆ ಮೂರ್ನಾಲ್ಕು ಕಡೆ ನಿವೇಶನ ಹಾಗೂ ಮನೆಗಳಿವೆ. ಆ ಮನೆಗಳನ್ನು ಅವರು ಬಾಡಿಗೆಗೆ ಕೊಟ್ಟಿದ್ದಾರೆ.
ಹೇಮಾಳ ವಿವಾಹ ಮಾಡುವ ಉದ್ದೇಶದಿಂದ ಮಾತುಕತೆ ನಡೆಸಲು ನಾವು ಆಗಾಗ ಇವರ ಮನೆಗೆ ಬರುತ್ತಿದ್ದೆವು. ಆಗ ಹೇಮಾಳ ಪರಿಸ್ಥಿತಿ ತಿಳಿಯಿತು. ಈ ಬಗ್ಗೆ ವಿಚಾರಿಸಿ, ವೈದ್ಯರಿಗೆ ತೋರಿಸುವಂತೆ ಹೇಳಿದಾಗ ನಮ್ಮನ್ನೇ ನಿಂದಿಸಿದರು. ಇದರಿಂದ ನಾವು ಅವರಿಂದ ದೂರವಿದ್ದೇವೆ ಎನ್ನುತ್ತಾರೆ ರೇಣುಕಪ್ಪ ಅವರ ಸಹೋದರ ವಿಶ್ವೇಶ್ವರಪ್ಪ ಅವರು.
ಸ್ವಯಂ ಪ್ರೇರಿತ ದೂರು ದಾಖಲು: ಯುವತಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ಸಂಬಂಧ ಪ್ರತಿಕ್ರಿಯಿಸಿದ ಆಯೋಗದ ಸದಸ್ಯ ಚಂದ್ರಶೇಖರ್ ಹನಗುಂದ್ ಅವರು, ಇದೊಂದು ಅಮಾನವೀಯ ಘಟನೆ. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ಕಂಡು ಸ್ವಯಂ ದೂರು ದಾಖಲಿಸಿಕೊಳ್ಳಲಾಗಿದೆ. ಆಯೋಗದ ಸದಸ್ಯರನ್ನು ಆಸ್ಪತ್ರೆಗೆ ಕಳುಹಿಸಿ ಆಕೆಯಿಂದ ಹೇಳಿಕೆ ಪಡೆಯಲು ಯತ್ನಿಸಿದೆವು.
ಆದರೆ, ಸಾಧ್ಯವಾಗಿಲ್ಲ. ಈ ಸಂಬಂಧ ಮಲ್ಲೇಶ್ವರ ಠಾಣೆ ಪೊಲೀಸರನ್ನು ಸಂಪರ್ಕಿಸಿ ಅವರಿಂದ ಹೆಚ್ಚಿನ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅವರ ಪೋಷಕರು ಹಾಗೂ ಕುಟುಂಬ ಸದಸ್ಯರ ಜತೆಯೂ ವಿಚಾರಣೆ ನಡೆಸಲಾಗುವುದು. ವೈದ್ಯಕೀಯ ಪರೀಕ್ಷೆ ನಂತರ ಯುವತಿಯ ಹೇಳಿಕೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಚಿಕಿತ್ಸೆಗೆ ಸ್ಪಂದನೆ: ಮಧ್ಯಾಹ್ನ ಸುಮಾರು 1.30ರ ವೇಳೆಗೆ ಹೇಮಾಳನ್ನು ಆಸ್ಪತ್ರೆಗೆ ಕರೆತರಲಾಯಿತು. ಹಿರಿಯ ಹಾಗೂ ನುರಿತ ವೈದ್ಯರ ತಂಡ ಆಕೆಯನ್ನು ಪರೀಕ್ಷಿಸಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾಳೆ ಎಂದು ನಿಮ್ಹಾನ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ವಿ.ಎಲ್.ಸತೀಶ್ ತಿಳಿಸಿದರು.
ಆಕೆಯ ಈ ಪರಿಸ್ಥಿತಿಗೆ ನಿಖರ ಕಾರಣ ಯಾರಿಗೂ ತಿಳಿದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಏನನ್ನೂ ಹೇಳಲು ಆಗುವುದಿಲ್ಲ. ಮೊದಲು ಆಕೆಗೆ ಉತ್ತಮ ಚಿಕಿತ್ಸೆ ಕೊಡುವಂತೆ ಸೂಚಿಸಿದ್ದೇನೆ. ಗುಣಮುಖಳಾದ ನಂತರ ಆಕೆಯಿಂದಲೇ ಮಾಹಿತಿ ಕಲೆಹಾಕಿ ನಂತರ ಸೂಕ್ತ ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗುತ್ತದೆ.
- ಅಶ್ವತ್ಥ್ ನಾರಾಯಣ, ಶಾಸಕರು
ವಿವಾಹದ ನಂತರ ನಮ್ಮ ಕುಟುಂಬ ಸದಸ್ಯರೆಲ್ಲ ವಿದೇಶದಲ್ಲಿ ನೆಲೆಸಿದ್ದೆವು. ಹಬ್ಬದ ದಿನಗಳಲ್ಲಿ ಬೆಂಗಳೂರಿಗೆ ಬಂದಾಗ ಹೇಮಾವತಿಯನ್ನು ನೋಡಿದ್ದೇನೆ. ಒಳ್ಳೆಯ ಹುಡುಗಿ. ಆದರೆ, ಹೆಚ್ಚಾಗಿ
ಅವರ ಮನೆಗೆ ಹೋಗುತ್ತಿರಲಿಲ್ಲ. ಅವರ ತಂದೆ ಬೇರೆಯವರನ್ನು ಅಷ್ಟು ಹೊಂದುವುದಿಲ್ಲ ಎಂಬುದನ್ನು ಕೇಳಿದ್ದೆ. ಆದರೆ ಘಟನೆ ಬಗ್ಗೆ ತಿಳಿದಿರಲಿಲ್ಲ.
- ರೇಖಾ, ಅತ್ತಿಗೆ
ಸ್ನಾನ ಮಾಡಿಸಿ ಬಟ್ಟೆ ಹಾಕಲು ಹೋದರೆ, ನಮ್ಮನ್ನೇ ಬೈದು ಕಳುಹಿಸುತ್ತಾಳೆ. ಊಟ ತಿಂಡಿ ಯಾವುದರಲ್ಲೂ ಕೊರತೆ ಮಾಡಿಲ್ಲ. ಚಿಕೂನ್‌ಗುನ್ಯಾ ಬಂದು ಆಸ್ಪತ್ರೆ ಸೇರಿದ್ದ ಅವಳನ್ನು ಮನೆಗೆ ವಾಪಸ್ ಕರೆದುಕೊಂಡ ಬಂದಾಗಿನಿಂದ ಹೀಗೆ ಆಡುತ್ತಾಳೆ.
- ಪುಟ್ಟಗೌರಮ್ಮ, ತಾಯಿ
ಆಕೆ ಹೇಳಿದಂತೆ ನಾವು ಕೇಳುತ್ತಿದ್ದೇವೆ. ಊಟ ಮಾತ್ರ ಸಲೀಸಾಗಿ ಮಾಡುತ್ತಾಳೆ. ಬೇರೆಲ್ಲದಕ್ಕೂ ಹಠ ಮಾಡುತ್ತಾಳೆ. ಯಾರ ಮಾತನ್ನೂ ಕೇಳುವುದಿಲ್ಲ.
- ಸೋಮಶೇಖರ್, ಸಹೋದರ

ಹೇಮಾಳ ಮಾತು
ನಾನು ಆಸ್ಪತ್ರೆಯಿಂದ ಬಂದೆ. ಆವಾಗಿಂದ ಹೀಗೆಯೇ ಇದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ. ಹಸಿವಾದಾಗ, ಅನ್ನ ಬೇಕಾದಾಗ ಕೂಗುತ್ತೇನೆ. ಎಲ್ಲರೂ ಹೀಗೆ ಒಂದೇ ಸಾರಿ ಏನೇನೋ ಕೇಳಿದರೆ ಏನು ಹೇಳಲಿ. ನನಗೆ ಕೈಕಾಲು ಎತ್ತಲು ಹಾಗೂ ನಡೆಯಲೂ ಆಗುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com