ನವದೆಹಲಿ/ಪಣಜಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಗೋವಾ ಕಾರ್ಯಕಾರಿಣಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಉತ್ಸಾಹಕ್ಕೆ ಪಕ್ಷದಲ್ಲೇ ಅಪಸ್ವರ ಎದುರಾಗಿದ್ದು, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಇಂಥ ಘೋಷಣೆಗಳನ್ನು ಮಾಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಒಂದು ಕಾರ್ಯಕಾರಿಣಿ ನಡೆದ ಮೇಲೆ ಚಿಂತನಾ ಶಿಬಿರ ಕರೆಯುವುದು, ಇಲ್ಲಿ ಘೋಷಣೆ ಮಾಡುವುದು ಅಥವಾ ಸಂಸದೀಯ ಮಂಡಳಿ ಸಭೆಯಲ್ಲಿ ಇಂಥ ಘೋಷಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದರೆ ಮೂಲಗಳ ಪ್ರಕಾರ ಕಾರ್ಯಕಾರಿಣಿಯಲ್ಲಿ ಮೋದಿಗೆ ಸ್ಥಾನಮಾನ ಕೊಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ. ಪಕ್ಷದ ಹಿರಿಯ ನಾಯಕರ ವಿರೋಧದ ನಡುವೆಯೂ ರಾಜನಾಥ್ ಸಿಂಗ್ ಇಂಥ ನಿರ್ಧಾರಕ್ಕೆ ಮುಂದಾಗಲಿದ್ದಾರೆ ಎನ್ನಲಾಗಿದೆ.
ಈ ಕಾರ್ಯಕಾರಿಣಿಯಲ್ಲೇ ಪಕ್ಷದ ಪದಾಧಿಕಾರಿಗಳು ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸಲಿದ್ದಾರೆ ಎಂದು ಹೇಳಲಾಗಿದೆ. ರಾಜನಾಥ್ ಸಿಂಗ್ ಅವರೇ ಇದಕ್ಕೆ ಮುಂದಾಳತ್ವ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಆದರೆ, ಇನ್ನೊಂದು ಮೂಲಗಳ ಪ್ರಕಾರ, ಶುಕ್ರವಾರವೇ ಸಂಸದೀಯ ಮಂಡಳಿ ಸಭೆ ಕರೆದು ಮೋದಿ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಡುವ ಸಾಧ್ಯತೆಯಿದೆ.
ಆಡ್ವಾಣಿ ನೇತೃತ್ವದಲ್ಲೇ ವಿರೋಧ: ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿಗೆ ಸ್ಥಾನಮಾನ ಘೋಷಣೆ ಮಾಡುವ ಪ್ರಸ್ತಾಪಕ್ಕೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರ ನೇತೃತ್ವದಲ್ಲೇ ವಿರೋಧ ವ್ಯಕ್ತವಾಗಿದೆ. ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ಯಶವಂತ ಸಿನ್ಹಾ ಸೇರಿದಂತೆ ಹಲವಾರು ಹಿರಿಯ ನಾಯಕರು ಇದೇ ಅಭಿಪ್ರಾಯ ಮಂಡಿಸಿದ್ದಾರೆ. ಇದೇ ವೇಳೆ ಆಡ್ವಾಣಿ ಅವರ ಎರಡು ಸಮಿತಿಗಳ ಪ್ರಸ್ತಾಪವನ್ನು ಬಿಜೆಪಿ ಕೈಬಿಟ್ಟಿದೆ ಎಂದು ಹೇಳಲಾಗಿದೆ. ನಿತಿನ್ ಗಡ್ಕರಿ ಅವರು ಉಸ್ತುವಾರಿ ವಹಿಸಿಕೊಳ್ಳಲು ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಈ ನಿರ್ಧಾರಕ್ಕೆ ಬಂದಿದ ೆಎನ್ನಲಾಗಿದೆ. ಅಲ್ಲದೆ ಈಗಲೇ ಮೋದಿಗೆ ಚುನಾವಣಾ ಉಸ್ತುವಾರಿ ವಹಿಸಿದರೆ, ಮುಂದಿನ ಲೋಕಸಭಾ ಚುನಾವಣೆಗೂ ಉಪಯೋಗವಾಗುತ್ತದೆ ಎಂಬುದು ರಾಜನಾಥ್ ಸಿಂಗ್ ಅವರ ಚಿಂತನೆ ಎಂದು ಹೇಳಲಾಗಿದೆ.
ಮೋದಿಗೆ ಹೆಚ್ಚಿನ ಸ್ಥಾನ ಬೇಕಂತೆ: ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಮೋದಿ ಒಲ್ಲೆ ಎನ್ನುತ್ತಿದ್ದಾರೆ. ಪಕ್ಷದಲ್ಲಿ ಇದಕ್ಕಿಂತ ಹೆಚ್ಚಿನ ಸ್ಥಾನಮಾನ ಬೇಕು ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಯಾವ ರೀತಿಯ ಸ್ಥಾನ ಎಂಬುದು ಬಹಿರಂಗವಾಗಿಲ್ಲ.
ಬಿಹಾರದಲ್ಲಿ ಎನ್ಡಿಎ ಗೆಲ್ಲಲೂ ಮೋದಿ ಬೇಕು: ರೂಡಿ
ಬಿಹಾರ ಉಪಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿ ಸೋತ ಹಿನ್ನೆಲೆಯಲ್ಲಿ ಮಾತನಾಡಿರುವ ಬಿಜೆಪಿ ವಕ್ತಾರ ರಾಜೀವ್ಪ್ರತಾಪ್ ರೂಡಿ, ಬಿಹಾರದಲ್ಲೂ ಎನ್ಡಿಎ ಗೆಲ್ಲಲು ಮೋದಿ ನೆರವು ಬೇಕೇ ಬೇಕು ಎಂದಿದ್ದಾರೆ. ಉಪಚುನಾವಣೆ ನಡೆದ ಕ್ಷೇತ್ರದಲ್ಲಿ ಮೋದಿ ಪ್ರಚಾರ ನಡೆಸಿದ್ದರೆ, ಜೆಡಿಯು ಅಭ್ಯರ್ಥಿ ಗೆಲ್ಲುತ್ತಿದ್ದರು ಎಂದಿದ್ದಾರೆ.ಆದರೆ ಜೆಡಿಯು ಈ ಅಭಿಪ್ರಾಯವನ್ನು ತಿರಸ್ಕರಿಸಿದೆ. ನಮಗೆ ಮೋದಿ ಬೆಂಬಲ ಬೇಕಿಲ್ಲ ಎಂದಿದೆ. ಇದೇ ವೇಳೆ ಜೆಡಿಯು ಅಭ್ಯರ್ಥಿ ಸೋತಿದ್ದರಿಂದ ಎನ್ಡಿಎಗೆ ಯಾವುದೇ ಧಕ್ಕೆ ಇಲ್ಲ ಎಂದು ನಿತೀಶ್ ಹೇಳಿದ್ದಾರೆ.
ಅಟಲ್ ಆರೋಗ್ಯ ಸ್ಥಿರ
ಮಾಧ್ಯಮಗಳಲ್ಲಿ ವರದಿಯಾದಂತೆ ವಾಜಪೇಯಿ ಅವರ ಆರೋಗ್ಯದಲ್ಲಿ ಯಾವುದೇ ಏರುಪೇರಾಗಿಲ್ಲ. ಅವರು ಆರೋಗ್ಯದಿಂದ ಇದ್ದಾರೆ ಎಂದು ಬಿಜೆಪಿ ಸ್ಪಷ್ಟವಾಗಿ ಹೇಳಿದೆ. ಮಾಧ್ಯಮಗಳಲ್ಲಿ ಬಂದಿರುವ ವರದಿ ಸುಳ್ಳು ಎಂದು ಹೇಳಿದೆ.