ಸಾಲ ಕಟ್ಟದ ರೈತರಿಗೆ ಬಂಧನ ಭೀತಿ

ಕಳೆದ ಐದಾರು ವರ್ಷಗಳಿಂದ ಮಳೆ-ಬೆಳೆಯಿಲ್ಲದೆ ಬರದಿಂದ ತತ್ತರಿಸಿ ಹೋಗಿರುವ ರೈತರಿಗೆ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನೀಡಿದ್ದ...
Updated on: 

ಚಾಮರಾಜನಗರ: ಕಳೆದ ಐದಾರು ವರ್ಷಗಳಿಂದ ಮಳೆ-ಬೆಳೆಯಿಲ್ಲದೆ  ಬರದಿಂದ ತತ್ತರಿಸಿ ಹೋಗಿರುವ ರೈತರಿಗೆ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ನೀಡಿದ್ದ ಕೃಷಿ ಸಾಲ ತೀರಿಸಲು ಸಾಧ್ಯವಾಗದೆ, ತಲೆ ಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ!
ಚಾಮರಾಜನಗರ ತಾಲೂಕಿನ 20ಕ್ಕೂ ಹೆಚ್ಚು ರೈತರು ಕೋರ್ಟ್‌ಗೆ ಹಾಜರಾಗದೇ ಇರುವುದರಿಂದ ಅವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಹೀಗಾಗಿ, ಈ ರೈತರು ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಬರಗಾಲವಿರುವುದರಿಂದ ಯಾವುದೇ ರೈತರಿಗೆ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಬಾರದು ಎಂದು ಸರ್ಕಾರ ಆದೇಶಿಸಿತ್ತು. ಹೀಗಿದ್ದರೂ ರೈತರಿಗೆ ನೋಟಿಸ್ ನೀಡಿ, ಅವರನ್ನು ಕೋರ್ಟ್‌ಗೆಳೆಯಲಾಗಿದೆ.
8-10 ವರ್ಷಗಳ ಹಿಂದೆ ಚಾಮರಾಜನಗರದ ತಾಲೂಕು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಕೃಷಿ ಸಾಲ ಪಡೆದು ಮರು ಪಾವತಿ ಮಾಡದ 245 ರೈತರ ಮೇಲೆ ಬ್ಯಾಂಕ್ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದೆ. ಇವರ ಪೈಕಿ 20ಕ್ಕೂ ಹೆಚ್ಚು ರೈತರು ಕೋರ್ಟ್‌ಗೆ ಹಾಜರಾಗಿಲ್ಲ.
ಸತತ ಬರಗಾಲ:  ರೈತರು ಸತತ ಬರಗಾಲಕ್ಕೆ ಒಳಗಾಗಿದ್ದು, ಜಿಲ್ಲೆಯಲ್ಲಿ ಸಾಲ ಸೋಲ ಮಾಡಿ ಕೊರೆಸಲಾಗಿದ್ದ ಬೋರ್‌ವೆಲ್‌ಗಳಲ್ಲಿ ಅಂತರ್ಜಲದ ಕೊರತೆ ಪರಿಣಾಮ ನೀರು ಬರಲೇ ಇಲ್ಲ. ಮತ್ತೆ ಬೋರ್‌ವೆಲ್‌ಗಳನ್ನು ಹಾಕಿಸಿ ಕೈ ಸುಟ್ಟು ಕೊಂಡಿದ್ದಾರೆ. ಇಂಥ ಸಮಯದಲ್ಲಿ ಸಾಲ ತೀರಿಸಲಾಗದ  ಅಸಹಾಯಕತೆಯಿಂದ ಕೆಲವು ರೈತರು ನ್ಯಾಯಾಲಯಕ್ಕೆ ಹೆದರಿ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾರೆ. ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ತವರು ಜಿಲ್ಲೆ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಅನ್ನದಾತರಿಗೇ ಇಂಥದ್ದೊಂದು ಪರಿಸ್ಥಿತಿ ಬಂದೊದಗಿರುವುದು ವಿಪರ್ಯಾಸ!
ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿ ಸತತ ಬರಗಾಲ ಮತ್ತು ಅಂತರ್ಜಲ ಕುಸಿತದಿಂದ ಈಗಾಗಲೇ ಬಹುತೇಕ ರೈತರು ವ್ಯವಸಾಯ ತೊರೆಯುವ ಸ್ಥಿತಿ ನಿರ್ಮಾಣವಾಗಿದೆ. ಈ ಬಾರಿಯೂ ಮುಂಗಾರು ಮಳೆಗೆ ಬಿತ್ತಿದ್ದ ಬೆಳೆಗಳು ಒಣಗಿ ನಿಂತಿದ್ದು, ನೋವಿನಲ್ಲಿರುವ ರೈತರಿಗೆ ಇದೀಗ ಕೋರ್ಟ್ ಬಂಧನದ ವಾರೆಂಟ್ ಹೊರಡಿಸಿರುವುದು ಬರ ಸಿಡಿಲು ಎರಗಿದಂತಾಗಿದೆ.

ರೈತರು ಸಾಲ ಮರುಪಾವತಿಸಲು ಇನ್ನೂ ಕಾಲವಕಾಶವಿದೆ. ಬರದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಕಷ್ಟವಾಗಿದೆ. ಇದೀಗ ಕೆಲವು ರೈತರು ಬಂಧನ ವಾರೆಂಟ್‌ನಿಂದ ತಲೆ ಮರೆಯಿಸಿಕೊಂಡಿದ್ದು, ಸರ್ಕಾರ ರೈತರ ನೆರವಿಗೆ ಬರಬೇಕು.
- ಆರ್. ವಿರೂಪಾಕ್ಷ, ರೈತ ಪರ ವಕೀಲ, ಚಾಮರಾಜನಗರ

ಕೆಲವು ವರ್ಷಗಳ ಹಿಂದೆ ನೀಡಲಾಗಿದ್ದ ಸಾಲ ಮರುಪಾವತಿಸದೇ ರೈತರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗದ ಕೆಲವು ರೈತರಿಗೆ ಬಂಧನ ವಾರೆಂಟ್ ಜಾರಿಯಾಗಿದೆ. ರೈತರು ನ್ಯಾಯಾಲಯಕ್ಕೆ ಹಾಜರಾಗಿ ವಾಸ್ತವ ಸ್ಥಿತಿ ತಿಳಿಸಬೇಕಿತ್ತು.
- ಉಡಿಗಾಲ ಪಾಪಣ್ಣ, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷರು,

- ದೇವರಾಜು ಕಪ್ಪಸೋಗೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com