

ಪಣಜಿ: ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ವಿರೋಧದ ನಡುವೆಯೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಚುನಾವಣಾ ಸಮಿತಿ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಪಣಜಿಯಲ್ಲಿ ನಡೆದ 2 ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯ ಕಡೇ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅನಾರೋಗ್ಯದ ನೆಪ ಹೇಳಿ ಪಕ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾರ್ಯಕಾರಿಣಿ ತಪ್ಪಿಸಿಕೊಂಡಿದ್ದಾರೆ. ಅಲ್ಲದೆ ಮೋದಿ ಅವರ ನೇಮಕವಾಗುತ್ತಿದ್ದಂತೆ ಬಿಜೆಪಿಯಲ್ಲಿ ಆಡ್ವಾಣಿ ಯುಗ ಕಳೆದು, ಮೋದಿ ಯುಗ ಬರುತ್ತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
'2014ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡುತ್ತಿದ್ದೇವೆ. ಈ ಮೂಲಕ ಚುನಾವಣೆಯಲ್ಲಿ ಗೆಲವು ಸಾಧಿಸಲಿದ್ದೇವೆ' ಎಂದು ರಾಜನಾಥ್ ಸಿಂಗ್ ಅವರು, ಲೋಕಸಭೆ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆ ವಿಪಕ್ಷ ನಾಯಕ ಅರುಣ್ ಜೇಟ್ಲಿ, ಪಕ್ಷದ ನಾಯಕರಾದ ವೆಂಕಯ್ಯನಾಯ್ಡು ಮತ್ತು ಅನಂತಕುಮಾರ್ ಅವರ ಸಮ್ಮುಖದಲ್ಲಿ ಘೋಷಣೆ ಮಾಡಿದರು. ಮೋದಿ ಹೆಸರನ್ನು ಒಮ್ಮತದಿಂದಲೇ ಆರಿಸಲಾಗಿದೆ ಎಂದರು.
ರಾಜನಾಥ್ ಸಿಂಗ್ ಅವರ ಈ ಘೋಷಣೆ ಹೊರಬೀಳುತ್ತಿದ್ದಂತೆ ಭಾರಿ ಕರತಾಡನವೇ ಕೇಳಿಬಂತು. ಈ ಮೂಲಕ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಂದಲೂ ಮೋದಿಗೆ ಅಭೂತಪೂರ್ವ ಬೆಂಬಲ ಸಿಕ್ಕಿತು. ಘೋಷಣೆ ಬಳಿಕ ಟ್ವೀಟ್ ಮಾಡಿದ ನರೇಂದ್ರ ಮೋದಿ, ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಪಕ್ಷ ನನಗೆ ದೊಡ್ಡ ಹುದ್ದೆ ನೀಡಿದೆ. ಭಾರತ್ ನಿರ್ಮಾಣ್ ಎಂದು ಸ್ಲೋಗನ್ ಹೇಳುತ್ತಿರುವ ಯುಪಿಎಯನ್ನು ಮನೆಗೆ ಕಳುಹಿಸುತ್ತೇನೆ ಎಂದಿದ್ದಾರೆ.
ಅಲ್ಲದೆ ತಮ್ಮನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ ತಕ್ಷಣವೇ ಆಡ್ವಾಣಿ ಅವರಿಗೆ ಕರೆ ಮಾಡಿ, ಆಶೀರ್ವಾದ ಪಡೆದೆ ಎಂದೂ ಟ್ವೀಟ್ ಮಾಡಿದ್ದಾರೆ. ಈ ಬೆಳವಣಿಗೆಗಳ ಮಧ್ಯೆಯೇ ಸೋಮವಾರ ನರೇಂದ್ರ ಮೋದಿ ಅವರು ದೆಹಲಿಗೆ ಹೋಗಿ ಆಡ್ವಾಣಿ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ನಮೋನಿಯಾ ಭಯ ಇಲ್ಲ: ನರೇಂದ್ರ ಮೋದಿ ಅವರಿಗೆ ಚುನಾವಣಾ ಉಸ್ತುವಾರಿ ಕೊಟ್ಟಿದ್ದರಿಂದ ಯಾವ ಭಯವೂ ಇಲ್ಲ ಎಂದು ಕಾಂಗ್ರೆಸ್ ಹೇಳಿದೆ. ಮೋದಿ ನೇಮಕ ಮಾಡಿದ್ದು ಆ ಪಕ್ಷದ ಆಂತರಿಕ ವಿಚಾರ ಎಂದಿರುವ ಅದು, ಮೋದಿ ಗುಜರಾತ್ಗಷ್ಟೇ ಸೀಮಿತ. ಇಡೀ ದೇಶದಲ್ಲಿ ಅವರ ಜಾದೂ ನಡೆಯಲ್ಲ ಎಂದಿದೆ. ಇದಕ್ಕೆ ಉದಾಹರಣೆ ಕರ್ನಾಟಕ ಚುನಾವಣೆ ಎಂದು ಹೇಳಿದೆ.
---
2014ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನೀಗ ದೊಡ್ಡ ಘೋಷಣೆಯೊಂದನ್ನು ಮಾಡುತ್ತಿದ್ದೇನೆ, ಗುಜರಾತ್ ಮುಖ್ಯಮಂತ್ರಿ ನರೇಂದ ್ರಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಘೋಷಣೆ ಹೊರಡಿಸುತ್ತಿದ್ದೇನೆ. ಅವರ ನೇತೃತ್ವದಲ್ಲಿ ನಾವು ಚುನಾವಣೆ ಗೆಲ್ಲಲಿದ್ದೇವೆ.
- ರಾಜನಾಥ್ ಸಿಂಗ್, ರಾಷ್ಟ್ರೀಯ ಅಧ್ಯಕ್ಷ
ಮೋದಿ ಅವರನ್ನು ಚುನಾವಣಾ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಆ ಪಕ್ಷದ ಆಂತರಿಕ ವಿಷಯ. ಇದರಿಂದ ನಮಗೇನೂ ಆಗಬೇಕಿಲ್ಲ. ಆದರೆ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವಾಗ ಬಿಜೆಪಿ ಎನ್ಡಿಎ ಪಕ್ಷಗಳೊಂದಿಗೆ ಚರ್ಚಿಸಬೇಕು. ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ನಮ್ಮಲ್ಲಿ ಕೆಲವು ಷರತ್ತುಗಳಿವೆ.
- ಶರದ್ ಯಾದವ್, ಜೆಡಿಯು ಅಧ್ಯಕ್ಷ