ತಿರುಚಿರಾಪಳ್ಳಿ/ಇಂದೋರ್: ಇನ್ನು ಮುಂದೆ ಗಂಡಾಂತರ ಎದುರಾದಾಗ ಭಯಪಟ್ಟು ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ. ಅಪಾಯದ ವೇಳೆಯಲ್ಲಿ ನಿಮ್ಮಲ್ಲಿರುವ 'ನಿರ್ಭಯಾ' ನೆರವಿಗೆ ಬರುತ್ತದೆ.
ಏನಿದು 'ನಿರ್ಭಯಾ' ಎಂದು ಯೋಚಿಸುತ್ತಿದ್ದೀರಾ? ಮುಂಬೈನ ಭಾಭಾ ಪರಮಾಣು ಸಂಶೋಧನಾ ಕೇಂದ್ರ(ಬಿಎಆರ್ಸಿ)ವು ಗಂಡಾಂತರ ಸೂಚಕ ಸಾಧನವೊಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ಡಿ.16ರ ದೆಹಲಿ ಗ್ಯಾಂಗ್ರೇಪ್ ಬಲಿಪಶು ನಿರ್ಭಯಾಳ ಹೆಸರನ್ನು ಇಡಲಾಗಿದೆ. ಮಹಿಳೆಯರಿಗಂತೂ ಈ ಸಾಧನ ಅಪಾಯದ ಸಂದರ್ಭಗಳಲ್ಲಿ ಬಹಳಷ್ಟು ಸಹಾಯ ಮಾಡಲಿದೆ.
ಸಂದೇಶ ಕಳುಹಿಸುತ್ತೆ: ಈ ಸಾಧನವನ್ನು ಮೊಬೈಲ್ಗೆ ಲಿಂಕ್ ಮಾಡಿರಲಾಗುತ್ತದೆ. ಅಪಹರಣ, ದಾಳಿ, ಅತ್ಯಾಚಾರ, ಹೃದಯಾಘಾತ ಹೀಗೆ ಏನೇ ಅಪಾಯ ಎದುರಾದರೂ ಅದರಲ್ಲಿರುವ ಗುಂಡಿ ಒತ್ತಿದರೆ ಸಾಕು. ಆಯ್ಕೆ ಮಾಡಿದ್ದ 5 ಸೆಲ್ ಫೋನ್ಗಳಿಗೆ ಹಾಗೂ ಪೊಲೀಸ್ ಠಾಣೆಗೆ ಸಂದೇಶ ಹೋಗುತ್ತದೆ. ದಾಳಿ ಮಾಡಿದಾತ ಆ ಸಾಧನವನ್ನು ಎಳೆದರೂ ನೀವಿದ್ದ ಪ್ರದೇಶವನ್ನು ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯ ಎಂದು ಬಿಎಆರ್ಸಿ ತಿಳಿಸಿದೆ.
ಪರಿಚಿತರಿಂದಲೇ ರೇಪ್
ದೇಶದಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಶೇ.98ರಷ್ಟು ಅತ್ಯಾಚಾರಗಳನ್ನು ಹತ್ತಿರದ ಸಂಬಂಧಿಗಳು ಅಥವಾ ಪರಿಚಿತರೇ ಮಾಡಿರುತ್ತಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್ಸಿಆರ್ಬಿ) ತಿಳಿಸಿದೆ. ಕಳೆದ ವರ್ಷ 24,923 ರೇಪ್ ಕೇಸ್ಗಳು ದಾಖಲಾಗಿದ್ದು, ಅದರಲ್ಲಿ 24,470 ಪ್ರಕರಣಗಳಲ್ಲಿ ಪರಿಚಿತರೇ ಅಪರಾಧಿಗಳು. ಅಂದರೆ 100ರಲ್ಲಿ ಶೇ.98ರಷ್ಟು ಅತ್ಯಾಚಾರಗಳನ್ನು ಪರಿಚಿತರೇ ಮಾಡುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ ಎಂದಿದೆ ಎನ್ಸಿಆರ್ಬಿ.